ದಿನಕ್ಕೊಂದು ಕಥೆ. 228
🌻🌻 *ದಿನಕ್ಕೊಂದು ಕಥೆ*🌻🌻 *ಕಪ್ಪೆಗಳು ಸರ್ ನಾವು ಕಪ್ಪೆಗಳು*
ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ: "ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು... ನೀವು ಅದನ್ನು ಕೊಳ್ಳುವಿರಾ?" ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಅಘಾತ! ತನ್ನನ್ನು ತಾನೇ ಸವರಿಸಿಕೊಂಡು "ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ?" ಎಂದು ಆ ರೈತನನ್ನು ಕೇಳಲು, ರೈತನು ಹೀಗೆ ಉತ್ತರಿಸಿದನು: "ನನ್ನ ಮನೆಯ ಹತ್ತಿರ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ... ಅವು ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ/ನೆಮ್ಮದಿ ಹಾಳಾಗಿದೆ.., ಅದಕ್ಕೆ ನಾ ಅವುಗಳನ್ನ ಹಿಡಿದು ತಂದು ನಿಮಗೆ ಮಾರುವೆ, ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ..." ಎಂದನು. ಉಪಹಾರ ಗೃಹದ ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ೫೦೦ ರ ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು. ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರುಳಿದನು.
ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ ರೈತನ ಮುಖ ತೀರಾ ಸೆಪ್ಪಗಾಗಿತ್ತು. ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ ಅವನ ಕೈಯಲ್ಲಿ ಕೇವಲ ಎರಡು "ಸೊಣಕಲು" ಕಪ್ಪೆಗಳು ಮಾತ್ರ ಇದ್ದವು. ಆ ಉಪಹಾರ ಗೃಹದ ಮಾಲೀಕನು ಕೂತುಹಲದಿಂದ "ಎನಪ್ಪಾ, ಏನೋ ರಾಶಿ-ರಾಶಿ ಕಪ್ಪೆಗಳನ್ನು ತರುತ್ತೇನೆ ಅಂದೆಯೆಲ್ಲಾ... ಎಲ್ಲಿ ನಿನ್ನ ಕಪ್ಪೆಗಳು..?" ಅಂತ ಕೇಳಲು, ರೈತನು "ಇಲ್ಲ ಸ್ವಾಮಿ, ನನ್ನ ಲೆಕ್ಕಚಾರ ತಪ್ಪಾಗಿತ್ತು, ಕೇವಲ ಎರಡು ಕಪ್ಪೆಯ ಶಬ್ದವನ್ನು ನಾನು ನೂರಾರು ಕಪ್ಪೆಗೆ ಹೋಲಿಸಿಬಿಟ್ಟಿದ್ದೆ.." ಅಂದು ಪೆಚ್ಚಾಗಿ ಹೇಳಿದನು....!
ನಿಮ್ಮ ಬಗ್ಗೆ ಹಲವು ಜನರು ಕೊಂಕು ಮಾತು ಅಥವಾ ನಿಂದನೆ/ಜರಿಯುವ ಕೆಲಸ ಮಾಡುತ್ತಿದ್ದರೆ, ಬಹುಶ: ಮೇಲಿನಂತೆ ಅವರು ಕೇವಲ "ಕೆಲವು" ಒಟಗುಟ್ಟುವ ಕಪ್ಪೆಗಳಾಗಿರಬಹುದು...!!!. ನಿಮ್ಮಲ್ಲಿರುವ ಕಷ್ಟಗಳನ್ನು ನೀವು ಸ್ವತ: ಹೋಲಿಕೆ ಮಾಡತೊಡಗಿದರೆ ಅದು ಒಂದು ಕತ್ತಲೆ ಕೋಣೆಯ ಮಧ್ಯದಲ್ಲಿ ಏನು ಕಾಣದೆ ನಿಂತಿರುವಂತೆ ಭಾಸವಾಗಬಹುದು... ಕತ್ತಲು ಕೇವಲ ಆ ಕೋಣೆಯ ಭಾಗವಾದರೂ ಆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಆದರ ಸ್ಪಷ್ಠತೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಮ್ಮ ಮನದ ಯೋಚನೆ ನಮ್ಮನ್ನು ನಿಂದಿಸುವ ಆ ನಿಂದಕರ ಮೇಲೆ ಇರುತ್ತದೆ. ನಾವು ಮಾನಸಿಕವಾಗಿ ಅದರಲ್ಲಿ ಎಷ್ಟು ಬೆರೆತುಹೋಗಿರುತ್ತೇವೆ ಅಂದರೆ ಅದು ನಮ್ಮ ದಿನನಿತ್ಯದ ಕಾರ್ಯ, ಕೆಲವೊಮ್ಮೆ ನಮ್ಮ ನಿದ್ದೆಯನ್ನು ಸಹ ಬಿಡುವುದಿಲ್ಲ!!!. ಕೇವಲ ಕತ್ತಲಲ್ಲಿದ್ದೇ ಎಲ್ಲಾ ವಿರ್ಮರ್ಶಿಸುವ ನಾವು ಆ ಕತ್ತಲಿನಿಂದಾಚೆ ಬೆಳಕಿನ ಅಸ್ತಿತ್ವ ಇದೆ ಎಂದು ಮರೆತುಬಿಡುತ್ತೇವಲ್ಲಾ, ಎಂತಹ ವಿಪರ್ಯಾಸ ನೋಡಿ!!. ಕತ್ತಲಲ್ಲಿ ಇಜ್ಜಲಿಗೆ ಹುಡುಕಾಡುವ ನಾವು ನಮ್ಮ ನಿಂದಕರ ವಿಷಯದಲ್ಲೂ ಹಾಗೇ ಮಾಡದೇ ಬೆಳಕಿನ ಹಾಗೆ ನಿಜ ವಿಷಯ ಅರಿತು ಅದಕ್ಕೆಲ್ಲಾ ಕಿವಿಗೊಡದಿದ್ದರೆ ಎಷ್ಟು ಚೆನ್ನ ಅಲ್ಲವೇ..?
ಕೃಪೆ: ಅಂತರ್ಜಾಲ. ಸಂಗ್ರಹ :ವೀರೇಶ್ ಅರಸಿಕೆರೆ .ದಾವಣಗೆರೆ.
Comments
Post a Comment