ದಿನಕ್ಕೊಂದು ಕಥೆ. 466
*🌻ದಿನಕ್ಕೊಂದು ಕಥೆ🌻* ರವಿ ಖಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದ ಸಂಬಂಧಿಯೊಬ್ಬರನ್ನು ನೋಡಲು ದೂರದ ಊರಿಗೆ ಬೈಕಿನಲ್ಲಿ ಪ್ರಯಾಣ ಆರಂಭಿಸಿದ್ದ. .. ಮಾರ್ಗಮಧ್ಯೆ ಕಂಡ ಹಳ್ಳಿಯ ಅಂಗಡಿಯೊಂದರಲ್ಲಿ ಹಣ್ಣುಹಂಪಲುಗಳನ್ನು ಖರೀದಿಸಿ ಇನ್ನೇನು ಬೈಕ್ ಹತ್ತಬೇಕೆನ್ನುವಷ್ಟರಲ್ಲಿ ಬಲಗಾಲಿನ ಪಾದದ ಮೇಲೆ ಏನೋ ಚಲಿಸುತ್ತಿರುವಂತೆ ಭಾಸವಾಯಿತು. ಕೂಡಲೇ ಕಾಲನ್ನು ಒದರಿ ಹಿಂದೆ ಸರಿದು ನಿಂತ . ಒದರಿದ ರಭಸಕ್ಕೆ ಮೂಗುದಾರದ ಗಾತ್ರದ, ತೋಳುದ್ದದ ಹಾವೊಂದು ಮೂರ್ನಾಲ್ಕು ಮಾರು ದೂರದಲ್ಲಿ ರಪ್ಪನೆ ಟಾರು ರೋಡಿನ ಮೇಲೆ ಬಿತ್ತು .
ರವಿಗೆ ಪಾದದ ಮೇಲೆ ವಸ್ತುವೊಂದು ಸರಿಯುತ್ತಿದಾಗ ಕಿಂಚಿತ್ತೂ ಭಯವಾಗಿರಲಿಲ್ಲ. ಆದರೆ ಅದು ಹಾವಾಗಿ ಕಣ್ಣೆದುರು ಬಿದ್ದಾಗ ಭಯವಾಗತೊಡಗಿತು. ಅದು ನಾಗರಹಾವೆಂದು ಖಾತ್ರಿಯಾದಾಗ ಭಯ ಇಮ್ಮಡಿಯಾಯಿತು . ಅದರಿಂದ ತನಗೆ ಅಪಾಯವಾಗಬಹುದೆಂಬ ಕಾರಣಕ್ಕೆ ಆತನಿಗೆ ಭಯವಾಗಲಿಲ್ಲ. ಅವನ ಭೀತಿಗೆ ಬೇರೆಯದೇ ಕಾರಣವಿತ್ತು .
ಎದುರಿಗೆ ಬಸ್ಟ್ಟಾಂಡಿನಲ್ಲಿ ಏಳೆಂಟು ಜನ ಹರಟೆ ಹೊಡೆಯುತ್ತಾ ನಿಂತಿದ್ದರು. ಪಕ್ಕದ ಗೂಡಂಗಡಿಯಲ್ಲಿ ಇಬ್ಬರು ಬೀಡಿ ಸೇದುತ್ತಾ ನಿಂತಿದ್ದರು. ಆಚೆಬದಿಯಲ್ಲಿ ಒಬ್ಬ ಹಸುಕರುಗಳನ್ನು ಅಟ್ಟಿಕೊಂಡು ಜಮೀನಿನ ಕಡೆಗೆ ಹೊರಟಿದ್ದ. ಅವರಲ್ಲಿ ಒಬ್ಬನ ಕಣ್ಣಿಗೆ ಆ ಹಾವು ಕಾಣಿಸಿಕೊಂಡುಬಿಟ್ಟರೂ ಅದರ ಜೀವಕ್ಕೆ ಅಪಾಯ ತಪ್ಪಿದ್ದಲ್ಲ ಎಂಬ ಆತಂಕವೇ ರವಿಯ ಭಯಕ್ಕೆ ಮೂಲಕಾರಣವಾಗಿತ್ತು . ಆ ಎಳೆನಾಗರ ಕೂಡ ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ಮೆಲ್ಲಮೆಲ್ಲಗೆ ಚಲಿಸುತ್ತಾ ರವಿಯ ದಿಗಿಲನ್ನು ಇನ್ನಷ್ಟು ಹೆಚ್ಚಿಸಿತು .
ಬಸ್ಟಾಂಡಿನಲ್ಲಿ ಕುಳಿತಿದ್ದವರ ಪೈಕಿ ಒಬ್ಬನೇ ಒಬ್ಬ ರವಿ ಕಾಲು ಒದರಿದ್ದನ್ನು ಗಮನಿಸಿಬಿಟ್ಟಿದ್ದ . ಆ ಹಾವೂ ಅವನ ಕಣ್ಣಿಗೆ ಬೀಳಲು ತಡವಾಗಲಿಲ್ಲ. ಅವನ ಕೂಗಿಗೆ ಉಳಿದವರೆಲ್ಲ ಎದ್ದು ಹಾವಿನತ್ತ ದೌಡಾಯಿಸಿದರು . ರವಿಗೆ ಇನ್ನು ಹಾವಿನ ಕಥೆ ಮುಗಿದಂತೆಯೇ ಅನ್ನಿಸಿತು . ಏನೂ ತೋಚದೇ ದಿಕ್ಕೆಟ್ಟು ನಿಂತುಬಿಟ್ಟ .. ಅದು ನಾಗರಹಾವೆಂದು ಖಾತ್ರಿಯಾದಾಗ ಗುಂಪು ಮತ್ತಷ್ಟು ಉದ್ರೇಕಗೊಂಡಿತು .. ಕೆಲವರು ಹೆಡೆಗೆ ಹೆದರಿ ಹಿಂದೆ ನಿಂತರು, ಕೆಲವರು ಬಡಿಗೆಗಾಗಿ ತಡಕಾಡುತ್ತಿದ್ದರು . ಏತನ್ಮಧ್ಯೆ ಹಾವು ನಿಧಾನಕ್ಕೆ ರಸ್ತೆಯಂಚಿಗೆ ಬಂದಿತ್ತು ..
ಗುಂಪಿನೊಳಗೆ ಯಾರೋ ಒಬ್ಬ -ಹೋಗ್ಲಿ ಬಿಡಿ ಅತ್ಲಾಗೆ ಸಣ್ ಮರಿ - ಅಂದ . ರವಿ ಮೆಲ್ಲಗೆ ದನಿಗೂಡಿಸಿದ.
ಈಗ ಬೆರಳ್ ಗಾತ್ರ ಇರೋದು ಮುಂದೆ ರಟ್ಟೆ ಗಾತ್ರ ಆದಾಗ ನಮ್ಗೇ ಅಪಾಯ . ಈಗ್ಲೇ ಇದ್ಕೆ ಗತಿ ಕಾಣಿಸ್ಬೇಕು ಎನ್ನುತ್ತಾ ಒಬ್ಬ ದಡಿ ಹಿಡಿದು ಓಡಿ ಬಂದ. ಉಳಿದವರು ಅವನ ಮಾತಿಗೆ ಹೌದೆಂದು ತಲೆಯಾಡಿಸಿ ಹುರಿದುಂಬಿಸಿದರು.
ರವಿಗೆ ಆಶ್ಚರ್ಯದ ಜೊತೆಗೆ ವಿಷಾದವೂ ಆಯಿತು .
ಈ ಮನುಷ್ಯ ಎಂಬ ಪ್ರಾಣಿ ತನ್ನಂತಹ ಇನ್ನೊಂದು ಪ್ರಾಣಿಯನ್ನು- ಆತನಿಗೆ ಯಾವುದೇ ಹಕ್ಕಿಲ್ಲದಿದ್ದರೂ- ನಿರ್ನಾಮ ಮಾಡಲು ಹುಡುಕಿಕೊಂಡಿರುವ ಸಮರ್ಥನೆಯನ್ನು ಕೇಳಿ ವಿಷಾದವಾಯಿತು .
ಮನುಷ್ಯನೆಂಬ ಸ್ವಾರ್ಥಿ ತನ್ನದೇ ಕುಡಿಗಳ ದುರ್ಗುಣಗಳ ಬಗ್ಗೆಯೂ ಇಷ್ಟೇ ಗಂಭೀರವಾಗಿ ಯೋಚಿಸಿ ಚಿಗುರಿನಲ್ಲೇ ಚಿವುಟಿ ಹಾಕಿದ್ದರೆ ಜಗತ್ತು ಎಷ್ಟು ಸುಂದರವಾಗಿರುತ್ತಿತ್ತು ಅನ್ನಿಸಿತು .
ಗದ್ದಲದಲ್ಲಿ ಹಾವು ರಸ್ತೆಯಂಚಿನಲ್ಲಿದ್ದ ಮುರುಕು ಇಟ್ಟಿಗೆ ಗುಡ್ಡೆಗೆ ನುಸುಳಿಕೊಂಡಿತು . ಅದರ ಬಾಲ ಕಿಂಡಿಯೊಳಗೆ ನುಸುಳಿ ಮರೆಯಾದದ್ದನ್ನು ನೋಡಿ ರವಿಗೆ ಕೊಂಚ ನೆಮ್ಮದಿಯಾಯಿತು . ಆದರೆ ಉದ್ರಿಕ್ತ ಗುಂಪು ಬಿಡಬೇಕಲ್ಲ . ನೋಡನೋಡುತ್ತಲೇ ಗುಡ್ಡೆಯನ್ನು ಕೆದಕಿ ನೆಲಸಮ ಮಾಡಿಯೇಬಿಟ್ಟರು .. ಹಾವಿನ ಹಣೆಯೇನೋ ಕಾಣಿಸಿತು . ಆದರೆ ಅದರ ಹಣೆಬರಹ ಬೇರೆಯೇ ಇತ್ತು . ಬಡಿಗೆ ಏಟಿಗೆ ಸಿಗದೇ ಚರಂಡಿಯ ಚಪ್ಪಡಿಯ ಕಿಂಡಿಯೊಳಗೆ ನುಸುಳಿ ಅಳಿವುಉಳಿವಿನ ಹೋರಾಟದಲ್ಲಿ -ತಾತ್ಕಾಲಿಕವಾದರೂ- ದೊಡ್ಡ ಗೆಲುವಿನೊಡನೆ ಮುಂದಿನ ಸವಾಲುಗಳಿಗೆ ಸಜ್ಜಾಗತೊಡಗಿತು .
ಗುಂಪು ಸೋಲಿನಿಂದ ಪರಿತಪಿಸುತ್ತಿದ್ದರೆ ರವಿ ಅವ್ಯಕ್ತ ನಿರಾಳತೆಯಿಂದ ಬೈಕ್ ಹತ್ತಿದ. *ಕೃಪೆ: ಗವಿಸ್ವಾಮಿ.* ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment