ದಿನಕ್ಕೊಂದು ಕಥೆ 04
🌻🌻 *ದಿನಕ್ಕೊಂದು ಕಥೆ*🌻🌻 💐 *ಮೋಸಕ್ಕೆ ಪ್ರತಿಮೋಸ*💐
ಹಸಿರು ಹುಲ್ಲಿನ ಮೈದಾನದಲ್ಲಿ ಕುದುರೆಯೊಂದು ಹುಲ್ಲು ಮೇಯುತ್ತಿತ್ತು. ಹತ್ತಿರದಲ್ಲೇ ಒಂದು ತೋಳ ಆಹಾರವನ್ನರಸುತ್ತಾ ಬಂದು ಆ ಕುದುರೆಯನ್ನು ನೋಡಿತು. ಅದರ ದುಷ್ಟ ಪುಷ್ಟ ಮೈ ನೋಡಿದಾಗ ತೊಳದ ಬಾಯಲ್ಲಿ ನೀರೂರಿತು. ಈ ಕುದುರೆಯ ಮಾಂಸ ತನಗೆ ತಿನ್ನಲು ಸಿಕ್ಕರೆ ಎಷ್ಟು ಚೆನ್ನಾಗಿರುತ್ತದೆ ಅಂದುಕೊಂಡಿತು.
ಆ ಕುದುರೆಯನ್ನು ಮೋಸಮಾಡಿ ಕೊಂದರೆ ಒಂದು ವಾರದ ಸಮೃದ್ಧ ಭೋಜನ ತನ್ನದಾಗುವರೆಂದು ತೋಳ ಯೋಚಿಸಿತು. ಆ ಉದ್ದೇಶದೊಡನೆಯೇ ಕುದುರೆಯ ಸಮೀಪಕ್ಕೆ ಬಂತು.
"ಅಯ್ಯಾ ಅಶ್ವರಾಜ, ನಾನೊಬ್ಬ ಸುಪ್ರಸಿದ್ಧ ವೈದ್ಯ. ಆಸೇತು ಹಿಮಾಚಲದವರೆಗೆ ಸುತ್ತಾಡಿ ಪಶುಗಳ ರೋಗ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿ ವಾಸಿ ಮಾಡಿದ್ದೇನೆ, ನಿನ್ನ ಆರೋಗ್ಯವೂ ಸ್ವಲ್ಪ ಕೆಟ್ಟಿರುವಂತೆ ಕಾಣುತ್ತದೆ. ಅದಕ್ಕಾಗಿ ನಾನೊಮ್ಮೆ ನಿನ್ನನ್ನು ಪರೀಕ್ಷಿಸಿ ಔಷಧಿ ನೀಡುತ್ತೇನೆ, ಅದರಿಂದಾಗಿ ನಿನ್ನ ಕಾಯಿಲೆ ಬೇಗನೆ ಗುಣವಾಗುವುದು" ಅಂದಿತು.
ಕುದುರೆಯು ಸಾಮಾನ್ಯದ್ದೇನಲ್ಲ. ಅದು ತೊಳದ ನಯ ವಂಚನೆಯ ಸುಳಿವು ಹಿಡಿಯಿತು. ಹಾಗೂ ಅದಕ್ಕೆ ಸರಿಯಾದ ಪಾಠವನ್ನು ಕಲಿಸುವೆನೆಂಬ ನಿರ್ಣಯಕ್ಕೆ ಬಂತು.
"ವೈದ್ಯ ಮಹಾಶಯ, ನೀನು ಬಹಳ ಒಳ್ಳೆಯ ಸಮಯಕ್ಕೆ ಬಂದೆ ನಾನೇ ವೈದ್ಯನನ್ನು ಹುಡುಕಿಕೊಂಡು ಹೋಗಬೇಕೆಂದಿದ್ದೆ, ಈಗ ಆ ತೊಂದರೆಯೇ ತಪ್ಪಿಹೋಯಿತು, ನಿನ್ನ ಆಗಮನದಿಂದ ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿದಂತಾಯಿತು. ನನ್ನ ಹಿಂಗಾಲುಗಳು ಬಹಳ ದಿನಗಳಿಂದ ನೋಯುತ್ತವೆ. ಅದನ್ನು ಪರೀಕ್ಷಿಸಿ ಯೋಗ್ಯ ಚಿಕಿತ್ಸೆ ಮಾಡಿದರೆ ಮಹಾ ಉಪಕಾರವಾಗುವುದು ಎಂದು ಹೇಳಿತು.
ಕುದುರೆಯ ಮಾತು ಕೇಳಿ ತನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಿತು ಅಂದುಕೊಂಡಿತು ತೋಳ.
"ಒಳ್ಳೆಯ ಬೇಟೆ ಸಿಕ್ಕಿತು. ಇದನ್ನು ಕೊಂದು ಇದರ ಮಾಂಸವನ್ನು ಹೊಟ್ಟೆತುಂಬಾ ತಿನ್ನಬೇಕು" ಎಂದು ಯೋಚಿಸಿ ಅದರ ಹಿಂಗಾಲುಗಳ ಬಳಿ ಹೋಗಿ ನಿಂತಿತು.
ತೋಳ ತನ್ನ ಹಿಂಗಾಲುಗಳ ಬಳಿ ನಿಂತೊಡನೆ ಕುದುರೆಯ ಕಾಲಿನಿಂದ ಜೋರಾಗಿ ಒದ್ದು ಬಿಟ್ಟಿತು. ಆ ರಭಸಕ್ಕೆ ತೊಳದ ತಲೆ ಒಡೆದು ಹೋಗಿ ಅಷ್ಟು ದೂರ ಬಿದ್ದು ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿತು.
*ನೀತಿ*:
*ನಾವೇ ಬುದ್ಧಿವಂತರು ಅಂದುಕೊಂಡರೆ ನಮಗಿಂತಲೂ ಬುದ್ಧಿವಂತರು ಇರುತ್ತಾರೆ. ನಾವು ಒಂದು ಸಾಲ ಮೋಸಹೋಗೋ ತನಕ ನಮಗೆ ಗೊತ್ತಾಗಲ್ಲ ಅಷ್ಟೆ.*
ಕೃಪೆ:Kishor MN. ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.
Comments
Post a Comment