ದಿನಕ್ಕೊಂದು ಕಥೆ 1131

*🌻ದಿನಕ್ಕೊಂದು ಕಥೆ🌻*

ಬರ್ನಾಡ್ ಡಿ ಕ್ಲರ್ಕ್, ರವರು ಭಾರತೀಯ ಸಾವಯುವ ಬೇಸಾಯ ಚಳುವಳಿಯ ರೂವಾರಿಗಳಲ್ಲಿ ಒಬ್ಬರು. ಬೆಲ್ಜಿಯಂ ಮೂಲದ ಬರ್ನಾಡ್ ರವರು ಪಾಂಡಿಚೆರಿಯ ಆರೋವಿಲ್ ಗೆ ಬಂದು ಅಲ್ಲಿನ ವಿಶಾಲ ಬರಡು ಭೂಮಿಯ  ಪುನರ್ಜೀವನದ ಕೆಲಸದಲ್ಲಿ, ತಮ್ಮನ್ನು  ತೊಡಗಿಸಿಕೊಂಡಿದ್ದರು. ಅಸಾಧಾರಣ ವಾಗ್ಮಿ ಮತ್ತು ತರಬೇತುದಾರರಾದ ಬರ್ನಾಡ್ ರವರು ಒಂದು ಸಲ ಕರ್ನಾಟಕಕ್ಕೆ ಬಂದು ರೈತರಿಗೆ ಸಾವಯುವ ಬೇಸಾಯದ ತರಬೇತಿಗಳನ್ನು ನಡೆಸಿಕೊಡುತ್ತಿದ್ದರು. 

   ನಿರರ್ಗಳವಾಗಿ ಅನೇಕ ಗಂಟೆಗಳ ಕಾಲ ಮಾತನಾಡುತ್ತಿದ್ದ ಅವರು, ಕೇಳುಗರಿಗೆ ಸ್ವಲ್ಪ ಬೇಸರವಾಯಿತೆಂದು ಕಂಡು ಬಂದರೆ, ಒಂದು ಆಸಕ್ತಿಯುತ ಸೂಕ್ಷ್ಮ ಒಳನೋಟದ ಕಥೆಯನ್ನು ಹೇಳಿ, ಕೇಳುಗರ ಮನಸ್ಸನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಿದ್ದರು. ಹಾಗೆ ಅವರು ಹೇಳುತ್ತಿದ್ದ ಕಥೆಗಳಲ್ಲಿ ಇದೂ ಒಂದು.

     ಒಂದು ನಿಮಿಷ ಕಾದಿರು.

     ರೈತನೊಬ್ಬ, ತನ್ನ ಕೆಲಸಗಳ ನಡುವೆ, ಬಿಡುವು ಮಾಡಿಕೊಂಡು, ಹಿಮಾಲಯ ಪರ್ವತವನ್ನು ನೋಡಲೆಂದು ಹೋದ. ಅಷ್ಟು ದೊಡ್ಡ ಪರ್ವತವನ್ನು ನೋಡಿ ಆತ ಬೆರಗಾಗಿ  ನಿಂತಿದ್ದ. ಅಷ್ಟರಲ್ಲಿ ರೈತನಿಗೆ ಪರ್ವತ ಇಳಿದು ಬರುತ್ತಿದ್ದ ದೇವರು ಎದುರಾಗಿ ಬಿಟ್ಟ. ಕಕ್ಕಾಬಿಕ್ಕಿಯಾದ  ರೈತ ಈ ಅವಕಾಶವನ್ನು ಹೇಗಾದರೂ ಮಾಡಿ ತನ್ನ ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಲೇ ಬೇಕು ಎಂದುಕೊಂಡು, ದೇವರಿಗೆ ದೀರ್ಘ ದಂಡ ನಮಸ್ಕಾರ ಮಾಡಿ, ತನ್ನ ಗಂಟಲು ಸರಿ ಮಾಡಿಕೊಳ್ಳುತ್ತಾ, ದೇವರನ್ನು ಕೇಳಿದ. 
  ಭಗವಂತಾ , " ನಮ್ಮ  ಒಂದು ವರ್ಷ ನಿಮಗೆ ಒಂದು ನಿಮಿಷಕ್ಕೆ ಸಮಾನವಂತೆ ಹೌದೇ ಎಂದು ಕೇಳಿದ. 
ಆಗ ಭಗವಂತ, ಹೌದಪ್ಪ ಎಂದ.
ರೈತ ಮುಂದುವರೆದು, ಹಾಗೇ, ನಮ್ಮ ಒಂದು ಲಕ್ಷ ನಿಮಗೆ ಒಂದು ರೂಪಾಯಿಗೆ ಸಮಾನವಂತೆ? ಎಂದು ಕೇಳಿದ.
  ಅದಕ್ಕೂ, ದೇವರು, ಹೌದೆಂದು ಉತ್ತರಿಸಿದ. 
ಆಗ ತಕ್ಷಣ ರೈತ, ಹಾಗಾದರೆ ನನಗೆ ಒಂದೆರಡು ರೂಪಾಯಿಗಳನ್ನು ದಯಪಾಲಿಸುವೆಯಾ, ಭಗವಂತಾ, ಎಂದು, ತನ್ನ ಕಿಲಾಡಿತನ ಪ್ರದರ್ಶಿಸಲು ಪ್ರಯತ್ನಿಸಿದ.
   ಆಗ ದೇವರು, ಓ... ಅಗತ್ಯವಾಗಿ,.. ಆದರೆ ,ಒಂದೆರಡು ನಿಮಿಷ ಕಾದಿರು, ಪರ್ಸ್ ಮರೆತು ಬಂದಿದ್ದೇನೆ , ಎನ್ನಬೇಕೇ!

   ಈ ರೀತಿಯ ಕಥೆಗಳನ್ನು ಹೇಳಿ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದರು, ಬರ್ನಾಡರು.

ಕೃಪೆ:ನಿತ್ಯ ಸತ್ಯ.
ಸಂಗ್ರಹ:ವೀರೇಶ್ ಅರಸೀಕೆರೆ 
-------------------------------------------------------------------------
*ಶ್ರೀಮಂತ,,,,,,,,,*

ಆಫೀಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರವಿ ಎರಡು ದಿನ ರಜೆ ಸಿಕ್ಕಿದ್ದರಿಂದ ಅಪ್ಪ ಅಮ್ಮನ ಜೊತೆ ಕಾಲ ಕಳೆಯಲು ಹಳ್ಳಿಗೆ ಹೊರಟಿದ್ದ.  ಬಸ್ ಸ್ಟ್ಯಾಂಡ್ ತಲುಪಿ ಆಗಷ್ಟೇ ಬಂದ ಬಸ್ ಹತ್ತಿದ, ನೋಡಿದರೆ ಕೂರಲು ಸೀಟ್ ಸಿಗಲಿಲ್ಲ ಅಷ್ಟರಲ್ಲಿ.. ಸೀಟಿನಲ್ಲಿ ಕುಳಿತಿದ್ದ ಒಬ್ಬ ಹಳ್ಳಿಯವ ಎದ್ದು ನಿಂತು ತನ್ನ ಸೀಟ್ ಕೊಟ್ಟು ಸ್ವಲ್ಪ ಮುಂದೆ ಹೋಗಿ ನಿಂತನು.
 
ರವಿ ನಸುನಕ್ಕು ಮೊಗದಲ್ಲೇ ಧನ್ಯವಾದ ಹೇಳಿ ಅಲ್ಲಿ  ಕುಳಿತ.

ಬಸ್ಸು ಸ್ವಲ್ಪ ಮುಂದೆ ಸಾಗಿ ಮುಂದಿನ ಸ್ಟಾಪಿನಲ್ಲಿ ನಿಂತಾಗ ಯಾರೋ ಇಳಿದರು,ಖಾಲಿಯಾದ ಆ ಸೀಟಿನಲ್ಲಿ ರವಿಗೆ ಜಾಗ ನೀಡಿದ್ದ ಆ ಹಳ್ಳಿಯವ ಕುಳಿತ. ಮತ್ತೆ ಯಾರೋ ಬಸ್ ಹತ್ತಿ ಸೀಟಿಗಾಗಿ ಪರದಾಡುತ್ತಿದ್ದಾಗ ಇವನು ಮತ್ತೆ ಅವರಿಗೆ ಸೀಟು ನೀಡಿ ತಾನು ನಿಂತನು.

ಹೀಗೆ ಮುಂದಿನ ನಾಲ್ಕೈದು ಸ್ಟಾಪ್ ಗಳಲ್ಲಿ ಅದೇ ರೀತಿ ಖಾಲಿಯಾದ ಸೀಟಿನಲ್ಲಿ ಕುಳಿತುಕೊಳ್ಳುವುದು ಮತ್ತೆ ಬೇರೆಯವರಿಗೆ ಬಿಟ್ಟು ಕೊಡುವುದು ನಡೆಸಿದ್ದ.
     
ಇದನ್ನೆಲ್ಲಾ ಗಮನಿಸಿದ ರವಿ ತನ್ನ ಸ್ಟಾಪಿನಲ್ಲಿ ಬಸ್ಸಿನಿಂದ ಇಳಿಯುವ ಮುನ್ನ ಅವನನ್ನು  ಮಾತನಾಡಿಸಿದ --ನೀನು ಕುಳಿತುಕೊಳ್ಳುವ ಬದಲು ಪ್ರತಿ ಸ್ಟಾಪಿನಲ್ಲಿ ನಿನ್ನ ಸ್ಥಾನವನ್ನು ಇತರರಿಗೆ ಬಿಟ್ಟುಕೊಡುತ್ತಿರುವೆ?" ಏಕೆ?ಎಂದು ಕೇಳಿದ.

ಅವನ  ಉತ್ತರ ನಿಜಕ್ಕೂ ಆಶ್ಚರ್ಯ ತಂದಿತು.  “ನಾನು ವಿದ್ಯಾವಂತನಲ್ಲ, ಶ್ರೀಮಂತನೂ ಅಲ್ಲ. ಕೂಲಿ ಕೆಲಸ ಮಾಡುವವನು.  ನಾನು ಯಾವುದೇ ರೀತಿಯಲ್ಲಿ ಯಾರಿಗೂ ಏನನ್ನೂ ನೀಡಲು ಸಾಧ್ಯವಿಲ್ಲ. ಹಾಗಾಗಿ ನನಗೆ ಅವಕಾಶ ಸಿಕ್ಕಾಗ ಇಂತಹ ಸಹಾಯ ಮಾಡುತ್ತಿದ್ದೇನೆ. ಇದು ಸುಲಭವೂ ಸಹ,’’ ಎಂದನು.ಕೂಲಿಗಾರನಾದ ನನಗೆ ನಿಲ್ಲುವುದು ಅಂತಹ ಕಷ್ಟವೇನಲ್ಲ, ಇಷ್ಟಾದರೂ ನಾನು ಅವರಿಗೆ ಸಹಾಯವಾದೆನೆಲ್ಲ ಎಂಬ ಈ ತೃಪ್ತಿ ಸಾಕು, ಆ ತೃಪ್ತಿಯಲ್ಲಿ ನಾನು ಆರಾಮವಾಗಿ ಮಲಗುತ್ತೇನೆ, ಎಂದನು.

ಅವನ ಈ ಉತ್ತರದಿಂದ ರವಿ ಮೂಕ ವಿಸ್ಮಿತನಾದ!! ಇತರರಿಗೆ ನೀಡಲು ನಮ್ಮಲ್ಲಿ ಏನೂ ಇಲ್ಲದಿದ್ದರೂ, ಸಹ ನೀಡಬೇಕೆಂದುಕೊಂಡರೆ, ನೀಡುವ ಮನಸ್ಸಿದ್ದರೆ ಯಾವುದೋ ರೂಪದಲ್ಲಿ ಇನ್ನೊಬ್ಬರಿಗೆ ನೆರವಾಗಬಹುದು ಎಂಬುದು ಹಳ್ಳಿಯವನ ನಡೆಯಿಂದ ಅರಿತುಕೊಂಡ.

ನಾವು ಸ್ಥಿತಿವoತರು, ಶ್ರೀಮಂತರಾಗಿದ್ದರೆ ಮಾತ್ರ ಇನ್ನೊಬ್ಬರಿಗೆ ಏನನ್ನಾದರೂ ಕೊಡಬಹುದು ಎಂದು ಭಾವಿಸುವುದು ತಪ್ಪು. ಕೊಡುವ ಹೃದಯವುಳ್ಳ ಪ್ರತಿಯೊಬ್ಬರೂ "ಶ್ರೀಮಂತರು" ತಾನೇ??  ಒಬ್ಬರಿಗೆ ಏನನ್ನಾದರೂ ಕೊಡುವುದರಲ್ಲಿ ಸಿಗುವ "ತೃಪ್ತಿ" ಬೇರೆ ಯಾವುದರಲ್ಲಿಯೂ ಸಿಗದು.
ಇದನ್ನು ಯಾರು ಅಲ್ಲಗಳೆಯರಾರರು ಅಲ್ಲವೇ,,,,

ಲೇಖಕರು:ಸಂPಗೆ ವಾಸು
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1097

ದಿನಕ್ಕೊಂದು ಕಥೆ 1110