ದಿನಕ್ಕೊಂದು ಕಥೆ. 100

💐ದಿನಕ್ಕೊಂದು ಕಥೆ💐

👝ಅನಂತರೂಪ👝

ನಮ್ಮ ಜೀವನ ಅಮೂಲ್ಯವಾದುದು. ನಮ್ಮ ಸುತ್ತಮುತ್ತ ವಿಶಾಲವಾದ ವಿಶ್ವ ಹರಡಿಕೊಂಡಿದೆ. ಇಲ್ಲಿ ಅಸಂಖ್ಯ ಜೀವರಾಶಿಗಳು ಬದುಕಿವೆ. ಅವುಗಳ ಮಧ್ಯದಲ್ಲಿ ನಾವು ನಮ್ಮ ನೂರು ವಸಂತಗಳ ಸಂತಸದ ಬದುಕನ್ನು ಕಟ್ಟಿಕೊಳ್ಳಬೇಕು. ಆದರೆ ಸಂತಸದ ಬದುಕಿನ ಸೂತ್ರ ಯಾವುದು ಎಂಬುದೇ ದೊಡ್ಡ ಪ್ರಶ್ನೆ. ಇದು ಇಂದು ನಿನ್ನಿನ ಪ್ರಶ್ನೆಯಲ್ಲ. ಸಾವಿರ ಸಾವಿರ ವರುಷಗಳ ಹಿಂದಿನ ಪುರಾತನ ಪ್ರಶ್ನೆ ಇದು. ಮಾನವ ಜೀವನದ ದುಃಖವನ್ನು ಕಳೆಯುವುದು ಹೇಗೆ ಎನ್ನುವುದೆ ಬುದ್ಧನು ಎದುರಿಸಿದ ಪ್ರಶ್ನೆ. ಈ ಮಾಯಾಸಂಸಾರ ಸಾಗರವನ್ನು ದಾಟುವುದು ಹೇಗೆ? ಎನ್ನುವುದೆ ಶಂಕರಾಚಾರ್ಯರು ಎದುರಿಸಿದ ಮಹಾಪ್ರಶ್ನೆ. ಈ ಜಗತ್ತಿನಲ್ಲಿರುವ ಹಿಂಸೆಯನ್ನು ಕಳೆಯುವುದು ಹೇಗೆ ಎನ್ನುವುದು ಮಹಾವೀರರು ಎದುರಿಸಿದ ಮಹಾಪ್ರಶ್ನೆ. ಈ ಪ್ರಶ್ನೆಗಳ ಪರಿಹಾರಕ್ಕಾಗಿಯೇ ಅವರು ತಮ್ಮ ಬದುಕನ್ನು ಮೀಸಲಾಗಿಟ್ಟರು. ಅವರ ಆ ಪವಿತ್ರವಾದ ಬದುಕೇ ಬೋಧೆಯಾಯಿತು, ಜಗತ್ತಿಗೆ ದಿವ್ಯಸಂದೇಶ ನೀಡಿತು. ದೇವರು ನಮಗೆ ಕರುಣಿಸಿರುವ ಈ ತನು, ಮನ, ಬುದ್ಧಿಯ ಸಾಮರ್ಥ್ಯ‌ ಸಾಮಾನ್ಯವಾದುದಲ್ಲ. ಅದರಲ್ಲೂ ಮನಸ್ಸಿನ ಸಾಮರ್ಥ್ಯ‌ವಂತೂ ಕಲ್ಪನಾತೀತವಾದುದು. ಬುದ್ಧ, ಬಸವ, ಮಹಾವೀರ ಮೊದಲಾದ ಮಹಾತ್ಮರನ್ನು ಜಗದ್ವಂದ್ಯರನ್ನಾಗಿ ಮಾಡಿದ್ದು ಇದೇ ಮನಸ್ಸು. ಈ ಮನಸ್ಸು ಸುಂದರವಾದರೆ ನಮ್ಮ ಬದುಕೂ ಸುಂದರ ಈ ಮನಸ್ಸು ಕುರೂಪವಾದರೆ ನಮ್ಮ ಬದುಕೂ ಕುರೂಪ! ಯಾರ ಮನಸ್ಸು ಸದಾ ನಗುನಗುತಲಿರುವುದೋ ಅವರು ಮಾನವರು. ಯಾರ ಮನಸ್ಸು ಸದಾ ರಾಗ ದ್ವೇಷಗಳಿಂದ ಕೂಡಿಕೊಂಡಿರುತ್ತದೆಯೋ ಅವರು ದಾನವರು. ಹೀಗೆ ನಮ್ಮನ್ನು ದಾನವರನ್ನಾಗಿ ಮಾನವರನ್ನಾಗಿ ಕೊನೆಗೆ ದೇವ ಮಾನವರನ್ನಾಗಿ ಮಾಡುವುದೇ ಈ ಮನಸ್ಸು! ಈ ಮನಸ್ಸನ್ನು ಪರಿಶುದ್ಧವೂ, ಪ್ರಸನ್ನವೂ ಮಾಡುವ ಸುಂದರ ಸಾಧನವೇ ಧ್ಯಾನಯೋಗ. ಪವಿತ್ರವಾದ ಪರವಸ್ತು ಪರಮಾತ್ಮನ ನೆನಹಿನಿಂದ ನಮ್ಮ ಜೀವನವು ಪವಿತ್ರವಾಗುತ್ತದೆ. ಸಂಪೂರ್ಣವಾಗಿ ಅರಳಿದ ಒಂದು ಹೂವು ನಮ್ಮ ಕಣ್ಮನದಲ್ಲಿ ತುಂಬಿಕೊಂಡಾಗ ಆಗುವ ಆನಂದವೇ ಬೇರೆ! ನಮ್ಮ ಮನಸ್ಸೂ ಹೂವಾಗಿ ಅರಳಿ ಪರಿಸರವೆಲ್ಲ ಪರಿಮಳಯುಕ್ತವಾಗುತ್ತದೆ. ಕ್ಷ ಣ ಹೊತ್ತು, ನಮ್ಮ ಬದುಕೇ ಒಂದು ಹೂದೋಟವಾಗುತ್ತದೆ. ಆ ಹೂ''ನ ಬದಲು ಒಂದು ತಿಪ್ಪೆಯು ನಮ್ಮ ಕಣ್ಮನಗಳಲ್ಲಿ ತುಂಬಿದರೆ, ತದ್ವಿರುದ್ಧವಾದ ಅನುಭವ ನಮಗಾಗುತ್ತದೆ. ಆ ತಿಪ್ಪೆಯ ದುರ್ಗಂಧದಿಂದ ನಮ್ಮ ಹೃದಯಕಮಲವೂ ಬಾಡಿ, ಕೊಳೆತು ನಾಶವಾಗುತ್ತದೆ. ಕ್ಷ ಣಕಾಲ ನಾವು ನರಕದಲ್ಲಿದ್ದ ಅನುಭವವಾಗುತ್ತದೆ. ಧ್ಯಾನ ಯೋಗದ ಮೂಲಕ ನಾವು ನಿರಂತರ ಆ ಪರವಸ್ತು ಪರಮಾತ್ಮನ ನೆನೆದರೆ ನಮ್ಮ ಜೀವನವೇ ಸ್ವರ್ಗಸದೃಶವಾಗುವುದರಲ್ಲಿ ಸಂದೇಹವೇನಿದೆ? ಆ ಪರಮಾತ್ಮನಿಗೆ ಅಚಿಂತ್ಯ, ಅವ್ಯಕ್ತ, ಅನಂತರೂಪ ಎಂದು ವರ್ಣಿಸಲಾಗಿದೆ. ಅಚಿಂತ್ಯವೆಂದರೆ, ಆ ಪರಮಾತ್ಮನು ನಮ್ಮ ಮತಿಗೆ ಅತೀತನು; ನಮ್ಮ ತರ್ಕವಿತರ್ಕ, ವಿಚಾರ ಜಾಲದಾಚೆ ಇರುವವನು. ಅವ್ಯಕ್ತನೆಂದರೆ, ಆ ದೇವನು ನಮ್ಮ ಕಣ್ಣಿಗೆ ಕಾಣುವವನಲ್ಲ. ಬಸವಣ್ಣನರು ಹೇಳುವಂತೆ ಉದಕದೊಳಗೆ ಬಯಚಿಟ್ಟ ಬಯಕೆಯ ಕಿಚ್ಚಿನಂತೆ ಅವನಿರುವನು. ಕಾಯ್ದ ನೀರಿನಲ್ಲಿರುವ ಕಾವು ಕಣ್ಣಿಗೆ ಕಾಣುವುದಿಲ್ಲ. ನೀರು ಮಾತ್ರ ಕಣ್ಣಿಗೆ ಕಾಣುತ್ತದೆ. ಹಾಗೇ ಈ ಪ್ರಪಂಚವು ಕಾಣುತ್ತದೆ. ಆದರೆ ಈ ಪ್ರಪಂಚದಲ್ಲಿರುವ ಪರಮಾತ್ಮನು ಕಣ್ಣಿಗೆ ಕಾಣುವುದಿಲ್ಲ.

ಆಧಾರ : ಕೈವಲ್ಯ ಕುಸುಮ * ಶ್ರೀ ಸಿದ್ದೇಶ್ವರ ಸ್ವಾಮೀಜಿ.           ಸಂಗ್ರಹ :ವೀರೇಶ್ ಅರಸಿಕೆರೆ
🔸🔸🔸🔸🔸🔸🔸🔸🔸

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059