ದಿನಕ್ಕೊಂದು ಕಥೆ 1126
*🌻ದಿನಕ್ಕೊಂದು ಕಥೆ🌻*
*ಸಾವು ಬದುಕಿನ ನಡುವೆ*
ಇದೊಂದು, ಪ್ರವಾಸಿಯೊಬ್ಬರು ಬರೆದ ಕಥೆ.
ಒಂದು ಕುಟುಂಬದವರು ರಜಾ ಕಳೆಯಲೆಂದು ಗೋವಾಕ್ಕೆ ಹೋಗಿದ್ದರು. ಒಂದು ದಿನ ಮುಂಜಾನೆ ಅಲ್ಲಿಯ ಸಮುದ್ರ ತೀರಕ್ಕೆ ಪರಿವಾರದವರೆಲ್ಲರೂ ಹೋದರು. ಸಮುದ್ರ ದಂಡೆಯ ಮೇಲೆ ಕುಳಿತು ಅದರ ಅಲೆಗಳ ಸುಂದರ ದೃಶ್ಯವನ್ನು ನೋಡುತ್ತಾ ಕುಳಿತಿದ್ದಾಗ ಮನೆಯ ಯಜಮಾನ, ಸಮುದ್ರದಲ್ಲಿ ನೀರಿಗಿಳಿದ.ಕೆಲವರಿಗೆ ನೀರನ್ನು ಕಂಡಾಗ ಇನ್ನೆಲ್ಲಿಲ್ಲದ ಉತ್ಸಾಹ ಬಂದುಬಿಡುತ್ತದೆ.ಹಾಗೇ ಇವನಿಗೂ ಆಯಿತು.ನಿಧಾನವಾಗಿ ನೀರಿನಿಂದ ಮುಂದೆ ಮುಂದೆ ಸಾಗುತ್ತಾ ಎದೆ ಮಟ್ಟಕ್ಕೆ ನೀರು ಬರುವವರೆಗೂ ನಡೆದ. ದಡದ ಮೇಲಿದ್ದ ಅವರ ಕುಟುಂಬದವರು ಅವನನ್ನೇ ನೋಡುತ್ತಿದ್ದರು.
ಅವರೆಲ್ಲರೂ ನೋಡು ನೋಡುತ್ತಿರುವಂತೆ ದೊಡ್ಡ ಅಲೆಯೊಂದು ಬಂದು ಇವನನ್ನು ಒಳಗೆ ಎಳೆದುಕೊಂಡು ಬಿಟ್ಟಿತು. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ದೊಡ್ಡ ನೀರಿನ ಅಲೆ ಅವನನ್ನು ಬಹಳ ದೂರಕ್ಕೆ ಎಳೆದುಕೊಂಡು ಹೋಗುತ್ತಿತ್ತು. ಈ ವ್ಯಕ್ತಿ ಕೆಳಗೆ ನೆಲವೇನಾದರೂ ಸಿಗುತ್ತದೆಯೇ ಎಂದು ನೋಡುತ್ತಿದ್ದಾಗ, ಅವನು ವಿಪರೀತದ ಆಳಕ್ಕೆ ಬಂದಿದ್ದರ ಅರಿವಾಯಿತು. ತೀರದಲ್ಲಿದ್ದ ಜನ ಅವನಿಗೆ ಚಿಕ್ಕ ಚಿಕ್ಕ ಬೊಂಬೆಗಳ ಹಾಗೆ ಕಾಣುತ್ತಿದ್ದರು. ಆತ ತನ್ನ ಶಕ್ತಿಯನೆಲ್ಲಾ ಬಿಟ್ಟು, ಜೋರಾಗಿ ಕಿರುಚಿದರೂ ಯಾವ ಪ್ರಯೋಜನವಾಗಲಿಲ್ಲ. ಹೀಗೆ ಇನ್ನು ಕಿರುಚ್ಚುತ್ತಾ ಹೋದರೆ ಇರುವ ಶಕ್ತಿಯೂ ಕಡಿಮೆಯಾಗುತ್ತದೆ ಎಂದು ತಿಳಿದು ಸುಮ್ಮನಾದ. ಆ ಭಯಂಕರ ಕ್ಷಣ ಅವನನ್ನು ಮರಗಟ್ಟಿಸಿ ಬಿಟ್ಟಿತು.
ತೀರದಲ್ಲಿದ್ದವರು ಯಾರೂ ಕೂಡ ಇವನ ಬಳಿಗೆ ಈಜಿ ಬರುವಂತಿರಲಿಲ್ಲ. ಅಲ್ಲಿ ಯಾವ ನಾವೇಯೂ ಕಾಣಲಿಲ್ಲ. ಬೆಳಗಿನ ಜಾವವಾಗಿದ್ದರಿಂದ ಹೆಚ್ಚು ಜನರೂ ತೀರದಲ್ಲಿ ಇರಲಿಲ್ಲ. ತಾನೇ ಏನಾದರೂ ಪ್ರಯತ್ನ ಮಾಡದ ಹೊರತು, ಬೇರೆ ದಾರಿಯೇ ಇಲ್ಲವೆಂದುಕೊಂಡು, ನಿಧಾನವಾಗಿ ತೀರದ ಕಡೆಗೆ ಈಜ ತೊಡಗಿದ. ಆದರೆ ಅವನಿಗೆ ಅರಿವಾಗ ತೊಡಗಿತು, ತನ್ನ ಪ್ರತಿ ಪ್ರಯತ್ನದೊಂದಿಗೆ ತಾನು ಮತ್ತೂ ಹಿಂದೆ ಹಿಂದೆಕ್ಕೆ ಹೋಗುತ್ತಿದ್ದೇನೆ ಎಂದೆನಿಸಿತು. ನೀರಿನ ಸೆಳೆತ ಅಷ್ಟು ಹೆಚ್ಚಾಗಿತ್ತು. ಪ್ರಚಂಡ ಶಕ್ತಿಯ ಮುಂದೆ ತನ್ನ ದೇಹ ಶಕ್ತಿ ಏನೂ ಅಲ್ಲಾ ಎಂಬ ಅರಿವುಂಟಾಯಿತು ಅವನಿಗೆ.
ಆ ಕ್ಷಣದಲ್ಲಿ ಅವನಿಗೆ ಕಣ್ಣ ಮುಂದೆ ತನ್ನ ಪ್ರೀತಿಯ ಹೆಂಡತಿ ಮಕ್ಕಳ ಚಿತ್ರ ಕಾಣಿಸಿತು. ತೀರದ ಮೇಲಿದ್ದ ಅವರು, ಎಷ್ಟು ಗಾಬರಿಯಿಂದ, ದುಃಖಿತರಾಗಿದ್ದಾರೊ ಏನೋ , ತನ್ನನ್ನು ಉಳಿಸಲು ಏನಾದರೂ ಪ್ರಯತ್ನ ಮಾಡುತ್ತಿರಬಹುದು, ಎಂಬ ವಿಚಾರ ಆ ವ್ಯಕ್ತಿಯ ಕಣ್ಣ ಮುಂದೆ ಬಂದು, ಇನ್ನು ಕೆಲವೇ ಕ್ಷಣಗಳಲ್ಲಿ ತಾನು ಸತ್ತು ಹೆಣವಾಗಿ ಬಿಡಬಹುದೆಂಬ ಚಿತ್ರ ಅವನ ಕಣ್ಣ ಮುಂದೆ ಬಂದಿತು. ಇಲ್ಲಿರುವ ಮೀನುಗಳು ತನ್ನ ದೇಹವನ್ನು ಕಚ್ಚಿ ಕಚ್ಚಿ ತಿಂದು ,ಉಳಿದ ದೇಹ ತೀರವನ್ನು ತಲುಪಿದಾಗ ತಮ್ಮ ಪರಿವಾರದವರಿಗೆ ಎಷ್ಟು ಆಘಾತವಾಗಬಹುದು, ಅವರು ಎಷ್ಟು ಗೋಳಾಡಬಹುದು ಎಂಬ ವಿಚಾರವನ್ನು ಕಲ್ಪಿಸಿಕೊಂಡು ಅವನ ಕಣ್ಣು ತುಂಬಿ ಬಂದವು. ಅವನ ಕಣ್ಣೀರು ಉಪ್ಪಿನ ನೀರಿನಲ್ಲಿ ಕರಗಿ ಹೋದವು.
ಆದರೂ ಕೂಡ ಪರಿವಾರದವರ ನೆನಪು ಬಂದಾಗ ದೇಹಕ್ಕೆ ಸ್ವಲ್ಪ ಶಕ್ತಿ, ಉತ್ಸಾಹ ಬಂದಂತೆನಿಸಿತು, ಹೇಗಾದರೂ ಮಾಡಿ ತೀರವನ್ನು ತಲುಪಲೇಬೇಕೆಂದು ತೀರ್ಮಾನಿಸಿ, ದೇಹದಲ್ಲಿದ್ದ ಉಳಿದ ಶಕ್ತಿಯನ್ನು ಮತ್ತೆ ಕಲೆ ಹಾಕಿ, ಮತ್ತೆ ತೀರದೆಡೆಗೆ ಈಜಲು ಪ್ರಯತ್ನಿಸಿದ.
ಇದ್ದಕ್ಕಿದ್ದಂತೆ ಅವನಿಗೊಂದು ಯೋಚನೆ ಹೊಳೆಯಿತು. ಇದುವರೆಗೂ ಅವನು ತೀರ ತಲುಪಲು ನೇರವಾಗಿ ಈಜುತ್ತಿದ್ದರು, ಈಗ ಸ್ವಲ್ಪ ನಿಧಾನವಾಗಿ ತೆರೆಗಳನ್ನು ಗಮನಿಸಿ ದೇಹವನ್ನು ಅಡ್ಡವಾಗಿ ತಿರುಗಿಸಿದ. ಅಂದರೆ ಈಗ ಅವನ ದೇಹ ತೆರೆಗಳಿಗೆ ವಿರುದ್ಧವಾಗಿರದೆ ಸಮಾನಾಂತರವಾಗಿತ್ತು. ಈಗ ಅವನು ಜೋರಾಗಿ ಈಜುವುದೂ ಬೇಕಿರಲಿಲ್ಲ. ಕೇವಲ ಉಸಿರು ಬಿಗಿ ಹಿಡಿದು ತೇಲಿದರೆ ಸಾಕಿತ್ತು.
ಸ್ವಲ್ಪ ಸಮಯದಲ್ಲಿ ಅವನಿಗೆ ಸಮುದ್ರ ತೀರದಲ್ಲಿದ್ದ ಜನ ಸ್ಪಷ್ಟವಾಗಿ ಕಾಣಿಸತೊಡಗಿದರು. ಮತ್ತೆ ಕೆಲವೇ ನಿಮಿಷಗಳಲ್ಲಿ, ತೀರದಲ್ಲಿದ್ದವರಿಗೂ ಇವನು ಕಾಣಿಸತೊಡಗಿದ. ಸ್ವಲ್ಪ ಹೊತ್ತಿನಲ್ಲಿ ಇವನ ಕಾಲಿಗೆ ನೆಲ ಸಿಕ್ಕಿತು. ಕೆಲವು ಬಲಿಷ್ಠ ಹುಡುಗರು ಬಂದು, ಇವನನ್ನು ಎಳೆದುಕೊಂಡು ನಿಧಾನವಾಗಿ ದಡ ಸೇರಿಸಿದರು.
ಕಣ್ಣೀರು ಸುರಿಸುತ್ತಿದ್ದ ಇವನ ಪತ್ನಿ, ಮಕ್ಕಳು ಬಂದು ಇವನನ್ನು ತಬ್ಬಿಕೊಂಡರು. ಮೃತ್ಯುವಿನ ದವಡೆಯಿಂದ ಹೊರಬಂದು ಈತ ಮೃತ್ಯುಂಜಯನಾದ.
ಈ ಘಟನೆಯಾದಂದಿನಿಂದ ಅವನು ಪೂರ್ತಿಯಾಗಿ ಬದಲಾದ ವ್ಯಕ್ತಿಯಾದ. ಇವನಿಗೆ ಸಾವು ಮತ್ತು ಬದುಕಿನ ನಡುವಿನ ತೆಳುವಾದ ಗೆರೆಯ ದರ್ಶನವಾಗಿತ್ತು. ಅದರ ವ್ಯತ್ಯಾಸವನ್ನು ಕಂಡು ಕೊಂಡ. ಆದ್ದರಿಂದ ಅವನು ಭಗವಂತ ಕೊಟ್ಟ ಜೀವನವನ್ನು ಹಿಂದೆಂದಿಗಿಂತಲೂ ಹೆಚ್ಚು ಪ್ರೀತಿಸಿತೊಡಗಿದ.
ಎಲ್ಲದಕ್ಕಿಂತಲೂ ಪ್ರೀತಿಯೇ ಅತ್ಯಂತ ಬಲಿಷ್ಠ ಶಕ್ತಿ ,ಎಂಬ ಆತ್ಮವಿಶ್ವಾಸ ಅವನಲ್ಲಿ ಮೂಡಿತ್ತು.
ಈ ತಿಳುವಳಿಕೆ ಬರಲು, ಇಂಥದ್ದೇ ಘಟನೆ ಎಲ್ಲರಿಗೂ ಬರಬೇಕೆಂದೇನಿಲ್ಲ, ಬೇರೆಯವರ ಜೀವನದಿಂದ ಪಾಠ ಕಲಿತರೆ ಸಾಕು, ಅದರಿಂದ ನಮಗೂ ಆ ಭಾವ ಬರಬಹುದು.
ಕೃಪೆ :ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment