ದಿನಕ್ಕೊಂದು ಕಥೆ 1132
*🌻ದಿನಕ್ಕೊಂದು ಕಥೆ🌻*
*" ಸಹಾಯ"*
ಮನೆಯ ಎಲ್ಲ ಸದಸ್ಯರು ಊಟ ಮಾಡುತ್ತ ಕುಳಿತಿದ್ದರು.ಪದ್ಮಾ ಅವರಿಗೆಲ್ಲ ಬಡಿಸುತ್ತಿದ್ದಳು.ಊಟ ಮಾಡುತ್ತಿದ್ದ ಉಮೇಶ್ ತನ್ನ ತಾಯಿಗೆ -"ಅಮ್ಮಾ.. ನೀನೂ ಬಾ ಮ್ಮಾ.. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡೋಣ"ಎಂದ. ಅದಕ್ಕೆ ಆತನ ತಾಯಿ ಪದ್ಮಾ -"ಪರವಾಗಿಲ್ಲಾ.. ನೀವೆಲ್ಲಾ ಮುಗಿಸಿ.. ನಂತರ ನಾ ಮಾಡ್ತೇನೆ" ಎಂದಳು. ಪುನಃ ಉಮೇಶ್ -" ನೀ ಯಾವಾಗಲೂ ಹೀಗೇ ಹೇಳ್ತಿ.. ಎಲ್ಲರ ಊಟ ಮುಗಿದ ಮೇಲೆ ಏನು ಉಳಿದಿರುತ್ತದೆ ಅದನ್ನೇ ತಿಂದು ಆಯ್ತು ಎನ್ನುತ್ತಿ" ಎನ್ನುತ್ತಾನೆ. ಆತನ ಮಾತು ಆಲಿಸಿದ ಉಳಿದವರೆಲ್ಲ ಆತನನ್ನೇ ನೋಡಲು ಆರಂಭಿಸಿದಾಗ, ಆತನ ತಂದೆ ಶ್ರೀಧರ್ -" ಉಳಿಕೆ ಎಂದರೆ ಏನೋ ನಿನ್ನ ಅರ್ಥ್?"ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉಮೇಶ್ -"ಅಪ್ಪಾ... ನಾನು ಸಾಕಷ್ಟು ಸಲ ನೋಡಿದ್ದೇನೆ..ಈ ಅಮ್ಮ ಪಲ್ಯ.. ಸಾಂಬಾರು, ಇಲ್ಲದೇ ಅನ್ನಕ್ಕೆ ಬರೀ ಚಟ್ನಿ ಪುಡಿ ಹಾಗೂ ಚಪಾತೀನ್ನ ಹಾಗೇ ತಿನ್ನೋದು ನೋಡಿದ್ದೀನಿ, ನಿನ್ನೆ ಮಾವಿನ ಹಣ್ಣಿನ
ಸೀಕರಣೆ.. ಆಲೂ ಪಲ್ಯ ಮಾಡಿದ್ದಾಗ ಅದು ರುಚಿ ಇದೆ ಅಂತ ಎರಡು ಮೂರು ಸಲಾ ಹಾಕಿಸಿಕೊಂಡು ಎಲ್ಲಾ ಖಾಲಿ ಮಾಡಿದ್ದೆವು..."ಎಂದು ಹೇಳುತ್ತಿದ್ದವನನ್ನು ತಡೆದ ಆತನ ತಂದೆ-" ಸ್ವಲ್ಪ ಹೆಚ್ಚಿಗೆನೇ ಮಾಡಬೇಕಿತ್ತು ಯಾರು ಬೇಡಾ ಅಂದಿದ್ರಾ?
ಎಂದು ತುಸು ಕೋಪದಿಂದ ಎಂದಾಗ ಉಮೇಶ್ ನ ಅಜ್ಜಿ -" ಮಗೂ ಹೆಂಗಸರ ಧರ್ಮವೇ ಹಾಗೆ...ಮನೆ ಮಂದಿಗೆ ಬಡಿಸಿದ ನಂತರವೇ ಊಟ ಮಾಡುವುದು.. ನನ್ನ ಪರಿಸ್ಥಿಯೂ ಆಗ ಹಾಗೇ ಇತ್ತು."ಎಂದು ಹೇಳಿದಾಗ ಉಮೇಶ್ -" ಅಜ್ಜೀ..
ಆಗಿನಕಾಲದ ಮಾತು ಬೇರೆ.. ಅಮ್ಮ ಬೆಳಿಗ್ಗೆ ಯಿಂದ ರಾತ್ರಿ ತನಕ ಮನೆ ಕೆಲ್ಸ ಎಲ್ಲಾ ನಿಭಾಯಿಸಿಕೊಂಡು ಹೋಗ್ತಿದ್ದಾಳೆ.. ಅವಳ ಆರೋಗ್ಯದ ದೃಷ್ಟಿಯಿಂದಲಾದರೂ ಒಳ್ಳೆ ಪೌಷ್ಟಿಕ ಆಹಾರ ತಿನ್ನಬೇಕು" ಎಂದಾಗ ಅಲ್ಲಿದ್ದವರು ಏನೊಂದೂ ಮಾತನಾಡದೇ ಸುಮ್ಮನಾಗುತ್ತಾರೆ. ಆಗ ಉಮೇಶ್ ನೇ ಎದ್ದು ಹೋಗಿ ತನ್ನ ತಾಯಿಗೂ ಒಂದು ತಟ್ಟೆ ಹಾಕಿ ಅವಳನ್ನು ಊಟಕ್ಕೆ ಕೂರಿಸುತ್ತಾನೆ. ಮುಂದೆಯೂ ಇದೇ ಪದ್ಧತಿ ಮುಂದುವರೆದಾಗ ಅವಳಿಗೂ ಒಂದು ರೀತಿಯ ನೆಮ್ಮದಿ ಆದಂತಾಗುತ್ತದೆ ಊಟ ಮಾಡುತ್ತ ಎಲ್ಲರೊಂದಿಗೂ ಕುಟುಂಬದ ವಿಷಯದ ಚರ್ಚೆಯಲ್ಲಿ ಭಾಗಿ ಆಗುತ್ತಾಳೆ ಇಲ್ಲವಾದರೆ ಆಕೆಯ ಉಪಸ್ಥಿತಿ ಬರೀ ಅಡುಗೆ ಮನೆಗೆ ಮಾತ್ರ ಸೀಮಿತ ವಾಗಿರಬೇಕಾಗುತ್ತಿತ್ತು. ಪದ್ಮಾಳಿಗೆ ಮೆನೋಪಾಸ್ ಸಮಯವಾಗಿದ್ದರಿಂದ ಶಾರೀರಿಕವಾಗಿ ಬಹಳ ತೊಂದರೆ ಪಡುತ್ತಿರುತ್ತಾಳೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆಕೆಯ ಮಗ ಉಮೇಶ್ ತಾಯಿಯ ಕೆಲಸಕ್ಕೆ ಸಹಾಯ ಮಾಡಲು ಮುಂದಾಗುತ್ತಾನೆ. ಒಂದು ದಿನ ಇದನ್ನು ಗಮನಿಸಿದ ಪದ್ಮಾಳ ಪತಿ ಶ್ರೀಧರ್ ತನ್ನ ಮಗನಿಗೆ ಕೊಂಚ ಸಿಡುಕುತ್ತಲೆ -"ಇದೇನೂ ಉಮೇಶಾ.. ಒಳ್ಳೆ ಹುಡುಗಿಯರ ತರಹ ಅಮ್ಮ ನಿಗೆ ಯಾವಾಗಲೂ ಸಹಾಯ ಮಾಡ್ತಾ ನಿಂತಿರ್ತಿಯಲ್ಲಾ... ನಿನ್ನ ಓದು ಬರಹಕ್ಕೆ ನಾನೆಷ್ಟು ದುಡ್ಡು ಖರ್ಚು ಮಾಡಿದೆ ಗೊತ್ತಾ.. ಅದು ಬಿಟ್ಟು ಇಲ್ಲಿ ನೀನು ಸಹಾಯ ಮಾಡ್ತಿದ್ದಿಯಲ್ಲಾ.. ನಿನ್ನ...
ಅಮ್ಮನಿಗಾದರೂ ಗೊತ್ತಾಗೋದು ಬೇಡ್ವಾ..?" ಎಂದಾಗ ಉಮೇಶ್ -" ಅಪ್ಪಾ
ಅಮ್ಮಾ ಏನೂ ತನ್ನ ಕೆಲಸಕ್ಕೆ ಸಹಾಯ ಮಾಡು ಬಾ ಅಂತ ಕರೀಲಿಲ್ಲ.. ಯಾಕೋ ಅವಳ ಆರೋಗ್ಯ ಸರಿ ಇಲ್ಲಾ ಅನಿಸ್ತು.. ಅದಕ್ಕೆ ನಾನಾಗೇ ಬಂದು ಸಹಾಯ ಮಾಡ್ತಾ ಇದ್ದೇನೆ.... ಏಕೆಂದರೆ ನನಗೆ ಈಗಿನ ಕಾಲದಲ್ಲಿ ಹುಡುಗ ಹುಡುಗಿ ಇಬ್ಬರೂ ಒಂದೇ ತರಹ ಅಂತ ಹೇಳಿಕೊಟ್ಟಿದ್ದಾರೆ. ಹುಡುಗಿಯರು ಹೊರಗೆ ಕೆಲ್ಸ ಮಾಡ್ಕೊಂಡು ಹೋದಂಗೆ ನಾನೂ ಮನೇಲಿ ಸಹಾಯ ಮಾಡ್ತಿದ್ದೀನಿ ಇದರಲ್ಲಿ ತಪ್ಪೇನಿದೆ? ಹೇಳು " ಎಂದಾಗ ಅಲ್ಲಿದ್ದ ಉಳಿದ ಸದಸ್ಯರೆಲ್ಲರೂ ಜಮಾಯಿಸುತ್ತಾರೆ. ಆಗ ಪದ್ಮಾ ತನ್ನ ಮಗನಿಗೆ -" ನೋಡು.. ಉಮೇಶಾ ಅಪ್ಪನ ಜೊತೆಗೆ ಹಾಗೆಲ್ಲ ವಾದಾ ಮಾಡೋದು ಸರಿ ಅಲ್ಲ... ನೀನು ಹೋಗಿ ನಿನ್ನ ಓದು ಬರಹ ನೋಡಿಕೋ ನಾನು ಹೇಗೋ ಮ್ಯಾನೇಜ್ ಮಾಡ್ಕೋತೀನಿ" ಎನ್ನುತ್ತಾಳೆ. ಆಗ ಅಲ್ಲಿ ಬಂದು ನಿಂತಿದ್ದ ಪದ್ಮಾಳ ಅತ್ತೆ ತಮ್ಮ ಮಗನಿಗೆ -" ಹೌದು.. ಶ್ರೀಧರಾ, ಉಮೇಶ್ ಹೇಳೋದ್ರಲ್ಲಿ ತಪ್ಪೇನಿಲ್ಲ ತಾಯಿ ಕಷ್ಟ ನೋಡಲಾರದೇ ಆಕೆಯ ಸಹಾಯ ಮಾಡುತ್ತಿದ್ದಾರೆ ಎಂದು ಹೇಳುತ್ತ ಸೋಸೆಯ ಕಡೆ ತಿರುಗಿ -" ನಿನ್ನ ಮಗನಿಗೆ ಒಳ್ಳೆಯ ಸಂಸ್ಕಾರ ಕೊಟ್ಟಿದ್ದಿಯ.. ನಾನು ನನ್ನ ಮಗನಿಗೆ ಇದನ್ನು ಹೇಳಿಕೊಡಲಿಲ್ಲ ನೋಡು " ಎಂದಾಗ ಅಲ್ಲಿ ನಿಂತಿದ್ದ ಶ್ರೀಧರ್ ತಲೆ ತಗ್ಗಿಸಿ ಕೊಂಡು ನಿಂತು ಬಿಡುತ್ತಾನೆ .
ಲೇಖಕರು: ಅರವಿಂದ.ಜಿ.ಜೋಷಿ.
ಮೈಸೂರು
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment