ದಿನಕ್ಕೊಂದು ಕಥೆ 1127
*🌻ದಿನಕ್ಕೊಂದು ಕಥೆ🌻*
*ಬಾಲೆಯ ಕಾಲಿನಲ್ಲಿ ಚಪ್ಪಲಿಗಳು ಇರಲಿಲ್ಲವೆಂದು ಅವರಿಗೆ ಜ್ಞಾಪಕಕ್ಕೆ ಬರುತ್ತಿತ್ತು !!!*
200 ವರ್ಷಗಳ ಹಿಂದೆ ಮಧುರೈ ಬ್ರಿಟೀಷರ ಪ್ರಮುಖ ಕೇಂದ್ರವಾಗಿತ್ತು.ರೋಸ್ ಪೀಟರ್ ಎನ್ನುವವರು ಕಲೆಕ್ಟರ್ ಆಗಿ ನೇಮಕಗೊಂಡು ಅಲ್ಲಿಗೆ ಬಂದರು. ಕ್ರಿಶ್ಚಿಯನ್ ಆಗಿದ್ದ ಅವರು ಮೀನಾಕ್ಷಿ ದೇವಾಲಯದ ಹತ್ತಿರದ ಬಂಗಲೆಯಲ್ಲಿ ವಾಸವಿದ್ದರು.ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಮೀನಾಕ್ಷಿಯ ದೇವಾಲಯ. ಅಲ್ಲಿಂದ ಅರ್ಧಕಿಲೋಮೀಟರ್ ದೂರದಲ್ಲಿ ಅವರ ಕಛೇರಿ. ಕಛೇರಿಗೂ ಮನೆಗೂ ಮಧ್ಯದಲ್ಲಿ ದೇವಾಲಯ.
ಅವರೇನು ಮೀನಾಕ್ಷಿಯ ಭಕ್ತರಲ್ಲ.
ಎಲ್ಲ ಧರ್ಮಗಳನ್ನೂ ಸಮನಾಗಿ ಕಾಣುತ್ತಿದ್ದವರು.ಕಛೇರಿಗೆ ಕುದುರೆಯ ಮೇಲೆ ಹೋಗುತ್ತಿದ್ದ ಅವರು ದೇವಾಲಯದ ಹತ್ತಿರ ಬರುತ್ತಿದ್ದಂತೆ ಕುದುರೆಯಿಂದ ಕೆಳಗಿಳಿದು,ಹ್ಯಾಟ್ ಮತ್ತು ಶೂಸ್‌ನ್ನು ಕೈಯಲ್ಲಿ ಹಿಡಿದುಕೊಂಡು ನಡೆದು ಹೋಗುತ್ತಿದ್ದರು.
ಕೆಲವಾರು ವರ್ಷಗಳು ಹೀಗೆ ನಡೆಯಿತು. ಒಮ್ಮೆ ನಾಲ್ಕು ದಿನಗಳಿಂದ ಮಧುರೈನಲ್ಲಿ ಎಡಬಿಡದೆ ವಿಪರೀತ ಮಳೆ ಸುರಿಯಿತು. ಪರಿಣಾಮವಾಗಿ ಇಡೀ ನಗರವೇ ನೀರಿನಿಂದ ತುಂಬಿ ಹೋಯಿತು. ಸಂಜೆಯ ಸಮಯ ಜೋರಾದ ಮಳೆ ಬರುತ್ತಿದ್ದಾಗ, ಪೀಟರ್ ಅವರು ಕಾಫಿ ಕುಡಿಯುತ್ತಾ ಕಾದಂಬರಿಯೊಂದನ್ನು ಓದುತ್ತಿದ್ದರು.
ಬಾಗಿಲು ತೆರೆದ ಶಬ್ದವಾಯಿತು!!.
ಯಾರಿರಬಹುದೆಂದು ನೋಡಲು ಹೊರಗೆ ಬಂದರು. ಬಾಗಿಲು ಸ್ವಲ್ಪ ತೆರೆದಿತ್ತು . ಎಂಟುವರ್ಷದ ಮುದ್ದು ಮುಖದ ಹುಡುಗಿಯೊಬ್ಬಳು ಬಾಗಿಲಿನಿಂದ ತುಸು ದೂರದಲ್ಲಿ ನಿಂತಿದ್ದಳು.ಇವರನ್ನು ನೋಡಿ ನಕ್ಕಳು. ಪ್ರತಿಯಾಗಿ ಅವರೂ ನಕ್ಕರು. ಹುಡುಗಿಯು "ಬಾ ಬಾ" ಎಂಬಂತೆ ಕೈ ಸನ್ನೆ ಮಾಡುತ್ತಾ ಹೊರಗೆ ನಡೆದಳು.
ಇವರೂ ಯಾವುದೋ ಸೆಳೆತಕ್ಕೆ ಒಳಗಾದವರಂತೆ, ಹೊರಬಂದು ಆ ಹುಡುಗಿ ಮಳೆಯಲ್ಲಿ ಎಲ್ಲಿ ಹೋದಳು ಎಂದು ಹೊರಗೆ ನೋಡಿದರೆ "ಬಾ ಬಾ" ಎಂದು ಸನ್ನೆ ಮಾಡುತ್ತಾ,ಅವರ ಮನೆಯಿಂದ ಸುಮಾರು 300 ಅಡಿಗಳಷ್ಟು ದೂರ ಕರೆದುಕೊಂಡು ಹೋದಳು.ಇವರು ಅವಳನ್ನು ಹಿಂಬಾಲಿಸಿದರು. ಅದೇ ಸಮಯದಲ್ಲಿ ಹಿಂದಿನಿಂದ ಜೊರಾದ ಶಬ್ಧವಾಯಿತು.
ಹಿಂದಕ್ಕೆ ತಿರುಗಿ ನೋಡಿದಾಗ ಕಂಡ ದೃಶ್ಯ ಅವರ ಎದೆಯನ್ನು ಝಲ್ ಎನಿಸಿತು. ಅವರ ಮನೆ ಪೂರಾ ಬಿದ್ದು ಹೋಗಿ, ನೆಲಸಮವಾಗಿತ್ತು!!
ತಿರುಗಿ ಹುಡುಗಿಯತ್ತ ನೋಡಿದರೆ ಅವಳು ಅಲ್ಲಿರಲಿಲ್ಲ.
ತಕ್ಷಣವೇ ಪೀಟರ್ ಅವರಿಗೆ ಈ ಹುಡುಗಿ ಬೇರಾರೂ ಅಲ್ಲ,ಮಧುರೆಯ ಮೀನಾಕ್ಷಿಯೇ!! ನನ್ನನ್ನು ಕಾಪಾಡಲೆಂದೇ ಹುಡುಗಿಯ ರೂಪದಲ್ಲಿ ಬಂದವಳು ಎಂದು ಹೊಳೆಯಿತು.
ಮೀನಾಕ್ಷಿಯ ಮೇಲೆ ಶ್ರದ್ಧಾ,ಭಕ್ತಿ ಹುಟ್ಟಿತು.
ಪೀಟರ್ ಅವರಿಗೆ ಆ ಬಾಲೆಯನ್ನು ಮರೆಯಲಾಗಲಿಲ್ಲ.ಆ ಸುಂದರ ಮುಖವೇ ಪದೇ ಪದೇ ಕಣ್ಣ ಮುಂದೆ ಬರುತ್ತಿತ್ತು.
ಆಗ ಆ ಬಾಲೆಯ ಕಾಲಿನಲ್ಲಿ ಚಪ್ಪಲಿಗಳು ಇರಲಿಲ್ಲವೆಂದು ಅವರಿಗೆ ಜ್ಞಾಪಕಕ್ಕೆ ಬರುತ್ತಿತ್ತು.
ಒಂದೆರಡು ದಿನ ಇದೇ ಧ್ಯಾನದಲ್ಲಿದ್ದವರು,
ಮನದಲ್ಲಿಯೇ ನಿರ್ಧಾರಮಾಡಿ, ದೇವಾಲಯದ ಅರ್ಚಕರನ್ನು ಕಂಡು, ದೇವಿಯ ಪಾದಗಳಿಗೆ,ಪಾದುಕೆ ಮಾಡಿಸುವ ಬಗ್ಗೆ ಕೇಳಿದರು.
ಅರ್ಚಕರು,ಆಗಮೋಕ್ತ ವಿಧಿಯಲ್ಲಿರುವಂತೆ,ಪಾದುಕೆ ಹೇಗಿರಬೇಕೆಂದು ವಿವರಿಸಿದರು. ಚಿನ್ನಾಭರಣ ತಯಾರಿಸುವ ವ್ಯಾಪಾರಿಯೊಬ್ಬರಿಗೆ ಅದರಂತೆಯೇ, ಚಿನ್ನದ ಪಾದುಕೆಯಲ್ಲಿ 412 ಮಾಣಿಕ್ಯ,
80 ವಜ್ರಗಳನ್ನು ಕೂರಿಸಿ ಸುಂದರವಾಗಿ ಪಾದುಕೆ ತಯಾರಿಸಲು ಕೊಡಲು ಹೇಳಿದರು. ಅದೇ ರೀತಿಯಲ್ಲಿ ಪಾದುಕೆ ಸಿದ್ಧಗೊಂಡಿತು.
ಪೀಟರ್ ಅವರು ಶುಭದಿನದಂದು,ವಜ್ರಖಚಿತ ಸುವರ್ಣಪಾದುಕೆಗಳನ್ನು ಭಕ್ತಿಯಿಂದ ದೇವಿಗೆ ಸಮರ್ಪಿಸಿದರು. ಈಗಲೂ ಚೈತ್ರ ಮಾಸದ ಉತ್ಸವದಲ್ಲಿ ಆ ಪಾದುಕೆಗಳನ್ನು ದೇವಿಯ ಪಾದಗಳಿಗೆ ತೊಡಿಸಿ ದೇವಾಲಯದ ಸುತ್ತಲೂ ಮೆರವಣಿಗೆ ಮಾಡುತ್ತಾರೆ.
2018 ರಲ್ಲಿ ಪೀಟರ್ ರವರ ಐದನೆಯ ತಲೆಮಾರಿನವರು (ವಂಶಸ್ಥರು) ಬಂದು ಪೂಜೆ ಮಾಡಿಸಿಕೊಂಡು,ದೇವಿಯ ದರ್ಶನ ಮಾಡಿ ಸೇವೆ ಮಾಡಿಸಿ ಹೋಗಿದ್ದಾರೆ. 200 ವರ್ಷದ ಹಿಂದಿನ ಘಟನೆಯ ನೆನಪಿಗೆ ಆ ಪಾದುಕೆಗಳು ಈಗಲೂ ಅಚ್ಚಳಿಯದೆ ಇದ್ದು ದೇವಿಯ ಪಾದಗಳನ್ನು ಅಲಂಕರಿಸುತ್ತಿವೆ. ದೇವಿಯು ಪೀಟರ್‌ರವರ ಭಕ್ತಿ,ಶ್ರದ್ಧೆ, ಪ್ರೀತಿಗೆ ಅನುಗ್ರಹ ಮಾಡಿದ ಪರಿ ಇದು.
ಕೃಪೆ:ಸುವರ್ಣ ಮೂರ್ತಿ.
ಸಂಗ್ರಹ: ವೀರೇಶ್ ಅರಸೀಕೆರೆ
Comments
Post a Comment