ದಿನಕ್ಕೊಂದು ಕಥೆ. 493

  ದಿನಕ್ಕೊಂದುಕಥೆ                                                 ತೋಳದ ಅತಿಯಾಸೆ

ಕಾಡಿನಲ್ಲಿದ್ದ ತೋಳ ಹಸಿವಿನಿಂದ ಕಂಗಾಲಾಗಿತ್ತು. ಹಲವು ದಿನಗಳಿಂದ ಅದಕ್ಕೆ ಸರಿಯಾಗಿ ಆಹಾರ ಸಿಕ್ಕಿರಲಿಲ್ಲ. ಅದಕ್ಕೇ ಹಳ್ಳಿಯ ಕಡೆಗೆ ಹೆಜ್ಜೆ ಹಾಕಿತು. ಕಾಡಿನ ಅಂಚಿನಲ್ಲಿದ್ದ ರೈತನ ಮನೆಯ ಮುಂದೆ ಹೊಂಚು ಹಾಕತೊಡಗಿತು. ರೈತ ಇದನ್ನು ಗಮನಿಸಿ, "ಏನಪ್ಪಾ ಮಾರಾಯ? ಬೆಳಗ್ಗೆನೇ ಬಂದು ಮನೆ ಮುಂದೆ ನಿಂತಿದ್ದೀಯಾ' ಅಂದನು. ಅದಕ್ಕೆ ತೋಳವು, "ಮೂರು- ನಾಲ್ಕು ದಿನಗಳಿಂದ ಆಹಾರ ಸಿಕ್ಕಿಲ್ಲ, ಹಸಿವಿನಿಂದ ಕಂಗಾಲಾಗಿದ್ದೇನೆ.' ಎಂದಿತು. ರೈತನು ಸ್ವಲ್ಪ ಹೊತ್ತು ಯೋಚಿಸಿ, ತನಗೆಂದು ಮಾಡಿಕೊಂಡಿದ್ದ ಮಾಂಸಾಹಾರದಲ್ಲಿ ಸ್ವಲ್ಪ ಪಾಲನ್ನು ಕೊಟ್ಟನು. ಗಬಗಬನೆ ತಿಂದ ತೋಳ "ಇನ್ನೂ ಬೇಕೆಂದಿತು.'. ರೈತ ಒಳಕ್ಕೆ ಹೋಗಿ ಇನ್ನೂ ಸ್ವಲ್ಪ ಕೊಟ್ಟನು. ತೋಳಕ್ಕೆ ಎಷ್ಟು ತಿಂದರೂ ತೃಪ್ತಿಯೇ ಆಗುತ್ತಿರಲಿಲ್ಲ. ಕೊನೆಗೆ ಹಾಲು, ಸೊಪ್ಪು, ತರಕಾರಿ, ಹಣ್ಣು, ಹಂಪಲು, ಮುದ್ದೆ, ಸಾರು ಅದನ್ನೂ ಬಿಡಲಿಲ್ಲ. ರೈತನಿಗೇ ಆ ದಿನ ಊಟ ಇಲ್ಲದಾಯಿತು. ರೈತ ತನ್ನ ಬಗ್ಗೆ ಯೋಚಿಸದೆ, ತೋಳದ ಹಸಿವು ನೀಗಿತಲ್ಲ ಎಂದು ಸಂತಸಪಟ್ಟನು..

ಅದೇ ದಿನ ರಾತ್ರಿ ರೈತ ನೀರು ಕುಡಿದು ಮಲಗಿದ್ದಾಗ ತೋಳ ಕಳ್ಳ ಹೆಜ್ಜೆಯನ್ನಿಡುತ್ತಾ ಮನೆಯಂಗಳಕ್ಕೆ ಬಂದಿತು. ತೋಳದ ಮನಸ್ಸಿನಲ್ಲಿ ದುರಾಸೆ ಮನೆ ಮಾಡಿತ್ತು. ರೈತನ ಸಾಕುಪ್ರಾಣಿಗಳ ಮೇಲೆ ತೋಳದ ಕಣ್ಣು ಬಿದ್ದಿತ್ತು. ಇನ್ನೇನು ಅದು ಲಾಯದಲ್ಲಿದ್ದ ಕುದುರೆಯ ಮೈಮೇಲೆ ಬೀಳಬೇಕು, ಅಷ್ಟರಲ್ಲಿ ರೈತ ಬಂದುಬಿಟ್ಟನು. ಲಾಯದಲ್ಲಿ ತೋಳವನ್ನು ನೋಡಿ ಅವನಿಗೆಲ್ಲವೂ ಅರ್ಥವಾಯಿತು. ತೋಳ ತಲೆಬಗ್ಗಿಸಿತು. ರೈತ "ಕುದುರೆಯನ್ನು ತಿನ್ನಲೆಂದು ಬಂದೆಯಲ್ಲವೇ? ಧಾರಾಳವಾಗಿ ತಿನ್ನು. ನನ್ನದೇನೂ ಅಭ್ಯಂತರವಿಲ್ಲ' ಎಂದು ಕುದುರೆಯತ್ತ ಕಣ್ಣು ಮಿಟುಕಿಸಿದನು. ಸಂತಸಗೊಂಡ ತೋಳ ಕುದುರೆ ಬಳಿಗೆ ತೆರಳಿತು. ಕುದುರೆ "ತೋಳಪ್ಪ ನೀನು ನನ್ನನ್ನು ಹಿಂದಿನಿಂದ ತಿನ್ನು.' ಎಂದಿತು. ತೋಳಕ್ಕೆ ಇನ್ನೂ ಖುಷಿಯಾಯಿತು. ಕುದುರೆಯ ಬಾಲಕ್ಕೆ ಬಾಯಿ ಹಾಕುವಷ್ಟರಲ್ಲಿ ಕುದುರೆ ತನ್ನ ಬಲಶಾಲಿ ಕಾಲುಗಳಿಂದ ಜೋರಾಗಿ ಒದ್ದಿತು. ಅದರ ಒದೆತಕ್ಕೆ ತೋಳ ದೂರ ಹೋಗಿ ಬಿದ್ದಿತು. ಅದರ ಹಲ್ಲುಗಳೆಲ್ಲಾ ಮುರಿದವು. ಅಲ್ಲಿಂದ ಓಡಿಹೋದ ತೋಳ ಮತ್ತೆ ಆ ಕಡೆ ತಲೆ ಹಾಕಲಿಲ್ಲ.

ಆಧಾರ : ಉದಯವಾಣಿ (ಆದಿತ್ಯ ಹೆಚ್‌.ಎಸ್‌. ಹಾಲ್ಮತ್ತೂರು)
ಕೃಪೆ :ಕಿಶೋರ್. ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059