ದಿನಕ್ಕೊಂದು ಕಥೆ. 589


*🌻ದಿನಕ್ಕೊಂದು ಕಥೆ🌻                                          ಕ್ಷಣಿಕ ಆಸೆ*

ಗುರುಗಳು ಬಹುದೊಡ್ಡ ಸಾಧಕರು. ಸದಾಕಾಲ ಎಚ್ಚರದಲ್ಲೇ ಇದ್ದು   ತಮ್ಮ ಶಿಷ್ಯರನ್ನು ಅದೇ ಎಚ್ಚರದಲ್ಲಿ ಬೆಳೆಸು­ತ್ತಿದ್ದರು. ಅವರ ಶಿಸ್ತು ಬಹಳ ಕಠಿಣ­ವಾಗಿತ್ತು. ಅಕಸ್ಮಾತ್ ಯಾರಾದರೂ ಅದನ್ನು ಪಾಲಿಸದಿದ್ದರೆ ಬಹಳ ಉಗ್ರರಾಗುತ್ತಿದ್ದರು. ಆತ್ಮಾನಂದ ಅವರ ಹಿರಿಯ ಶಿಷ್ಯ. ಆತನೂ ಮಹಾನ್ ಸಾಧಕನೇ. ಅವನು ಗುರುಗಳಿಂದ ಮತ್ತು ಸಾಧನೆಯಿಂದ ಅನೇಕ ಅದ್ಭುತ ಶಕ್ತಿಗಳನ್ನು ಸಂಪಾದಿಸಿಕೊಂಡಿದ್ದ ಎಂದು ಹೇಳುತ್ತಿದ್ದರು. ಆತ್ಮಾನಂದ ಪ್ರವಾಸಕ್ಕೆ ಹೊರಟಿದ್ದ. ಅವನು ಕಾಡಿನ ಮಧ್ಯೆ ಹೋಗುವ ಪ್ರಸಂಗ ಬಂದಿತು. ಆಗ ಊರಿನವರೆಲ್ಲ ಅಲ್ಲಿಗೆ ಹೋಗಬೇಡಿ ಎಂದು ಒತ್ತಾಯಿಸಿದರು. ಯಾಕೆಂದರೆ ಅಲ್ಲಿ ಒಂದು ದೇವಸ್ಥಾನದ ಹತ್ತಿರ ‘ಮಹಾಕಾಲ’ ಎಂಬ ದೊಡ್ಡ ಸರ್ಪವಿದೆ. ಅದರ ಶಕ್ತಿ ಅಪಾರವಾದದ್ದು. ಕಾಡಾನೆ­ಗಳು ಕೂಡ ಅದಕ್ಕೆ ಹೆದರಿ ಅಲ್ಲಿಗೆ ಹೋಗುವುದಿಲ್ಲ. ಸುತ್ತ ಮುತ್ತ ಯಾವ ಪ್ರಾಣಿಯೂ ಬರದಂತೆ ಸರ್ಪ ನೋಡಿ­ಕೊಳ್ಳುತ್ತದೆ. ನೀವು ಅಲ್ಲಿಗೆ ಹೋದರೆ ನಿಮ್ಮ ಬಲಿ ತೆಗೆದು­ಕೊಳ್ಳುವುದು ಖಂಡಿತ ಎಂದರು. ಆದರೆ ಆತ್ಮಾನಂದ ಕೇಳಿಯಾನೇ? ಹಟದಿಂದ ಆ ಮಾರ್ಗದಲ್ಲೇ ಹೊರಟ.

ದೇವಸ್ಥಾನದ ಹತ್ತಿರ ಆತ್ಮಾನಂದ ಬರುತ್ತಿದ್ದಂತೆ ‘ಮಹಾಕಾಲ’ ಸರ್ಪಕ್ಕೆ ವಾಸನೆ ಬಂದಿರಬೇಕು. ಸುರುಳಿ ಸುತ್ತಿಕೊಂಡು ಕುಳಿತಿದ್ದ ಸರ್ಪ ಎಚ್ಚರಗೊಂಡಿತು. ಆತ್ಮಾನಂದ ನೇರವಾಗಿ ಅಲ್ಲಿಗೇ ಹೋದ. ಒಂದಿಷ್ಟು ಹುಲ್ಲು ಹಾಕಿಕೊಂಡು ಅದರ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತ. ಧ್ಯಾನ ಮುದ್ರೆ­ಯಲ್ಲಿ ಮಗ್ನನಾದ. ಬುಸುಗುಡುತ್ತ ಬಂದ ಸರ್ಪ ಇವನು ಆರಾಮವಾಗಿ ಕುಳಿತದ್ದನ್ನು ನೋಡಿ ವಿಷವನ್ನು ಕಾರತೊಡಗಿತು. ಅದು ಹೊಗೆಯ ರೂಪದಲ್ಲಿ ಆತ್ಮಾನಂದನನ್ನು ಸುತ್ತಿ­ಕೊಂಡಿತು. ಆಗ ಉಸಿರು ಬಿಗಿಹಿಡಿದ ಆತ್ಮಾನಂದ ತನ್ನ ಯೋಗಶಕ್ತಿಯಿಂದ ಹಣೆಯಿಂದ ಬೆಂಕಿಯನ್ನು ಬಿಟ್ಟ. ಅದು ಹಾವಿನೆಡೆಗೆ ನುಗ್ಗಿ ಬಂತು. ಆ ಬೆಂಕಿಯ ಝಳಕ್ಕೆ ಹಾವು ಹೆದರಿತು. ಅದರ ವಿಷ ಆತ್ಮಾನಂದನನ್ನು ತಲುಪಲೇ ಇಲ್ಲ. ಆದರೆ ಅವನಿಂದ ಬರುತ್ತಿದ್ದ ಬೆಂಕಿ ಹಾವನ್ನೂ ಸುಡುತ್ತಿತ್ತು. ಆಗ ಹಾವು ಆತ್ಮಾನಂದನಿಗೆ ಶರಣಾಗಿ ಅವನ ಕಾಲಬಳಿ ಮಲಗಿಬಿಟ್ಟಿತು. ಆತ್ಮಾನಂದ ಅದನ್ನು ಕ್ಷಮಿಸಿ ಅಲ್ಲಿಂದ ಹೊರಟುಬಿಟ್ಟ.

ಕಾಡಿನಿಂದ ಹೊರಬಂದ ಆತ್ಮಾನಂದ­ನನ್ನು ಕಂಡು ಅಲ್ಲಿದ್ದ ಶಿಷ್ಯರಿಗೆ ಬಹಳ ಖುಷಿಯಾಯಿತು, ಈತನ ಸಾಧನೆಯ ಬಗ್ಗೆ ಹೆಮ್ಮೆಯಾಯಿತು. ಈ ಸಾಧನೆ­ಯನ್ನು ಸಂಭ್ರಮಿಸಲು ಮರುದಿನ ಶಿಷ್ಯರು ಭಾರಿ ಭೋಜನವನ್ನು ವ್ಯವಸ್ಥೆ ಮಾಡಿದರು. ಊಟದ ನಂತರ ಅಲ್ಲಿ ವಿಶೇಷವಾಗಿ ತಯಾರಾಗುತ್ತಿದ್ದ ಮದ್ಯವನ್ನು ಕುಡಿಸಿದರು. ಆತ್ಮಾನಂದ ಮೈಮರೆತು ಕುಡಿದ, ಉನ್ಮತ್ತನಾದ, ಎಚ್ಚರತಪ್ಪಿ ಬಿದ್ದ. ಆ ಸಂಜೆಗೇ ಗುರುಗಳು ಅಲ್ಲಿಗೆ ಬಂದರು. ಆತ್ಮಾನಂದನ ಈ ಅವತಾರವನ್ನು ನೋಡಿ ಗುರುಗಳು ಏನನ್ನುತ್ತಾರೋ ಎಂದು ಶಿಷ್ಯರು ಗಾಬರಿಯಾದರು. ಆದರೆ ಗುರುಗಳು ಮಾತನಾಡಲಿಲ್ಲ. ಗುರುಗಳನ್ನು ನೋಡಿದ ಮೇಲೆಯೂ ಆತ್ಮಾನಂದ ಅವರ ಕಡೆಗೆ ತಿರುಗಿ ನೋಡುವುದು ಹೋಗಲಿ, ಅವರ ಕಡೆಗೆ ಕಾಲು ಚಾಚಿ ಮಲಗಿಬಿಟ್ಟ. ಆಗ ಗುರುಗಳು ಶಿಷ್ಯರನ್ನು ಕೇಳಿದರು, ‘ಈಗ ಆತ್ಮಾನಂದನಿಗೆ ನನ್ನ ಬಗ್ಗೆ ಗೌರವವಿದೆಯೋ?’. ‘ಇಲ್ಲ ಗುರು­ಗಳೇ’ ಎಂದರು ಶಿಷ್ಯರು. ‘ಈಗ ಆತ್ಮಾನಂದ ‘ಮಹಾಕಾಲ’ ಸರ್ಪ ಹೋಗಲಿ, ಸಣ್ಣ ಎರೆಹುಳವನ್ನಾದರೂ ನಿಗ್ರಹಿಸಬಲ್ಲನೇ?’. ‘ಅದು ಆಗದು ಗುರುಗಳೇ’ ಎಂದರು ಶಿಷ್ಯರೆಲ್ಲ. ಆಗ ಗುರುಗಳು, ‘ಇದೇ ನೋಡಿ ಅನಾಹುತ.

ಯಾವ ಆತ್ಮಾನಂದ ನನ್ನ ಬಗ್ಗೆ ಅಪಾರ ಶ್ರದ್ಧೆ, ಗೌರವ ಇಟ್ಟುಕೊಂಡಿದ್ದನೋ ಅವನೇ ಈಗ ನನ್ನ ಕಡೆಗೆ ಕಾಲು ಚಾಚಿ ಬಿದ್ದಿದ್ದಾನೆ. ಯೋಗಸಾಧನೆಯಿಂದ ಮಹಾಸರ್ಪವನ್ನು ಮುರಿಯಬಲ್ಲ ಶಕ್ತಿ ಇದ್ದ ಆತ್ಮಾನಂದ ಈಗ ಶಕ್ತಿಹೀನನಾಗಿ ಕುಳಿತಿದ್ದಾನೆ. ಇದಕ್ಕೆ ಕಾರಣ ಈ ಮದ್ಯ. ವರ್ಷಗಟ್ಟಲೇ ಮಾಡಿದ ಸಾಧನೆ, ಶಕ್ತಿಯನ್ನು ಕ್ಷಣಕಾಲದ ಮದ್ಯದ ಆಸೆ ಮಣ್ಣುಮಾಡಿತು. ಒಂದೇ ಗಳಿಗೆ ತೃಪ್ತಿ ನೀಡುವ ಆಕರ್ಷಣೆಗಳು ಜೀವಮಾನದ ಸಾಧನೆಯನ್ನು ಹಾಳುಮಾಡುತ್ತವೆ, ಎಚ್ಚರ’ ಎಂದರು. ನಾವು ಕಂಡಿದ್ದೇವೆ ಜೀವನದಲ್ಲಿ, ನಾಲ್ಕಾರು ದಶಕಗಳ ಕಾಲ ಶ್ರಮವಹಿಸಿ ಸಾಧನೆಯ ಶಿಖರವನ್ನೇರಿ ಯಾವುದೋ ಕ್ಷುಲ್ಲಕ ಆಸೆಗಳಿಗೆ ಮನತೆತ್ತು ಪ್ರಪಾತಕ್ಕಿಳಿದ ಮಹಾನು­ಭಾವರನ್ನು. ನಾಯಕತ್ವದಿಂದ ಖಳನಾ­ಯ­ಕತ್ವಕ್ಕೆ ಬಹಳ ಅಂತರವಿಲ್ಲ. ಒಂದು ಕ್ಷುಲ್ಲಕ. ಆಕರ್ಷಣೆ ಆ ಬದಲಾವಣೆ­ಯನ್ನು ತಂದುಬಿಡುತ್ತದೆ. ಆದ್ದರಿಂದ ನಾಲಿಗೆಯ ರುಚಿಗೂ ಮತ್ತು ದೇಹದ ಆರೋಗ್ಯಕ್ಕೂ, ಕ್ಷಣಿಕಸುಖಕ್ಕೂ ಮತ್ತು ಶಾಶ್ವತ ಸಂತೃಪ್ತಿಗೂ, ವೈಯಕ್ತಿಕ ಲಾಭಕ್ಕೂ ಮತ್ತು ಸಾಮಾಜಿಕ ಸೌಖ್ಯಕ್ಕೂ ಮನಸ್ಸಿನಲ್ಲಿ ತಾಕಲಾಟ ಬಂದಾಗ ಶಾಶ್ವತವಾದದ್ದಕ್ಕೆ ಮನ ನೀಡುವುದು ಬುದ್ಧಿವಂತಿಕೆ.                                                       ಕೃಪೆ : ಮುಖ ಪುಸ್ತಕ.                                                                    ಸಂಗ್ರಹ: ವೀರೇಶ್ ಅರಸಿಕೆರೆ .ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1132

ದಿನಕ್ಕೊಂದು ಕಥೆ 1134