ದಿನಕ್ಕೊಂದು ಕಥೆ. 522

*🌻ದಿನಕ್ಕೊಂದು ಕಥೆ🌻                      ದಿ ಮೆಟ್ರೋ ಮ್ಯಾನ್ ಆಫ್ ಇಂಡಿಯಾ*                           ಪ್ರಪಂಚದಲ್ಲೇ ಅತಿ ಅಪಾಯಕಾರಿ ರೈಲ್ವೆ ಸೇತುವೆ ಪಾಂಬನ್ ಬ್ರಿಜ್. ಈ ಸೇತುವೆಯ ಮೇಲೂ ರೈಲು ಚಲಿಸುತ್ತದೆ ಎಂಬುದನ್ನು ಇಂದಿಗೂ ಎಷ್ಟೋ ಜನ ನಂಬುವುದಿಲ್ಲ. ಏಕೆಂದರೆ ಇದರ ಮೇಲಿಂದ ಅಕಸ್ಮಾತ್ ರೈಲೇನಾದರೂ ಬಿದ್ದರೆ ಅದರಲ್ಲಿದ್ದವರಲ್ಲಿ ಯಾರೊಬ್ಬರೂ ಬದುಕುಳಿಯುವ ಸಾಧ್ಯತೆಯಿಲ್ಲ ಎಂದೇ ಹೇಳಲಾಗುತ್ತದೆ.    ಕೇವಲ ಒಂದು ಮೀಟರ್ ಅಗಲ ಹಾಗೂ ಎರಡೂವರೆ ಕಿಲೋಮೀಟರ್ ಉದ್ದವಿರುವ ಈ ರೈಲ್ವೆ ಸೇತುವೆ ಜನರನ್ನು ಮತ್ತು ಸರಕುಗಳನ್ನು ತಮಿಳುನಾಡಿನಿಂದ ರಾಮೇಶ್ವರಂ ದ್ವೀಪಕ್ಕೆ ಪ್ರತಿನಿತ್ಯ ಕೊಂಡೊಯ್ಯುತ್ತದೆ. ಇದು ಎರಡು ಪ್ರದೇಶದ ಜನರನ್ನು ಬೆಸೆಯುವ ಏಕೈಕ ಕೊಂಡಿ. ಹೀಗಾಗಿ ನಿತ್ಯ ರೈಲು ಸಾಗಲೇಬೇಕು. ಚಂಡಮಾರುತ ಆಗಾಗ ಈ ಸೇತುವೆಗೆ ಬಂದು ಅಪ್ಪಳಿಸುವುದು ಸಾಮಾನ್ಯ. ಪ್ರತಿ ಬಾರಿ ಸಮುದ್ರದಲ್ಲಿ ಚಂಡಮಾರುತ ಹುಟ್ಟಿದಾಗ ಇಲ್ಲಿಯ ಸ್ಥಳೀಯರು ದೇವರಲ್ಲಿ ಪ್ರಾರ್ಥನೆ ಮಾಡುವುದೇನು ಗೊತ್ತಾ? ‘ದೇವರೇ ಈ ಸೇತುವೆಗೆ ಏನೂ ಅಪಾಯವಾಗದಿರಲಿ‘ ಎಂದು! ಆದರೆ 1964ರ ಡಿಸೆಂಬರ್ 22ರ ಮಧ್ಯರಾತ್ರಿ ಬಂದಪ್ಪಳಿಸಿದ ಭೀಕರ ಚಂಡಮಾರುತ ಈ ಪ್ರದೇಶದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು. ಆದರೆ ಇದನ್ನರಿಯದ ಪ್ಯಾಸೆಂಜರ್ ರೈಲು ಎಂದಿನಂತೆ ತಮಿಳುನಾಡಿನ ಪಾಂಬನ್ ರೈಲು ನಿಲ್ದಾಣವನ್ನು ಬಿಟ್ಟು ರಾಮೇಶ್ವರದ ಕಡೆಗೆ ಇದೇ ಹಳಿಯ ಮೇಲೆ ಹೊರಟಿತ್ತು. ಆ ಚಂಡಮಾರುತಕ್ಕೆ ತತ್ತರಿಸಿದ ರೈಲು ಕೆಲವೇ ಹೊತ್ತಿನಲ್ಲಿ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿತು.    ಆನಂತರ ಮೂರು ದಿನಗಳವರೆಗೆ ಈ ರೈಲುಗಾಡಿಗೆ ಏನಾಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ. ಗಂಟೆಗೆ 240 ಕಿಲೋಮೀಟರ್ ವೇಗದಲ್ಲಿ ಬಂದಪ್ಪಳಿಸಿದ್ದ ಚಂಡಮಾರುತ ಈ ರೈಲ್ವೆ ಬ್ರಿಜ್ಜನ್ನು ಸಂಪೂರ್ಣ ಧ್ವಂಸಗೊಳಿಸಿ, ಪಿಲ್ಲರ್ಗಳನ್ನು ಮಾತ್ರ ಉಳಿಸಿತ್ತು. ಇನ್ನು ರೈಲಿನ ಹಳಿ ಅಲ್ಲೊಂದು ಇಲ್ಲೊಂದು ಕಾಣಿಸಿದುದು ಬಿಟ್ಟರೆ ಸಂಪೂರ್ಣ ಸಮುದ್ರದ ಪಾಲಾಗಿತ್ತು. ಹೀಗೆ 1914 ರಲ್ಲಿ ಬ್ರಿಟಿಷರಿಂದ ನಿರ್ವಿುಸಲ್ಪಟ್ಟಿದ್ದ ಸೇತುವೆ ಇನ್ನಿಲ್ಲವಾಗಿತ್ತು.    ಮೂರು ದಿನಗಳ ನಂತರ ಪಾಂಬನ್ ರೈಲು ನಿಲ್ದಾಣದ ಹೊರವಲಯದಲ್ಲಿ ಸುಮಾರು 1000 ಕ್ಕೂ ಹೆಚ್ಚು ಹೆಣದ ರಾಶಿ ಬಿದ್ದಿರುವುದು ಕಂಡುಬಂತು. ರಾಮೇಶ್ವರ ಮತ್ತು ಪಾಂಬನ್ ಪಟ್ಟಣಗಳಂತೂ ಅಕ್ಷರಶಃ ಸ್ಮಶಾನವಾಗಿದ್ದವು; ಸಮೀಪದ ಸಾಕಷ್ಟು ಹಳ್ಳಿಗಳಿಗೂ ಹಾನಿಯಾಗಿತ್ತು. ಸೇತುವೆಯ ದುರಸ್ತಿ ಕಾರ್ಯಕ್ಕೆ ಸರ್ಕಾರ ಮುಂದಾಯಿತು. ಕೇಂದ್ರ ಸರಕಾರದ ಉನ್ನತ ದರ್ಜೆಯ ಇಂಜಿನಿಯರುಗಳ ಸಭೆ ಕರೆಯಿತು. ಪಾಂಬನ್ ರೈಲು ಸೇತುವೆ ನಿರ್ವಣದ ಸಂಪೂರ್ಣ ಉಸ್ತುವಾರಿಯನ್ನು ಒಬ್ಬ ಉನ್ನತ ಅಧಿಕಾರಿಗೆ ವಹಿಸಿ ಆರು ತಿಂಗಳ ಗಡುವನ್ನು ನೀಡಲಾಯಿತು.     ಆ ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಂಡ ಆ ಅಧಿಕಾರಿ ಯುದ್ಧೋಪಾದಿಯಲ್ಲಿ ಕೆಲಸ ಪ್ರಾರಂಭಿಸಿದರು; ಕೆಲಸದ ಗುಂಗಿನಲ್ಲಿ ಊಟ ನಿದ್ದೆ ಮರೆತರು. ಪರಿಣಾಮ, ನಿಗದಿಪಡಿಸಿದ್ದ ಅವಧಿಗೆ ಮುನ್ನವೇ ಸೇತುವೆ ಮರುನಿರ್ವಣವಾಗಿತ್ತು! ಸರ್ಕಾರಕ್ಕೆ ಏನೋ ಸಂಶಯ. ಇಷ್ಟು ಬೇಗನೆ ಹೇಗೆ ಮುಗಿಯಲು ಸಾಧ್ಯ ಎಂದು. ಸೇತುವೆಯಲ್ಲಿ ಏನಾದರೂ ಲೋಪವಿದೆಯೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ಕಳುಹಿಸಿತು! ಆ ತಂಡ ಆ ವ್ಯಕ್ತಿಯ ಕಾರ್ಯ ವೈಖರಿಗೆ ತಲೆಬಾಗಿ ಅಭಿನಂದಿಸಿತು. 180 ದಿನಗಳಲ್ಲಿ ಮುಗಿಯಬೇಕಿದ್ದ ಸೇತುವೆ ಕಾರ್ಯ ಇವರ ಪರಿಶ್ರಮದ ಫಲವಾಗಿ ಕೇವಲ 46 ದಿನಗಳಲ್ಲಿ ಮುಗಿದುಹೋಗಿತ್ತು! ಆ ಛಲಗಾರನ ಹೆಸರು- ಎಲಟ್ಟುವಲಪ್ಪಿಲ್ ಶ್ರೀಧರನ್.   ಈ ಸೇತುವೆಯ ಕಾರ್ಯ ಮುಗಿಸಿದಾಗ ಅವರಿಗಿನ್ನೂ 30 ವರ್ಷ. ಇವರನ್ನು ದಿ ಮೆಟ್ರೋ ಮ್ಯಾನ್ ಆಫ್ ಇಂಡಿಯಾ, ದಿ ರೈಲ್ವೇ ಮ್ಯಾನ್ ಆಫ್ ಇಂಡಿಯಾ ಎಂಬುದಾಗಿಯೇ ಜನ ಹೆಚ್ಚಾಗಿ ಗುರುತಿಸುತ್ತಾರೆ. ಕೆಲಸ, ಕೆಲಸ ಹಾಗೂ ಕೆಲಸದ ಹೊರತಾಗಿ ಏನನ್ನೂ ಯೋಚಿಸದ ಇವರು ಹುಟ್ಟಿದ್ದು 1932ರ ಜೂನ್ 12ರಂದು, ಕೇರಳದ ಮಲಬಾರ್ ಜಿಲ್ಲೆಯ ಕರುಕಪುತ್ತೂರಿನಲ್ಲಿ. ಶಾಲಾ ವಿದ್ಯಾಭ್ಯಾಸ ಸ್ವಂತ ಊರಿನಲ್ಲೇ ನಡೆದರೆ, ಕಾಲೇಜು ಶಿಕ್ಷಣ ಪಾಲಘಾಟ್​ನಲ್ಲಿ ನಡೆಯಿತು. ವಿಕ್ಟೋರಿಯಾ ಕಾಲೇಜಿನಲ್ಲಿ ಮೊದಲು ಓದಿದ ಇವರು ಆ ಬಳಿಕ ಆಂಧ್ರಪದೇಶದ ಕಾಕಿನಾಡ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದರು. ಆನಂತರ ಕೋಜಿಕೋಡ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಉಪಾಧ್ಯಾಯರಾಗಿ ಸ್ವಲ್ಪ ಸಮಯ ಕೆಲಸ ಮಾಡಿದರು. ತದನಂತರ ಬಾಂಬೆ ಪೋರ್ಟ್ ಟ್ರಸ್ಟ್​ನಲ್ಲಿ ಅಪ್ರೆಂಟಿಸ್ ಆಗಿದ್ದರು. ತದನಂತರ ಭಾರತೀಯ ಇಂಜಿನಿಯರಿಂಗ್ ಸೇವೆಗೂ ಆಯ್ಕೆಯಾದರು. ಪಂಬನ್ ಸೇತುವೆ ದುರಸ್ತಿ ಯೋಜನೆಯಿಂದಾಗಿ ಅವರನ್ನು ಜನಸಾಮಾನ್ಯರೂ ಗುರುತಿಸುವಂತಾಯಿತು.  ಆ ಬಳಿಕ ಸ್ವಲ್ಪ ಕಾಲ ವಿವಿಧ ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡಿದ ಇವರು ನಂತರ ಕೋಲ್ಕತ್ತ ಮೆಟ್ರೋದ ಡೆಪ್ಯೂಟಿ ಚೀಫ್ ಎಂಜಿನಿಯರ್ ಆಗಿ 1970ರಲ್ಲಿ ನೇಮಕವಾದರು. ವಿನ್ಯಾಸ ಹಾಗೂ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿದ್ದ ಇವರು, ಆ ಯೋಜನೆಯನ್ನು 1979ರಲ್ಲಿಯೇ ಪೂರ್ಣಗೊಳಿಸಿದರು. ಆ ನಂತರ ಇವರನ್ನು ಕೊಚ್ಚಿ ಶಿಪ್​ಯಾರ್ಡ್​ನ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಇವರ ನಾಯಕತ್ವದಲ್ಲೇ ಶಿಪ್​ಯಾರ್ಡ್​ನಲ್ಲಿ ಮೊದಲ ಹಡಗು ನಿರ್ವಣವಾದುದು. ಆನಂತರ ಕೊಂಕಣ ರೈಲ್ವೆಯ ಜನರಲ್ ಮ್ಯಾನೇಜರ್ ಆಗಿ ನಿಯುಕ್ತಿ. ಪಶ್ಚಿಮ ಘಟ್ಟದ ದಟ್ಟಾರಣ್ಯವನ್ನು ಭೇದಿಸಿಕೊಂಡು ಹೋಗುತ್ತಿದ್ದ ಈ ಹಳಿ ಸುಮಾರು 760 ಕಿಲೋಮೀಟರ್ ಉದ್ದದ್ದಾಗಿತ್ತು. ಬಂದರು ನಗರಗಳಾದ ಮಂಗಳೂರು ಮತ್ತು ಮುಂಬಯಿಯನ್ನು ರೈಲ್ವೆ ಮಾರ್ಗದ ಮೂಲಕ ಸಂರ್ಪಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು.ಈ ಕಾರ್ಯಕ್ಕಾಗಿ ಸುಮಾರು 150ಕ್ಕೂ ಹೆಚ್ಚು ಮೇಲ್ಸೇತುವೆಗಳು ಇವರ ನೇತೃತ್ವದಲ್ಲಿ ನಿರ್ವಣವಾದವು. ರೈಲ್ವೆ ಹಳಿಗಳನ್ನು ಹಾಕಲು ಕಡಿದಾದ ಬೆಟ್ಟಗುಡ್ಡಗಳನ್ನು ಕೊರೆದು 93ಕ್ಕೂ ಹೆಚ್ಚು ಸುರಂಗಮಾರ್ಗಗಳನ್ನು ಸಹ ಕೊರೆಯಲಾಯಿತು. ಇವರು ಕೊಂಕಣ ರೈಲ್ವೆಯನ್ನು ಸಹ ಅವಧಿಗೂ ಮುನ್ನ ಆರು ವರ್ಷಗಳಲ್ಲಿಯೇ ಪೂರ್ಣಗೊಳಿಸಿದ್ದರು.1990ರಲ್ಲಿ ನಿವೃತ್ತರಾದಾಗ, ಆಗಿನ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್, ಕಾಂಟ್ರಾಕ್ಟ್ ಆಧಾರದಲ್ಲಿ ಮುಂದುವರಿಯುವಂತೆ ಮನವೊಲಿಸಿದ್ದರು. ಅದರ ಬಳಿಕ ಇವರು ದೆಹಲಿ, ಲಖನೌ, ಜೈಪುರ ಮತ್ತು ಕೊಚ್ಚಿಯ ಮೆಟ್ರೋ ರೈಲು ನಿರ್ಮಾಣ ಕಾರ್ಯದಲ್ಲಿ ಯೋಗದಾನ ನೀಡುವಂತಾಗಿದ್ದು. ಇಂದಿಗೂ ಇವರು ಈ ಎಲ್ಲಾ ಯೋಜನೆಗಳ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲಿಗೆ 1995 ರಿಂದ 2012ರ ವರೆಗೆ ದೆಹಲಿ ಮೆಟ್ರೋದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ]ೕಧರನ್ ಅವರನ್ನು ನೇಮಿಸಲಾಯಿತು. ಈ ಹೊಣೆ ಇವರ ಹೆಗಲೇರಿದಾಗ ಅದನ್ನು ಹತ್ತು ವರ್ಷದಲ್ಲಿ ಮುಗಿಸಬೇಕಾಗಿತ್ತು. ಇಲ್ಲವಾದಲ್ಲಿ ಪ್ರತಿದಿನ ಸುಮಾರು 50 ಲಕ್ಷ ರೂ.ದಷ್ಟು ಯೋಜನಾ ವೆಚ್ಚ ಹೆಚ್ಚಾಗುತ್ತಿತ್ತು. ಆ ಯೋಜನೆಯನ್ನು ಏಳು ವರ್ಷ ಮೂರು ತಿಂಗಳಲ್ಲೇ ಮುಗಿಸಿದರು. ಸುಮಾರು 213 ಕಿಲೋಮೀಟರ್ ದೂರದ ಈ ಮೆಟ್ರೋ ಯೋಜನೆಯಿಂದ ರಸ್ತೆಯ ಮೇಲೆ ಸಂಚರಿಸುತ್ತಿದ್ದ 35,000ಕ್ಕೂ ಹೆಚ್ಚಿನ ಕಾರುಗಳು ಕಡಿಮೆಯಾಗಿ, 3 ಲಕ್ಷ ಕೋಟಿಯಷ್ಟು ಇಂಧನ ಉಳಿಯುವಂತಾಯಿತು. ಸರಾಸರಿ 23 ಲಕ್ಷ ಜನ ಸಂಚರಿಸುವ ಮೂಲಕ ಪ್ರತಿನಿತ್ಯ 4 ಕೋಟಿಗೂ ಹೆಚ್ಚಿನ ಹಣ ಸಂಗ್ರಹವಾಗುವಂತಾಯಿತು. ಇಂದು ಜಗತ್ತಿನ ಅತ್ಯುತ್ತಮ ಮೆಟ್ರೋಗಳ ಪೈಕಿ ದೆಹಲಿಗೂ ಸ್ಥಾನವಿದೆ. ದೆಹಲಿ ಮೆಟ್ರೋದ ನಿರ್ಮಾಣ ಯೋಜನೆ ವಿದ್ಯಾರ್ಥಿಗಳಿಗೆ ಕಲಿಕೆಯ ವಿಷಯವಾಗಿ ಮಾರ್ಪಟ್ಟಿದ್ದು, ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಕಳುಹಿಸುತ್ತಿವೆ.2011ರಲ್ಲಿ ಶ್ರೀಧರನ್ ಎರಡನೇ ಬಾರಿ ನಿವೃತ್ತಿ ಘೊಷಿಸಿದರು. ಆದರೂ ಅನೇಕ ಮೆಟ್ರೋ ರೈಲು ನಿರ್ಮಾಣ ಯೋಜನೆಯಲ್ಲಿ ಸ್ಥಳೀಯ ಸರ್ಕಾರಗಳು ಇವರ ಸೇವೆಯನ್ನು ಇಂದಿಗೂ ಬಳಸಿಕೊಳ್ಳುತ್ತಿವೆ. ಅವರ ದೇಹಕ್ಕೆ ವಯಸ್ಸಾದರೂ ಆಲೋಚನೆಗಳು ನವನವೀನ. ಒಟ್ಟಿನಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ನಂತರ ದೇಶ ಕಂಡ ಅದ್ವಿತೀಯ ಎಂಜಿನೀಯರ್ ಶ್ರೀಧರನ್ ಎಂದರೆ ಅತಿಶಯವೇನಲ್ಲ.ಬೆಂಗಳೂರು- ಮೈಸೂರು ಹೈಸ್ಪೀಡ್ ರೈಲು ಪ್ರಸ್ತಾವನೆ: ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರ ದಟ್ಟಣೆಯನ್ನು ಷಟ್ಪಥ ರಸ್ತೆಯ ಮೂಲಕ ಸರಿಪಡಿಸಲಾಗದು. ದಶಪಥ ರಸ್ತೆ ನಿರ್ವಿುಸಿದರೂ ಈ ಸಮಸ್ಯೆ ಬಗೆಹರಿಯದು. ಹೈಸ್ಪೀಡ್ ರೈಲು ಮಾರ್ಗವೇ ಏಕೈಕ ಪರಿಹಾರ ಎಂಬುದು ಶ್ರೀಧರನ್ ಖಚಿತ ಮಾತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚೀನಾಕ್ಕೆ ಹೋಗಿ ಹೈಸ್ಟೀಡ್ ರೈಲಿನ ಕುರಿತು ಮಾತನಾಡಿದ ಸಂದರ್ಭದಲ್ಲೇ ಇವರು ಈ ಕುರಿತು ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಸುಮಾರು 12,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯಿಂದ 350 ಕಿಮೀ ವೇಗದಲ್ಲಿ ಬೆಂಗಳೂರು-ಮೈಸೂರು ನಡುವಣ ಸಂಚಾರ ಸಾಧ್ಯವಾಗಲಿದೆ. ಕೇವಲ ನಲವತ್ತು ನಿಮಿಷಗಳಲ್ಲಿ ಉಭಯ ನಗರಗಳ ನಡುವಣ ಸಂಪರ್ಕ ಸಾಧ್ಯವಾಗಲಿದೆ ಎಂಬುದಾಗಿ ತಿಳಿಸಿದ್ದಾರೆ. ತಿರುವನಂತಪುರ-ಕಣ್ಣೂರು ಮಾರ್ಗವನ್ನು ಅಭಿವೃದ್ಧಿಪಡಿಸುವ ಕುರಿತೂ ಶ್ರೀಧರನ್ ಕೇರಳ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದಾರೆ. ಅಲ್ಲಿಯ ಸರ್ಕಾರ ಇದಕ್ಕೆ ತಕ್ಷಣವೇ ಸ್ಪಂದಿಸಿದೆ. ಆದರೆ ಕರ್ನಾಟಕದಲ್ಲಿ ಎರಡು ವರ್ಷಗಳಾದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದಾಗಿ ಇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. *ಬದುಕಿನ ಪಾಠ ಹೇಳಿದ ಭಗವದ್ಗೀತೆ*ಒಮ್ಮೆ ಕೆಲಸದಲ್ಲಿ ತಾನಂದುಕೊಂಡಿದ್ದು ಆಗದಿದ್ದಾಗ ಬೇಸತ್ತು ರಾಜೀನಾಮೆ ನೀಡುವ ನಿರ್ಧಾರವನ್ನು ಶ್ರೀಧರನ್ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಅವರ ನೆರವಿಗೆ ಬಂದಿದ್ದು ಭಗವದ್ಗೀತೆ. ಅದರಲ್ಲಿನ ಕೃಷ್ಣನ ಮಾತುಗಳು ಇವರಿಗೆ ಸ್ಪೂರ್ತಿ ನೀಡಿದ್ದಲ್ಲದೆ ತನ್ನಲ್ಲಿನ ಅಂತಃಕರಣವನ್ನು ಬಡಿದೆಬ್ಬಿಸಿತ್ತು. ನಂತರ ಹಿರಿಯ ರಾಜಕಾರಣಿಗಳ ಬಲವಂತಕ್ಕೆ ಬೆಲೆಕೊಟ್ಟು ತಮ್ಮ ರಾಜೀನಾಮೆ ನೀಡುವ ನಿರ್ಧಾರವನ್ನು ಇವರು ಹಿಂತೆಗೆದುಕೊಂಡಿದ್ದರು. ಅಂದಿನಿಂದ ಭಗವದ್ಗೀತೆ ಅವರ ಕಾಯಂ ಸಂಗಾತಿ.                                                  ಕೃಪೆ: ಶೈಲೇಶ್ ಹೊಳ್ಳ ಕೆ.ಎನ್.                  ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1135

ದಿನಕ್ಕೊಂದು ಕಥೆ 1132