ದಿನಕ್ಕೊಂದು ಕಥೆ. 372

*🌻ದಿನಕ್ಕೊಂದು ಕಥೆ🌻                                         ಸಾಲಗಾರರು! ಸಾರ್, ನಾವೆಲ್ಲಾ ಸಾಲಗಾರರು!*

ನಾವು ಒಪ್ಪಿಕೊಳ್ಳಬಹುದು ಅಥವಾ ಒಪ್ಪಿಕೊಳ್ಳದಿರಬಹುದು. ಆದರೆ ನಾವೆಲ್ಲಾ ಸಾಲಗಾರರೇ! ಸಾಲ ಎಂದರೆ ಹಣದ ಸಾಲವೇ ಇರಬೇಕೆಂದಿಲ್ಲ ಅಲ್ಲವೇ? ನಾವು ಯಾರಿಂದಲಾದರೂ, ಏನಾದರೂ ಸಹಾಯ ಪಡೆದಿದ್ದರೆ, ಅದೂ ಒಂದು ಬಗೆಯ ಸಾಲವೇ ಅಲ್ಲವೇ? ಅಂಥ ಸಾಲವನ್ನೂ ನಾವು ತೀರಿಸಲೇ ಬೇಕಲ್ಲವೇ? ಆಗಿಂದಾಗಲೇ ಅಲ್ಲದಿದ್ದರೂ, ಒಂದಲ್ಲಾ ಒಂದು ದಿನ ಆ ಸಾಲವನ್ನು ತೀರಿಸಬೇಕು! ಹೀಗೆ ಎಂದೋ ಪಡೆದಿದ್ದ ಸಹಾಯದ ಸಾಲವನ್ನು ಮುಂದೆಂದೋ ಒಂದು ದಿನ ತೀರಿಸಿ ಋಣಮುಕ್ತರಾದವರ ಕುತೂಹಲಕಾರಿ ಪ್ರಸಂಗವೊಂದು ಇಲ್ಲಿದೆ.

ಒಮ್ಮೆ ವಿದೇಶವೊಂದರಲ್ಲಿ ರಕ್ತಕ್ರಾಾಂತಿಯಾಯಿತಂತೆ. ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಹತ್ತಾರು ಸಾವಿರ ಜನ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ಪ್ರಾಣ ಉಳಿದರೆ ಸಾಕೆಂದುಕೊಂಡವರು ಸ್ವದೇಶ ತೊರೆದು ಪರದೇಶಗಳಿಗೆ ಹೋಗಿ ಬದುಕುವ ದಾರಿಗಳನ್ನು ಹುಡುಕತೊಡಗಿದರು. ಅಂಥ ನಿರಾಶ್ರಿತರಲ್ಲಿ ಒಬ್ಬರು ಪರದೇಶದಲ್ಲಿ ಹೋಟೆಲೊಂದರ ಮ್ಯಾನೇಜರ್‌ರನ್ನು ಭೇಟಿಯಾಗಿ ತಮ್ಮ ದುಸ್ಥಿತಿ ವಿವರಿಸಿ ‘ಕಸ
ಗುಡಿಸುವುದೋ, ಪಾತ್ರೆ ತೊಳೆಯುವುದೋ, ಯಾವ ಕೆಲಸವಾದರೂ ಚಿಂತೆಯಿಲ್ಲ. ಕೆಲಸ ಕೊಡಿ! ಉಪವಾಸವಿರುವ ಮಡದಿ-ಮಕ್ಕಳಿಗೆ ಎರಡು ತುತ್ತು ಊಟ ಸಿಕ್ಕರೆ ಸಾಕು’ಎಂದು ಕೇಳಿಕೊಂಡರು. ಮ್ಯಾನೇಜರು ಆತನನ್ನು ದಿಟ್ಟಿಸಿ ನೋಡಿ ‘ನಿಮ್ಮನ್ನು ಎಲ್ಲೋ ನೋಡಿದಂತಿದೆ. ನೀವು ನಿಮ್ಮ ದೇಶದಲ್ಲಿದ್ದಾಗ ಸುಂಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಿರಾ?’ ಎಂದು ಕೇಳಿದರು. ನಿರಾಶ್ರಿತರು ಹೌದೆಂದು ತಲೆಯಾಡಿಸಿದರು.

ಮ್ಯಾನೇಜರರು ‘ನಿಮಗೆ ನೆನಪಿರಲಿಕ್ಕಿಲ್ಲ! ಸುಮಾರು ಹತ್ತು ವರ್ಷಗಳ ಹಿಂದೆ ಕಾರ್ಯನಿಮಿತ್ತ ಒಬ್ಬ ಯುವಕ ನಿಮ್ಮ ದೇಶಕ್ಕೆ ಬಂದಿದ್ದ. ಆತನನ್ನು ವಿಮಾನ ನಿಲ್ದಾಣದಲ್ಲಿ ಸುಂಕ ತಪಾಸಣಾ ಅಧಿಕಾರಿಗಳು ತಡೆದು ನಿಲ್ಲಿಸಿದರು. ಯಾವ್ಯಾವುದೋ ಕಾನೂನನ್ನು ಉಲ್ಲೇಖಿಸಿದರು. ಏನೇನೋ ಪ್ರಶ್ನೆಗಳನ್ನು ಕೇಳಿದರು. ಅವೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಯುವಕನಿಂದಾಗಲಿಲ್ಲ.  ಅಧಿಕಾರಿಗಳು ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ನೀವು ನಮ್ಮ ದೇಶವನ್ನು ಬಿಟ್ಟು ಹೋಗುವಂತಿಲ್ಲ. ನಿಮ್ಮನ್ನು ಬಂಧಿಸಲಾಗುವುದು ಎಂದು ಬೆದರಿಸಿದರು. ಆಗ ಅಲ್ಲಿಗೆ ಹಿರಿಯ ಅಧಿಕಾರಿಯೊಬ್ಬರು ಬಂದರು. ತಮ್ಮ ಇಲಾಖೆಯವರನ್ನು ಮಾತನಾಡಿಸಿದರು. ಯುವಕನನ್ನೂ ಮಾತನಾಡಿಸಿದರು. ಯುವಕ ನಿರಪರಾಧಿಯೆಂದು ಅವರಿಗೆ ಅರ್ಥವಾಯಿತು. ಆಗ ಯುವಕನನ್ನು ಅಲ್ಲಿಂದ ಬಿಡುಗಡೆ ಮಾಡಿ ಕಳುಹಿಸಿದರು.

ಹಾಗೆ ಸಹಾಯ ಮಾಡಿದ ಅಧಿಕಾರಿ ನೀವೇ ಅಲ್ಲವೇ?’ ಎಂದಾಗ, ನಿರಾಶ್ರಿತರು ‘ಬಹಳ ಹಿಂದಿನ ಮಾತು. ನನಗೀಗ ಎಲ್ಲವೂ ನೆನಪಾಗುತ್ತಿದೆ. ಆ ಅಧಿಕಾರಿ ನಾನೇ’ಎಂದರು.  ಮ್ಯಾನೇಜರ್ ಸಂತಸದಿಂದ ‘ನೀವು ಯುವಕನಿಗೆ ಸಹಾಯ ಮಾಡಿದ್ದಷ್ಟೇ ಅಲ್ಲ, ಆತ ನಿಮಗೊಂದಷ್ಟು ಹಣ ಕಾಣಿಕೆಯಾಗಿ ಕೊಡಲು ಬಂದಾಗ ನೀವದನ್ನು ತೆಗೆದುಕೊಳ್ಳಲಿಲ್ಲ. ‘ನನಗೆ ಹಣ ಬೇಡ. ನೀವು ನನ್ನನ್ನು ನಿಮ್ಮ ಸ್ನೇಹಿತನೆಂದು ಭಾವಿಸಿಕೊಳ್ಳಿ. ನನಗಷ್ಟೇ ಸಾಕು’ಎಂದಿದ್ದಿರಿ. ನೆನಪಿದೆಯೇ?’ ಎಂದಾಗ, ಆ ನಿರಾಶ್ರಿತರು ಕೊಂಚ ಗಲಿಬಿಲಿಗೊಂಡರು.  ‘ಅದೆಲ್ಲಾ ನಿಜ. ಆದರೆ ಇಷ್ಟೆಲ್ಲ ವಿವರಗಳನ್ನು ಅರಿತಿರುವ ನೀವು ಯಾರೆಂದು ಗೊತ್ತಾಗಲಿಲ್ಲ’ಎಂದರು. ಮ್ಯಾನೇಜರ್ ‘ನೀವಂದು ಸಹಾಯ ಮಾಡಿದ ಯುವಕ ನಾನೇ!

ನಾವಿಬ್ಬರೂ ಮುಂದೆ ಎಂದಾದರೂ, ಎಲ್ಲಾದರೂ ಭೇಟಿಯಾಗುತ್ತೇವೆಂಬ ಕಲ್ಪನೆ ನಿಮಗೂ ಇರಲಿಲ್ಲ. ನನಗೂ ಇರಲಿಲ್ಲ. ಆದರೂ ನೀವು ಸಹಾಯ ಮಾಡಿದಿರಿ. ನನಗೊಬ್ಬ ಸ್ನೇಹಿತ ಸಿಕ್ಕರೆ ಸಾಕೆಂದಿರಿ. ಈಗ ನಿಮ್ಮ ಸ್ನೇಹಿತನಾಗಿ ನಾನು ಇಲ್ಲಿದ್ದೇನೆ. ನೀವಂದು ಮಾಡಿದ ಸಹಾಯವನ್ನು ಇಂದು ತೀರಿಸಲು ನನಗೆ ಸಾಧ್ಯವಾದರೆ, ನಾನು ಋಣಮುಕ್ತನಾದೆನೆಂದು ಭಾವಿಸುತ್ತೇನೆ’ಎಂದು ಹೇಳಿ ಆ ನಿರಾಶ್ರಿತರ ವಿದ್ಯಾರ್ಹತೆ, ಅನುಭವಗಳಿಗೆ ಸರಿಹೊಂದುವ ಕೆಲಸವನ್ನೇ ಕೊಟ್ಟರಂತೆ. ಆ ಯುವಕ ಎಂದೋ ಮಾಡಿದ್ದ ಸಹಾಯದ ಸಾಲವನ್ನು ಮತ್ತೆಂದೋ ತೀರಿಸಿ ಋಣಮುಕ್ತರಾದ ಪ್ರಸಂಗವನ್ನು ಓದುವಾಗ ನಮಗೆ ನಾವು ಎಂದೋ ಯಾರಿಂದಲೋ ಪಡೆದಿರಬಹುದಾದ ಸಹಾಯದ ಸಹಕಾರದ ಸಾಲ ನೆನಪಾಗುತ್ತದೆಯೇ? ನಾವು ಅದನ್ನು ತೀರಿಸುವುದು ಎಂದು? ಋಣಮುಕ್ತರಾಗುವುದು ಎಂದು? ಅಂಥ ಋಣ ನಮ್ಮ ಮೇಲಿಲ್ಲ ಎನ್ನುವವರು ಯಾರಾದರೂ ಇದ್ದರೆ ಅಂಥವರಿಗೆ ಪ್ರಣಾಮಗಳು!

ಕೃಪೆ :ಷಡಕ್ಷರಿ.                                               ಸಂಗ್ರಹ :ವೀರೇಶ್ ಅರಸಿಕೆರೆ.                                *ದಿನಕ್ಕೊಂದು ಕಥೆ ಆ್ಯಪ್*  https://play.google.com/store/apps/details?id=com.dinakkondukathe

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059