ದಿನಕ್ಕೊಂದು ಕಥೆ 332
*🌻ದಿನಕ್ಕೊಂದು ಕಥೆ🌻 ಸತ್ತ ಹಾವಿನ ಬೆಲೆ ಒಂದು ರತ್ನ ದ ಹಾರ! ಬದುಕಿದ್ದ ಹಾವಿನ ಬೆಲೆ.. ?*
ಸತ್ತ ಹಾವಿಗೆ ಬೆಲೆ ಕಟ್ಟಲು ಸಾಧ್ಯವೇ ಎನಿಸುತ್ತದಲ್ಲವೇ? ಹಾಗೆಯೇ ಬದುಕಿದ್ದ ಹಾವಿನಿಂದ ದೂರ ಉಳಿಯಬೇಕೇ ಹೊರತು, ಅದಕ್ಕೆ ಬೆಲೆ ಕಟ್ಟಲು ಹೋಗಬಾರದು ಎನಿಸುತ್ತದೆಯೇ? ಆದರೆ ಆ ಹಾವುಗಳ ಬಗ್ಗೆ ಹೇಳಿದ ಇಬ್ಬರು ಹಿರಿಯರು ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ಮಹಾನುಭಾವರು! ಅವರು ಸರ್ದಾರ ವಲ್ಲಭಭಾಯ್ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರು! ಭಾರತದ ಸ್ವಾತಂತ್ರ್ಯ ಹೋರಾಟದ ನೇತಾರರಾಗಿದ್ದ ಅವರಿಬ್ಬರೂ ಒಮ್ಮೆ ಎರವಾಡ ಸೆರೆಮನೆಯಲ್ಲಿ ಬಂಧಿಗಳಾಗಿದ್ದರು. ಇಬ್ಬರೂ ವಿನೋದ ಪ್ರವೃತ್ತಿಯವರಾಗಿದ್ದರು. ವಿನೋದದ ಕತೆಗಳನ್ನು ಹೇಳುವುದರಲ್ಲಿ ಅವರಿಬ್ಬರೂ ಒಬ್ಬರಿಗಿಂತ ಮತ್ತೊಬ್ಬರು ಮುಂದು!
ಅದರಿಂದಾಗಿ ಸಹಹೋರಾಟಗಾರರಿಗೆ ಉಚಿತ ಮನರಂಜನೆ ಸಿಗುತ್ತಿತ್ತು. ಸತ್ಸಂಗವೂ ಆಗುತ್ತಿತ್ತು. ಒಮ್ಮೆ ಪಟೇಲರು ‘ಸತ್ತ ಹಾವೂ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಸೂಚಿಸುವ ಕತೆಯೊಂದಿದೆ. ಗುಜರಾತಿನ ಮಹಿಳೆಯೊಬ್ಬರು ಬಹಳ ಜಿಪುಣೆಯಂತೆ. ಯಾವುದನ್ನೂ ಬಿಸಾಡುತಿರಲಿಲ್ಲವಂತೆ. ಒಮ್ಮೆ ಅವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತು. ಆಕೆ ಗಾಬರಿಯಾಗಿ ಕಿರುಚಿಕೊಂಡಾಗ ನೆರೆಮನೆಯವರು ಬಂದರು. ಹಾವನ್ನು ಹೊಡೆದು ಕೊಂದು ಹಾಕಿದರು. ಯಾವುದನ್ನೂ ಬಿಸಾಡದ ಜಿಪುಣೆ ವೃದ್ಧೆ ಹಾವಿನ ಸತ್ತ ದೇಹವನ್ನು ಮನೆಯ ಮಾಳಿಗೆ ಮೇಲೆಸೆದಳು. ಮರುದಿನ ಆಕಾಶದಲ್ಲಿ ಹಾರುತ್ತಿದ್ದ ಹದ್ದೊಂದು ಹಾವಿನ ದೇಹವನ್ನು ಕಂಡು ಸರ್ರೆಂದು ಕೆಳಗಿಳಿದು ಬಂತು.
ಎಲ್ಲಿಂದ ಕಚ್ಚಿಕೊಂಡು ಬಂದಿತ್ತೋ ಗೊತ್ತಿಲ್ಲ. ಆದರೆ ಅದರ ಬಾಯಲ್ಲಿ ಒಂದು ರತ್ನಖಚಿತ ಹಾರವಿತ್ತು. ಅದು ಹಾರವನ್ನು ಬಿಸಾಡಿ ಹಾವನ್ನು ಬಾಯಲ್ಲಿ ಕಚ್ಚಿಕೊಂಡು ಹಾರಿಹೋಯಿತು. ವೃದ್ಧೆಗೆ ರತ್ನಖಚಿತ ಹಾರ ಉಚಿತವಾಗಿ ಸಿಕ್ಕಿತ್ತು. ಈಗ ಹೇಳಿ ಸತ್ತ ಹಾವೂ ಪ್ರಯೋಜನಕ್ಕೆ ಬರುತ್ತದಲ್ಲವೇ?’ ಎಂದು ಕೇಳಿದರು. ತಕ್ಷಣ ಗಾಂಧೀಜಿಯವರೂ ಕತೆಯೊಂದನ್ನು ಹೇಳಿದರು. ‘ಭೋಪಾಲದಲ್ಲಿ ವ್ಯಾಪಾರಸ್ಥರೊಬ್ಬರಿದ್ದರು. ಒಮ್ಮೆ ಅವರ ಅಂಗಡಿಯಲ್ಲಿ ಅವರೊಬ್ಬರೇ ಇದ್ದಾಗ ಹಾವು ಕಾಣಿಸಿಕೊಂಡಿತಂತೆ. ಅದನ್ನು ಹೊಡೆಯುವ ಧೈರ್ಯ ಅವರಿಗಿರಲಿಲ್ಲ. ಅವರು ತಕ್ಷಣ ಒಂದು ದೊಡ್ಡ ಪೆಟ್ಟಿಗೆಯ ಬಾಯಿ ತೆಗೆದು ಅದನ್ನು ಹಾವಿನ ಮುಂದೆ ಇಟ್ಟರು.
ಹಾವು ನಿಧಾನವಾಗಿ ಸರಿದು ಬಂದು ಪೆಟ್ಟಿಗೆಯೊಳಗೆ ಸೇರಿಕೊಂಡಿತು. ಅವರು ತಕ್ಷಣ ಪೆಟ್ಟಿಗೆಯ ಬಾಯಿ ಮುಚ್ಚಿಬಿಟ್ಟರು. ಕೆಲಸಗಾರರು ಬಂದ ನಂತರ ಹಾವನ್ನು ಹೊಡೆದು ಹೊರಗೆ ಹಾಕೋಣವೆಂದು ಯೋಚಿಸಿದ್ದರು. ಆದರೆ ಮಧ್ಯಾಹ್ನ ಗ್ರಾಹಕರ ಸಂದಣಿ ಹೆಚ್ಚಾಗಿತ್ತು. ಅವರು ಹಾವಿನ ವಿಷಯ ಮರೆತುಬಿಟ್ಟರು. ರಾತ್ರಿ ಅಂಗಡಿಯ ಬಾಗಿಲು ಮುಚ್ಚಿ ಬೀಗ ಹಾಕಿಕೊಂಡು ಹೊರಟಾಗಲೂ ಹಾವಿನ ವಿಷಯ ನೆನಪಾಗಲಿಲ್ಲ. ಅಂದು ಮಧ್ಯರಾತ್ರಿ ಕಳ್ಳರು ಅವರ ಅಂಗಡಿಗೆ ನುಗ್ಗಿದರು. ಅವರಿಗೆ ಮೊದಲು ಕಂಡದ್ದು ದೊಡ್ಡ ಪೆಟ್ಟಿಗೆ. ಅದರಲ್ಲೇನೋ ಬೆಲೆಬಾಳುವ ವಸ್ತುವಿರಬೇಕೆಂದು ಕಳ್ಳರು ಯೋಚಿಸಿದರು. ಪೆಟ್ಟಿಗೆಯೊಳಗೆ ಕೈ ಹಾಕಿದಾಗ ಹಾವು ಅವರ ಕೈ ಕಚ್ಚಿತು. ಬೆಳಿಗ್ಗೆ ವ್ಯಾಪಾರಸ್ಥರು ಅಂಗಡಿ ತೆಗೆದಾಗ, ಅಲ್ಲಿ ಕಳ್ಳರು ಸತ್ತು ಬಿದ್ದಿದ್ದರು.
ಹಾವು ಓಡಾಡಿಕೊಂಡಿತ್ತು. ವ್ಯಾಪಾರಸ್ಥರಿಗೆ ಹಾವಿನ ವಿಷಯ ಆಗ ನೆನಪಾಯಿತು. ಅವರು ಕೆಲಸಗಾರರಿಗೆ ‘ಬದುಕಿದ್ದ ಹಾವಿನಿಂದಾಗಿ ನಮ್ಮ ಅಂಗಡಿ ಕಳ್ಳರ ದಾಳಿಯಿಂದ ಪಾರಾಗಿದೆ. ಇದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬನ್ನಿ’ ಎಂದು ಕಳುಹಿಸಿದರು. ಈಗ ಹೇಳಿ! ಬದುಕಿರುವ ಹಾವೂ ಪ್ರಯೋಜನಕಾರಿಯಲ್ಲವೇ?’ ಎಂದು ಗಾಂಧೀಜಿ ಕತೆ ಮುಗಿಸಿದಾಗ, ಅಲ್ಲಿದ್ದವರೆಲ್ಲ ಇಬ್ಬರ ಕತೆಯ ಹಿಂದೆಯೂ ಸತ್ಯವಿದೆಯೆಂದು ಒಪ್ಪಿಕೊಂಡರು. ಸತ್ತ ಹಾವಿನ ಬೆಲೆ ಒಂದು ರತ್ನದ ಹಾರ ಎಂದಾದರೆ ಬದುಕಿದ್ದ ಹಾವಿನ ಬೆಲೆಯನ್ನು ಇಂತಿಷ್ಟೇ ಎಂದು ನಿಗದಿ ಪಡಿಸುವುದು ಹೇಗೆ? ವಿನೋದ ಪ್ರವೃತ್ತಿಯಿಂದಾಗಿ ಪಟೇಲರು ಮತ್ತು ಗಾಂಧೀಜಿಯವರಂಥ ಮಹಾನುಭಾವರು ಸೆರೆಮನೆಯಲ್ಲಿ ಸರಾಗವಾಗಿ ಉಳಿದಿದ್ದರು! ಬೆಳೆದಿದ್ದರು! ನಾವೂ ಹಾವಿನ ಎರಡೂ ಕತೆಗಳ ಹಿಂದಿನ ನವಿರಾದ ವಿನೋದವನ್ನು ಆನಂದಿಸೋಣ!
ಕೃಪೆ: ವಿಶ್ವ ವಾಣಿ. ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.
Comments
Post a Comment