ದಿನಕ್ಕೊಂದು ಕಥೆ. 558
*🌻ದಿನಕ್ಕೊಂದು ಕಥೆ🌻 ಹೀಗೂ ವಾರಾಂತ್ಯ ಕಳೆಯಬಹುದು ನೋಡಿ…!*
ವಾರಪೂರ್ತಿ ದುಡಿಮೆಯಲ್ಲಿ ಹೈರಾಣಾದವರು ಅವರವರ ಭಾವಕ್ಕೆ ತಕ್ಕಂತೆ ವಾರಾಂತ್ಯ ಕಳೆಯಲು ಯೋಜನೆ ಹಾಕಿ ಕೊಂಡಿರುತ್ತಾರೆ. ವಾರಾಂತ್ಯವನ್ನು ಮೋಜು ಮಸ್ತಿಯಲ್ಲಿ ಹಾಳುಮಾಡದೆ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟ ಎರಡು ಮಾದರಿ ತಂಡಗಳ ಪರಿಚಯ ಇಲ್ಲಿದೆ.
ವಾರ ಪೂರ್ತಿ ಮೈಮುರಿಯುವ ದುಡಿತ, ಕಂಪ್ಯೂಟರ್ ಕೀಬೋಡ್ ಗರ್ಳ ಜತೆಗಿನ ಅವಿರತ ಸಾಂಗತ್ಯ, ಬೆಳಗ್ಗೆ 9 ರಿಂದ ರಾತ್ರಿ ಒಂಬತ್ತರವರೆಗೆ ಪುರುಸೊತ್ತು ಅನ್ನುವ ಪದದ ಅರ್ಥವೇ ಗೊತ್ತಿಲ್ಲದಂತೆ ಮನಸ್ಸು ಕೆಲಸದ ಒಳಗೆ ಮುದುಡಿ ಕುಳಿತಿರುತ್ತದೆ. ಇನ್ನು ಟ್ರಾಫಿಕ್ ಮಧ್ಯೆ ಸಿಕ್ಕಿಬಿದ್ದರಂತೂ ಹೊರಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆಯೆಂದು ತಿಳಿಯುವ ಛಾನ್ಸೇ ಇರುವುದಿಲ್ಲ. ಇವೆಲ್ಲದರಿಂದ ಹೊರಗೆ ಬರಬೇಕೆಂದರೆ ವಾರಾಂತ್ಯಕ್ಕೆ ಕಾಯಲೇಬೇಕು. ಹೀಗಾಗಿ ಸಿಕ್ಕಿದ ಎರಡು ದಿನಗಳನ್ನು ಸದ್ಬಳಕೆ ಮಾಡಲು ಹೊಸ ದಾರಿಗಳನ್ನು ಹುಡುಕುತ್ತಾ ಇರುತ್ತಾರೆ. ಕೆಲವರು ಸಿನಿಮಾ, ಡ್ಯಾನ್ಸ್, ಪಬ್ ಅಂತ ರಿಲ್ಯಾಕ್ಸ್ ಆದ್ರೆ ಇನ್ನುಳಿದವರು ಇದ್ಯಾವುದೂ ನಮಗೆ ಬೇಡ ಪ್ರಕೃತಿ ಮಡಿಲಲ್ಲಿ ಮೈಮರೆಯುವುದೇ ನಮಗಿಷ್ಟ, ಕನಿಷ್ಠ ಎರಡು ದಿನಗಳಾದರೂ ಈ ಎಲ್ಲಾ ಜಂಜಾಟದಿಂದ ಹೊರ ಬರಬೇಕು ಅಂದುಕೊಳ್ಳುತ್ತಾರೆ.
ಮತ್ತೆ ಕೆಲವರದ್ದು ಸಮಾಜಸೇವೆ ಮಾಡುವ ಇಂಗಿತ. ಈ ಮೂಲಕ ಬದುಕನ್ನು ಸಾರ್ಥಕವಾಗಿಸುವ ಬಯಕೆ. ಹೀಗೆ ಅವರವರ ಭಾವಕ್ಕೆ ತಕ್ಕಂತೆ ವೀಕೆಂಡ್‌ಗಳನ್ನು ಕಳೆಯುವುದು ಬೆಂಗಳೂರಿನಂತಹ ಮಹಾನಗರದಲ್ಲಿ ಸಾಮಾನ್ಯ. ಇಂತಹ ಆಸಕ್ತರಿಗೋಸ್ಕರ ಬೆಂಗಳೂರಿನ ಟ್ರೆಕ್ಕಿಂಗ್ ಕ್ಲಬ್ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಟ್ರೆಕ್ಕಿಂಗ್ ಅಂದಾಕ್ಷಣ ಸೈಕ್ಲಿಂಗ್, ಬೈಕ್ ರೈಡಿಂಗ್, ಪ್ರವಾಸವಷ್ಟೇ ಇವರ ಉದ್ದೇಶ ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಇದರ ಜತೆಗೇನೆ ಸಮಾಜಮುಖಿ ಕಾರ್ಯಕ್ರಮ ವನ್ನು ಈ ಟ್ರೆಕ್ಕಿಂಗ್ ಕ್ಲಬ್ ೆತನಮ ವಾರಾಂತ್ಯಗಳಲ್ಲಿ ನಡೆಸುತ್ತಾ ಬಂದಿದೆ.
ಕೇವಲ ಮೋಜು ಮಸ್ತಿಗಾಗಿಯಲ್ಲದೆ ಸಮಾಜ ಸುಧಾರಣೆಯ ಉದ್ದೇಶ ಇವರದ್ದು. ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ ವಿರೇಂದರ್ ಶಿರೋಹಿ ಹಾಗೂ ಚೈತನ್ಯ ಕುಮಾರ್ ಈ ಟ್ರೆಕ್ಕಿಂಗ್ ಕ್ಲಬ್ ಸ್ಥಾಪಕರು. ಸುಮಾರು 20,000 ಸದಸ್ಯರಿರುವ ಕ್ಲಬ್‌ನಲ್ಲಿ ಐಟಿ- ಬಿಟಿ ಸೇರಿದಂತೆ ಸಿವಿಲ್, ಮೆಕ್ಯಾನಿಕಲ್ ಎಂಜಿನಿಯರ್, ವೈದ್ಯರು, ವಕೀಲರು ಹೀಗೆ ವಿಭಿನ್ನ ವೃತ್ತಿಯಲ್ಲಿರುವವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹಸಿರ ಉಳಿಸಲು ಸಸಿ ಕಾಣಿಕೆ
ಉದ್ಯಾನ ನಗರಿಯೆಂದು ಕರೆಯಲ್ಪಡುತ್ತಿದ್ದ ಬೆಂಗಳೂರಿನಲ್ಲಿ ಹಸಿರೆಲ್ಲಿದೆಯೆಂದು ಹುಡುಕಾಡುವ ಪರಿಸ್ಥಿತಿ ಇಂದು ತಲೆದೂರಿದೆ. ಅಭಿವೃದ್ಧಿ ಕನಸಿಗೆ ಮೊದಲು ತುತ್ತಾಗುವುದೇ ಇಲ್ಲಿನ ಮರಗಿಡಗಳು. ಬೆಂಗಳೂರು ಟ್ರೆಕ್ಕಿಂಗ್ ಕ್ಲಬ್ ತಂಡ ‘ಸೇ ಟ್ರೀ’ ಎನ್‌ಜಿಒದ ಜತೆಗೂಡಿ ಪರಿಸರ ಪ್ರೇಮಿಗಳನ್ನ ಒಂದು ಸೂರಿನಡಿ ಕರೆತಂದು, ಮತ್ತೆ ಬೆಂಗಳೂರನ್ನು ಹಸಿರು ನಗರವಾಗಿಸಲು ಪ್ರಯತ್ನಿಸುತ್ತಿದೆ. ಇಲ್ಲಿಯವರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಸಿಗಳನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಟ್ಟಿದ್ದಾರೆ.
ಬೆಟ್ಟ ಸ್ವಚ್ಛತಾ ಕಾರ್ಯಕ್ರಮ
ಜನರು ಸಾಮಾನ್ಯವಾಗಿ ವೀಕೆಂಡ್ ಮಸ್ತಿಗೋಸ್ಕರ ಬೆಂಗಳೂರಿಗೆ ಸಮೀಪದಲ್ಲಿರುವ ಬೆಟ್ಟಗಳಿಗೆ ತೆರಳುತ್ತಾರೆ. ತಮ್ಮ ಜತೆಗೊಯ್ಯುವ ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲಿಯೇ ಎಸೆದು ಅಧ್ವಾನ ಸೃಷ್ಟಿಸುತ್ತಾರೆ. ಹೀಗಾಗಿ ಕೆಲವೊಂದು ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಕಸದ ರಾಶಿಯೇ ತುಂಬಿರುತ್ತದೆ. ಬಿಟಿಸಿ ತಂಡದ ಸದಸ್ಯರು ಸ್ಕಂದಗಿರಿ ಮತ್ತು ಮಾಕಳಿ ದುರ್ಗ ಬೆಟ್ಟಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಸುಮಾರು 2,185ಕೆಜಿ ಗಳಷ್ಟು ಪ್ಲಾಸ್ಟಿಕ್ ಮತ್ತು ಇತರೆ ಬಾಟಲಿಗಳನ್ನು ಆರಿಸಿ ತಂದು ಮರು ವಿಂಗಡ ಣ ಘಟಕಗಳಿಗೆ ನೀಡಿದ್ದಾರೆ.
ಉಚಿತ ಆರೋಗ್ಯ ತಪಾಸಣೆ
ಬೆಂಗಳೂರಿನ ಸುತ್ತ ಮುತ್ತಲ ಹಳ್ಳಿಗಳಲ್ಲಿ ಮೆಡಿಕಲ್ ಕ್ಯಾಂಪ್‌ಗಳನ್ನು ಆಯೋಜಿಸಿ, ಉಚಿತ ಆರೋಗ್ಯ ತಪಾಸಣೆಯಷ್ಟೇ ಅಲ್ಲದೆ ಔಷಧಿ ವಿತರಣೆಯನ್ನೂ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 1,275 ಬಡಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ.
ರಕ್ತದಾನ ಶಿಬಿರ
ರಕ್ತದಾನ ಶ್ರೇಷ್ಠ ದಾನ ಅಂತಾರೆ. ಲಯನ್ಸ್ ಕ್ಲಬ್‌ನ ಸಹಯೋಗದೊಂದಿಗೆ ಇಲ್ಲಿಯವರೆಗೆ ಸುಮಾರು 300 ಯೂನಿಟ್‌ನಷ್ಟು ರಕ್ತದಾನ ಮಾಡಿಸಿದ್ದಾರೆ. ಈ ಮೂಲಕ ಅದೆಷ್ಟೋ ಜನರಿಗೆ ಜೀವದಾನವನ್ನೂ ಮಾಡಿದ್ದಾರೆ.
ಬೀದಿ ಮಕ್ಕಳೊಂದಿಗೆ ಹಬ್ಬದಾಚರಣೆ
ಕ್ರಿಸ್‌ಮಸ್ ಹಾಗೂ ಇತರ ಹಬ್ಬಗಳಂದು ಬೀದಿಬದಿಯಲ್ಲಿ ಭಿಕ್ಷೆ ಬೇಡುವ ಅಸಹಾಯಕ ಮಕ್ಕಳಿಗೆ ಉಡುಗೊರೆ ಮತ್ತು ಊಟ ಕೊಟ್ಟು ಅವರ ಮುಖದಲ್ಲಿ ಸಂತೋಷದ ಚಿಲುಮೆಯನ್ನು ಮೂಡಿಸಿದ್ದಾರೆ. ದತ್ತು ತೆಗೆದುಕೊಂಡಿರುವ ಬೀದಿ ನಾಯಿಗಳ ಬಗ್ಗೆ ಮುತುವರ್ಜಿ ವಹಿಸುತ್ತಾರೆ. ಅವುಗಳನ್ನು ಸ್ವಚ್ಛಗೊಳಿಸಿ ಬೇಕಾದ ಔಷಧಿ, ಆಹಾರ ಪೂರೈಸುತ್ತಾರೆ. ಇದಕ್ಕೆಲ್ಲಾ ಇವರು ಯಾವುದೇ ಫಂಡ್‌ನ್ನು ಸಂಗ್ರಹಿಸುತ್ತಿಲ್ಲ. ಸದಸ್ಯತ್ವದ ಮೊತ್ತದಿಂದಲೇ ಇದನ್ನೆಲ್ಲಾ ಭರಿಸಲಾಗುತ್ತಿದೆ. ಇನ್ನು ಹತ್ತಿರದಲ್ಲಿರುವ ಯಾರಿಗೂ ತಿಳಿದಿರದ ಪ್ರವಾಸಿ ತಾಣಗಳನ್ನು ಆಯ್ದುಕೊಂಡು ಪರಿಚಯಿಸುವ ಪ್ರಯತ್ನ ಕೂಡ ಇವರದ್ದು. ಕಡಿಮೆ ಖರ್ಚಿನಲ್ಲಿ ಸುಂದರ ತಾಣಕ್ಕೆ ಭೇಟಿ ಕೊಟ್ಟ ಖುಷಿ ಪ್ರವಾಸಿಗರಲ್ಲಿರುತ್ತದೆ. ಹೀಗೆ ಸಾಮಾಜಿಕ ಕಳಕಳಿಯುಳ್ಳ ಯುವಚೇತನಗಳು ಒಂದುಗೂಡಿ ವಾರದ ಎರಡು ದಿನಗಳನ್ನು ಸುಂದರ ಸಮಾಜದ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದಾರೆ.
‘ನಮ್ಮದು ಸ್ವಯಂ ಸೇವಾ ಸಂಸ್ಥೆ. ನಾನು ಸೇರಿದಂತೆ ನಮ್ಮೆಲ್ಲಾ ಸದಸ್ಯರಿಗೆ ಬಿಡುವು ಸಿಗುವುದು ವಾರಾಂತ್ಯದಲ್ಲಿ ಮಾತ್ರ. ವೆಬ್ ಸೈಟ್‌ನಲ್ಲಿ ಕಾರ್ಯಕ್ರಮದ ವಿವರವನ್ನು ತಿಳಸಿರುತ್ತೇವೆ. ಪ್ರತಿಯೊಬ್ಬ ಸದಸ್ಯರಿಗೂ ಈ ಬಗ್ಗೆ ಇ-ಮೇಲ್ ಮಾಡುತ್ತೇವೆ. ಆಸಕ್ತಿಯಿದ್ದವರು, ಬಿಡುವಿದ್ದವರು ರಿಜಿಸ್ಟ್ರೇಶನ್ ಮಾಡಿಸಿಕೊಳ್ಳುತ್ತಾರೆ. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಸದಸ್ಯರ ಬೇಕು ಬೇಡಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಆಯೋಜಕರು ಸೇರಿದಂತೆ ಪ್ರತಿ ಸದಸ್ಯರೂ ಖರ್ಚನ್ನು ಹಂಚಿಕೊಳ್ಳುತ್ತೇವೆ. ಭದ್ರತೆ, ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತೇವೆ. ಪ್ರವಾಸದ ಸಂದರ್ಭದಲ್ಲಿ ಧೂಮಪಾನ, ಮದ್ಯಪಾನ ಮಾಡಿದವರನ್ನು ಸದಸ್ಯತ್ವದಿಂದ ನಿರ್ಬಂಧಿಸಲಾಗುತ್ತದೆ’.
-ವೀರೇಂದರ್ ಶಿರೋಹಿ , ಬಿಟಿಸಿ ಸ್ಥಾಪಕ
‘ವಾರಪೂರ್ತಿಯ ಕೆಲಸದ ಒತ್ತಡವನ್ನು ನಾವು ಕ್ಯಾಂಪ್ ಮೂಲಕ ಮರೆಯುತ್ತೇವೆ. ಬೆಂಗಳೂರು ಟ್ರೆಕ್ಕಿಂಗ್ ಕ್ಲಬ್ ಎರಡು ದಿನಗಳ ಮಟ್ಟಿಗೆ ಬೆಂಗಳೂರಿನ ಕಲುಷಿತ ವಾತಾವರಣದಿಂದ ನಮ್ಮನ್ನು ಹೊರತಂದು ನಿಸರ್ಗದ ಮಡಿಲಲ್ಲಿ ಕಾಲ ಕಳೆಯಲು ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲದೆ ಸಮಾಜಸೇವೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳುವಂತೆ ಮಾಡಿದೆ. ಬಹಳಷ್ಟು ರಕ್ತದಾನ ಶಿಬಿರ, ಮೆಡಿಕಲ್ ಕ್ಯಾಂಪ್, ಬೆಟ್ಟವನ್ನು ಸ್ವಚ್ಛತೆಗೊಳಿಸುವ ಕಾರ್ಯಗಾರ, ಗಿಡನೆಡುವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಮನಸು ರೀಫ್ರೆಶ್ ಆಗಿದೆ’.
-ಚನ್ನಬಸಪ್ಪ ನಾದ, ಬಿಟಿಸಿ ಸದಸ್ಯ
ಕೃಪೆ:ಭವ್ಯ ಬೊಳ್ಳೂರು
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment