ದಿನಕ್ಕೊಂದು ಕಥೆ. 463
*🌻ದಿನಕ್ಕೊಂದು ಕಥೆ🌻 ಸಂಪತ್ತು ಬಂದಿತ್ತು, ಸ್ವಾತಂತ್ರ್ಯ ಹೊರಟು ಹೋಗಿತ್ತು!*
ಒಂದು ಪಕ್ಷಿಯು ಸಿರಿವಂತರ ಮನೆಯ ಮರದಲ್ಲಿ ವಾಸವಾಗಿತ್ತು. ಅತ್ತಿಂದಿತ್ತ ಹಾರಾಡಿ ಹಾಯಾಗಿತ್ತು. ಅಂದು ಹಬ್ಬದ ದಿನ ಮನೆಯವರೆಲ್ಲರೂ ಬೆಲೆಬಾಳುವ ಉಡುಗೆ ತೊಡುಗೆಗಳನ್ನು ಹಾಕಿಕೊಂಡು ಸಂತಸದಿಂದ ಓಡಾಡುತ್ತಿದ್ದರು. ಅದನ್ನು ನೋಡಿದ ಪಕ್ಷಿಗೂ ವಿಶೇಷವಾದ ಉಡುಗೆ ತೊಡುಗೆಗಳನ್ನು ಧರಿಸುವ ಆಸೆಯಾಯಿತು. ಅದನ್ನು ಸಿರಿವಂತನಿಗೆ ತಿಳಿಸಿದಾಗ, ಸಿರಿವಂತನ ಮನ ಕರಗಿತು. ಆ ಪಕ್ಷಿಗೆ ಕೆಳಗೆ ಕರೆದು ಬೆಲೆಬಾಳುವ ಉಡುಗೆ ತೊಡುಗೆಗಳಿಂದ ಅದನ್ನು ಅಲಂಕರಿಸಿದ. ಕಾಲಿಗೆ ಗೆಜ್ಜೆಯನ್ನು ಹಾಕಿದ! ಈಗ ಪಕ್ಷಿಯು ಹಾರಲು ಹೋದರೆ ಅದರ ಪಕ್ಕಗಳು ಬಿಚ್ಚಲಿಲ್ಲ, ಕಾಲೂ ಕೀಳಲಿಲ್ಲ! ಸಂಪತ್ತು ಬಂದಿತ್ತು, ಸ್ವಾತಂತ್ರ್ಯ ಹೊರಟು ಹೋಗಿತ್ತು!
******************************
ರಾವಣನು ಸೀತಾದೇವಿಯನ್ನು ಅಪಹರಣ ಮಾಡಿದ. ಆನಂತರ ಶ್ರೀರಾಮನು ಘನಘೋರ ಯುದ್ಧವನ್ನು ಮಾಡಿ ಲಂಕೆಯನ್ನು ಬೂದಿ ಮಾಡಿ ಸೀತಾದೇವಿಯನ್ನು ಅರಮನೆಗೆ ಕರೆತಂದ. ಶ್ರೀರಾಮಚಂದ್ರನೊಂದಿಗೆ ಮತ್ತೊಮ್ಮೆ ಸಿಂಹಾಸನವನ್ನೇರಿ ಅಸಂಖ್ಯ ಪ್ರಜೆಗಳ ಆದರ-ಅಭಿಮಾನವನ್ನು ಸ್ವೀಕರಿಸುತ್ತ ಸೀತಾದೇವಿ ಆನಂದವಾಗಿರುವುದಿತ್ತು. ಅಷ್ಟರಲ್ಲಿ ಅಗಸನ ಒಂದು ಮಾತು ಬೆಟ್ಟದಾಕಾರದ ತೆರೆಯಾಗಿ ಬಂದು ಇವರ ಬಾಳ ನೌಕೆಗೆ ಅಪ್ಪಳಿಸಿತು. ಸ್ವತಃ ಶ್ರೀರಾಮನೇ ಲಕ್ಷ ್ಮಣನನ್ನು ಕರೆದು ಸೀತಾದೇವಿಯನ್ನು ಅರಣ್ಯಕ್ಕೆ ಬಿಟ್ಟು ಬರಲು ಹೇಳಿದ. ಮತ್ತೆ ಸೀತೆ ಅರಣ್ಯವನ್ನು ಸೇರಿ ಗುಡಿಸಲಿನಲ್ಲಿದ್ದು ರಾಜಕುವರರಾದ ಲವ-ಕುಶರಿಗೆ ಗಡ್ಡೆ-ಗೆಣಸುಗಳನ್ನು ಕೊಟ್ಟು ಬೆಳೆಸಬೇಕಾಯಿತು. ತಂದೆಯ ವಚನ ಪರಿಪಾಲನೆಗಾಗಿ ಶ್ರೀರಾಮನು ಅರಮನೆ ಅರಸೊತ್ತಿಗೆ ಬಿಟ್ಟು ಅರಣ್ಯಕ್ಕೆ ಹೋದ. ಇಂದಿನ ಮಕ್ಕಳು ಹೋಗಬಹುದೇ? ಶ್ರೀರಾಮನು ವನವಾಸಕ್ಕೆ ಹೊರಟಾಗ ಸೀತೆಯು ಅವನ ಹಿಂದೆ ನಾರುಬಟ್ಟೆ ಉಟ್ಟು ನಡೆದೇ ಬಿಟ್ಟಳು. ಇಂದೇನಾದರೂ ಅದನ್ನು ಊಹಿಸಿಕೊಳ್ಳಲು ಸಾಧ್ಯವೇ? ಆದರೆ ರಾಮಾಯಣ ಮಹಾಭಾರತದಂಥ ಕಷ್ಟ ನಮಗಾಗಿಲ್ಲವೆಂದು ನೆಮ್ಮದಿಯ ಉಸಿರನ್ನು ಬಿಡಬಹುದಷ್ಟೆ.
ಕೃಪೆ :ಸಿದ್ದೇಶ್ವರ ಸ್ವಾಮೀಜಿಗಳು. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment