ದಿನಕ್ಕೊಂದು ಕಥೆ 1129
*🌻ದಿನಕ್ಕೊಂದು ಕಥೆ🌻*
*ಮಗನನ್ನು ಜ್ಞಾನ ಶಿಲ್ಪಿಯಾಗಿ ಕಡೆದ ತಂದೆ*
ಆ ಊರಿನ ಒಬ್ಬ ಶಿಲ್ಪಿ ಸುಂದರವಾದ ಮೂರ್ತಿಗಳನ್ನು ಕೆತ್ತನೆ ಮಾಡುತ್ತಿದ್ದ
ಇದರಿಂದ ಅವನಿಗೆ ಒಳ್ಳೆಯ ಆದಾಯ ಇತ್ತು. ಶಿಲ್ಪಿಗೆ ವಿವಾಹವಾಗಿ ಒಂದು ಗಂಡು ಮಗು ಜನಿಸಿತು. ಮಗುವಾಗಿದ್ದಾಗಲೇ ತಂದೆ ಕಲ್ಲು ಕಡೆಯುವುದನ್ನು ಆಸಕ್ತಿಯಿಂದ ನೋಡುತ್ತಿತ್ತು. ಪುಟ್ಟ ಬಾಲಕನಾದಾಗಲೇ ಉಳಿ ಹಿಡಿದು ಕಲ್ಲು ಕೆತ್ತುವುದನ್ನು ಕಲಿತು, ಸ್ವಲ್ಪ ದೊಡ್ಡವನಾದಂತೆ, ಸುಂದರವಾದ ಮೂರ್ತಿಗಳನ್ನು ತಯಾರಿಸುತ್ತಿದ್ದ. ಮಗನ ಕೆತ್ತನೆ ಕಂಡು ತಂದೆಗೆ ಬಹಳ ಖುಷಿಯಾಯಿತು. ಹಾಗಂತ ಮಗನನ್ನು ಹೊಗಳದೆ, ಮಗನ ಕೆತ್ತನೆಯಲ್ಲಿ ಸಣ್ಣ ದೋಷಗಳನ್ನು ತೋರಿಸಿ, ಮಗು ನಿನ್ನ ಕೆತ್ತನೆ ಚೆನ್ನಾಗಿದೆ ಮುಂದಿನ ಸಾರಿ ಸಣ್ಣಪುಟ್ಟ ತಪ್ಪುಗಳು ಆಗದಂತೆ ಗಮನ ಕೊಡು ಎನ್ನುತ್ತಿದ್ದನು. ಮಗ ತಂದೆಗೆ ಎದುರಾಡದೆ ತಂದೆ ಹೇಳಿದ ಪ್ರತಿ ಮಾತನ್ನು ಗಮನದಲ್ಲಿಟ್ಟು ತಿದ್ದಿಕೊಂಡು ಇನ್ನೂ ಚೆನ್ನಾಗಿ ಶಿಲೆಗಳನ್ನು ಕಡೆಯುತ್ತಿದ್ದ.
ಮಗನ ಈ ಶ್ರದ್ದೆ- ಶ್ರಮದಿಂದಾಗಿ, ತಂದೆ ಕೆತ್ತುವ ಶಿಲೆಗಳಿಗಿಂತ ಮಗ ಕಡೆಯುವ ಶಿಲೆಗಳಿಗೆ ಹೆಚ್ಚಿನ ಬೆಲೆ- ಬೇಡಿಕೆ ಬಂದಿತು. ಮಗನ ಶಿಲೆಗಳಿಗೆ ಹೆಚ್ಚಿನ ಹಣ ಮತ್ತು ಬೇಡಿಕೆ ಬಂದಂತೆ, ತಂದೆ ಕಡೆದ ಶಿಲೆಗಳಿಗೆ ಹಳೆ ಬೆಲೆ ಇದ್ದರೂ, ಬೇಡಿಕೆ ಕಮ್ಮಿಯಾ ಯಿತು. ಆದರೂ ತಂದೆ ಮಗನು ಕಡೆದ ಶಿಲೆಗಳನ್ನು ನೋಡಿ ಮತ್ತಷ್ಟು ಚೆನ್ನಾಗಿ ಮಾಡಬೇಕು ಈ ದೋಷ ಇದೆ ಎಂದು ಹುಡುಕಿ ಹೇಳುತ್ತಲೇ ಬಂದನು. ಏಕೋ ಈಗೀಗ ತಂದೆಯ ಮಾತು ಅವನಿಗೆ ಸರಿ ಅನಿಸಲಿಲ್ಲ. ತಂದೆ ಎಂಬ ಕಾರಣಕ್ಕೆ ಒಪ್ಪಿಕೊಂಡು, ಅವನು ಹೇಳುತ್ತಿದ್ದ ಸಣ್ಣ ತಪ್ಪುಗಳನ್ನು ಸರಿ ಮಾಡಿಕೊಂಡು ಇನ್ನೂ ಚೆನ್ನಾಗಿ ಮೂರ್ತಿಗಳನ್ನು ಕಡೆದನು.
ಒಂದು ದಿನ ಮಗನ ಸಹನೆಯ ಕಟ್ಟೆ ಒಡೆಯಿತು. ತಂದೆ ಯಾವಾಗಿನಂತೆ, ಮಗ ಕಡೆದ ಶಿಲೆಯ ದೋಷ ಹೇಳಲು ಬಂದಾಗ, ಅಹಂ ನಿಂದ ಮಗ ಹೇಳಿದ, ಅಪ್ಪ ನನ್ನ ಮೂರ್ತಿಗಳ ತಪ್ಪುಗಳನ್ನೇ ಹುಡುಕುತ್ತೀರಿ. ನೀವು ಹೇಳುವುದು ನೋಡಿದರೆ, ನೀವೇನೋ ಮಹಾ ದೊಡ್ಡ ಶಿಲ್ಪಿ ಎಂದು ಕೊಂಡಿರು
ವಂತಿದೆ. ನಿಜವಾಗಿಯೂ ನೀವು ಅಷ್ಟು ದೊಡ್ಡ ಶಿಲ್ಪಿಯಾಗಿದ್ದರೆ ನೀವೇ ಕಡೆದ ಶಿಲೆಗಳು ಅಷ್ಟು ಕಡಿಮೆ ಬೆಲೆ ಇದ್ದರೂ ಜನ ತೆಗೆದುಕೊಳ್ಳುತ್ತಿಲ್ಲ. ಅದೇ ಜನರು ನನ್ನ ಶಿಲೆಗಳನ್ನು ಇಷ್ಟಪಟ್ಟು ತೆಗೆದುಕೊಳ್ಳುತ್ತಾರೆ ಎಂದ ಮೇಲೆ ನೀವು ಕೊಡುವ
ಉಪದೇಶ ನನಗೆ ಬೇಡ ಎಂದನು ತಂದೆ ಮಗನ ಮಾತು ಕೇಳಿ, ಅಂದಿನಿಂದಲೇ ಮಗನಿಗೆ ಸಲಹೆ ಕೊಡುವುದನ್ನು ನಿಲ್ಲಿಸಿದ.
ದಿನ ಕಳೆದಂತೆ, ಮಗನ ಶಿಲೆಗೆ ಅಪಾರ ಬೇಡಿಕೆ ಬಂದಿತು. ಮಗ ಹಿರಿಹಿರಿ ಹಿಗ್ಗಿದ.
ಕೆಲವು ತಿಂಗಳಾಯಿತು ಇದ್ದಕ್ಕಿದ್ದಂತೆ ಮಗನ ಶಿಲೆಗಳಿಗೆ ಬರುತ್ತಿದ್ದ ಬೇಡಿಕೆ ಕಡಿಮೆ ಯಾಗುತ್ತಿದೆ ಎಂಬುದು ಅವನ ಗಮನಕ್ಕೆ ಬಂದಿತು. ಬೇಡಿಕೆ ಪೂರ್ತಿ ಕಡಿಮೆ ಯಾಗಿ ಮೂರ್ತಿಗಳ ಬೆಲೆ ಕಡಿಮೆ ಮಾಡಿ, ಕೆಲವು ದಿನ ಕಾದನು. ಆದರೂ ಬೇಡಿಕೆ ಇಲ್ಲ. ಅವನಿಗೆ ಅರ್ಥವಾಗಲಿಲ್ಲ. ತಂದೆಯ ಬಳಿ ಹೋಗಿ ಎಲ್ಲ ಹೇಳಿದ. ತಂದೆ ಹೇಳಿದ್ದನ್ನು ಕೇಳಿ ಮಗನಿಗೆ ಆಶ್ಚರ್ಯವಾಯಿತು, ತನಗೆ ಇಂಥ ಪರಿಸ್ಥಿತಿ ಬರುತ್ತದೆ ಎಂದು ಅಪ್ಪನಿಗೆ ಮೊದಲೇ ಗೊತ್ತಿತ್ತು ಎಂಬಂತೆ ಹೇಳಿದರು.
ಅಪ್ಪ ನಿಮಗೆ, ನನ್ನ ಈಗಿನ ಸ್ಥಿತಿ ಬರುತ್ತೇ ಎಂದು ಮೊದಲೇ ಗೊತ್ತಿತ್ತಾ ಎಂದು ಕೇಳಿದ. ತಂದೆ, ಹೌದು ಮಗನೇ ನನಗೆ ಗೊತ್ತಿತ್ತು ನಿನ್ನ ವಯಸ್ಸಿನಲ್ಲಿ ನಾನೂ ಸಹ ನಿನ್ನ ಹಾಗೆ ನನ್ನ ತಂದೆ ಹೇಳಿದ ಮಾತುಗಳನ್ನು ನಿರ್ಲಕ್ಷಿಸುತ್ತಾ ಬಂದವನು. ಮಗನಿಗೆ ಆಶ್ಚರ್ಯವಾಗಿ, ಅಪ್ಪಾ ಇಷ್ಟೆಲ್ಲ ನಿಮಗೆ ಗೊತ್ತಿದ್ದರೂ, ನನಗೆ ಮೊದಲೇ ಯಾಕೆ ಹೇಳಲಿಲ್ಲ ಎಂದು ಕೇಳಿದನು.
ತಂದೆ ಮಗನತ್ತ ತಿರುಗಿ ಮಗು ನೀನು ನನ್ನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ನಿನ್ನಷ್ಟು ಸುಂದರ ಮೂರ್ತಿ ಕೆತ್ತಲು ಬರುವುದಿಲ್ಲ. ನನ್ನ ಅನು ಭವದ ಸಲಹೆ ಸರಿ ಅಥವಾ ತಪ್ಪು ಅಂತ ನಾನೆಂದು ಯೋಚನೆ ಮಾಡಿಲ್ಲ. ನಾನು ಕೊಡುವ ಸಲಹೆಯಿಂದಲೇ ನೀನು ಕಡೆಯುವ ಕೆತ್ತನೆ ಸುಂದರವಾದ ರೂಪ ತಾಳುತ್ತಿದೆ ಎಂದೂ ಅಂದುಕೊಂಡಿಲ್ಲ. ಆದರೆ ನನಗೆ ಗೊತ್ತು. ನೀನು ಶಿಲೆ ಕಡೆಯು ವಾಗ ಮಾಡುವ ಸಣ್ಣಪುಟ್ಟ ದೋಷಗಳನ್ನು ಹೇಳಿದರೆ, ಇನ್ನೂ ಚೆನ್ನಾಗಿ ಕೆತ್ತಲು ಪ್ರಯತ್ನ ಪಡುತ್ತಿದ್ದೆ. ನಾನು ಹೇಳುವ ಸಲಹೆಗಳನ್ನು ಕೇಳಿ ತಿದ್ದಿಕೊಂಡಷ್ಟು ನಿನ್ನ ಶಿಲೆಗಳು ಸುಂದರವಾಗುತ್ತಿದ್ದವು. ಬರ ಬರುತ್ತಾ ನಿನಗೆ ಯಶಸ್ಸನ್ನು ಕೊಟ್ಟಿತು. ಯಾವಾಗ ನೀನು ಶಿಲೆ ಕಡೆಯುವ ವಿದ್ಯೆ ನಿನಗೆ ಕರಗತವಾಗಿದೆ ಎಂಬ ತೃಪ್ತಿ ನಿನಗೆ ಆದಾಗ, ನೀನು ಶಿಲೆ ಕಡೆಯುವಲ್ಲಿ ವಿಫಲ ನಾದೆ. ನೀನು ಕಡೆದ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗಿ ನಿನ್ನ ಉತ್ಸಾಹವು ತಗ್ಗಿತು.
ಯಾವಾಗಲೂ ಜನಗಳೇ ಹಾಗೆ, ಇರುವುದಕ್ಕಿಂತ ಇನ್ನೂ ಚೆನ್ನಾಗಿರಬೇಕು, ಮತ್ತು ಜಾಸ್ತಿ ಸಿಗಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹೀಗಾಗಿ ನಿನ್ನ ಶಿಲೆಯ ಕಲೆಯ ಬೆಲೆ ಕಡಿಮೆಯಾಯಿತು. ಮಗ ಕೇಳಿದ ಅಪ್ಪ ಹಾಗಾದ್ರೆ ಈಗ ಏನು ಮಾಡಲಿ ಎಂದು, ತಂದೆ ಒಂದೇ ವಾಕ್ಯದಲ್ಲಿ ಉತ್ತರ ಕೊಟ್ಟ ನೀನು ಯಾವಾಗಲೂ ನಿನ್ನ ಕೆಲಸದಲ್ಲಿ ಪೂರ್ಣ ಎಂದು ತಿಳಿಯಬಾರದು. ‘ಅತೃಪ್ತಿ ನಿನ್ನೊಳಗಿರಬೇಕು’ ನಿನ್ನ ಮನಸ್ಸಿನಲ್ಲಿ ಇದಕ್ಕಿಂತಲೂ ಚೆನ್ನಾಗಿ ಮಾಡಬೇಕು ಎಂಬ ತುಡಿತವಿರಬೇಕು. ಇಂಥ ಸೂಕ್ಷ್ಮ ವಿಷಯದತ್ತ ನ ಗಮನ ಹರಿಸಿದರೆ ಅದು ನಿನ್ನನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಕಲಿಕೆಗೆ ಕೊನೆ ಎಂಬುದು ಇಲ್ಲ. ಅದು ಮೊಗೆದಷ್ಟು ಸಮುದ್ರದಂತೆ ಆಳ ಮತ್ತು ಅಗಲ ವಿಸ್ತಾರವಾಗಿದೆ. ಪ್ರಕೃತಿ, ಪಶು ಪಕ್ಷಿ,ಗಾಳಿ, ಬೆಳಕು, ನೀರು, ಬೆಂಕಿ, ಹಣ್ಣು, ಗಿಡ, ಮರ, ಎಲ್ಲಿಂದಾದರೂ ಜ್ಞಾನ ಪಡೆಯಬೇಕು. ಓದಿ - ಬರೆದು ತಿಳಿದುಕೊಂಡಿ ದ್ದಕ್ಕಿಂತ ಹೆಚ್ಚು ಜ್ಞಾನ, ಸ್ವಂತ ಶೋಧನೆ, ಪ್ರಯೋಗದಲ್ಲಿ, ಮತ್ತು ಅನುಭವಿಗಳು ಹೇಳುವ ಮಾತಿನಿಂದ ತಿಳಿಯುವುದು ಕಲಿಯುವುದು ಎಂದಿಗೂ ಇರುತ್ತದೆ.
ಹೊಸ ಚಿಗುರು ಹಳೇ ಬೇರು ಕೂಡಿರಲು ಮರಸೊಬಗು
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ!!
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ - ಮಂಕುತಿಮ್ಮ!!
ಕೃಪೆ,ಬರಹ:- ಆಶಾ ನಾಗಭೂಷಣ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment