ದಿನಕ್ಕೊಂದು ಕಥೆ. 498

Veeresh Arssikere:
*🌻ದಿನಕ್ಕೊಂದು ಕಥೆ🌻                                        ಎಲ್ಲಿದೆ ಸ್ವರ್ಗ? ಎಲ್ಲಿದೆ ನರಕ? ನಿಮಗೆ ಗೊತ್ತೇನು?*

‘ನಿಮಗೊಂದು ಪ್ರಶ್ನೆ! ಸ್ವರ್ಗ-ನರಕಗಳೆಂಬುವುದು ಇವೆಯಾ? ಎಲ್ಲಿವೆ? ಹೇಗಿವೆ?’ಈ ಪ್ರಶ್ನೆಯನ್ನು ನಮ್ಮ ಸ್ವಾಮೀಜಿಯವರಿಗೆ ಕೇಳಿದಾಗ ಅವರು ಜೋರಾಗಿ ನಕ್ಕು ‘ಸ್ವರ್ಗ-ನರಕಗಳ ಬಗ್ಗೆ ಕೇಳಿದ್ದೇನೆ. ಸತ್ತವರು ಮಾತ್ರ ಅಲ್ಲಿಗೆ ಹೋಗುತ್ತಾರಲ್ಲವೇ? ನಾನಿನ್ನೂ ಸತ್ತಿಲ್ಲ. ಅಲ್ಲಿಗೆ ಹೋಗಿಲ್ಲ. ನನಗೆ ಗೊತ್ತಿರುವ ಅನೇಕರು ಸತ್ತಿದ್ದಾರೆ. ಆದರೆ ಅವರು ಯಾರೂ ತಿರುಗಿ ಬಂದಿಲ್ಲ. ವರದಿ ತಂದಿಲ್ಲ. ಆದ್ದರಿಂದಾಗಿ ಸ್ವರ್ಗ-ನರಕಗಳ ಬಗ್ಗೆ ಏನು ಹೇಳಲಿ?’ಎಂದರು.

‘ಅವುಗಳ ಬಗ್ಗೆ ಎಲ್ಲ ದೇಶಗಳವರೂ, ಧರ್ಮಗಳವರೂ ಮಾತನಾಡುತ್ತಾರಲ್ಲ? ಅದರಲ್ಲೂ ನರಕದ ವಿಧ ವಿಧವಾದ ವರ್ಣನೆಗಳನ್ನು ಮಾಡುತ್ತಾರೆ. ಏಳು ಬಗೆಯ ನರಕಗಳಂತೆ. ಒಂದಕ್ಕಿಂತ ಒಂದು ಘೋರವಂತೆ. ಪಾಪ ಮಾಡಿದವರ ಪಾಪಗಳ ಪ್ರಮಾಣಕ್ಕೆ ಅನುಸಾರವಾಗಿ ಬೇರೆ ಬೇರೆ ನರಕಗಳ ಶಿಕ್ಷೆ ಸಿಗುತ್ತದಂತೆ’ಎಂದು ಮತ್ತೆ ಕೇಳಲಾಯಿತು.

ಸ್ವಾಮೀಜಿಯವರು ‘ಒಳ್ಳೆಯದನ್ನು ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರೆ ಜನ ನಂಬದಿರಬಹುದು. ಆದರೆ ಕೆಟ್ಟದ್ದು ಮಾಡಿದರೆ ನರಕಕ್ಕೆ ಹೋಗುತ್ತೀರೆಂದರೆ ಅದನ್ನು ಹೆದರಿಕೆಯಿಂದ ನಂಬುತ್ತಾರೆ. ಜನ ಕೆಟ್ಟ ಪರಿಣಾಮಗಳಿಗೆ ಬೆಲೆ ಕೊಡುತ್ತಾರೆಯೇ ಹೊರತು ಒಳ್ಳೆಯ ಪರಿಣಾಮಗಳಿಗೆ ಬೆಲೆ ಕೊಡುವುದಿಲ್ಲ’ಎಂದರು. ಈ ಕುರಿತು ಅವರೇ ಒಂದು ಕತೆ ಹೇಳಿದರು. ರಾಜನ ಸೇವಕನೊಬ್ಬ ಒಮ್ಮೆ ದೂರದೂರಿಗೆ ಹೋದನಂತೆ. ಆ ಊರಿನವರು ಅವನನ್ನೇ ರಾಜನಂತೆ ಕಂಡರು. ಆದರದಿಂದ ಸ್ವಾಗತಿಸಿದರು.

ಬಿಡಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದರು. ಮಲಗುವುದಕ್ಕೆ ಮುಂಚೆ ಅವರೆಲ್ಲ, ‘ನಿಮಗೇನಾದರು ಬೇಕಾದರೆ ನಮ್ಮನ್ನು ಕರೆಯಿರಿ. ನಾವು ನಿಮ್ಮ ಸೇವೆಗೆ ಸಿದ್ಧ’ಎಂದು ಆಶ್ವಾಸನೆ ನೀಡಿದರು. ಅವರು ತೋರಿದ ಆದರಾತಿಥ್ಯ ಗಳಿಗೆ ಸೇವಕ ಉಬ್ಬಿ ಹೋದ. ಮಧ್ಯರಾತ್ರಿಯವರೆಗೆ ನಿದ್ದೆಯೇ ಬರಲಿಲ್ಲ. ಬಾಯಾರಿಕೆ ಎನಿಸಿತು. ‘ನೀರು! ನೀರು!’ಎಂದು ಕೂಗಿದ. ಜನ ಗಾಢನಿದ್ದೆಯಲ್ಲಿದ್ದರು. ಇವನ ಕೂಗು ಅವರಿಗೆ ಕೇಳಿಸಲಿಲ್ಲ. ನಾಲ್ಕಾರು ಬಾರಿ ನೀರು ಎಂದು ಕೂಗಿದಾಗಲೂ ಯಾರೂ ಬರಲಿಲ್ಲ. ಸೇವಕನಿಗೆ ಸಿಟ್ಟು ಬಂತು. ‘ನೀರು! ನೀರು!’ಎಂದು ಪದೇ ಪದೆ ಗಟ್ಟಿಯಾಗಿ ಕಿರುಚಿದರೂ ಯಾರೂ ಎದ್ದು ಬರಲಿಲ್ಲ. ಆತ ಸ್ವಲ್ಪ ಯೋಚಿಸಿ ‘ಬೆಂಕಿ! ಬೆಂಕಿ!’ ಎಂದು ಜೋರಾಗಿ ಕಿರುಚತೊಡಗಿದ.

ಎಲ್ಲರೂ ದಡಬಡಿಸಿ ಎದ್ದು ತಮ್ಮ ಕೈಗೆ ಸಿಕ್ಕ ಚೆಂಬು, ಬಿಂದಿಗೆ, ಬಕೆಟ್‌ಗಳಲ್ಲಿ ನೀರು ತುಂಬಿಕೊಂಡು ಬೆಂಕಿ ಆರಿಸಲು ಓಡಿ ಬಂದರು. ಎಲ್ಲರ ಕೈಯಲ್ಲೂ ನೀರು ತುಂಬಿದ ಪಾತ್ರೆಗಳು. ಆದರೆ ಬೆಂಕಿ ಕಾಣಿಸಲಿಲ್ಲ. ಅವರು ‘ಎಲ್ಲಿದೆ ಬೆಂಕಿ’ಎಂದು ಕೇಳಿದರು. ಸೇವಕ ಶಾಂತವಾಗಿ ‘ಇಲ್ಲಿದೆ ಬೆಂಕಿ!’ಎಂದು ತನ್ನ ಗಂಟಲನ್ನು ತೋರಿಸಿ, ‘ಇದನ್ನು ನಂದಿಸಲು ಒಂದು ಚೆಂಬು ನೀರು ಸಾಕು! ಉಳಿದವರು ಹೋಗಬಹುದು’ಎಂದ. ಎಲ್ಲರೂ ತಮ್ಮ ನಿದ್ದೆ ಕೆಟ್ಟಿದ್ದಕ್ಕಾಗಿ ಮನಸ್ಸಿನಲ್ಲಿಯೇ ಬಯ್ದುಕೊಳ್ಳುತ್ತಾ ಹಿಂತಿರುಗಿ ಹೋದರು. ಸ್ವಾಮೀಜಿಯವರು, ‘ನೀರು-ನೀರು ಎಂದಾಗ ಯಾರೂ ಬರಲಿಲ್ಲ. ಬೆಂಕಿ-ಬೆಂಕಿ ಎಂದಾಗ ಊರೇ ಓಡಿ ಬಂತು. ಹಾಗೆಯೇ ಒಳ್ಳೆಯದನ್ನು ಮಾಡಿ ಸ್ವರ್ಗಕ್ಕೆ ಹೋಗುತ್ತೀರೆಂದರೆ ಜನ ಸುಮ್ಮನಿರಬಹುದು. ಆದರೆ ಕೆಟ್ಟದ್ದನ್ನು ಮಾಡಿದರೆ ನರಕಕ್ಕೆ ಹೋಗುತ್ತೀರಿ ಎಂದರೆ ಹೆದರುತ್ತಾರೆ.

ಅಷ್ಟರ ಮಟ್ಟಿಗೆ ಸ್ವರ್ಗ- ನರಕಗಳು ಉಪಯೋಗಕಾರಿ!’ಎಂದರು. ನಾವು ಯಾರಾದರೂ ಬಾಯಾರಿಕೆ ಎಂದಾಗ ನೀರು ತಂದು ಕೊಡುವ ಜನರೋ ಅಥವಾ ಬೆಂಕಿ-ಬೆಂಕಿ ಎಂದಾಗ ಬೆದರಿ ನೀರು ತರುವ ಜನರೋ? ಸ್ವರ್ಗದಾಸೆಗೆ ಒಳ್ಳೆಯದನ್ನು ಮಾಡುವ ಜನರೋ ಅಥವಾ ನರಕಕ್ಕೆ ಹೆದರಿ ಕೆಟ್ಟದ್ದನ್ನು ಮಾಡಲು ಹಿಂಜರಿಯುವ ಜನರೋ? ಉತ್ತರವನ್ನು ನಮಗೆ ನಾವೇ ಮೆಲ್ಲಗೆ ಹೇಳಿಕೊಳ್ಳಬಹುದು!

ಕೃಪೆ :ಷಡಕ್ಷರಿ.                                    ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097