ದಿನಕ್ಕೊಂದು ಕಥೆ 334
🌻 *ದಿನಕ್ಕೊಂದು ಕಥೆ*🌻
*ಪ್ರಪಂಚವೆಲ್ಲವೂ_ಪರಮಾತ್ಮ*
ಒಬ್ಬ ಸಾಧಕನು ದೇವನನ್ನು ಕಾಣುವ ಏಕೈಕ ಹಂಬಲದಿಂದ ಹಿಮದ ಬೆಟ್ಟಗಳನ್ನು ಏರಿದ. ಹತ್ತಾರು ವರುಷ ಅಖಂಡ ತಪಸ್ಸನ್ನಾಚರಿಸಿದ. ಸತ್ಯವೇನು ಕಾಣಲಿಲ್ಲ ನಿತ್ಯ ಧ್ಯಾನವೇನು ತಪ್ಪಲಿಲ್ಲ. ಅದೇ ನಿಷ್ಠೆ ಅದೇ ಶ್ರದ್ಧೆ ಉಳಿಸಿಕೊಂಡಿದ್ದ.
ಒಂದು ದಿನ ರಾತ್ರಿ ಎಂದಿನಂತೆ ಧ್ಯಾನಕ್ಕೆ ದೃಢವಾಗಿ ಕುಳಿತಿದ್ದಾನೆ. ಆಗಸದಲ್ಲಿ ಅಲ್ಲಲ್ಲಿ ನಕ್ಷತ್ರಗಳು ಹೊಳೆಯುತ್ತಿವೆ. ಚಂದಿರನ ಸೌಮ್ಯ ಪ್ರಕಾಶ ಸುತ್ತಮುತ್ತ ಹರಡಿದೆ. ಮಧ್ಯರಾತ್ರಿಯ ಸಮಯ ಎಲ್ಲಿಂದಲೋ ಧ್ವನಿ ಕೇಳಿ ಬಂದಿತು. “ಏಳು ಕಣ್ಣುತೆರೆ. ನಿನ್ನ ಸುತ್ತಮುತ್ತ ನಾನೇ ನಿಂತಿದ್ದೇನೆ!” ಸಾಧಕನು ಕಣ್ಣು ತೆರೆದು ನೋಡಿದ ಯಾರೂ ಕಾಣಲಿಲ್ಲ. ಕಣ್ಣು ಮುಚ್ಚಿದ, ಮತ್ತೆ ಅದೇ ಧ್ವನಿ “ಏಳು, ಕಣ್ಣು ತೆರೆ, ನಿನ್ನ ಸುತ್ತ ಮುತ್ತ ನಾನೇ ನಿಂತಿದ್ದೇನೆ!” ‘ಯಾರವರು?’ ಎಂದು ಕಣ್ಣು ತೆರೆದು ನೋಡಿದ. ಯಾರೂ ಇಲ್ಲ. ಬರೀ ಮೌನ. ಮತ್ತೆ ಧ್ಯಾನಸ್ತನಾದ!
ಕೊನೆಗೆ ಆ ದಿವ್ಯ ಧ್ವನಿಯೇ ಹೇಳಿತು “ನನ್ನನ್ನು ಕಾಣಲು ಏಕೆ ಇಷ್ಟು ಕಷ್ಟ ಪಡುತ್ತಿ? ನಾನೇ ನಿನ್ನ ಸುತ್ತ ಆಕಾಶವಾಗಿ ಹರವಿರುವೆ, ನಕ್ಷತ್ರವಾಗಿ ಮಿನುಗುತಿರುವೆ. ಪ್ರಕಾಶವಾಗಿ ಸುರಿದಿರುವೆ ಏಳು ಕಣ್ಣು ಬಿಡು! ನನ್ನನ್ನು ನೋಡು”!! ಸಾಧಕನು ನಿರ್ಮಲಭಾವಗಣ್ಣನ್ನು ತೆಗೆದು ಅನಂತ ಆಗಸವನ್ನು ನೋಡಿದ. ಹೃದಯ ತುಂಬಿ ಬಂದಿತು. “ನಾನು ಸತ್ಯದೆವನನ್ನು ಕಂಡೆ, ಕಂಡೆ!” ಎಂದು ಆನಂದದಿಂದ ನಲಿದ!
****************************
*ವಿಶ್ವಾಸ*
ಒಬ್ಬ ಸಿರಿವಂತನಿದ್ದ ಅವನ ಮನೆಯಲ್ಲಿ ಒಬ್ಬ ಸೇವಕನಿದ್ದ ಮತ್ತು ಒಂದು ನಾಯಿ ಇತ್ತು. ಇಬ್ಬರಮೇಲೂ ಮಾಲಿಕನಿಗೆ ಅಷ್ಟೆ ವಿಶ್ವಾಸ, ಪ್ರೇಮ. ಮೂವತ್ತು ವರುಷಗಳಿಂದ ಸೇವಕ ಮಗನಂತೆ ಅದೇ ಮನೆಯಲ್ಲಿದ್ದ. ಸೇವಕನಿಗೆ ಕೈತುಂಬ ಹಣ, ನಾಯಿಗೆ ಹೊಟ್ಟೆ ತುಂಬ ಊಟ ಕೊಡುತ್ತಿದ್ದ. ಯಾರಿಗೂ ಯಾವುದಕ್ಕೂ ಕೊರತೆಯಿರಲಿಲ್ಲ, ಒಂದು ದಿನ ಕಳ್ಳನೊಬ್ಬ ಸೇವಕನ ಗೆಳೆತನ ಮಾಡಿದ. ಮಾತನಾಡುತ್ತ ಕಳ್ಳ ಹೇಳಿದ – ‘ನೀನು ಮೂವತ್ತು ವರ್ಷ ಈ ಮನೆಯಲ್ಲಿ ದುಡಿದೆ. ನಿನ್ನ ಬಡತನವೇನೂ ಹೋಗಲಿಲ್ಲ! ಸಿರಿವಂತನ ಮನೆ ಮಡದಿ ಮಕ್ಕಳ ನೋಡು. ನಿನ್ನ ಮನೆ ಮಡದಿ ಮಕ್ಕಳ ನೋಡು ಹೇಗಿದ್ದಾರೆ?” ಅದು ನನ್ನ ಭಾಗ್ಯದಲ್ಲಿಲ್ಲ ಅದಕ್ಕೆ ನಾನೇನು ಮಾಡಲಿ” ಎಂದ ಸೇವಕ. ‘ನನ್ನಲ್ಲೊಂದು ಯುಕ್ತಿ’ ಇದೆ ಎಂದ ಕಳ್ಳ.
ಬಡವ ಕೇಳಿದ “ಅದೇನದು?” “ಈ ಮನೆಯಲ್ಲಿ ಸಿರಿವಂತ ಎಲ್ಲೆಲ್ಲಿ ಸಂಪದವಿಟ್ಟಿದ್ದಾನೆ ಹೇಳು. ನಿನಗೆ ಕೈತುಂಬ ಹಣಕೊಡುತ್ತೇನೆ” ಎಂದು ಕಳ್ಳ ಹೇಳಿದ. ಸೇವಕನ ಮನಸ್ಸು ಚಂಚಲಿಸಿತು. ಒಮ್ಮೆಲೆ ತಾನು ಸಿರಿವಂತನಾದಂತೆ ಭಾಸವಾಯಿತು. ತಾನೂ ದೊಡ್ಡ ಮನೆಯನ್ನು ಕಟ್ಟಿಸಿ ಅಲ್ಲಿ ಆಳುಕಾಳು ಇಟ್ಟಂತೆ ಕನಸು ಕಂಡ! ಸೇವಕನು ಕಳ್ಳನಿಗೆ ಏನೆಲ್ಲ ಮಾಹಿತಿ ಹೇಳಿದ. ಜೊತೆಗೆ ನಿಧಿ ಇರುವ ಮನೆಯ ನಕಲಿ ಕೀಲಿ ಕೈಯನ್ನೂ ಮಾಡಿಕೊಟ್ಟ. ಕಳೆದ ೩೦ ವರ್ಷಗಳಿಂದ ಅನ್ನವನ್ನಿತ್ತ ಮನೆಗೆ ಕನ್ನವನ್ನು ಹಾಕುವ ದ್ರೋಹ ಬಗೆದಿದ್ದ.
ಅದೇ ದಿನ ಮಧ್ಯರಾತ್ರಿ ಕಳ್ಳನು ಸಿರಿವಂತನ ಮನೆಗೆ ಬಂದ. ಸೇವಕನಲ್ಲಿ, ನಾಯಿಯಲ್ಲಿ ಅಚಲ ನಂಬಿಕೆಯನಿಟ್ಟು ಒಡೆಯನು ನಿಶ್ಚಿಂತ ನಿದ್ರೆಯಲ್ಲಿದ್ದ. “ಸೇವಕನನ್ನೇ ಬದಲಿಸಿದ್ದೇನೆ ನಾಯಿಯನ್ನು ಬದಲಿಸುವುದು ಎಷ್ಟೊತ್ತು” ಎಂದು ಕಳ್ಳ ಧೈರ್ಯದಿಂದ ಬಂದಿದ್ದ. ನೋಡಿದರೆ ಬಾಯಿಗೆ ನೀರು ಬರಬೇಕು ಅಂಥ ಬೆಣ್ಣೆಯ ಬಿಸ್ಕಿತ್ತು ನಾಯಿಗೆ ತಂದಿದ್ದ. ಮನೆಯ ಹೊರಗೆ ಬಾಗಿಲ ಮುಂದೆ ನಿಂತಿದ್ದ ನಾಯಿಗೆ ಒಂದೆರಡು ಬಿಸ್ಕತ್ತು ಎಸೆದ. ನಾಯಿ ಮುಂದೆ ಬಂದು ಆ ಬಿಸ್ಕತ್ತನ್ನು ತಿರಸ್ಕಾರದಿಂದ ನೋಡಿ “ನಿನ್ನ ಆಮಿಷಕ್ಕೆ ಒಳಗಾಗಲು ನಾನೇನು ಆ ಸೇವಕನಲ್ಲ” ನನಗೆ ನನ್ನ ಒಡೆಯನಲ್ಲಿ ಪೂರ್ಣ ವಿಶ್ವಾಸ. ನೀನು ನಿನ್ನ ಬಿಸ್ಕತ್ನೊಂದಿಗೆ ಪಲಾಯನ ಮಾಡು ಇಲ್ಲದಿದ್ದರೆ ನೋಡು......! ಎಂದಿತು.
ಕೃಪೆ: ಶ್ರೀ ಸಿದ್ಧೇಶ್ವರ ಸ್ವಾಮೀಜಿ. ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.
Comments
Post a Comment