ದಿನಕ್ಕೊಂದು ಕಥೆ. 370

*🌻ದಿನಕ್ಕೊಂದು ಕಥೆ🌻                                                     ಸ್ವತಂತ್ರದ ಬಗ್ಗೆ ಭಾಷಣ ! ಪಂಜರದಲ್ಲಿ ಸುಖಾಸನ!*

ಕುತೂಹಲಕಾರಿಯಾದ ಕತೆಯೊಂದನ್ನು ಕಳೆದ ಶತಮಾನದಲ್ಲಿ ಆಗಿಹೋದ ಮಹಾನ್ ತತ್ತ್ವಜ್ಞಾನಿ ಮತ್ತು ಅಧ್ಯಾತ್ಮ ಗುರುಗಳಾದ ಪೂಜ್ಯ ಓಶೋರವರು ತಮ್ಮ ಉಪನ್ಯಾಸವೊಂದರಲ್ಲಿ ಹೇಳಿದ್ದರು. ಕತೆಯಲ್ಲಿ ಓಶೋ ವಿಶೇಷವಾದ ಗಿಣಿಯೊಂದರ ಬಗ್ಗೆ ಹೇಳಿದ್ದರು. ಆ ವಿಶೇಷವಾದ ಗಿಣಿಯು ಮಹಾರಾಜಬ್ಬರ ಅರಮನೆಯ ಹಜಾರದಲ್ಲಿ ನೇತುಹಾಕಿದ್ದ ಚಿನ್ನದ ಪಂಜರದಲ್ಲಿತ್ತು. ಅದು ಚೆನ್ನಾಗಿ ಮಾತನಾಡುತ್ತಿತ್ತು. ಒಮ್ಮೆ ಸ್ವಾತಂತ್ರ್ಯ ಹೋರಾಟಗಾರ ಸಜ್ಜನರೊಬ್ಬರು ಮಹಾರಾಜರ ಅತಿಥಿಯಾಗಿ ಅರಮನೆಯಲ್ಲಿ ತಂಗಿದ್ದರು. ಆ ಗಿಣಿಯು ಯಾರಾದರೂ ಪಂಜರದ ಬಳಿ ಬಂದಾಗ ‘ಸ್ವತಂತ್ರ ಬೇಕು. ಎಲ್ಲರಿಗೂ ಸ್ವತಂತ್ರ ಬೇಕು’ ಎಂದು ಕಿರುಚುತ್ತಿತ್ತು. ಗಿಣಿಯ ಬಾಯಲ್ಲೂ ಸ್ವತಂತ್ರದ ಮಾತು ಕೇಳಿ ಸಜ್ಜನರಿಗೆ ಸಹಜವಾಗಿಯೇ ರೋಮಾಂಚನ ವಾಯಿತು.

ಅಂದು ರಾತ್ರಿ ಅವರು ಏನೋ ಓದುತ್ತಾ ನಡು ರಾತ್ರಿಯವರೆಗೂ ಎಚ್ಚರವಾಗಿದ್ದರು. ನಡುರಾತ್ರಿಯಲ್ಲಿ ಅವರು ತಮ್ಮ ಕೋಣೆಯಿಂದ ಹಜಾರಕ್ಕೆ ನಡೆದು ಬಂದರು. ಹಜಾರ ನಿರ್ಜನವಾಗಿತ್ತು. ಪಂಜರದಲ್ಲಿದ್ದ ಗಿಣಿಯೂ ಎಚ್ಚರವಾಗಿತ್ತು. ಅದು ಸಜ್ಜನರನ್ನು ಕಂಡಾಕ್ಷಣ ‘ಸ್ವತಂತ್ರ ಬೇಕು, ಎಲ್ಲರಿಗೂ ಸ್ವತಂತ್ರ ಬೇಕು’ ಎಂದು ಕಿರುಚಿತು. ಸಜ್ಜನರು ನೇರವಾಗಿ ಪಂಜರದ ಬಳಿ ಹೋದರು. ಪಂಜರದ ಬಾಗಿಲನ್ನು ತೆಗೆದು ‘ಓ ಗಿಣಿಯೇ, ಮಹಾರಾಜರು ನನ್ನನ್ನು ದೂಷಿಸಿದರೆ ದೂಷಿಸಲಿ. ನಿನಗೆ ಸ್ವತಂತ್ರ ದೊರಕಿಸಿದ ಪುಣ್ಯ ನನಗಿರಲಿ. ಪಂಜರದ ಬಾಗಿಲು ತೆರೆದಿದ್ದೇನೆ. ಮುದ್ದಿನ ಗಿಣಿಯೆ ಹೋಗೋ! ಸ್ವತಂತ್ರ ಸಿಕ್ಕಿದೆ ಹೋಗೋ! ಆನಂದವಾಗಿ ಬದುಕಿಕೋ’ ಎಂದು ಪ್ರೀತಿಯಿಂದ ಗಿಣಿಗೆ ಹೇಳಿದರು.

ಗಿಣಿಯು ಪಂಜರದ ತೆರೆದ ಬಾಗಿಲನ್ನೊಮ್ಮೆ ನೋಡಿತು. ಅಷ್ಟೇ ಮತ್ತೆ ಹಾಗೇ ಕುಳಿತುಕೊಂಡಿತ್ತು. ಅಲ್ಲಿಂದ ಕದಲಲಿಲ್ಲ. ಸಜ್ಜನರು ಅಯ್ಯೋ ಪಾಪ, ಪಂಜರದಲ್ಲೇ ಬಹುಕಾಲದಿಂದಿರುವ ಗಿಣಿಯು ಹಾರಿ ಹೋಗುವುದನ್ನು ಮರೆತು ಹೋಗಿರಬಹುದು ಎಂದುಕೊಂಡರು. ಪಂಜರದೊಳಕ್ಕೆ ಕೈ ಹಾಕಿ ಗಿಣಿಯನ್ನು ಹೊರಕ್ಕೆ ತಂದು ಹಾರಿ ಹೋಗು ಎಂದರು. ಆಗಲೂ ಗಿಣಿಯು ಹಾರಿ ಹೋಗಲಿಲ್ಲ. ಅವರ ಕೈಯಲ್ಲೇ ಕುಳಿತಿತ್ತು. ಅವರು ನಿಧಾನವಾಗಿ ಕಿಟಕಿಯ ಬಳಿ ಬಂದರು. ಕಿಟಕಿಯ ಮೂಲಕ ಕೈಯನ್ನು ಹೊರಕ್ಕೆ ಚಾಚಿದರು. ಗಿಣಿಯನ್ನು ಹೊರಕ್ಕೆ ದೂಡಿ ‘ಹೋಗು ಗಿಣಿಯೇ ಹೋಗು. ನೀನೀಗ ಸ್ವತಂತ್ರ’ ಎಂದರು. ಗಿಣಿ ಅಲ್ಲಿಂದ ಹಾರಿ ಹೋಯಿತು. ಅದನ್ನು ಕಂಡು ಅವರಿಗೆ ಎಷ್ಟು ಸಂತೋಷವಾಯಿತೆಂದರೆ ತಮ್ಮ ಕೋಣೆಗೆ ಹೋಗಿ ಮಲಗಿದಾಗ ನಿದ್ದೆ ಬಂದದ್ದೂ ಗೊತ್ತಾಗಲಿಲ್ಲ. ಬೆಳಕಾದದ್ದೂ ಗೊತ್ತಾಗಲಿಲ್ಲ!

ಅವರಿಗೆ ಎಚ್ಚರವಾದಾಗ ‘ಸ್ವತಂತ್ರ! ಎಲ್ಲರಿಗೂ ಸ್ವತಂತ್ರ ಸಿಗಬೇಕು’ ಎನ್ನುವ ಗಿಣಿಯ ಮಾತುಗಳು ಮತ್ತೆ ಕೇಳಿಸಿದವು. ಬಹುಶಃ ಗಿಣಿ ಅರಮನೆಯ ಹೊರಗಡೆ ಮರದ ಮೇಲೆ ಕುಳಿತು ಸ್ವಾತಂತ್ರ್ಯದ ಮಾತು ಆಡುತ್ತಿರಬೇಕೆಂದುಕೊಂಡ ಅವರು ಅರಮನೆಯ ಹಜಾರಕ್ಕೆ ಬಂದು ನೋಡಿದರು. ಆಗ ಅವರಿಗೆ ಕಂಡಿದ್ದೇನೆ ಗೊತ್ತೇ? ಪಂಜರದ ಬಾಗಿಲು ವಿಶಾಲವಾಗಿ ತೆರೆದಿತ್ತು. ಪಂಚವರ್ಣದ ಗಿಣಿ ಮತ್ತೆ ಪಂಜರದಲ್ಲೇ ಬಂದು ಭದ್ರವಾಗಿ ಕುಳಿತಿತ್ತು. ಅವರು ‘ಅಯ್ಯೋ ದುರ್ದೈವ ಗಿಣಿಯೇ! ನೀನು ಸ್ವತಂತ್ರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿ. ಆದರೆ ಬಂಧನಕ್ಕೆ ಬಗ್ಗಿ ಹೋಗಿರುವ ನಿನಗೆ ಸ್ವಾತಂತ್ರ್ಯ ಬೇಕಿಲ್ಲ. ನಿನಗೆ ಪಂಜರದ ಬಂಧನದಲ್ಲೇ ಆನಂದ! ನಾನೇನು ಮಾಡಲಿ?’ ಎಂದು ನಿಟ್ಟುಸಿರಿಟ್ಟರು.

ಪೂಜ್ಯ ಓಶೋರವರು ಹೇಳುವ ಈ ಕತೆಯನ್ನು ಕೇಳಿದಾಗ, ಅವರು ಹೇಳುತ್ತಿರುವುದು ಯಾವುದೋ ಅಪರಿಚಿತ ಗಿಣಿಯ ಬಗ್ಗೆ ಅಲ್ಲ. ಅದು ನಮಗೆ ಪರಿಚಯವಿರುವವರ ಬಗ್ಗೆಯೇ ಎಂದು ಅನಿಸುವುದಿಲ್ಲವೇ? ನಮ್ಮ ಬಗ್ಗೆಯೇ ಹೇಳುತ್ತಿದ್ದಾರೆಂದು ಅನಿಸುವುದಿಲ್ಲವೇ? ಓಶೋ ಮಹಾಶಯರ ಪುಣ್ಯಸ್ಮರಣೆಗೆ ಪ್ರಣಾಮಗಳು. ಸ್ವಾತಂತ್ರ್ಯ-ಪ್ರಾಮಾಣಿಕತೆ-ಸತ್ಯ-ಅಹಿಂಸೆ ಮುಂತಾದ ಸಣ್ಣಸಣ್ಣ ಶಬ್ದಗಳ ಬಗ್ಗೆ ದೊಡ್ಡದೊಡ್ಡ ಭಾಷಣಗಳನ್ನು ಮಾಡುವವರು, ಅವನ್ನು ಆಚರಣೆಗೆ ತರುವ ಅವಕಾಶ ಸಿಕ್ಕಾಗ ಹಿಂಜರಿಯುತ್ತಾರಲ್ಲವೇ? ಏಕೆಂದರೆ ಅವರದ್ದು ಸ್ವತಂತ್ರದ ಬಗ್ಗೆ ಭಾಷಣ! ಆದರೆ ಅವರು ಪಂಜರದಲ್ಲಿ ಸುಖಾಸೀನ!                                             ಕೃಪೆ: ವಿಶ್ವ ವಾಣಿ.                                                ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.                                       *ದಿನಕ್ಕೊಂದು ಕಥೆ ಆ್ಯಪ್*                       https://play.google.com/store/apps/details?id=com.dinakkondukathe

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059