ದಿನಕ್ಕೊಂದು ಕಥೆ 329
*🌻ದಿನಕ್ಕೊಂದು ಕಥೆ🌻 ಇದು ‘ಗಾಡ್ ಪ್ರಾಮಿಸ್’ ಅಲ್ಲ! ಇದು ‘ಗಾಡ್ಸ್ ಪ್ರಾಮಿಸ್’!*
ಏನಿದು? ‘ಗಾಡ್ ಪ್ರಾಮಿಸ್’ ಎಂದರೇನು? ‘ಗಾಡ್ಸ್ ಪ್ರಾಮಿಸ್’ ಎಂದರೇನು? ಇವೆರಡಕ್ಕೂ ಇರುವ ವ್ಯತ್ಯಾಸವೇನು? ನಮಗೆಲ್ಲ ಗೊತ್ತಿರುವ ಹಾಗೆ ನಾವು ಏನನ್ನಾದರೂ ಹೇಳಿದಾಗ ಕೇಳಿಸಿಕೊಂಡವರು ‘ಇದು ನಿಜವೇ?’ ಎಂದು ಕೇಳುತ್ತಾರೆ. ಆಗ ಇಂಗ್ಲಿಷ್ ಕಾನ್ವೆಂಟಿನಲ್ಲಿ ಓದಿರುವ ನಾವೆಲ್ಲ ‘ಗಾಡ್ ಪ್ರಾಮಿಸ್ ಆಗಿಯೂ ಇದು ನಿಜ’ ಎನ್ನುತ್ತೇವೆ. ಹಾಗಾದರೆ ಗಾಡ್ಸ್ ಪ್ರಾಮಿಸ್ ಎಂದರೇನು? ಅದು ಭಗವಂತನೇ ನಮಗೆ ಕೊಟ್ಟಿರುವ ಪ್ರಾಮಿಸ್ ಅಂದರೆ ವಾಗ್ದಾನ! ದೃಢವಾಗಿ ನಂಬಿದವರಿಗೆ ತಾನಿತ್ತ ವಾಗ್ದಾನವನ್ನು ಭಗವಂತನೇ ಈಡೇರಿಸುತ್ತಾನೆ! ಇದರ ಬಗ್ಗೆಯೇ ಇರುವ ನಿಜಜೀವನದ ಘಟನೆಯೊಂದು ಇಲ್ಲಿದೆ.
ಪುಣೆಯ ವಾಸ್ವಾನಿ ಮಿಷನ್ನ ಸಂಸ್ಥಾಪಕರಾದ ಸಾಧು ವಾಸ್ವಾನಿಯವರು 1910ರಲ್ಲಿ ಬರ್ಲಿನ್ನಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮವನ್ನು ಪ್ರತಿನಿಧಿಸಲು ಆಹ್ವಾನಿಸಲ್ಪಟ್ಟಿದ್ದರು. ಸಮ್ಮೇಳನದಲ್ಲಿನ ಅವರ ಉಪನ್ಯಾಸ ಎಲ್ಲರ ಮೆಚ್ಚುಗೆ ಗಳಿಸಿತು. ಅದಾದ ನಂತರ ಸಾಧುಗಳು ಲಂಡನ್ಗೂ ಭೇಟಿ ನೀಡಿದರು. ಅಲ್ಲಿಯೂ ಹಲವಾರು ಉಪನ್ಯಾಸಗಳನ್ನು ನೀಡಿದರು. ಅವರು ಭಾರತಕ್ಕೆ ಹಿಂತಿರುಗುವ ಮುನ್ನಾದಿನ ಅವರು ನೀಡಿದ ಉಪನ್ಯಾಸ ಕೇಳಲು ಬಂದಿದ್ದವರಲ್ಲಿ ಭಾರತದ ಕೂಚ್ ಬಿಹಾರ್ ರಾಜ್ಯದ ಮಹಾರಾಣಿಯೂ ಇದ್ದರು. (ಆಗ ಮಹಾರಾಣಿ ಇಂಗ್ಲೆಂಡಿನಲ್ಲಿ ಪ್ರವಾಸ ಮಾಡುತ್ತಿದ್ದರು.)
ಸಾಧುಗಳ ಉಪನ್ಯಾಸದಿಂದ ಬಹಳ ಪ್ರಭಾವಿತರಾದ ಮಹಾರಾಣಿ ಸಾಧುಗಳನ್ನು ತಮ್ಮ ನಿವಾಸಕ್ಕೆ ಭೋಜನಕ್ಕೆ ಬರುವಂತೆ ಆಹ್ವಾನಿಸಿದರು. ಆಗ ಸಾಧು ವಾಸ್ವಾನಿಯವರು ‘ನಾನು ಮರಳಿ ಭಾರತಕ್ಕೆ ಹೋಗಬೇಕೆಂದಿರುವ ಹಡಗು ನಾಳೆಯೇ ಹೊರಡುವುದರಲ್ಲಿದೆ. ನಾಳೆ ನಿಮ್ಮ ನಿವಾಸಕ್ಕೆ ಬರಲು ಸಾಧ್ಯವಾಗುವುದಿಲ್ಲ’ ಎಂದರು. ಮಹಾರಾಣಿ ಕೊಂಚ ನಿರಾಶರಾದರು. ಲೋಕಾಭಿರಾಮವಾಗಿ ಮಾತನಾಡುತ್ತ ‘ತಮ್ಮ ಮರುಪ್ರಯಾಣದ ಹಡಗಿನ ಟಿಕೆಟನ್ನು ಖರೀದಿಸಿ ಬಿಟ್ಟಿದ್ದೀರಾ?’ ಎಂದು ಕೇಳಿದರು. ಸಾಧುಗಳು ಇಲ್ಲವೆಂದು ತಲೆಯಲ್ಲಾಡಿಸಿದಾಗ ಮಹಾರಾಣಿ ‘ನೀವು ಟಿಕೆಟನ್ನು ಇನ್ನೂ ಏಕೆ ಖರೀದಿಸಿಲ್ಲ?’ ಎಂದು ಕೇಳಿದರು.
ಸಾಧುಗಳು ಮಗುವಿನಂತೆ ಮುಗ್ಧವಾಗಿ ನಗುತ್ತ ‘ಟಿಕೆಟನ್ನು ಖರೀದಿಸಿಲ್ಲ! ಏಕೆಂದರೆ ನನ್ನ ಬಳಿ ಹಣವಿರಲಿಲ್ಲ’ ಎಂದರು. ಮಹಾರಾಣಿ ಆಶ್ಚರ್ಯದಿಂದ ‘ಹಣವೇ ಇಲ್ಲವೆನ್ನುವ ನೀವು ಟಿಕೆಟನ್ನು ಖರೀದಿಸುವುದು, ಮರುಪ್ರಯಾಣ ಮಾಡುವುದು ಹೇಗೆ ಸಾಧ್ಯ?’ ಎಂದು ಕೇಳಿದಾಗ, ಸಾಧುಗಳು ಮತ್ತೊಮ್ಮೆ ನಕ್ಕು ‘ನಾನು ವಿದೇಶಕ್ಕೆ ಬರಬೇಕೆಂದೇನೂ ಅಂದುಕೊಂಡಿರಲಿಲ್ಲ. ವಿದೇಶಕ್ಕೆ ಬರುವ ವ್ಯವಸ್ಥೆಯೂ ಭಗವಂತನದ್ದೇ, ಮರಳಿ ಹೋಗುವ ವ್ಯವಸ್ಥೆಯ ಜವಾಬ್ದಾರಿಯೂ ಅವನದ್ದೇ ಎನ್ನುವ ನಂಬಿಕೆ ನನ್ನದು!’ ಎಂದರು. ಆಗ ಮಹಾರಾಣಿಯೇ ‘ನಿಮಗೆ ಅಭ್ಯಂತರವಿಲ್ಲದಿದ್ದರೆ ನಿಮ್ಮ ಟಿಕೆಟನ್ನು ನಾನು ಖರೀದಿಸಬಹುದೇ?’ ಎಂದು ಕೇಳಿದರು.
ಮಹಾರಾಣಿ ತಕ್ಷಣ ಟಿಕೆಟನ್ನೂ ಅಲ್ಲಿಗೇ ತರಿಸಿ ಸಾಧುಗಳ ಕೈಯಲ್ಲಿ ಕೊಟ್ಟರು. ‘ತಮ್ಮ ಆತ್ಮವಿಶ್ವಾಸವನ್ನೂ, ಧೈರ್ಯವನ್ನೂ ಅರ್ಥ ಮಾಡಿಕೊಳ್ಳುವುದು ನನಗೆ ಕಷ್ಟವಾಗುತ್ತಿದೆ’ ಎಂದಾಗ, ಸಾಧುಗಳು ನಗುತ್ತಲೇ ‘ಭಗವದ್ಗೀತೆಯಲ್ಲಿ ಅನ್ಯ ಚಿಂತೆ ಮಾಡದೆ ಯಾರು ನನ್ನಲ್ಲಿ ಅಖಂಡವಾದ ನಂಬಿಕೆಯಿಟ್ಟು ನನ್ನ ಉಪಾಸನೆ ಮಾಡುತ್ತಾರೋ ಅಂಥವರ ಸಕಲ ಯೋಗಕ್ಷೇಮಗಳನ್ನು ನಾನು ವಹಿಸಿಕೊಳ್ಳುತ್ತೇನೆ ಎಂಬ ವಾಗ್ದಾನವನ್ನು ಭಗವಂತನೇ ಮಾಡಿದ್ದಾನೆ. (ಯೋಗಕ್ಷೇಮಂ ವಹಾಮ್ಯಹಂ) ನನಗೆ ಅದರಲ್ಲಿ ಅಖಂಡವಾದ ನಂಬಿಕೆಯಿದೆ. ಇಂದಿನವರೆಗೆ ನೀವು ಯಾರೆಂಬುದೂ ನನಗೆ ಗೊತ್ತಿರಲಿಲ್ಲ. ನೀವು ಉಪನ್ಯಾಸಕ್ಕೆ ಬರುತ್ತೀರೆಂಬುದೂ ನನಗೆ ಗೊತ್ತಿರಲಿಲ್ಲ.
ಆದರೆ ನೀವು ಬಂದಿರಿ, ಪರಿಚಯವಾದಿರಿ. ನನ್ನ ಟಿಕೆಟನ್ನೂ ತರಿಸಿಕೊಟ್ಟಿರಿ. ನಿಮ್ಮನ್ನು ಇಲ್ಲಿಗೆ ಕಳುಹಿಸಿ ಸಹಾಯ ಮಾಡಿಸಿದವನೂ ಆ ಭಗವಂತನೇ ಅಲ್ಲವೇ?’ ಎಂದಾಗ, ಮಹಾರಾಣಿಯವರೂ ಅಹುದಹುದು ಎಂದೊಪ್ಪಿಕೊಂಡರು. ಭಗವಂತ ತನ್ನ ‘ಗಾಡ್ಸ್ ಪ್ರಾಮಿಸ್’ ಅನ್ನು ಈಡೇರಿಸುವ ಬಗೆಯನ್ನು ವಿವರಿಸುವ ಮೇಲ್ಕಂಡ ಘಟನೆ ಅರ್ಥಪೂರ್ಣವಾಗಿದೆಯಲ್ಲವೇ? ದೃಢವಾಗಿ ನಂಬಿದವರ ಕೈಯನ್ನು ಭಗವಂತನು ಬಿಡುವುದಿಲ್ಲ ಅಲ್ಲವೇ? ಪೂಜ್ಯ ಸಾಧು ವಾಸ್ವಾನಿಯವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಅದಿರಲಿ, ಇಂಥ ಅನುಭವಗಳು ನಮ್ಮ ಬದುಕಿನಲ್ಲೂ ಆಗಿರಬಹುದಲ್ಲವೇ? ಕೃಪೆ:ವಿಶ್ವ ವಾಣಿ. ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.
Comments
Post a Comment