ದಿನಕ್ಕೊಂದು ಕಥೆ. 196

💐💐 ದಿನಕ್ಕೊಂದು  ಕಥೆ💐💐
          😌ಮುಚ್ಚಿಟ್ಟ ತಪ್ಪು😌

ಕಿಟ್ಟಣ್ಣ ಮತ್ತು ಅವನ ತಂಗಿ ಪುಟ್ಟಕ್ಕ ಇಬ್ಬರೂ ರಜೆಗೆಂದು ಅಜ್ಜಿಯ ಮನೆಗೆ ಹೋಗಿದ್ದರು. ಅಜ್ಜಿಯ ಮನೆ ಇದ್ದದ್ದು ಒಂದು.  ಹಳ್ಳಿಯಲ್ಲಿ. ಆ ಮನೆಯೊ ಭಾರಿ ಮನೆ. ಅಜ್ಜಿಗೆ ಮೊಮ್ಮಕ್ಕಳೂ ಬಂದದ್ದು ಬಹಳ ಸಂತೋಷ. ಶಾಲೆಯ ರಜೆ ಮುಗಿಯುವವರೆಗೆ ಮಕ್ಕಳು ಅಲ್ಲಿಯೇ ಇರುತ್ತಾರೆ. ಮಕ್ಕಳಿಗೂ ಪಟ್ಟಣದ ಬಿಗಿ ವಾತಾವರಣದಿಂದ ಬಿಡುಗಡೆ ದೊರೆತು ಹಳ್ಳಿಯ ಶುದ್ಧ ಪರಿಸರ ದೊರೆಯುತ್ತದೆ. ಮಕ್ಕಳು ಅಜ್ಜಿ ಮಾಡಿದ ರುಚಿ ರುಚಿ ಅಡುಗೆ ಊಟಮಾಡುತ್ತ, ಮನಬಂದಾಗ, ಮನಬಂದಲ್ಲಿ ತಿರುಗಾಡುತ್ತ, ಶಾಲೆಯ, ಮನೆಗೆಲಸದ ಯಾವ ಒತ್ತಡವೂ ಇಲ್ಲದೇ ಹಾಯಾಗಿದ್ದರು.

ಒಂದು ದಿನ ಪಕ್ಕದ ಮನೆಯ ಹುಡುಗ ಮಂಜ ಕಿಟ್ಟಣ್ಣನಿಗೊಂದು ಬಿದಿರಿನ ಬಿಲ್ಲು ಮತ್ತಷ್ಟು ಬಾಣಗಳನ್ನು ಮಾಡಿಕೊಟ್ಟ. ಅದು ದಪ್ಪವಾದ, ಮಜಬೂತಾದ ಬಿಲ್ಲು. ಬಿದಿರಿನ ಬಾಣಗಳೂ ಅಷ್ಟೇ. ಅವುಗಳನ್ನು ಕಲ್ಲಿಗೆ ಉಜ್ಜಿ ಉಜ್ಜಿ ತುದಿಗಳನ್ನು ಚೂಪಾಗಿ ಮಾಡಿದ್ದ.

ಅವುಗಳನ್ನು ಸರಿಯಾಗಿ ಬಳಸಬೇಕೆಂದು ಎಚ್ಚರಿಕೆಯನ್ನೂ ಕೊಟ್ಟಿದ್ದ. ಅವು ಯಾರಿಗಾದರೂ ತಗುಲಿದರೆ ಅಪಾಯ ಕಟ್ಟಿಟ್ಟಿದ್ದು ಎಂದೂ ಹೇಳಿದ್ದ. ಕಿಟ್ಟಣ್ಣನಿಗೆ ಉತ್ಸಾಹ ಹೆಚ್ಚು. ಬಿಲ್ಲು ಬಾಣಗಳನ್ನು ಸದಾ ಇಟ್ಟುಕೊಂಡೇ ತಿರುಗಾಡುತ್ತಿದ್ದ. ಹಾರಾಡುವ ಪಕ್ಷಿಗಳ ಮೇಲೆ ಪ್ರಯೋಗ ಮಾಡಿ ನೋಡಿದ. ಇವನ ಗುರಿ ಸರಿಯಾಗಲೇ ಇಲ್ಲ. ಹೀಗೊಂದು ದಿನ ಮನೆಗೆ ಬರುತ್ತಿದ್ದಾಗ ಮನೆಯ ಹಿತ್ತಲಲ್ಲಿ ಅಜ್ಜಿ ಸಾಕಿದ್ದ ಬಾತುಕೋಳಿ ಕಾಣಿಸಿತು.

ಹೇಗಿದ್ದರೂ ತನ್ನ ಗುರಿ ಸರಿಯಾಗಿಲ್ಲ, ನೋಡಿಬಿಡೋಣ ಎಂದು ಬಾಣ ಹೂಡಿ ಬಿಲ್ಲಿನ ದಾರ ಎಳೆದು ಬಿಟ್ಟ. ಇವನ ದುರ್ದೈವ, ಗುರಿ ಸರಿಯಾಗಿಯೇ ಬಿತ್ತು. ಬಾಣ ಬಾತುಕೋಳಿಯ ಕತ್ತಿಗೇ ನೆಟ್ಟುಬಿಟ್ಟಿತು. ಕ್ಷಣಕಾಲ ಒದ್ದಾಡಿ ಬಾತುಕೋಳಿ ಸತ್ತೇ ಹೋಯಿತು. ಕಿಟ್ಟಣ್ಣನಿಗೆ ಭಯ ಮತ್ತು ಗಾಬರಿ. ಸತ್ತ ಬಾತುಕೋಳಿಯನ್ನು ಸರಸರನೇ ಎಳೆದುಕೊಂಡು ಹಿತ್ತಲಿನಲ್ಲಿ ಕೂಡಿಹಾಕಿದ್ದ ಉರುವಲು ಕಟ್ಟಿಗೆಯ ರಾಶಿಯ ಹಿಂದೆ ಹಾಕಿಬಿಟ್ಟು ಪಾರಾದೆ ಎಂದು ತಿರುಗಿ ನೋಡುವಷ್ಟರಲ್ಲಿ ಅವನ ತಂಗಿ ಪುಟ್ಟಕ್ಕ ಅವನನ್ನೇ ಅರಳಿದ ಕಣ್ಣುಗಳಿಂದ ನೋಡುತ್ತ ನಿಂತದ್ದು ಕಂಡಿತು. ಆಕೆಯಡೆಗೆ ಹೋಗಿ, ಪುಟ್ಟಕ್ಕ, ಅಜ್ಜಿಯ ಮುಂದೆ ಹೇಳಬೇಡವೇ ಎಂದು ಅಂಗಲಾಚಿದ. ಆಕೆಯೂ ದೊಡ್ಡ ಮನಸ್ಸು ಮಾಡಿ ಆಗಲಪ್ಪ ಎಂದಳು.

ಮರುದಿನ ಬಾವಿಯಿಂದ ನೀರು ತರುವ ಕೆಲಸ. ಅಜ್ಜಿ ಕೂಗಿದಳು, `ಪುಟ್ಟಕ್ಕ, ಬಿಂದಿಗೆ ತೆಗೆದುಕೊಂಡು ಬಾ, ನೀರು ತರೋಣ`, ಪುಟ್ಟಕ್ಕ, `ಅಜ್ಜೀ ಈ ಕೆಲಸ ಕಿಟ್ಟಣ್ಣನಿಗೆ ಬಲು ಇಷ್ಟವಂತೆ. ಅವನೇ ಬಾವಿಗೆ ಬರುತ್ತಾನಂತೆ` ಎಂದು ಗಟ್ಟಿಯಾಗಿ ಕೂಗಿ `ಅಲ್ಲವೇನೋ ಕಿಟ್ಟಣ್ಣ, ಬಾತುಕೋಳಿ ನೆನಪಿದೆಯೇ` ಎಂದು ಪಿಸುಗುಟ್ಟಿದಳು. ಕಿಟ್ಟಣ್ಣ ಮುಖ ಗಂಟುಹಾಕಿಕೊಂಡು ಬಿಂದಿಗೆ ಹಿಡಿದು ನಡೆದ. ಮರುದಿನ ಅಜ್ಜಿ ಪುಟ್ಟಕ್ಕನನ್ನು ಪಾತ್ರೆ ತೊಳೆಯಲು ಕರೆದಳು. ಮತ್ತೆ ಪುಟ್ಟಕ್ಕ, `ಕಿಟ್ಟಣ್ಣ, ನಿನಗೆ ಪಾತ್ರೆ ತೊಳೆಯುವುದು ಬಹಳ ಖುಷಿಯ ಕೆಲಸ ತಾನೇ` ಎಂದು ಜೋರಾಗಿ ಕೇಳಿ ಮೆಲ್ಲಗೆ, `ಬಾತುಕೋಳಿ` ಎಂದಳು.

ಕಿಟ್ಟಣ್ಣ ಪಾತ್ರೆ ತಿಕ್ಕಿದ. ಮುಂದೆರಡು ದಿನ ಹೀಗೆಯೇ ಆಯಿತು. ಕಿಟ್ಟಣ್ಣನಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ, ನೇರವಾಗಿ ಹೋಗಿ ಅಜ್ಜಿಯ ಮುಂದೆ ನಿಂತು ಹೇಳಿದ, `ಅಜ್ಜಿ, ನಾನು ಬಾಣ ಬಿಟ್ಟಾಗ ಅದು ಬಾತುಕೋಳಿಗೆ ನಾಟಿ ಸತ್ತುಹೋಯಿತು. ನಿನಗೆ ಹೇಳಲು ಭಯವಾಯಿತು` ಎಂದ. ಅಜ್ಜಿ ಕಿಟ್ಟಣ್ಣನ ತಲೆ ನೆವರಿಸಿ, `ಪುಟ್ಟಾ, ನಾನು ಅದು ನಡೆದಾಗ ಅಡುಗೆ ಮನೆ ಕಿಟಕಿಯ ಹತ್ತಿರವೇ ಇದ್ದೆ. ನೀನು ಮಾಡಿದ್ದನ್ನೆಲ್ಲ ನೋಡಿದೆ.

ಹಾಗೆ ಕಳ್ಳತನದಲ್ಲಿ ಕೆಲಸ ಮಾಡಿದ್ದಕ್ಕೆ ಪುಟ್ಟಕ್ಕ ನಿನ್ನನ್ನು ಹೆದರಿಸಿ, ಹೆದರಿಸಿ ಕೆಲಸ ಮಾಡಿಸಿದ್ದೂ ಗೊತ್ತು. ಯಾಕಪ್ಪಾ ಅವತ್ತೇ ಬಂದು ಹೇಳಿ ಮನಸ್ಸು ಹಗುರಮಾಡಿಕೊಳ್ಳಲಿಲ್ಲ` ಇನ್ನು ಮೇಲೆ ಪುಟ್ಟಕ್ಕನಿಗೆ ಹೆದರುವ ಕಾರಣವಿಲ್ಲ ಎಂದಳು. ಕಿಟ್ಟಣ್ಣನಿಗೆ ಮನಸ್ಸು ಹಗುರವಾಯಿತು. ತಪ್ಪನ್ನು ಮುಚ್ಚಿಟ್ಟುಕೊಂಡಷ್ಟೂ ಅದು ನಮ್ಮನ್ನೇ ತಿನ್ನುತ್ತದೆ. ತಪ್ಪು ಆಕಸ್ಮಿಕವಾಗಿ ಆಗಿರಬಹುದು ಇಲ್ಲವೇ ಉದ್ದೇಶಪೂರಕವಾಗಿಯೇ ಆಗಿರಬಹುದು. ಆದರೆ, ಪಶ್ಚಾತ್ತಾಪಪಟ್ಟು ಅದನ್ನು ಹೊರಹಾಕಿದರೆ ಮನದ ದುಗುಡ ದೂರವಾಗುತ್ತದೆ. ಮತ್ತೊಬ್ಬರಿಗೆ ನಿಮ್ಮ ಭಯದ ದುರುಪಯೋಗ ತೆಗೆದುಕೊಳ್ಳಲು ಆಗುವುದಿಲ್ಲ  ಅಲ್ಲವೇ ಸ್ನೇಹಿತರೆ ಯೋಚಿಸುಂತಹ ಮಾತಿನೊಂದಿಗೆ
ನಿಮ್ಮ ಸಹೋದರಿ
ಕೃಪೆ:ಶಾರದಾನಾಗೇಶ್.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059