ದಿನಕ್ಕೊಂದು ಕಥೆ. 223
🌻🌻 *ದಿನಕ್ಕೊಂದು ಕಥೆ*🌻🌻 *ಹಣೆ ಬರಹ*
ಜಪಾನಿನ ಒಂದು ಮುಖ್ಯವಾದ ಯುದ್ಧದಲ್ಲಿ ತನ್ನ ಸೈನ್ಯವು ಬಹುತೇಕ ನಾಶವಾಗಿದ್ದರೂ, ಸೈನಿಕರು ದಣಿದಿದ್ದರೂ ಸೈನ್ಯಾಧಿಕಾರಿಗೆ ಗೆಲುವು ಸಾಧ್ಯವೆಂಬ ಭರವಸೆಯಿತ್ತು. ಆದರೆ ಸೈನಿಕರು ಸಂಶಯದಲ್ಲಿದ್ದರು. ಪುನಃ ಯುದ್ಧವನ್ನು ಮುಂದುವರೆಸುವುದೆಂದು ಸೈನ್ಯಾಧಿಕಾರಿ ನಿರ್ಧರಿಸಿದ.
ಸೈನ್ಯವು ಯುದ್ಧಕ್ಕೆ ತೆರಳುತ್ತಿದ್ದಾಗ ದಾರಿಯಲ್ಲಿ ಒಂದು ದೇವಾಲಯದ ಬಳಿ ಪ್ರಾರ್ಥನೆಗಾಗಿ ನಿಂತಿತು. ತನ್ನ ಸೈನಿಕರೊಂದಿಗೆ ಪ್ರಾರ್ಥನೆ ಮುಗಿಸಿದ ಬಳಿಕ ಸೈನ್ಯಾಧಿಕಾರಿಯು ಕಿಸೆಯಿಂದ ಒಂದು ನಾಣ್ಯವನ್ನು ಹೊರ ತೆಗೆದು, “ಸೈನಿಕರೇ, ಈ ನಾಣ್ಯವನ್ನು ನಾನೀಗ ಚಿಮ್ಮಿಸುತ್ತೇನೆ. ಅದರ ಮುಂಭಾಗ ಕಂಡರೆ, ನಾವು ಗೆಲ್ಲುತ್ತೇವೆ. ಹಿಂಭಾಗ ಕಂಡರೆ ನಾವು ಸೋಲುತ್ತೇವೆ.” ಎಂದು ಹೇಳಿ ನಾಣ್ಯವನ್ನು ಮೇಲಕ್ಕೆ ಚಿಮ್ಮಿಸಿದನು.
ಎಲ್ಲರೂ ಕುತೂಹಲದಿಂದ ಅದು ಕೆಳಗೆ ಬೀಳುವುದನ್ನೇ ಕಾಯುತ್ತಿದ್ದರು. ನಾಣ್ಯ, ಮುಂಭಾಗ ಕಾಣುವಂತೆ ಕೆಳಗೆ ಬಿತ್ತು. ಸೈನಿಕರು ತಮ್ಮ ಎದೆಯಲ್ಲಿ ಭರವಸೆಯನ್ನು ತುಂಬಿಕೊಂಡು ವೀರಾವೇಶದಿಂದ ಶತ್ರುಗಳೊಂದಿಗೆ ಕಾದಿದರು. ಕಡೆಗೆ ಯುದ್ಧದಲ್ಲಿ ಗೆಲುವು ಸಾಧಿಸಿದರು.
“ವಿಧಿಯನ್ನು ಯಾರೂ ಬದಲಾಯಿಸಲಾಗುವುದಿಲ್ಲ.” ಎಂದು ಒಬ್ಬ ಸೈನಿಕ ಸೈನ್ಯಾಧಿಕಾರಿಗೆ ಹೇಳಿದನು.
“ನಿಜವಾಗಿಯೂ”, ಎನ್ನುತ್ತಾ ಸೈನ್ಯಾಧಿಕಾರಿಯು ನಾಣ್ಯವನ್ನು ಎಲ್ಲರಿಗೂ ತೋರಿಸಿದನು. ಅದರ ಎರಡೂ ಮುಖಗಳು ಒಂದೇ ರೀತಿ ಇದ್ದವು!
ಕೃಪೆ :ಕಿಶೋರ್. ಸಂಗ್ರಹ :ವೀರೇಶ್ ಅರಸಿಕೆರೆ .ದಾವಣಗೆರೆ.
Comments
Post a Comment