ದಿನಕ್ಕೊಂದು ಕಥೆ. 374

*🌻ದಿನಕ್ಕೊಂದು ಕಥೆ🌻                                  ಸಬಲರೊಂದಿಗೆ ಅಬಲೆಯ ಹೋರಾಟಕ್ಕೆ ಸಿಕ್ಕ ಜಯ!*

ಕುತೂಹಲಕಾರಿಯಾದ ಹೋರಾಟದ ಘಟನೆಯೊಂದು ಇಲ್ಲಿದೆ. ಕೋಟ್ಯಧೀಶರಾದ ಸಬಲರೊಂದಿಗೆ ಒಬ್ಬ ಅಬಲೆಯ ಹೋರಾಟದ ಘಟನೆ! ಅಮೆರಿಕದ ನಗರವೊಂದರಲ್ಲಿ ಲಯೋಲಾ ಎಂಬ ಏಕಾಂಗಿ ವೃದ್ಧೆ ವಾಸವಾಗಿದ್ದರಂತೆ. ಅವರ ಮನೆಯ ಹತ್ತಿರವೇ ಕೋಟ್ಯಂತರ ರು. ಖರ್ಚು ಮಾಡಿ ವೈಭವೋಪೇತವಾದ ಒಂದು ಹೊಸ ಹೋಟೆಲ್ ಪ್ರಾರಂಭವಾಯಿತು. ಆಕಸ್ಮಿಕವಾಗಿ ಹೇಗೋ ಏನೋ ಲಯೋಲಾರವರ ಮನೆಯ ಟೆಲಿಫೋನ್ ಸಂಖ್ಯೆ ಮತ್ತು ಹೋಟೆಲಿನ ಟೆಲಿಫೋನ್ ಸಂಖ್ಯೆ ಒಂದೇ ರೀತಿಯಿದ್ದವು.

ಹಾಗಾಗಿ ಹೋಟೆಲಿಗೆ ಬರುವ ದೂರವಾಣಿ ಕರೆಗಳು ಲಯೋಲಾರಿಗೆ ಬರಲು ಆರಂಭವಾದವು. ಇದು ಹೋಟೆಲಿನ ನಂಬರ್ ಅಲ್ಲ-ಅಲ್ಲವೆಂದು ಹೇಳುವುದರಲ್ಲಿ ಮಹಿಳೆಗೆ ಸಾಕು ಸಾಕಾಗುತ್ತಿತ್ತು. ಹಗಲು-ರಾತ್ರಿಯೆನ್ನದೆ ಬರುತ್ತಿದ್ದ ಕರೆಗಳನ್ನು ಎದುರಿಸಿ ಬಸವಳಿದ ಮಹಿಳೆ ಹೋಟೆಲ್‌ನ ಅಧಿಕಾರಿಗಳಿಗೆ ತನ್ನ ಸಮಸ್ಯೆ ವಿವರಿಸಿ ‘ನಿಮ್ಮ ಟೆಲಿಫೋನ್ ಕರೆಗಳು ನನಗೆ ಬರುತ್ತಿವೆ. ದಯವಿಟ್ಟು ನಿಮ್ಮ ನಂಬರನ್ನು ಬದಲಾಯಿಸಿಕೊಳ್ಳಿ’ಎಂದು
ಕೇಳಿಕೊಂಡರು. ಆದರೆ ಹೋಟೆಲಿನವರು ‘ನಮ್ಮ ಟೆಲಿಫೋನ್ ಸಂಖ್ಯೆಯನ್ನು ಈಗಾಗಲೇ ಜಾಹೀರಾತುಗಳಲ್ಲಿ ಪ್ರಚಾರ ಮಾಡಿದ್ದೇವೆ.

ಈಗ ಬದಲಾವಣೆ ಸಾಧ್ಯವಿಲ್ಲ. ಬೇಕಿದ್ದರೆ ನಿಮ್ಮ ಸಂಖ್ಯೆಯನ್ನೇ ಬದಲಾಯಿಸಿಕೊಳ್ಳಿ’ ಎಂಬ ಉಡಾಫೆಯ ಉತ್ತರ ಕೊಟ್ಟರು. ನಿರಾಸೆಯಿಂದ ಹಿಂತಿರುಗಿದ ಲಯೋಲಾಗೆ ತಲೆನೋವಾಗುವಷ್ಟು ಸಂಖ್ಯೆಯಲ್ಲಿ ಹೋಟೆಲ್ ಕರೆಗಳು ಬರುತ್ತಿದ್ದವು. ಲಯೋಲಾ ಇದನ್ನು ತಮ್ಮದೇ ಶೈಲಿಯಲ್ಲಿ ಎದುರಿಸಲು ತೀರ್ಮಾನಿಸಿದರು. ಮುಂದೆ ಟೆಲಿಫೋನ್ ಕರೆ ಮಾಡಿದವರು ‘ನಮಗೆ ಹದಿನೈದು ದಿನಗಳ ಕಾಲ ಕೊಠಡಿಯೊಂದು ಬೇಕಿತ್ತು’ ಎಂದು ಕೇಳಿದ ತಕ್ಷಣ, ಲಯೋಲಾ ‘ನಮ್ಮ ಕೊಠಡಿಗೆ ಸಾಮಾನ್ಯವಾಗಿ ದಿನವೊಂದಕ್ಕೆ ಸಾವಿರ ಡಾಲರ್ ಬಾಡಿಗೆ. ಆದರೆ ನಿಮಗೆ ನೂರು ಡಾಲರಿನ ವಿಶೇಷ ರಿಯಾಯಿತಿ ದರದಲ್ಲಿ ಕೊಡುತ್ತೇವೆ’ ಎಂದು ಮಧುರವಾದ ಧ್ವನಿಯಲ್ಲಿ ಹೇಳಿದಾಗ, ಕರೆ ಮಾಡಿದವರು ಸಂತೋಷದ ಧ್ವನಿಯಲ್ಲಿ ‘ಕೊಠಡಿಯನ್ನು ನಮಗಾಗಿ ಕಾದಿರಿಸಿ, ನಾವು ಬರುತ್ತಿದ್ದೇವೆ’ಎಂದರು.

ಮುಂದಿನ ಕರೆ ಮಾಡಿದವರು ‘ನಾವು ಸಾವಿರ ಜನರಿಗೆ ಭೋಜನಕೂಟ ಏರ್ಪಡಿಸ ಬೇಕೆಂದಿದ್ದೇವೆ. ಒಂದು ಊಟಕ್ಕೆ ಎಷ್ಟಾಗುತ್ತದೆ?’ ಎಂದಾಗ, ಲಯೋಲಾ ‘ಸಾಮಾನ್ಯವಾಗಿ ಊಟವೊಂದಕ್ಕೆ ಐವತ್ತು ಡಾಲರ್ ಆಗುತ್ತದೆ. ಆದರೆ ನಿಮಗಾಗಿ ಊಟವೊಂದಕ್ಕೆ ಕೇವಲ ಹತ್ತು ಡಾಲರಿನ ರಿಯಾಯಿತಿ ದರದಲ್ಲಿ ಊಟ ಕೊಡುತ್ತೇವೆ’ ಎಂದಾಗ ಅವರೂ ಸಂತೋಷದಿಂದ ಭೋಜನಕೂಟವನ್ನು ನಿಗದಿಪಡಿಸಿದರು. ಹೀಗೆ ಲಯೋಲ ಬಂದ ಕರೆಗಳನ್ನೆಲ್ಲಾ ಸ್ವೀಕರಿಸುತ್ತಾ ತಮಗಿಷ್ಟ ಬಂದ ದರವನ್ನೊಪ್ಪಿಕೊಳ್ಳುತ್ತಾ ಹೋದರು! ವಿಶೇಷ ದರಗಳಲ್ಲಿ ಕೊಠಡಿಯನ್ನೋ, ಭೋಜನಕೂಟವನ್ನೋ ನಿಗದಿಪಡಿಸಿದವರು ಹೋಟೆಲಿಗೆ ಬರುತ್ತಿದ್ದರು. ಅಲ್ಲಿ ಒಪ್ಪಿಕೊಂಡ ದರದಲ್ಲಿ ಅವರ ನಿರೀಕ್ಷೆಯ ವ್ಯವಸ್ಥೆ ಆಗಿಲ್ಲದಿರುವುದನ್ನು ಕಂಡು ಹೋಟೆಲಿನವರೊಂದಿಗೆ ಜಗಳ ಮಾಡುತ್ತಿದ್ದರು.

ಮುಂದಿನ ಮೂರು ತಿಂಗಳಲ್ಲಿ ಪ್ರತಿದಿನದ ಜಗಳಗಳಿಂದಾಗಿ ಹೋಟೆಲ್‌ಗೆ ಎಷ್ಟು ಕೆಟ್ಟ ಹೆಸರು ಬಂದಿತ್ತೆಂದರೆ ಹೋಟೆಲ್ ನಡೆಸುವುದೇ ಕಷ್ಟವಾಯಿತು. ಕೊನೆಗೆ ಹೋಟೆಲನ್ನು ಮಾರಾಟಕ್ಕಿಡಲಾಗಿದೆಯೆಂಬ ಸುದ್ದಿ ಪ್ರಚಾರಗೊಂಡಿತು. ಒಮ್ಮೆ ಹೋಟೆಲ್ ಮಾರಾಟಕ್ಕಿದೆಯೇ? ಎಂದು ಕೇಳುವ ಕರೆಯೂ ಲಯೋಲಾರವರ ಟೆಲಿಫೋನಿಗೇ ಬಂದಿತಂತೆ. ಲಯೋಲಾರವರು ‘ಹೌದು, ಕೋಟಿಗಟ್ಟಲೆ ಖರ್ಚು ಮಾಡಿರುವ ಹೋಟೆಲನ್ನು ಹತ್ತು ಲಕ್ಷಕ್ಕೇ ಮಾರಲು ನಾವು ಸಿದ್ಧ. ಆದರೆ ಹೋಟೆಲ್ ಕೊಂಡುಕೊಳ್ಳುವವರು ಹೋಟೆಲಿನ ಟೆಲಿಫೋನ್ ಸಂಖ್ಯೆಯನ್ನು ಬದಲಾಯಿಸಬೇಕು ಎಂಬ ಷರತ್ತಿದೆ’ ಎಂದರಂತೆ. ಮುಂದೆ ಹೋಟೆಲ್ ಮಾರಾಟವಾಗಿ ಹೋಯಿತಂತೆ. ಆದರೆ ಎಷ್ಟಕ್ಕೆ ಮಾರಾಟವಾಯಿತೆಂಬುದು ಮಾರಾಟಕ್ಕೆ ಕಾರಣಕರ್ತರಾದ ಲಯೋಲಾಗೂ ಗೊತ್ತಾಗಲಿಲ್ಲವಂತೆ. ಆದರೆ ಹೋಟೆಲಿನ ಟೆಲಿಫೋನ್ ಕರೆಗಳು ಅವರಿಗೆ ಬರುವುದು ಮಾತ್ರ ನಿಂತುಹೋಯಿತಂತೆ.

ಅಂತರ್ಜಾಲದಲ್ಲಿ ಸಂಚಲನೆಯಲ್ಲಿದ್ದ ಈ ಘಟನೆ ನಡೆದುದರ ಬಗ್ಗೆ ಮತ್ತು ಅಂಥ ಹೋಟೆಲ್ ಅಥವಾ ಲಯೋಲ ಎಂಬ ವೃದ್ಧೆಯ ಅಸ್ತಿತ್ವದ ಬಗ್ಗೆ ಅನುಮಾನಗಳಿರಬಹುದು! ಆದರೆ ಸಬಲರೊಟ್ಟಿಗೆ ಅಬಲೆಯೊಬ್ಬರ ಹೋರಾಟದ ಮತ್ತು ಗೆದ್ದ ಪ್ರಸಂಗದ ಬಗ್ಗೆ ನಾವೂ ಮೆಚ್ಚುಗೆ ಸೂಚಿಸಬಹುದಲ್ಲವೇ?

*ಕೃಪೆ :ಷಡ ಕ್ಷರಿ.*                                            *************************************ಹದ್ದುಗಳಿಗೆ ಒಂದು ವಿಶೇಷ ಶಕ್ತಿಯಿದೆಯಂತೆ. ಜೋರು ಮಳೆ, ಬಿರುಗಾಳಿ ಬೀಸುವ ಮುನ್ನ ಹದ್ದುಗಳಿಗೆ ಮುನ್ಸೂಚನೆ ಸಿಗುತ್ತದೆ. ಅದು ಪ್ರಾಣಿ-ಪಕ್ಷಿಗಳಿಗೆ ಪ್ರಕೃತಿ ನೀಡಿರುವ ವರದಾನ. ಉಳಿದೆಲ್ಲ ಸಣ್ಣಪುಟ್ಟ ಪಕ್ಷಿಗಳು ಆಗ ಹೆದರಿ ಗೂಡು ಸೇರಿಬಿಡುತ್ತವೆ. ಆದರೆ ಹದ್ದು ಎತ್ತರದ ಪ್ರದೇಶಕ್ಕೆ ಹಾರಿ ಹೋಗಿ ಕುಳಿತುಕೊಳ್ಳುತ್ತದೆ. ಗಾಳಿ ಬೀಸಿದಾಗ ಅದರ ಜತೆಗೇ ಹಾರಿ, ಆ ರಭಸದ ಸಹಾಯದಿಂದ ಮೋಡದ ಮಟ್ಟಕ್ಕಿಂತ ಎತ್ತರವಾಗಿ ಹಾರುತ್ತದಂತೆ. ಹದ್ದು ಹಾಗೆ ಹಾರುವುದು ಬಿರುಗಾಳಿಗೆ ಹೆದರಿಯಲ್ಲ. ಬದಲಿಗೆ ಗಾಳಿಯ ಸಹಾಯದಿಂದಲೇ ಅದು ಅಪಾಯದ ಮಟ್ಟಕ್ಕಿಂತ ಎತ್ತರಕ್ಕೆ ಹಾರುತ್ತದೆ. ಹಾಗೆಯೇ ಬದುಕಿನಲ್ಲಿ ಕಷ್ಟಗಳೆಂಬ ಬಿರುಗಾಳಿ ಬೀಸಿದಾಗ ಹೆದರಿ ಓಡಿ ಹೋಗುವ ಬದಲು, ಅದರಿಂದ ಪಾಠ ಕಲಿಯುವ, ಗಟ್ಟಿಯಾಗುವ ಅವಕಾಶಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು.                                         ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1129

ದಿನಕ್ಕೊಂದು ಕಥೆ 1132

ದಿನಕ್ಕೊಂದು ಕಥೆ 1131