ದಿನಕ್ಕೊಂದು ಕಥೆ 300

*🌻ದಿನಕ್ಕೊಂದು ಕಥೆ🌻                                                    *ಹುಮ್ಮಸ್ಸು ಇದ್ದರೆ ಯಶಸ್ಸು! ಉತ್ಸಾಹ ಇದ್ದರೆ ಪ್ರೋತ್ಸಾಹ!*

ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹುಮ್ಮಸ್ಸಿದ್ದವರಿಗೆ ಖಂಡಿತವಾಗಿಯೂ ಯಶಸ್ಸು ಸಿಕ್ಕೇ ಸಿಗುತ್ತದೆ! ಸಾಧನೆಯ ಹಾದಿಯಲ್ಲಿ ಉತ್ಸಾಹದಿಂದ ಸಾಗುವವರಿಗೆ ಪ್ರೋತ್ಸಾಹವೂ ಸಿಗುತ್ತದೆ! ಇವೆರಡೂ ಸತ್ಯಗಳನ್ನು ತೋರಿಸುವ ಘಟನೆಯೊಂದು ಇಲ್ಲಿದೆ. ಪೂಜ್ಯ ಭಗವಾನ್ ಮಹಾವೀರರು ತಮ್ಮ ಒಬ್ಬ ಸಂಗಡಿಗ ಗೋಶಾಲಕ ಎಂಬುವವರೊಡನೆ ಯಾವುದೋ ಊರಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ದಾರಿ ಪಕ್ಕದಲ್ಲಿ ಬೆಳೆಯುತ್ತಿದ್ದ ಪುಟ್ಟ ಗಿಡವನ್ನು ಗಮನಿಸಿದ ಗೋಶಾಲಕರು ‘ಸ್ವಾಮಿ, ಈ ಪುಟ್ಟ ಗಿಡವನ್ನು ನೋಡಿದಿರಾ? ಇದು ಮುಂದೇನಾಗುತ್ತದೆ?’ ಎಂದು ಕೇಳಿದರು.

ಭಗವಾನರು ಆ ಗಿಡದ ಬಳಿ ಹೋದರು. ಅದನ್ನೊಮ್ಮೆ ದಿಟ್ಟಿಸಿ ನೋಡಿದರು. ಅದನ್ನು ಪ್ರೀತಿಯಿಂದ ಸವರಿದರು.  ಆನಂತರ ‘ಇದು ಮುಂದೊಂದು ದಿನ ದೊಡ್ಡ ಮರವಾಗುತ್ತದೆ. ಹೂವು ಹಣ್ಣುಗಳನ್ನು ಬಿಡುತ್ತದೆ. ದಾರಿಹೋಕರಿಗೆ ಆಶ್ರಯವಾಗುತ್ತದೆ. ನೂರಾರು ವರ್ಷ ಬದುಕುತ್ತದೆ’ ಎಂದರು. ಗೋಶಾಲಕರು ‘ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ?’ ಎಂದು ಕೇಳಿದರು. ಭಗವಾನರು ನಸುನಗುತ್ತಾ ‘ನಾನು ಪ್ರೀತಿಯಿಂದ ಅದರ ಮೈಸವರಿದೆ. ಅದನ್ನು ಮಾತನಾಡಿಸಿದೆ. ಆಗ ಅದರ ಆಕಾಂಕ್ಷೆಯನ್ನೂ, ಹುಮ್ಮಸ್ಸನ್ನೂ ಅರ್ಥ ಮಾಡಿಕೊಂಡೆ’ ಎಂದರು.

ಆಗ ಗೋಶಾಲಕರು ಗಟ್ಟಿಯಾಗಿ ನಕ್ಕರು. ನೇರವಾಗಿ ಗಿಡದ ಬಳಿ ಹೋದರು. ಗಿಡವನ್ನು ಬುಡ ಸಮೇತ ಕಿತ್ತು ನೆಲದ ಮೇಲೆ ಎಸೆದು ‘ನಿಮ್ಮ ಭವಿಷ್ಯ ಸುಳ್ಳಾಯಿತಲ್ಲಾ?’ ಎಂದು ವ್ಯಂಗ್ಯವಾಡಿದರು. ಭಗವಾನರು ನಸುನಕ್ಕು ಸುಮ್ಮನಾದರು.
ಆನಂತರ ಭಗವಾನ್ ಮಹಾವೀರರು ಮತ್ತು ಗೋಶಾಲಕ ಇಬ್ಬರೂ ಪ್ರಯಾಣ ಮುಂದುವರಿಸಿದರು. ತಾವು ಹೋಗಬೇಕಾಗಿದ್ದ ಊರನ್ನು ತಲುಪಿದರು. ಅಲ್ಲಿ ಬಿಡಾರ ಹೂಡಿದರು. ಅದು ಮಳೆಗಾಲ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಅವರು ಅದೇ ಊರಲ್ಲಿ ಏಳೆಂಟು ದಿನಗಳ ಕಾಲ ಉಳಿದುಕೊಳ್ಳಬೇಕಾಯಿತು.

ಮಳೆ ನಿಂತ ಮೇಲೆ ಭಗವಾನರು ಮತ್ತು ಗೋಶಾಲಕರು ಮರುಪ್ರಯಾಣ ಮಾಡುತ್ತಾ ಅದೇ ದಾರಿಯಲ್ಲಿ ಬಂದರು. ಗೋಶಾಲಕರು ಗಿಡವನ್ನು ಬುಡಸಮೇತ ಕಿತ್ತೆಸೆದಿದ್ದ ಸ್ಥಳಕ್ಕೇ ಬಂದರು. ಆದರೆ ಅವರು ಕಿತ್ತೆಸೆದಿದ್ದ ಗಿಡವು ಮೊದಲಿದ್ದ ಸ್ಥಳದಲ್ಲೇ ಬೆಳೆಯುತ್ತಾ ನಿಂತಿತ್ತು. ಗೋಶಾಲಕರು ಕಣ್ಣರಳಿಸಿ ‘ಇದೇನಾಶ್ಚರ್ಯ!’ ಎಂದು ಉದ್ಘಾರ ತೆಗೆದು ಭಗವಾನರತ್ತ ನೋಡಿದರು. ಭಗವಾನರು ನಿಧಾನವಾಗಿ ಗಿಡದ ಬಳಿ ಹೋದರು. ಕೊಂಚ ಹೊತ್ತು ಸುಮ್ಮನೆ ಅದನ್ನು ದಿಟ್ಟಿಸಿ ನೋಡಿದರು. ಅದರ ಮೈಯನ್ನು ಪ್ರೀತಿಯಿಂದ ಸವರಿದರು. ಆನಂತರ ‘ನೀನು ಅದನ್ನು ಕಿತ್ತೆಸೆದದ್ದು ನಿಜ.

ಆದರೆ ನಾವು ಇಲ್ಲಿಂದ ತೆರಳಿದಾಕ್ಷಣ ಯಾರೋ ಪುಣ್ಯಾತ್ಮರು ಈ ದಾರಿಯಲ್ಲೇ ಬಂದಿರಬಹುದು. ನೆಲದ ಮೇಲೆ ಬಿದ್ದಿದ್ದ ಗಿಡವನ್ನು ಕಂಡು ಅವರಿಗೆ ಅಯ್ಯೋ ಎನಿಸಿರಬಹುದು. ಅವರು ಕರುಣೆಯಿಂದ ಗಿಡವನ್ನು ಮತ್ತೆ ನೆಟ್ಟು ಹೋಗಿರಬಹುದು, ಮಳೆಗಾಲವಾದ್ದರಿಂದ ಗಿಡ ಮತ್ತೆ ಬೇರು ಬಿಟ್ಟುಕೊಂಡಿರಬಹುದು ಮತ್ತೆ ಚಿಗಿತುಕೊಂಡಿರಬಹುದು. ಬೆಳೆಯುತ್ತಿರಬಹುದು. ಅದಕ್ಕೆ ಬೆಳೆದು ದೊಡ್ಡ ಮರವಾಗಬೇಕೆನ್ನುವ ಹುಮ್ಮಸ್ಸು ಇದ್ದುದರಿಂದ ಅದಕ್ಕೆ ಯಶಸ್ಸು ಸಿಕ್ಕಿದೆ. ಅದಕ್ಕೆ ಇದ್ದ ಉತ್ಸಾಹದಿಂದಾಗಿ ಅದಕ್ಕೆ ಪ್ರೋತ್ಸಾಹವೂ ಸಿಕ್ಕಿದೆ. ಅದು ಮುಂದೆ ಖಂಡಿತವಾಗಿಯೂ ದೊಡ್ಡ ಮರವಾಗಿ ಬೆಳೆಯುತ್ತದೆ.

ಈಗ ನೀನು ಮತ್ತೊಮ್ಮೆ ಅದನ್ನು ಕಿತ್ತೆಸೆಯುವ ವಿಧ್ವಂಸಕ ಕೆಲಸ ಮಾಡಬೇಡ’ ಎಂದು ಹೇಳಿ ಪ್ರಯಾಣವನ್ನು ಮುಂದುವರಿಸಿದರು. ಹುಮ್ಮಸ್ಸು ಇದ್ದವರಿಗೆ ಯಶಸ್ಸು ಮತ್ತು ಉತ್ಸಾಹವಿದ್ದವರಿಗೆ ಪ್ರೋತ್ಸಾಹ ಸಿಗುವ ಈ ಪ್ರಸಂಗ ನಮಗೂ ಮಾರ್ಗದರ್ಶಕವಲ್ಲವೇ? ನಾವು ಬದುಕಿನಲ್ಲಿ ಕಿತ್ತೆಸೆಯುವವರಾಗಬೇಕೋ ಅಥವಾ ನೆಲದ ಮೇಲೆ ಬಿದ್ದು ಹೋಗಿರುವುದನ್ನು ಮತ್ತೆ ನೆಟ್ಟು ಬೆಳೆಸುವ ಆ ಅನಾಮಧೇಯ ಪುಣ್ಯಾತ್ಮರಂತಾಗಬೇಕೋ ಎಂಬುದರ ಬಗ್ಗೆ ಚಿಂತಿಸಬಹುದು! ಕಿತ್ತೆಸೆಯುವವರ ಸಂಖ್ಯೆ ಕ್ಷೀಣಿಸಲೆಂದೂ, ನೆಟ್ಟು ಬೆಳೆಸುವವರ ಸಂಖ್ಯೆ ವೃದ್ಧಿಸಲೆಂದೂ ಆಶಿಸಬಹುದು!

ಕೃಪೆ: ಎಸ್ ಷಡಕ್ಷರಿ.                                ಸಂಗ್ರಹ:ವೀರೇಶ್ ಅರಸಿಕೆರೆ.ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059