ದಿನಕ್ಕೊಂದು ಕಥೆ 99

🌻🌻 *ಇದೊಂದು ಸ್ಪೂರ್ತಿದಾಯಕ ಕಥೆ:*🌻🌻

ಹೇಗೆ ಸೊಷಿಯಲ್‌ ಮಿಡಿಯಾದಲ್ಲಿ ಹೆಚ್ಚು ನೆಗೆಟಿವ್ ವಿಚಾರಗಳು ಹರಿದಾಡುತ್ತವೆಯೋ ಮನಸ್ಸಿನಲ್ಲಿ ಕೂಡಾ ಹಾಗೆಯೇ. ಆದರೆ ಆಗೀಗ ಬಂದು ಹೋಗುವ ಪಾಸಿಟಿವ್ ವಿಚಾರಗಳು ಅದೆಷ್ಟು ಬಲವನ್ನು ಕೊಡುತ್ತವೆ ಅಲ್ಲವೇ? ಫ್ರಾನ್ಸಿನ ಈ ಮುಸ್ಲಿಂ ಮಹಿಳೆ ಜೀವನದಲ್ಲಿ ಏನಾದರೂ ಮಾಡಿ ತೋರಿಸಬೇಕು ಎನ್ನುವವರಿಗೆ ಅದೆಷ್ಟು ಪ್ರೇರಣೆ! ಇವಳ ಹೆಸರು Najat Vallaud-Belkacem. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ಎಲ್ಲಾ ಹೌದು, ವಿಶೇಷ ಏನು? ಅದೇಕೆ ಪ್ರೇರಣೆ?

ಇವಳ ತಂದೆ ತಾಯಿ ಆಗರ್ಭ ಶ್ರೀಮಂತರಲ್ಲ, ಕಡು ಬಡವರು. ತಂದೆ ಕನ್ಸ್ಟ್ರಕ್ಷನ್ ಕೆಲಸದ ಒಬ್ಬ ಕೆಲಸಗಾರ. ಮನೆಗೆ ನೆರವಾಗಲು ನಜತ್ ಚಿಕ್ಕಂದಿನಿಂದಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದಳಂತೆ. ನಂತರ ಕುಟುಂಬ ಹೊಟ್ಟೆ ಪಾಡಿಗೆ ಫ್ರಾನ್ಸಿಗೆ ವಲಸೆ ಬಂದಾಗ ಆಕೆಗೆ ಇನ್ನೂ ಚಿಕ್ಕ ವಯಸ್ಸು. ಅದು ಎಷ್ಟು ಪರಿಶ್ರಮದಿಂದ ಕಲಿತಳೋ ಅವಳಿಗೇ ಗೊತ್ತು. ಯಾವುದೇ ಸಹಾಯವಿಲ್ಲದೇ ಸ್ವಪ್ರಯತ್ನದಿಂದ ಫ್ರೆಂಚ್ ಕಲಿತು, ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕಲ್ ಸೈನ್ಸ್’ನಿಂದ ಪದವಿ ಪಡೆದಳು. ನಂತರದಲ್ಲಿ ಸೋಷಿಯಲಿಸ್ಟ್ ಪಾರ್ಟಿಗೆ ಸೇರಿ ತನ್ನ ರಾಜಕೀಯ ಜೀವನ ಶುರು ಮಾಡಿದಳು. ಇಂದು ಅವಳಿಗೆ ಬರೀ ಮೂವತ್ತೆಂಟು ವರ್ಷ, ಅವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ! ಅವಳ ಜಾತಿ, ಬಡತನ, ಶೋಷಣೆ ಎಷ್ಟು ಎದುರಾದರೂ ಸೋಲಲಿಲ್ಲ. ಅವಳ ಒಂದು ಮಾತು ಬಹಳ ಚೆನ್ನಾಗಿದೆ. ನಜತ್ ಹೇಳುತ್ತಾರೆ, "ಯುವಜನತೆ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಭವಿಷ್ಯದ ಬಗ್ಗೆ ಚಿಂತೆ ಮಾಡುವುದಕ್ಕಿಂತ, ಅದರ ಭಾಗವಾಗಿ ಬದಲಾಯಿಸಬೇಕು. ಸುಮ್ಮನೆ ವೀಕ್ಷಕನಾಗಿ ಹತಾಷೆ ಪಡುವುದರಲ್ಲಿ ಅರ್ಥವಿಲ್ಲ".

ಕುರಿ ಕಾಯುವವಳು ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ - ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆ.  Najat Vallaud-Belkacem ನಮಗೆಲ್ಲರಿಗೂ ಮಾದರಿ
        *-ವಿಕ್ರಮ್ ಜೋಷಿ*. ಸಂಗ್ರಹ: ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059