ದಿನಕ್ಕೊಂದು ಕಥೆ. 400

*🌻ದಿನಕ್ಕೊಂದು ಕಥೆ🌻                                      ಗುಡಿಸಲಲ್ಲಿ ಬೇಡುವವನೂ ಅವನೇ! ಗುಡಿಯಲ್ಲಿ ನೀಡುವವನೂ ಅವನೇ!*

ಗುಡಿಯಲ್ಲಿ ನಿಂತು ನಾವು ಬೇಡಿದುದನ್ನು ನೀಡುವವನೂ ಅವನೇ! ಗುಡಿಸಲ ಮುಂದೆ ನಿಂತು ಬೇಡುವವನೂ ಅವನೇ! ಆ ಇಬ್ಬರೂ ಒಂದೇ ಎಂದು ದೃಢವಾಗಿ ನಂಬಿದ್ದ ಸಂತರೊಬ್ಬರ ಬದುಕಿನ ಘಟನೆ ಇಲ್ಲಿದೆ. ಹದಿನೇಳನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಆಗಿಹೋದ ಸಂತ ತುಕಾರಾಮರಿಗೆ ವಿಠೋಬನಲ್ಲಿ ಅನನ್ಯ ಭಕ್ತಿ. ಆದರೆ ಬದುಕಿನಲ್ಲಿ ಕಡುಬಡವರಾಗಿದ್ದ ಅವರ ಹೆಂಡತಿ ಜೀಜಾಬಾಯಿಯವರ ಬಳಿ ಎರಡೇ ಎರಡು ಹಳೆಯ ಸೀರೆಗಳಿದ್ದವು. ಅವೂ ಅಲ್ಲಲ್ಲಿ ಹರಿದು ಹೋಗಿದ್ದವು. ಹೊಸ ಸೀರೆ ಕೊಳ್ಳುವ ಆರ್ಥಿಕ ಶಕ್ತಿ ಅವರಿಗಿರಲಿಲ್ಲ. ಒಮ್ಮೆ ಜೀಜಾಬಾಯಿಯವರು ಎಲ್ಲೋ ಹೊರಗೆ ಹೋಗಿದ್ದರು. ತುಕಾರಾಮರೊಬ್ಬರೇ ಮನೆಯಲ್ಲಿದ್ದರು. ಆಗ ಅಜ್ಜಿಯೊಬ್ಬರು ಭಿಕ್ಷೆ ಬೇಡುತ್ತ ಬಂದರು.

ಹರಿದ ಸೀರೆಯನ್ನುಟ್ಟಿದ್ದ, ಚಳಿಗೆ ನಡುಗುತ್ತಿದ್ದ, ಅಜ್ಜಿಯ ದುಸ್ಥಿತಿ ನೋಡಿ ತುಕಾರಾಮರ ಮನಸ್ಸು ಕರಗಿತು. ಅವರು ಮನೆಯೊಳಕ್ಕೆ ಹೋಗಿ ಅಲ್ಲಿದ್ದ ಹೆಂಡತಿಯ ಸೀರೆ ತಂದು ಅಜ್ಜಿಗೆ ದಾನ ಮಾಡಿಬಿಟ್ಟರು. ಅಜ್ಜಿಯು ಬಾಯ್ತುಂಬ ಕೃತಜ್ಞತೆ ಹೇಳಿ ಹೊರಟು ಹೋದರು. ಕೊಂಚ ಸಮಯದ ನಂತರ ಜೀಜಾಬಾಯಿಯವರು ಮನೆಯೊಳಕ್ಕೆ ಬಂದರು. ಅವರಿಗೆ ಮನೆಯಲ್ಲಿ ನೇತು ಹಾಕಿದ್ದ ಸೀರೆ ಕಾಣಿಸಲಿಲ್ಲ. ಆಕೆ ತುಕಾರಾಮರನ್ನು ವಿಚಾರಿಸಿದಾಗ, ಅವರು ‘ಹರಕು ಸೀರೆಯುಟ್ಟು, ಚಳಿಗೆ ನಡುಗುತ್ತ ಭಿಕ್ಷೆ ಬೇಡುತ್ತ ಬಂದಿದ್ದ ಬಡ ಅಜ್ಜಿಯೊಬ್ಬರ ದುಸ್ಥಿತಿ ನೋಡಲಾರದೆ, ಮನೆಯಲ್ಲಿದ್ದ ಸೀರೆಯನ್ನು ದಾನವಾಗಿ ಕೊಟ್ಟುಬಿಟ್ಟೆ’ ಎಂದರು. ಆಕೆ ‘ನನ್ನಲ್ಲಿದ್ದುದೇ ಎರಡು ಸೀರೆ. ಅದರಲ್ಲೊಂದನ್ನು ದಾನ ಮಾಡಿದ್ದೀರಲ್ಲಾ? ಉಳಿದಿರುವ ಒಂದೇ ಸೀರೆಯಲ್ಲಿ ಹೇಗೆ ಕಾಲ ಕಳೆಯಲಿ?’ ಎಂದು ಅಳತೊಡಗಿದರು. ತುಕಾರಾಮರು ನಿರ್ವಿಕಾರರಾಗಿ ‘ಅದಕ್ಕೇಕೆ ಚಿಂತಿಸುತ್ತೀಯಾ? ವಿಠ್ಠಲ ಏನಾದರೂ ಮಾಡುತ್ತಾನೆ’ ಎಂದರು.

ಆಕೆ ಸಿಟ್ಟಿನಿಂದ ‘ನೀವೋ ನಿಮ್ಮ ಭಕ್ತಿಯೋ? ನನಗೆ ನಿಮ್ಮ ವಿಠ್ಠಲನ ಮೇಲೆ ಎಷ್ಟು ಸಿಟ್ಟು ಬರುತ್ತಿದೆಯೆಂದರೆ ಈಗಲೇ ದೇವಾಲಯಕ್ಕೆ ಹೋಗಿ ಅವನಿಗೆ ತಕ್ಕ ಶಾಸ್ತಿ ಮಾಡಬೇಕೆನಿಸುತ್ತಿದೆ’ ಎನ್ನುತ್ತಾ ಕೈಯಲ್ಲಿ ಒನಕೆ ಹಿಡಿದು ದೇವಾಲಯದ ಕಡೆ ಧಾವಿಸಿದರು. ಆಕೆಯ ರೌದ್ರಾವತಾರ ನೋಡಿ ಆಕೆ ಏನು ಅನಾಹುತ ಮಾಡಿಬಿಡುತ್ತಾಳೋ ಎಂದು ಹೆದರಿದ ತುಕಾರಾಮರೂ ಆಕೆಯ ಹಿಂದೆಯೇ ಓಡಿದರು. ಆಕೆ ದೇವಾಲಯದ ಬಳಿ ಬಂದಾಗ, ದೇವಾಲಯದ ಬಾಗಿಲಲ್ಲೇ ನಿಂತಿದ್ದ ಅರ್ಚಕರು ‘ಅಮ್ಮಾ, ಸರಿಯಾದ ಸಮಯಕ್ಕೆ ಬಂದಿದ್ದೀರಿ! ಇಂದು ಅಜ್ಜಿಯೊಬ್ಬರು ಇಲ್ಲಿಗೆ ಬಂದಿದ್ದರು. ಅವರ ಮಗಳ ಮದುವೆಗೆಂದು ಒಂದಷ್ಟು ಸೀರೆಗಳನ್ನು ತರಿಸಿದ್ದರಂತೆ. ಮದುವೆಯೆಲ್ಲ ಮುಗಿದು, ಮಗಳನ್ನು ಗಂಡನ ಮನೆಗೆ ಕಳುಹಿಸಿದ ಮೇಲೆ ಅವರಲ್ಲಿ ನಾಲ್ಕು ಒಳ್ಳೆಯ ಸೀರೆಗಳು ಇನ್ನೂ ಉಳಿದಿದ್ದವಂತೆ.

ಅವನ್ನು ಯಾರಾದರೂ ದೈವಭಕ್ತರ ಕುಟುಂಬದವರಿಗೆ ದಾನವಾಗಿ ಕೊಡಿರೆಂದು ಹೇಳಿ ಇಲ್ಲಿ ಕೊಟ್ಟು ಹೋಗಿದ್ದಾರೆ. ನಿಮಗಿಂತ ದೊಡ್ಡ ದೈವಭಕ್ತರ ಕುಟುಂಬ ನಮಗೆಲ್ಲಿ ಸಿಗುತ್ತದೆ? ಇವನ್ನು ನೀವು ತೆಗೆದುಕೊಂಡು ಹೋಗಿ’ ಎನ್ನುತ್ತ ನಾಲ್ಕು ಒಳ್ಳೆಯ ಸೀರೆಗಳನ್ನು ಕೊಟ್ಟಾಗ ತುಕಾರಾಮರ ಹೆಂಡತಿ ಏನು ಹೇಳಲೂ ತೋಚದೆ ಅಲ್ಲಿಯೇ ಕುಳಿತುಬಿಟ್ಟರು. ಹಿಂದೆಯೇ ಬಂದಿದ್ದ ತುಕಾರಾಮರು ‘ವಿಠ್ಠಲ ದೇವರು ಹೇಗಾದರೂ ಸಹಾಯ ಮಾಡುತ್ತಾನೆಂದು ನಾನು ಹೇಳಿರಲಿಲ್ಲವೇ? ದಾನವಾಗಿ ಕೊಟ್ಟ ನಿನ್ನ ಒಂದು ಹಳೆಯ ಸೀರೆಗೆ ಬದಲಾಗಿ ನಾಲ್ಕು ಒಳ್ಳೆಯ ಸೀರೆಗಳು ಸಿಕ್ಕಿವೆಯಲ್ಲ! ಗುಡಿಯಲ್ಲಿ ನಿಂತು ನೀಡುವವನೂ ಅವನೇ! ಗುಡಿಸಲ ಮುಂದೆ ಬಂದು ಬೇಡುವವನೂ ಅವನೇ! ನಡಿ, ದೇವಾಲಯದೊಳಕ್ಕೆ ಹೋಗಿ ವಿಠ್ಠಲನಿಗೆ ವಂದಿಸೋಣ’ ಎಂದರಂತೆ! ಅಂದು ತುಕಾರಾಮರ ಬದುಕಿನಲ್ಲಿ ನಡೆದ ಪವಾಡ ಇಂದು ನಮ್ಮ ಬದುಕಿನಲ್ಲೂ ನಡೆಯುತ್ತದೋ ಇಲ್ಲವೋ? ಆದರೆ, ದಾನ-ಧರ್ಮ ಮಾಡುವುದರಿಂದ ನಮ್ಮಲ್ಲೊಂದು ಸಾರ್ಥಕ ಭಾವನೆ ಮೂಡುವುದೂ, ಆತ್ಮವಿಶ್ವಾಸ ಬೆಳೆಯುವುದಂತೂ ನಿಜ.                           ಕೃಪೆ :ವಿಶ್ವವಾಣಿ.                                          ಸಂಗ್ರಹ :ವೀರೇಶ್ ಅರಸಿಕೆರೆ. ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059