ದಿನಕ್ಕೊಂದು ಕಥೆ. 260

*🌻ದಿನಕ್ಕೊಂದು ಕಥೆ🌻                                                  *ಆಕರ್ಷಣೆಗಳ ಸೆಳೆತ*

ಇದು ಬಹುಸುಂದರವಾದ ಜಾನಪದ ಕಥೆ. ಒಂದು ನಗರದಲ್ಲಿ ಆರು ಜನ ತರುಣ ಸ್ನೇಹಿತರಿದ್ದರು. ಅವರೆಲ್ಲ ಸೇರಿ ಒಂದು ವ್ಯಾಪಾರ ಮಾಡಬೇಕೆಂದು ಚಿಂತಿಸು­ತ್ತಿದ್ದರು. ಆದರೆ, ತಮ್ಮ ನಗರದಲ್ಲಿ ಆ ವ್ಯವಹಾರಕ್ಕೆ ಅವಕಾಶವಿದೆಯೇ ಎಂದು ಮಾರ್ಗದರ್ಶನ ಪಡೆಯಲು ಹಿರಿಯ­ರೊಬ್ಬರ ಬಳಿಗೆ ಹೋದರು. ಅವರು, ‘ನಿಮಗೆ ಈ ನಗರಕ್ಕಿಂತ ಇಲ್ಲಿಂದ ಐವತ್ತು ಮೈಲಿ ದೂರದಲ್ಲಿರುವ ಇನ್ನೊಂದು ನಗರ ವ್ಯಾಪಾರಕ್ಕೆ ತುಂಬ ಸೂಕ್ತ. ಅಲ್ಲಿಗೆ ಹೋಗಿ ಯಶಸ್ಸು ಪಡೆಯಿರಿ. ಆದರೆ, ಒಂದು ಎಚ್ಚರಿಕೆ. ಆ ನಗರಕ್ಕೆ ಹೋಗುವ ದಾರಿಯಲ್ಲಿ ಒಂದು ಕಾಡು ಇದೆ. ಅಲ್ಲಿ ಯಕ್ಷಿಣಿಯರಿದ್ದಾರೆ. ಅವರು ನಿಮ್ಮನ್ನು ಆಕರ್ಷಣೆ ಮಾಡಲು ಪ್ರಯತ್ನಿಸುತ್ತಾರೆ. ನೀವು ಅವುಗಳನ್ನು ಮೀರದಿದ್ದರೆ ಬದುಕುವುದೇ ಕಷ್ಟ’ ಎಂದರು.

ತರುಣರ ನಾಯಕ ಸ್ನೇಹಿತರನ್ನು ಕುರಿತು ಈ ವಿಷಯ ಕೇಳಿದಾಗ ಅವರು, ‘ನಮಗೇನೂ ಚಿಂತೆಯಿಲ್ಲ, ಆಕರ್ಷಣೆಗೆ ನಾವು ಒಳಗಾಗದಿದ್ದರೆ ಸಾಕು’ ಎಂದರು. ನಾಯಕ ಅವರನ್ನೆಲ್ಲ ಕರೆದುಕೊಂಡು ಹೊರಟ. ಕಾಡಿನಲ್ಲಿ ನಡೆಯುತ್ತಿರು­ವಾಗ ಸಂಜೆಯಾಯಿತು. ನಾಯಕ ಹೇಳಿದ, ‘ಇದೇ ಯಕ್ಷಿಣಿಯರು ಇರುವ ಸ್ಥಳ. ಹಗಲಾದರೆ ಅವರ ಶಕ್ತಿ ನಡೆಯುವುದಿಲ್ಲ. ಈ ರಾತ್ರಿ ನಾವು ಏಕಮನಸ್ಕರಾಗಿ ನಡೆಯುತ್ತ ಯಾವ ಆಕರ್ಷಣೆಗಳಿಗೂ ಸಿಕ್ಕುವುದು ಬೇಡ’. ಅವರೂ ಒಪ್ಪಿ ನಡೆಯತೊಡಗಿದರು.  ಸ್ವಲ್ಪ ಮುಂದೆ ಸಾಗಿದಾಗ ರಸ್ತೆಯ ಬದಿಯಲ್ಲಿ ಒಂದು ಮನೆ ಕಂಡಿತು. ಅದರ ಮುಂದೆ ಅತ್ಯಂತ ಸುಂದರಿಯ­ರಾದ ನಾಲ್ಕು ತರುಣಿಯರು ನಿಂತಿದ್ದರು. ‘ಬನ್ನಿ, ಸ್ವಲ್ಪ ದಣಿವಾರಿಸಿಕೊಂಡು, ನಮ್ಮ ಆತಿಥ್ಯ ಸ್ವೀಕರಿಸಿ ಹೋಗಿ’ ಎಂದು ವೈಯಾರದಿಂದ ಕರೆದರು. ಅವರ ರೂಪದಿಂದ ಆಕರ್ಷಿತನಾದ ಒಬ್ಬ ತರುಣ ಅಲ್ಲಿಯೇ ನಿಂತ. ನಾಯಕನಿಗೆ ಹೇಳಿದ, ‘ನೀವು ಮುಂದೆ ನಡೆಯಿರಿ. ನಾನು ಸ್ವಲ್ಪ ವಿಶ್ರಾಂತಿ ಪಡೆದು ಬರುತ್ತೇನೆ’. ಉಳಿದವರು ಮುಂದೆ ಸಾಗಿದರು. ಅಲ್ಲಿಯೇ ನಿಂತವನನ್ನು ಯಕ್ಷಿಣಿಯರು ತಿಂದು ಮುಗಿಸಿದರು.

ಪ್ರವಾಸ ನಡೆಸಿದ ತರುಣರಿಗೆ ಮುಂದೆ ಅರಮನೆಯಂಥ ವಿಸ್ತಾರವಾದ ಕಟ್ಟಡ ಕಂಡಿತು. ಅಲ್ಲಿ ನೂರಾರು ಜನ ಸೇರಿದ್ದಾರೆ. ಅಲ್ಲಿ ಇಬ್ಬರು ಸುಂದರ ತರುಣಿಯರು ಇಂಪಾಗಿ ಹಾಡುತ್ತಿ­ದ್ದಾರೆ. ಅವಳ ಹಾಡಿನೊಂದಿಗೆ ಹೃದಯ ತಣಿಸುವ ವಾದ್ಯಗೋಷ್ಠಿ! ಮತ್ತೊಬ್ಬ ತರುಣ ಸಂಗೀತವನ್ನು ಕೇಳಲು ಅಲ್ಲಿಯೇ ಉಳಿದ. ನಂತರ ಯಕ್ಷಿಣಿಯರಿಗೆ ಬಲಿಯಾದ. ಕಾಡಿನಲ್ಲಿ ನಡೆದ ಇವರಿಗೆ ಹಸಿವೆಯಾದದ್ದು ಸಹಜ. ಆಗ ಅಲ್ಲೊಂದು ತಿನಿಸಿನ ಅಂಗಡಿ ಗೋಚರಿಸಿತು. ಕೆಲವು ತರುಣಿಯರು ಅಲ್ಲಿ ಅತ್ಯಂತ ರುಚಿ ರುಚಿಯಾದ ಪದಾರ್ಥಗಳನ್ನು ತಯಾರಿಸುತ್ತಿದ್ದರು. ಆ ತಿಂಡಿಗಳ ಘಮಲು ತರುಣರನ್ನು ಸುತ್ತಿಕೊಂಡಿತು. ಒಬ್ಬ ಮಾತ್ರ ಅದರ ಆಕರ್ಷಣೆ ತಡೆಯದೆ ಉಳಿದ. ಯಕ್ಷಿಣಿಯರ ಆಟಕ್ಕೆ ಸಿಕ್ಕಿ ಸತ್ತ.

ಹಾಗೆಯೇ ಮುಂದೆ ಪ್ರಯಾಣದಲ್ಲಿ ಸುಗಂಧ ಮಾರುವ ತರುಣಿಯರು ಸಿಕ್ಕರು. ಅವರೇ ಮೊದಲು ಮಾದಕ­ವಾಗಿದ್ದರು ಮತ್ತು ಇನ್ನಷ್ಟು ಮತ್ತು ತರುವ ಸುಗಂಧಗಳನ್ನು ಮೈಗೆ ಪೂಸು­ತ್ತಿದ್ದರು. ಮತ್ತೊಬ್ಬ ಆ ಸುಗಂಧಕ್ಕೆ ಬಲಿಯಾದ. ಕೊನೆಗೆ ಉಳಿದವರು ಇಬ್ಬರೇ. ಇನ್ನೆರಡು ತಾಸು ಕಳೆದರೆ ಬೆಳಗಾಗುತ್ತದೆ. ಅಷ್ಟು ಹೊತ್ತು ನಾವು ತುಂಬ ಎಚ್ಚರವಾಗಿರಬೇಕು ಎಂದು ನಾಯಕ ಗೆಳೆಯನಿಗೆ ಹೇಳುತ್ತಿದ್ದ. ಅಷ್ಟರಲ್ಲಿ ಎದುರಿಗೆ ಒಬ್ಬ ತರುಣಿ ಬಂದಳು. ಆಕೆಯಷ್ಟು ಸುಂದರಿಯನ್ನು ಇವರೆಂದೂ ಕಂಡಿರಲೇ ಇಲ್ಲ. ಆಕೆಯ ಮೈಮೇಲೆ ತೀರ ಕಡಿಮೆ ಬಟ್ಟೆಗಳು. ಆಕೆ ಇವರನ್ನು ಕೈ ಮಾಡಿ ಕರೆಯುತ್ತಿದ್ದಳು. ಅಲ್ಲಿ ಬದಿಯಲ್ಲೇ ಅಲಂಕಾರವಾದ ಹಾಸಿಗೆ! ನಾಯಕನ ಗೆಳೆಯ ತನ್ನನ್ನೇ ಮರೆತು ಆಕೆಯನ್ನು ಹಿಂಬಾಲಿಸಿ ಹೋಗಿ ಮರೆಯಾದ. ಕೊನೆಗೆ ನಾಯಕ ಮಾತ್ರ ಉಳಿದ. ಅಷ್ಟರಲ್ಲಿ ಬೆಳಗಾಯಿತು, ಯಕ್ಷಿಣಿಯರ ಸಾಮ್ರಾಜ್ಯ ಕರಗಿತು. ನಾಯಕ ನಗರ ಸೇರಿ ವ್ಯಾಪಾರ ಮಾಡಿ ಬಹು ಖ್ಯಾತನಾದ, ಎಲ್ಲರ ಮರ್ಯಾದೆ ಗಳಿಸಿದ.  ಕಣ್ಣು, ಕಿವಿ, ನಾಲಿಗೆ, ಮೂಗು ಮತ್ತು ಚರ್ಮ ಇವು ಪಂಚೇಂದ್ರಿ­ಯಗಳು. ಇವುಗಳ ಆಕರ್ಷಣೆ ತುಂಬ ಹೆಚ್ಚು. ನಮ್ಮನ್ನು ಸೆಳೆದುಬಿಡುತ್ತವೆ. ಅವುಗಳನ್ನು ಪೂರ್ತಿಯಾಗಿ ಮೀರು­ವುದು ಕಷ್ಟ. ಆದರೆ, ಅವು ಹತೋಟಿ ತಪ್ಪಿದರೆ ಜೀವಕ್ಕೆ ಮುಳುವಾಗುತ್ತವೆ. ಈ ಒಂದೊಂದೇ ಇಂದ್ರಿಯಗಳ ಸೆಳೆತಕ್ಕೆ ಸಿಲುಕಿ ಎತ್ತರದ, ಗೌರವದ ಸ್ಥಾನದಲ್ಲಿ­ದ್ದವರು ನೆಲ ಕಚ್ಚಿ ಕುಖ್ಯಾತಿ ಪಡೆದದ್ದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ ಮತ್ತು ಓದಿದ್ದೇವೆ. ಅವುಗಳಿಂದ ಆದಷ್ಟು ಪಾರಾಗುವ ಬದುಕೇ ಒಂದು ಸಾಧನೆ.                                                 ಕೃಪೆ:ಮುಖ ಪುಸ್ತಕ.                                             ಸಂಗ್ರಹ:ವೀರೇಶ್ ಅರಸಿಕೆರೆ.ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097