ದಿನಕ್ಕೊಂದು ಕಥೆ. 685

  ದಿನಕ್ಕೊಂದು ಕಥೆ                                                                   ಸಮೀರ ಒಂದನೆ ತರಗತಿ ಸೇರಿ ಆಗಲೆ ಎರಡು ತಿಂಗಳಾಯ್ತು. ಈ ವರ್ಷದಿಂದ ಅವನಿಗೆ ತುಂಬಾ ಓದುವುದಿದೆ ಅಂತ ಅಮ್ಮ ಹೇಳಿದ್ದಾಳೆ. ಇವತ್ತು ಭಾನುವಾರ ಅಲ್ವ. ಶಾಲೆಗೆ ಹೋಗುವ ಯಾವ ಗಡಿಬಿಡಿ ಇಲ್ಲ. ಅಮ್ಮ ಕೂಡ ’ಸಮೀ ಪುಟ್ಟಾ..’ ಅಂತ ರಾಗ ಎಳೆದು ಎಬ್ಬಿಸಲೂ ಇಲ್ಲ. ಆದರು ಬೇಗ ಎದ್ದುಅಭ್ಯಾಸವಾಗಿಬಿಟ್ಟಿದೆಯಲ್ಲ… ಎದ್ದು ಹೊರಗೆ ಹಾಲಿನಲ್ಲಿ ಕುಳಿತ. ಒಂಥರ ಬೇಜಾರು. ಯಾಕಂದ್ರೆ ಅಪ್ಪ ಟಿವಿಯಲ್ಲಿ ಯಾರದೊ ಪ್ರವಚನ ಕೇಳುತ್ತಿದ್ದರು!
ಹೊರಗೆ ರಸ್ತೆಕಡೆಯಿಂದ ಹೂ ಮಾರುವ ಹೆಂಗಸಿನ ಕೂಗು ಕೇಳುತ್ತಿತ್ತು. ’ಹೂವು… ಹೂವು… ಮಲ್ಲಿಗೆ.. ಸೇವಂತಿಗೆ… ಕಾಕಡ…’ ಅವಳ ಧ್ವನಿ ದೂರ ಆಯ್ತು. ಸ್ವಲ್ಪ ಹೊತ್ತಿಗೆ ಇನ್ಯಾರೊ ’ರಂಗೋಲಿ….ರಂಗೋಲಿ’ ಕೂಗು. ಅದಾದ ಸ್ವಲ್ಪ ಹೊತ್ತಿಗೆ, ’ತರಕಾರಿ… ಸೊಪ್ಪು… ಬದ್ನೆ… ಟೊಮೆಟೋ’ ಅಂತ ರಾಗ. ಅದು ತರಕಾರಿ ಮಾರುವ ಮಾಮನ ರಾಗ! ಇವರೆಲ್ಲ ತಲೆಮೇಲೆ ಬುಟ್ಟಿ ಇಟ್ಟುಕೊಂಡು ಹಾಗೆ ಕೂಗ್ತಾ ಹೋಗೋದನ್ನ ಸಮೀರ ನೋಡ್ತ ಕೂತ.
ಹಾಗೆ ಕುಳಿತು ಯೋಚಿಸ್ತ ಇದ್ದಾಗ ಅವನಿಗೆ ಒಂದು ಯೋಚನೆ ಕೂಡ ಬಂತು. ’ಏನೇನೆಲ್ಲ ಇವರು ಮಾರುತ್ತಾರಲ್ಲ. ಹಾಗೆ ಬುಟ್ಟಿ ತುಂಬಾ ಕತೆಗಳನ್ನೂ ಮಾರಬಹುದಲ್ಲ! ಅಮ್ಮನಿಗೆ ಹೇಳಿ ನಾನು ಕೂಡ ಸ್ವಲ್ಪ ಕತೆ ಕೊಂಡುಕೊ ಬಹುದು. ಹೊಸ ಹೊಸ ಕತೆಗಳನ್ನು ದಿನವೂ ಕೇಳಬಹುದು!’
ಸಮೀರನ ಯೋಚನೆ ಸ್ವಲ್ಪ ತಮಾಷೆಯಾಗಿದೆ ಅಲ್ವ? ಅವನಿಗೆ ಹಾಗೆ ಕತೆ ಕೇಳುವ ಆಸೆಯಾಗಲು ಕಾರಣವಿತ್ತು. ಎರಡು ತಿಂಗಳಿನಿಂದ ಅವನಿಗೆ ಒಂಥರ ಬೇಜಾರು. ಎಲ್ಕೆಜಿ, ಯುಕೆಜಿಯಲ್ಲಿರುವಾಗ ಅಮ್ಮ, ಅಪ್ಪ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ಕತೆ ಹೇಳುತ್ತಿದ್ದರು. ಆವಾಗಲೆಲ್ಲ ದಿನಾ ರಾತ್ರಿ ಮಲಗುವ ಮುಂಚೆ ತುಂಬಾ ಮಜವಿತ್ತು. ರಾತ್ರಿ ಒಳ್ಳೆ ನಿದ್ರೆ ಹಾಗೆ ಒಳ್ಳೆ ಕನಸುಗಳು. ಅವನು ಒಂದನೆ ತರಗತಿಗೆ ಬಂದ ಮೇಲೆ ಕತೆಗಿತೆ ಎಲ್ಲ ನಿಂತುಹೋಯ್ತು. ಬರೀ ’ಓದ್ಕೊ.. ಓದ್ಕೊ’ ಇಲ್ಲವೆ ’ಬರಿ… ಬರಿ… ಅಕ್ಷರ ದುಂಡಕ್ಕೆ ಬರಿ..’ ಇಷ್ಟೆ!
ಅಮ್ಮ ಅಡಿಗೆ ಮನೇಲಿದ್ದಳು. ಸಮೀರ ಅಲ್ಲಿಗೆ ಹೋದ. “ಅಮ್ಮ.. ಹೂ, ತರಕಾರಿ ಗಾಡಿಯಲ್ಲಿ, ತಲೆಮೇಲೆ ಇಟ್ಟು ಮಾರ್ತಾರಲ್ಲ, ಹಾಗೇನೆ ಕತೆಗಳನ್ನ ಯಾಕೆ ಯಾರೂ ಮನೆ ಹತ್ರ ಮಾರೋದಿಲ್ಲ?”
ಅಮ್ಮನಿಗೆ ಜೋರು ನಗು. “ಏಯ್.. ಪೆದ್ದು ಸಮಿ.. ಕತೆಗಳನ್ನ ಯಾರಾದ್ರು ತರಕಾರಿ ಮಾರಿದ ಹಾಗೆ ಮಾರ್ತಾರೇನೊ? ಅದೇನಿದ್ರು ಪುಸ್ತಕದ ಅಂಗಡಿಗಳಲ್ಲಿ ಅಥವಾ ದಿನಪತ್ರಿಕೆಗಳಲ್ಲಿ ಓದಬಹುದು”
ಸಮೀರನಿಗೆ ನಿರಾಸೆ. ಅಮ್ಮ ಮತ್ತೆ ಕೂಗಿದಳು. “ಸಮೀರ.. ಬಾ ಇಲ್ಲಿ.. ಹಾಲು ಕುಡಿ”
ಅವನು ಕುರ್ಚಿಮೇಲೆ ಕುಳಿತು ಕಾಲು ಆಡಿಸುತ್ತಾ ಹಾಲು ಕುಡಿಯುತ್ತಾ ಇರುವಾಗ ಮತ್ತೇನೊ ಮಾರುವ ಧ್ವನಿ ಕೇಳಿಸಿತು. ಕಿವಿಕೊಟ್ಟು ಏನದು ಕೂಗುತ್ತಿರುವುದು ಅಂತ ಕುತೂಹಲದಲ್ಲಿ ಹೊರಗೆ ನೋಡಿದ.
ರಸ್ತೆಯಲ್ಲಿ ಒಬ್ಬರು ಅಜ್ಜ ನಿಂತಿದ್ದರು. ಅವರೇ ’ಕತೆ ಬೇಕೆ ಕತೆ’ ಅಂತ ಕೂಗುತ್ತಿದ್ದದ್ದು! ಸಮೀರ ಜಿಗಿದು ಹೊರಗೋಡಿ ಬಂದ. ಆ ಅಜ್ಜ ಇವನನ್ನು ನೋಡಿ ನಗುತ್ತ ಕೇಳಿದರು.
“ತುಂಬಾ ಕತೆಗಳಿವೆ. ಹುಲಿ ಕತೆ, ಆನೆ ಕತೆ, ನರಿ, ಮೊಲ, ಜಿಂಕೆ ಕತೆ, ಸ್ನೇಹಿತರ ಕತೆ, ರಾಜರುಗಳ ಕತೆ, ಕಾಡು, ನದಿ, ಗಾಳಿ, ಸೂರ್ಯನ ಕತೆಗಳು.”
ಸಮೀರನಿಗೆ ತನ್ನ ಕಣ್ಣು ಕಿವಿ ನಂಬುವುದಕ್ಕೆ ಆಗ್ತಾನೆ ಇಲ್ಲ. ಅಲ್ಲೊಬ್ಬ ಅಜ್ಜ ಬಿಳಿ ಅಂಗಿ, ಬಿಳಿ ಪೈಜಾಮ ತೊಟ್ಟು ಸಣ್ಣ ಚೀಲದಲ್ಲಿ ಸ್ವಲ್ಪ ಆಟದ ಸಾಮಾನುಗಳನ್ನು ಇಟ್ಟುಕೊಂಡಿದ್ದಾರೆ. ಸಮೀರನನ್ನು ನೊಡ್ತಾ ನಗ್ತ “ಬೇಕಾ.. ಮಗು?” ಅಂತ ಕೇಳಿದರು.
ಸಮೀರ “ಅಮ್ಮಾ..” ಅಂತ ಜೋರಾಗಿ ಕರದ. “ಬನ್ನಿ ತಾತ.. ಬನ್ನಿ.. ನಿಮ್ಮ ಚೀಲದಲ್ಲಿ ಗೊಂಬೆಗಳಿವೆಯಲ್ಲ?” ಕೇಳಿದ.
ಅಜ್ಜ ನಿಧಾನಕ್ಕೆ ಬಂದು ಅವರು ತಂದಿದ್ದ ಗೊಂಬೆಗಳ ಚೀಲ ಕೆಳೆಗೆ ಇಡುವುದಕ್ಕೂ, ಅಮ್ಮ ಒಳಗಿನಿಂದ “ಏನದು?” ಅಂತ ಕೇಳುತ್ತ ಬರುವುದಕ್ಕು ಸರಿಯಾಯ್ತು.
ಸಮೀರ ಅಜ್ಜನ ಚೀಲ ಇಣುಕಿ ನೋಡಿದ. ಅಲ್ಲಿ ತುಂಬಾ ಗೊಂಬೆಗಳಿದ್ದುವು. ಬಣ್ಣ ಬಣ್ಣದವು. ಎಲ್ಲವು ಚಿಕ್ಕ ಚಿಕ್ಕ ಗೊಂಬೆಗಳೆ. ಎಲ್ಲವು ಮುದ್ದಾಗಿದ್ದವು.
“ತಾತ.. ಇವು ಗೊಂಬೆಗಳು. ಕತೆಗಳೆಲ್ಲಿ?” ಕೇಳಿದ.
ಅಜ್ಜ ನಕ್ಕರು. “ಮಗು… ಇವೆಲ್ಲ ಸಾಮಾನ್ಯ ಗೊಂಬೆಗಳಲ್ಲ. ಒಂದೊಂದು ಗೊಂಬೆಗೆ ಒಂದೊಂದು ಕತೆ ಇದೆ. ನಿನಗೆ ಇಷ್ಟ ಇದ್ದರೆ, ನಿಮ್ಮ ಅಮ್ಮ ಅಪ್ಪ ಒಪ್ಪಿದರೆ, ಮನೆಯೊಳಗೆ ಬಂದು ಅದೇನೆಂದು ಹೇಳುತ್ತೇನೆ” ಅಂದರು.
ಸಮೀರ ಅಮ್ಮನ ಮುಖ ನೋಡಿದ. ಅಮ್ಮನ ಮುಖದಲ್ಲೂ ಅಶ್ಚರ್ಯವಿತ್ತು. ಅಮ್ಮ ತಡಮಾಡಲಿಲ್ಲ. “ಬನ್ನಿ ಬನ್ನಿ.. ಒಳಗೆ ಬನ್ನಿ” ಅಂದಳು.
ಅಜ್ಜ ನಿಧಾನಕ್ಕೆ ಚೀಲ ಸಮೇತ ಮನೆಯೊಳಗೆ ಬಂದು ಕುರ್ಚಿಯ ಮೇಲೆ ಕೂತರು. ಅಪ್ಪ ಸಮೀರ ಮತ್ತೆ ಅಮ್ಮನ ಮುಖ ನೋಡಿದರು. “ಅಪ್ಪ.. ಇವರು ಕತೆ ಮಾರುವ ತಾತ” ಅಂತ ಪರಿಚಯಿಸಿದ.
ಅಜ್ಜ ಅಪ್ಪನಿಗೆ ನಮಸ್ಕಾರ ಮಾಡುತ್ತ ಹೇಳಿದರು. “ನಿಮ್ಮ ಮಗನಿಗೆ ಕತೆ ಕೇಳುವ ಆಸೆ ಇದೆ. ಎಲ್ಲ ಮಕ್ಕಳಿಗೂ ಕತೆ ಕೇಳುವ ಆಸೆ. ಅದಕ್ಕೆ ನಾನು ಈ ಕತೆ ಹೇಳುವ ವ್ಯಾಪಾರಿ ಆಗಿದ್ದೇನೆ. ”
ಅಪ್ಪ ಆಶ್ಚರ್ಯ ಪಟ್ಟರು. “ನೀವು ಹೇಳ್ತ ಇರೋದು ಹೊಸಥರ ಇದೆ. ಇದುವರೆಗೆ ಯಾರೂ ಕತೆ ಹೇಳಿ ವ್ಯಾಪಾರ ಮಾಡಿದ್ದು ನಾನು ನೋಡಿಲ್ಲ.. ಕೇಳಿಲ್ಲ!”
ಅಜ್ಜ ನಗುತ್ತ “ವ್ಯಾಪಾರ ಅಂದರೆ.. ಹಣ ತೆಗುದುಕೊಂಡು ಕತೆ ಹೇಳುವುದಲ್ಲ. ನಾನು ಮೊದಲು ಶಾಲೆಯಲ್ಲಿ ಅಧ್ಯಾಪಕನಾಗಿದ್ದೆ. ಈಗ ಕೆಲವು ವರ್ಷಗಳಿಂದ ಪ್ರತಿ ಭಾನುವಾರ ಮಕ್ಕಳಿರುವ ಕೆಲವು ಮನೆಗಳ ಬಳಿ ಹೋಗಿ, ಅವರಿಗೆ ಇಷ್ಟವಾದರೆ ಒಂದೊ ಎರಡೊ ಒಳ್ಳೆಯ ಕತೆ ಹೇಳಿ, ಮಕ್ಕಳು ಖುಷಿ ಪಡುವುದನ್ನು ನೋಡಿ ಬರುತ್ತೇನೆ. ಮಕ್ಕಳು ಸಂತೋಷ ಪಟ್ಟರೆ ಅದೆ ನನ್ನ ವ್ಯಾಪಾರದ ಲಾಭ. ಕತೆಗಳಿಗೆ ಹೊಂದುವಂತ ಗೊಂಬೆಗಳಿವು” ಅಂದರು.
ಸಮೀರನ ಅಪ್ಪ ಅಮ್ಮ ಇಬ್ಬರಿಗೂ ಬಹಳ ಖುಷಿಯಾಯ್ತು. “ತುಂಬಾ ಸಂತೋಷ. ನಮ್ಮ ಸಮೀರನಿಗೆ ಕತೆ ಕೇಳುವ ಆಸೆ ತುಂಬಾ ಇದೆ. ನೀವು ಖಂಡಿತ ಅವನಿಗೆ ಕತೆಗಳನ್ನು ಹೇಳಿ. ನಮ್ಮ ಪಕ್ಕದ ಮನೆ ಮತ್ತೆ ಎದುರು ಮನೆಗಳಲ್ಲಿ ಆರೆಂಟು ಪುಟ್ಟ ಮಕ್ಕಳಿದ್ದಾರೆ. ಅವರು ನಮ್ಮ ಮಗನ ಸ್ನೇಹಿತರೆ. ಅವರನ್ನೂ ಕರೆಯುತ್ತೇನೆ” ಅಂದರು. ಅಜ್ಜ ನಕ್ಕು “ಆಗಲಿ” ಅಂದರು.
ಸಮೀರನ ಎಲ್ಲ ಗೆಳೆಯರೂ ಬಂದರು. ಅಜ್ಜ ಹೇಳುತ್ತಾ ಹೋದರು. “ಮಕ್ಕಳೆ, ಇದು ನೋಡಿ ಅಜ್ಜಿ ಗೊಂಬೆ. ನೀವು ಈ ಗೊಂಬೆಯನ್ನು ಆಯ್ಕೆ ಮಾಡಿದರೆ, ನಾನು ಅಜ್ಜಿ ಹೇಳುವ ಕತೆಗಳನ್ನೇ ಹೇಳುತ್ತೇನೆ. ಅಂದರೆ, ರಾಜಕುಮಾರ, ರಾಜಕುಮಾರಿ, ಮಂತ್ರಿಯ ಬುದ್ಧಿವಂತೆಕೆ, ಹಾರಾಡುವ ಕುದುರೆ ಹೀಗೆ, ತುಂಬಾ ಕತೆಗಳು. ಈ ಗೊಂಬೆ ವಿಜ್ಞಾನಿಯದು. ವಿಜ್ಞಾನಿಯ ಕತೆಗಳಲ್ಲಿ ಕಾರು, ಬಸ್ಸು, ವಿಮಾನ, ರಾಕೆಟ್ ಇಂಥವಕ್ಕೆ ಸಂಬಧಿಸಿದ ಕತೆಗಳು. ಈ ಗೊಂಬೆಗಳು ಸಾಹಸಕ್ಕೆ ಸಂಬಂಧ ಪಟ್ಟ ಕತೆಗೆ ಇಟ್ಟುಕೊಂಡಿದ್ದೇನೆ”
ಮಕ್ಕಳೆಲ್ಲ ಖುಷಿಯಲ್ಲಿ ಒಬ್ಬರ ಮುಖ ಒಬ್ಬರು ನೋಡಿ, ’ಈಗ ಯಾವ ಕತೆ ಕೇಳೋಣ?’ ಅಂತ ಗುಸುಗುಸು ಮಾತಾಡಿಕೊಂಡರು. ಅಜ್ಜ ಕತೆ ಹೇಳುವುದಕ್ಕೆ ಗಂಟಲು ಸರಿ ಮಾಡಿಕೊಂಡರು.
ಅಜ್ಜ ಕತೆ ಹೇಳುತ್ತಿದ್ದಾರೆ. ತುಂಬಾ ಚೆನ್ನಾಗಿ, ರಾಗವಾಗಿ, ಅಭಿನಯ ಮಾಡುತ್ತಾ. ರಾಜಕುಮಾರನ ಕತೆ ಹೇಳತೊಡಗಿದ್ದಾರೆ. ಚಿಕ್ಕ ಚಿಕ್ಕ ಹಾಡು ಕೂಡ ಹಾಡುತ್ತಿದ್ದಾರೆ. ಮಕ್ಕಳು ಆಗಾಗ ನಗುತ್ತಿದ್ದಾರೆ. ಚಪ್ಪಾಳೆಯನ್ನೂ ತಟ್ಟುತ್ತಿದ್ದಾರೆ. ಎರಡನೆ ಕತೆ ತೆನಾಲಿ ರಾಮನದ್ದು. ಎಲ್ಲ ಮಕ್ಕಳೂ ಜೋರಾಗಿ ನಗುತ್ತಿದ್ದಾರೆ. ಎಲ್ಲರಿಗೂ ಖುಷಿಯೋ ಖುಷಿ.
ಅಜ್ಜ ಈಗ ಹೊರಟರು. ಮಕ್ಕಳು “ತಾತ ಮುಂದಿನ ವಾರ ಬನ್ನಿ” ಅಂದರು. ಅಜ್ಜ ಅವರಿಗೆ ಟಾಟಾ ಮಾಡಿ ಹೇಳುತ್ತಿದ್ದಾರೆ. “ಮಕ್ಕಳೆ.. ಮುಂದಿನ ವಾರ ಬರಲು ಆಗುವುದಿಲ್ಲ. ನಾನು ಬೇರೆ ಊರಿಗೆ ಕೂಡ ಹೋಗಬೇಕು. ಇನ್ನೊಮ್ಮೆ ಬರುತ್ತೇನೆ. ಹೊಸ ಕತೆ ಹೇಳುತ್ತೇನೆ, ಸರೀನಾ..”
ಸಮೀರನ ಅಪ್ಪ ಅಮ್ಮ ಮಾತಾಡಿಕೊಳ್ತಾ ಇದ್ದಾರೆ. “ಎಲ್ಲರ ಮನೆಯಲ್ಲೂ ಒಬ್ಬ ಅಜ್ಜ ಇದ್ದಿದ್ದರೆ ಎಷ್ಟು ಚೆನ್ನ” ಅಂತ.     ಕೃಪೆ :ವಾಟ್ಸ್ ಆಪ್ ಗ್ರೂಪ್.

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1132

ದಿನಕ್ಕೊಂದು ಕಥೆ 1134