ದಿನಕ್ಕೊಂದು ಕಥೆ 940
*🌻ದಿನಕ್ಕೊಂದು ಕಥೆ🌻*
*ಸಂಪತ್ತು*
ಕೃಪೆ:ಪಲ್ಲವಿ. ಎಂ
ಹರೀಶನಿಗೆ ವಸುಧಾ ಎಂಬ ಮಡದಿ ಮತ್ತು ಸಿದ್ಧಾರ್ಥ್ ಎಂಬ ಪುಟ್ಟ ಮಗನಿದ್ದ ..ಹರೀಶನಿಗೆ ತುಂಬಾನೇ ಹಣದ ವ್ಯಾಮೋಹವಿತ್ತು ..ಹಣ ಸಂಪಾದಿಸುವುದರಲ್ಲಿಯೇ ಅವನು ಯಾವಾಗಲು ಬ್ಯುಸಿಯಾಗಿರುತ್ತಿದ್ದ ಮತ್ತು ಸಂಪಾದಿಸಿದ ಹಣವನ್ನು ಹಾಗೇ ಕೂಡಿಡುತ್ತಿದ್ದ ....ಒಂದು ಪುಟ್ಟ ಸೂಜಿ ಕೂಡ ದಾನ ಮಾಡುತ್ತಿರಲಿಲ್ಲ ...
ಹರೀಶನಿದ್ದ ಅಪಾರ್ಟ್ ಮ್ಮೆಂಟ್ ನಲ್ಲಿ ಬೇಸಿಗೆ ಬಂತೆಂದರೆ ನೀರಿಗೆ ಸ್ವಲ್ಪ ಕಷ್ಟವಾಗುತಿತ್ತು ..ಅದಕ್ಕೆ ಏನಾದರು ಪರಿಹಾರ ಮಾಡಬೇಕೆಂದು ಹರೀಶನ ನೆರೆಮನೆಯವರೆಲ್ಲ ಸೇರಿ ಒಂದು ಆಲೋಚನೆ ಹೇಳಿದರು ...ಮಳೆಗಾಲ ಬರುವುದಕ್ಕಿಂತ ಮೊದಲು ಈ ಅಪಾರ್ಟ್ ಮ್ಮೆಂಟ್ ಲ್ಲಿ ಸಾಧ್ಯವಾದಷ್ಟು ಇಂಗು ಗುಡಿ ತೆಗಿಸೋಣವೆಂಬುದೇ ಅವರ ಆಲೋಚನೆಯಾಗಿತ್ತು , ಅದಕ್ಕೆ ಹರೀಶನ ಸಹಾಯ ಬೇಕೆಂದು ಕೇಳಲು ನೆರೆಮನೆಯವರೆಲ್ಲ ಹರೀಶನ ಮನೆಗೆ ಬಂದರು ..
ಇಂಗು ಗುಡಿಯ ವಿಷಯ ಹರೀಶನಲ್ಲಿ ಪ್ರಸ್ತಾಪಿಸಿ ಸ್ವಲ್ಪ ಹಣದ ಸಹಾಯ ಬೇಕಿತ್ತು ಎಂದು ಕೇಳಿದರು ..ಅದಕ್ಕೆ ಹರೀಶ ಅದೇನೂ ಬೇಕಾಗಿಲ್ಲ , ಇನ್ನೂ ಬೇಸಿಗೆ ಬರಲು ಸಮಯವಿದೆಯಲ್ಲ ಆಗ ನೋಡೋಣ , ಸುಮ್ಮನೆ ಗುಂಡಿ ಮಾಡಿ ನಮ್ಮ ಹಣ ಯಾಕೆ ಖರ್ಚು ಮಾಡೋದು ? ನಾನು ಏನೂ ಕೊಡಲಾರೆ ಹೋಗಿ ಎಂದು ಹೇಳಿ ಅವರನ್ನು ಕಳುಹಿಸಿದ ....
ರಾತ್ರಿ ಮಲಗಿದ ಹರೀಶನಿಗೆ ಅದೆಲ್ಲೋ ದೂರದಲ್ಲಿ ನಿಧಿ ಇರುವುದಾಗಿ ಕನಸು ಕಂಡು ಅದನ್ನು ತೆಗೆಯಲು ನಡೆಯುತ್ತಾ ನಡೆಯುತ್ತಾ ಹೋಗುತ್ತಾನೆ ..ಅದೆಷ್ಟು ನಡೆದರೂ ನಿಧಿ ಇರುವ ಜಾಗ ಬರಲೇ ಇಲ್ಲ ..ಹಣದ ವ್ಯಾಮೋಹವಿರುವ ಹರೀಶ ಬಳಲಿದರೂ ಆ ನಿಧಿ ತನ್ನದಾಗಿಸಲೇಬೇಕೆಂದು ಹೋಗುತ್ತಾನೆ ..ಈಗ ಹರೀಶನಿಗೆ ತುಂಬಾ ಬಾಯಾರಿಕೆಯಾಗುತ್ತದೆ ..ನೀರು ಕುಡಿದರೆ ಮಾತ್ರ ಮುಂದೆ ಹೋಗಬಹುದೆಂಬ ಪರಿಸ್ಥಿತಿ ಬರುತ್ತದೆ ..ಅಲ್ಲೇ ಹತ್ತಿರದಲ್ಲಿ ಒಬ್ಬ ತಾತ ಒಂದು ಕೊಡ ನೀರನ್ನು ತುಂಬಾ ಜೋಪಾನವಾಗಿ ಇಟ್ಟಿರುವುದನ್ನು ನೋಡಿದ ಹರೀಶ "ತಾತ ನನಗೆ ಸ್ವಲ್ಪ ಕುಡಿಯಲು ನೀರು ಕೊಡಿರೆಂದು ಕೆಳುತ್ತಾನೆ ..ಅದಕ್ಕೆ ತಾತ ಇಲ್ಲಪ್ಪ ನನ್ನಲ್ಲಿ ನೀರಿಲ್ಲ ಅಂತಾನೆ ..ನಿಮಗೆಷ್ಟು ಬೇಕಾದರು ಹಣ ಕೊಡುತ್ತೇನೆ ತಾತ ಒಂದು ಬೊಗಸೆ ನೀರು ಕೊಡಿ ನನ್ನ ಪ್ರಾಣ ಹೋಗ್ತಿದೆ ಎಂದು ಕೋರುತ್ತಾನೆ .....
ನನ್ನಲ್ಲಿರುವುದೇ ಒಂದು ಕೊಡ ನೀರು ಇದು ನಾನು ಸಾಯೋವರೆಗೂ ಬೇಕು ..ಇಲ್ಲಿ ನೀರು ಎಲ್ಲೂ ಸಿಗುವುದಿಲ್ಲ ..ನಿನ್ನ ಹಣ ಇಟ್ಕೊಂಡು ನಾನೇನು ಮಾಡಲಿ ? ಬಾಯಾರಿಕೆಯಾಗುವಾಗ ಹಣ ಕುಡಿಯೋಕಾಗುತ್ತದೆಯೇ ? ಎಂದು ತಾತ ಹರೀಶನಿಗೆ ಕೇಳುತ್ತಾನೆ ..
ಅಯ್ಯೋ ನಾನು ಸಾಯ್ತೀನಿ ನೀರು ನೀರು ಎಂದು ಕನವರಿಸುತ್ತಿದ್ದ ಹರೀಶನನ್ನೆಬ್ಬಿಸಿದ ವಸುಧಾ ಕುಡಿಯಲು ನೀರು ಕೊಟ್ಟು ಏನಾಯಿತೆಂದು ಕೇಳುತ್ತಾಳೆ ...
ಆಗ ಹರೀಶ ತನಗೆ ಕಂಡ ಕನಸನ್ನು ಹೇಳುತ್ತಾ , ನನಗೆ ಈಗ ಜ್ಞಾನೋದಯವಾಯಿತು ವಸುಧಾ ..ಇದುವರೆಗು ಹಣವೇ ಮುಖ್ಯವೆಂದು ತಿಳಿದಿದ್ದೆ ..ಎಷ್ಟೇ ಕೋಟಿ ಕೊಟ್ಟರೂ ನೀರು ಸಿಗದೇ ಇದ್ದರೆ ಆಗ ನಮ್ಮ ಗತಿಯೇನು ? ಭೂಮಿಯಲ್ಲಿ ನೀರಿದ್ದರೆ ತಾನೆ ನಮಗೆ ಸಿಗೋದು ...ಇಂಗು ಗುಂಡಿ ಮಾಡಿ ಮಳೆ ನೀರನ್ನು ಶೇಖರಿಸುವುದು ಎಷ್ಟು ಮುಖ್ಯವೆಂದು ಈಗ ತಿಳಿದುಕೊಂಡೆ ..ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾನು ಖಂಡಿತವಾಗಿಯೂ ಮಾಡುವೆ...ಸಿದ್ಧಾರ್ಥನಿಗೆ ಹಣ ಕೂಡಿಡದಿದ್ದರೂ ಪರವಾಗಿಲ್ಲ ಅವನೇ ಸಂಪಾದಿಸಿಕೊಳ್ತಾನೆ ..ಆದರೆ ನೀರು ? ಅದುವೇ ನಿಜವಾದ ಸಂಪತ್ತು .. ಖಂಡಿತವಾಗಿಯೂ ನಾವು ಅದನ್ನು ಸಂರಕ್ಷಿಸಬೇಕು ..ಮುಂದಿನ ಪೀಳಿಗೆಗು ನೀರು ಬೇಕೆಂಬುದನ್ನು ಮನದಲ್ಲಿಟ್ಟುಕೊಂಡು
ಹಿತ - ಮಿತವಾಗಿ ಖರ್ಚು ಮಾಡುತ್ತಾ ನೀರಿನ ರಕ್ಷಣೆ ಗೆ ಬೇಕಾದ ಎಲ್ಲಾ ಏರ್ಪಾಟುಗಳನ್ನು ಮಾಡೋಣ ವಸುಧಾ ಎಂದು ಹೇಳುತ್ತಾ ನೆಮ್ಮದಿಯಿಂದ ನಿದ್ದೆ ಮಾಡಿದನು ....
ಸಂಗ್ರಹ:ವೀರೇಶ್ ಅರಸಿಕೆರೆ
Comments
Post a Comment