ದಿನಕ್ಕೊಂದು ಕಥೆ 331

  ದಿನಕ್ಕೊಂದು ಕಥೆ                                                                 ಶಾಲೆಯ ಒಬ್ಬ ಬಡ ಮಾಸ್ತರರು ಏನೇನು ಮಾಡಬಹುದು?

ರಾಜಾರಾಮ್ ಭಾಪ್ಕರ್ ಎಂಬ ಎಂಬತ್ನಾಲ್ಕು ವರ್ಷ ವಯಸ್ಸಿನ ಹಿರಿಯರದ್ದು! ಅವರ ಹೆಸರಿನಲ್ಲಿ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ‘ಭಾಪ್ಕರ್ ಗುರೂಜಿ ರಸ್ತೆ’ ಎಂಬ ನಲವತ್ತು ಕಿಲೋಮೀಟರ್ ರಸ್ತೆಯಿದೆ! ಅವರನ್ನು ಅಲ್ಲಿನ ಜನರೆಲ್ಲ ಭಾಪ್ಕರ್ ಗುರೂಜಿ ಎಂದೇ ಗೌರವದಿಂದ ಕರೆಯುತ್ತಾರೆ. ಅಂದಾಕ್ಷಣ ಅವರು ದೊಡ್ಡ ಮಾಜಿ ರಾಜ- ಮಹಾರಾಜರೆಂದೋ, ರಾಜಕಾರಣಿಯೆಂದೋ ಅಥವಾ ಶ್ರೀಮಂತ ಜಮೀನುದಾರರೆಂದೋ ಭಾವಿಸಬೇಕಿಲ್ಲ! ಅವರೊಬ್ಬ ಹಳ್ಳಿ ಶಾಲೆಯ ನಿವೃತ್ತ ಮಾಸ್ತರರು! ರೋಮಾಂಚನವನ್ನುಂಟು ಮಾಡುವ ಅವರ ನಿಜಜೀವನದ ಕತೆ ಇಲ್ಲಿದೆ.

ಆಗ ರಾಜಾರಾಮ್ ಭಾಪ್ಕರ್ ಅವರಿಗೆ ಇಪ್ಪತ್ನಾಲ್ಕು ವರ್ಷ ಪ್ರಾಯ. ಅವರು ಮೂಲತಃ ಅಹ್ಮದ್ ನಗರ ಜಿಲ್ಲೆಯ ಗುಂಡೇಗಾಂವ್ ಹಳ್ಳಿಯವರು. ಮರಾಠಿಯಲ್ಲಿ ಏಳನೆಯ ತರಗತಿಯವರೆಗೆ ಮಾತ್ರ ಓದಿದ್ದ ಅವರಿಗೆ, ಕೋಲೆಗಾಂವ್ ಎಂಬ ಹಳ್ಳಿಯಲ್ಲಿ ಜಿಲ್ಲಾ ಪರಿಷತ್ತಿನ ಹಳ್ಳಿ ಶಾಲೆಯಲ್ಲಿ ಮಾಸ್ತರಗಿರಿಯ ನೌಕರಿ ಸಿಕ್ಕಿತು. ಅವರು ಖುಷಿಯಿಂದ ಕೆಲಸವನ್ನಾರಂಭಿಸಿದರು. ಶ್ರದ್ಧೆಯಿಂದ ಪಾಠ ಹೇಳುತ್ತಿದ್ದರು. ಆದರೆ ಅವರು ಕೋಲೆಗಾಂವಿನಿಂದ ತಮ್ಮೂರಾದ ಗುಂಡೇಗಾಂವಿಗೆ ಹೋಗಲು ಇಪ್ಪತ್ತೊಂಬತ್ತು ಕಿಲೋಮೀಟರ್ ದೂರ ನಡೆದುಹೋಗಬೇಕಿತ್ತು. ಆದರೆ ನಡೆದುಕೊಂಡು ಹೋಗುವುದು ಅಷ್ಟು ಸುಲಭವಿರಲಿಲ್ಲ. ಏಕೆಂದರೆ ಎರಡೂ ಹಳ್ಳಿಗಳ ನಡುವೆ ಕಾಲುದಾರಿಯೂ ಇರಲಿಲ್ಲ. ಅಷ್ಟೇ ಅಲ್ಲ, ನಡುವೆ ಎರಡು ಸಾವಿರ ಅಡಿ ಎತ್ತರದ ಸಂತೋಷ ಎಂಬ ಬೆಟ್ಟವಿತ್ತು ಮತ್ತೂ ಆರು ಸಣ್ಣ-ಪುಟ್ಟ ಬೆಟ್ಟಗಳಿದ್ದವು. ಅವನ್ನೆಲ್ಲಾ ದಾಟಿ ಹೋಗಬೇಕಿತ್ತು.

ಅಷ್ಟಲ್ಲದೇ, ಕಾಲುದಾರಿಗಳೂ ಇಲ್ಲದ ನಾಲ್ಕೈದು ಹಳ್ಳಿಗಳ ಮೂಲಕ ಹಾದು ಹೋಗಬೇಕಿತ್ತು. ಸೈಕಲ್ಲು ಹೋಗುವ ದಾರಿಯೂ ಇಲ್ಲದ ಆ ಹಳ್ಳಿಗಳಿಗೆ ಬಸ್ ಸಂಚಾರ ಕನಸಿನ ಮಾತಾಗಿತ್ತು. ಭಾಪ್ಕರ್ ಮಾಸ್ತರರು ಸರಕಾರಕ್ಕೆ ಅನೇಕ ಕಾಗದಗಳನ್ನು ಬರೆದು ಕಾಲುದಾರಿಯನ್ನಾದರೂ ಮಾಡಿಸಿಕೊಡಿ ಎಂದು ಬೇಡಿಕೊಂಡರು. ಆದರೆ ಯಾವ ಕಾಗದಕ್ಕೂ ಸರಕಾರದಿಂದ ಉತ್ತರವೂ ಬರಲಿಲ್ಲ, ಕಾಲುದಾರಿಯೂ ಆಗಲಿಲ್ಲ. ಭಾಪ್ಕರ್ ಮಾಸ್ತರರು ನಿರಾಶರಾಗಲಿಲ್ಲ. ಸುಮ್ಮನೆ ಕೂರಲಿಲ್ಲ. ಏಕಾಂಗಿಯಾಗಿ ಕಾಲುದಾರಿಯ ನಿರ್ಮಾಣದ ಕೆಲಸವನ್ನು ಆರಂಭಿಸಿಯೇ ಬಿಟ್ಟರು.  ಸಂತೋಷ ಬೆಟ್ಟವೂ ಸೇರಿ ಏಳು ಬೆಟ್ಟಗಳನ್ನು ಕಡಿದು ರಸ್ತೆ ಮಾಡಬೇಕಿತ್ತು. ಮಾಸ್ತರರು ತಮ್ಮ ವೇತನದ ಅರ್ಧದಷ್ಟು ಹಣವನ್ನು ಕಾಮಗಾರಿಗಾಗಿ ಖರ್ಚು ಮಾಡುತ್ತಿದ್ದರು ಮತ್ತು ಸ್ವತಃ ಪಿಕಾಸಿ ಗುದ್ದಲಿಗಳನ್ನು ಹಿಡಿದು ಕೆಲಸ ಮಾಡುತ್ತಿದ್ದರು. ಕೆಲಸ ಮಾಡಿಸುತ್ತಿದ್ದರು. ನಿಧಾನವಾಗಿ ದಾರಿಯ ಕಾಮಗಾರಿ ನಡೆಯುತ್ತಿತ್ತು. 1991ರಲ್ಲಿ ಭಾಪ್ಕರ್ ಮಾಸ್ತರರು ನೌಕರಿಯಿಂದ ನಿವೃತ್ತರಾಗಿಬಿಟ್ಟರು!*
*ಮಲ್ಲಿಕಾರ್ಜುನ ಹುಲಸೂರ*

*ಭಾಪ್ಕರ್ ಮಾಸ್ತರರ ರೋಮಾಂಚಕ ಕತೆಯು ಅವರು ನಿವೃತ್ತರಾದ ತಕ್ಷಣ ಮುಗಿಯಲೂ ಇಲ್ಲ. ಅವರು ದಾರಿ ನಿರ್ಮಾಣದ ಕಾರ್ಯವನ್ನೂ ಕೈಬಿಡಲಿಲ್ಲ. ನಿವೃತ್ತಿಯಾದಾಗ ದೊರೆತ ಪೆನ್ಷನ್ ಹಣವನ್ನೂ ಕಾಮಗಾರಿಗಾಗಿ ವಿನಿಯೋಗಿಸಿದರು. ಕೊನೆಗೆ 1997ರಲ್ಲಿ ಸುಮಾರು ನಲವತ್ತು ಕಿಲೋಮೀಟರ್‌ಗಳ ರಸ್ತೆ ನಿರ್ಮಾಣ ಕಾರ್ಯ ಮುಗಿದಿತ್ತು. ಅದು ಅವರ ಹುಟ್ಟೂರಿನಿಂದ ಅಕ್ಕಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿತ್ತು. ಆ ರಸ್ತೆಯು ಸಂತೋಷ ಬೆಟ್ಟವನ್ನೂ ಅದರ ಹಾದಿಯಲ್ಲಿದ್ದ ಆರು ಬೆಟ್ಟಗಳನ್ನೂ ದಾಟಿ ಹೋಗುತ್ತಿತ್ತು. ಈಗ ಕೋಲೆಗಾಂವಿನಿಂದ ಗುಂಡೇಗಾಂವಿಗೆ ಹೋಗಲು ಕೇವಲ ಹತ್ತು ಕಿಲೋಮೀಟರ್‌ಗಳ ದೂರ ಕ್ರಮಿಸಿದರೆ ಸಾಕಿತ್ತು (ಮೊದಲು ಇಪ್ಪತ್ತೊಂಬತ್ತು ಕಿಲೋಮೀಟರು ದೂರವಿತ್ತು). ಇಷ್ಟೂ ಕೆಲಸಕ್ಕೆ ಸರಕಾರದಿಂದ ಒಂದು ರುಪಾಯಿಯ ಸಹಾಯವೂ ಸಿಕ್ಕಿರಲಿಲ್ಲ!*

ಈ ಇಪ್ಪತ್ತು ವರ್ಷಗಳಲ್ಲಿ ಬಡ ಶಾಲಾಮಾಸ್ತರರು ನಿರ್ಮಿಸಿಕೊಟ್ಟ ರಸ್ತೆಯು ಒಳ್ಳೆಯ ರಸ್ತೆಯಾಗಿದೆ. ಆ ಹಳ್ಳಿಗರಿಗೆ ಹೋಗಿಬರಲು ಸಹಕಾರಿಯಾಗಿದೆ. ಆ ರಸ್ತೆಯನ್ನು ‘ಭಾಪ್ಕರ್ ಗುರೂಜಿ ರಸ್ತೆ’ ಎಂದೇ ಕರೆಯಲಾಗುತ್ತಿದೆ. ಒಬ್ಬ ಬಡ ಶಾಲಾ ಮಾಸ್ತರರು ಮನಸ್ಸು ಮಾಡಿದರೆ ಏನು ಮಾಡಬಹುದೆಂಬುದಕ್ಕೆ ಸಾಕ್ಷಿಯಾಗಿದೆ! ನಾವೂ ಭಾಪ್ಕರ್ ಮಾಸ್ತರರಿಗೆ ಪ್ರಣಾಮಗಳನ್ನು ಸಲ್ಲಿಸಲೇ ಬೇಕಾಗಿದೆ!                          ಕೃಪೆ:ಷಡಕ್ಷರಿ.  ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1135

ದಿನಕ್ಕೊಂದು ಕಥೆ 1132