ದಿನಕ್ಕೊಂದು ಕಥೆ. 593

*🌻ದಿನಕ್ಕೊಂದು ಕಥೆ🌻                                 ಚಕ್ರಧರ್ ಅಲಾ : ಬುಲೆಟ್​ ಟ್ರೈನಿಗೆ ಲೋಗೊ ರಚಿಸಿದ ವಿದ್ಯಾರ್ಥಿಯ ಕತೆ ಕೇಳಿ*
ಹೈದರಾಬಾದ್ ನ ಈ ವಿದ್ಯಾರ್ಥಿ ಅಂತಿಮ ನಗೆ ಸೂಸುವ ಮುನ್ನ ಬರೋಬ್ಬರಿ 30 ಲೋಗೊ ವಿನ್ಯಾಸಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಒಂದರಲ್ಲಿಯೂ ವಿಜೇತರಾಗಿರಲಿಲ್ಲ. ಆದರೂ ನಿರುತ್ಸಾಹಗೊಳ್ಳದೆ 31ನೇ ಬಾರಿ ಮತ್ತೊಂದು ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಬಾರಿ ಅದೃಷ್ಟ ಅವರ ಕೈ ಹಿಡಿಯಿತು. ಮುಂಬೈ-ಅಹಮದಾಬಾದ್​ ನಡುವೆ ಚಿರತೆಯ ವೇಗದಲ್ಲಿ ಓಡಲಿರುವ ಬುಲೆಟ್​ ಟ್ರೈನಿಗೆ ಇವರು ರಚಿಸಿರುವ ಲೋಗೊ ಆಯ್ಕೆಗೊಂಡಿತು.

ಮೋದಿ ಬುಲೆಟ್ ‍ಟ್ರೈನಿಗೆ ಅಹಮದಾಬಾದ್ ವಿದ್ಯಾರ್ಥಿ ರಚಿಸಿದ ಲೋಗೊ ಸೆಲೆಕ್ಟ್ ಆಯ್ತು!
ಇದು ಚಕ್ರಧರ್​ ಆಲಾ ಎಂಬ ವಿದ್ಯಾರ್ಥಿಯ ಕತೆ. ಇವರು ನ್ಯಾಶನಲ್​ ಇನ್ಟಿಟ್ಯೂಟ್​ ಆಫ್​ ಡಿಸೈನ್​ನ ಎರಡನೇ ವರ್ಷದ ವಿದ್ಯಾರ್ಥಿ. ಇವರು ರಚಿಸಿರುವ ಚಿರತೆಯ ಲೋಗೊ ಇನ್ನು ಬುಲೆಟ್​ ಟ್ರೈನಿನ ಮೇಲೆ ರಾರಾಜಿಸಲಿದೆ.

ರೈಲು ಸೇರಿದಂತೆ ಸರ್ಕಾರದ ಎಲ್ಲ ಬುಲೆಟ್​ ರೈಲು ದಾಖಲೆಗಳು, ನಿಲ್ದಾಣಗಳು, ಟಿಕೆಟ್​ಗಳ ಮೇಲೆ ನನ್ನ ವಿನ್ಯಾಸವನ್ನು ನೋಡಲು ಕಾತರಿಸುತ್ತಿದ್ದೇನೆ ಎಂದು ಚಕ್ರಧರ್​ ಅತ್ಯುತ್ಸಾಹದಿಂದ ಹೇಳುತ್ತಾರೆ. ಅಂದ ಹಾಗೆ ಬುಲೆಟ್​ ರೈಲು ತನ್ನ ಯಾನವನ್ನು 2022ರ ಆಗಸ್ಟ್​ನಿಂದ ಪ್ರಾರಂಭಿಸಲಿದೆ

ಲೋಗೊ ಮ್ಯಾನ್ ಚಕ್ರಧರ್​ ಆಲಾ!
ಲೋಗೊ ಬಗ್ಗೆ ಮಾತನಾಡುವ ಅವರು ಅದರ ಸಣ್ಣ ಸಣ್ಣ ವಿವರಗಳನ್ನು ಹೇಳುತ್ತಾ ಹೋಗುತ್ತಾರೆ. ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ರೈಲು ಸಂಚಾರಿ ಮ್ಯಾಪ್​ನಂತೆ ಗೋಚರಿಸುತ್ತದೆ. ಮತ್ತು ಅದರಲ್ಲಿರುವ ಸಣ್ಣ ಚುಕ್ಕೆಗಳು ಮಾರ್ಗ ಮಧ್ಯದ ರೈಲು ನಿಲ್ದಾಣಗಳನ್ನು ಪ್ರತಿಬಿಂಬಿಸುತ್ತವೆ. ಇನ್ನು ಪ್ರಧಾನವಾಗಿ ಕಾಣುವ ಚಿರತೆಯ ಚಿತ್ರ ವೇಗ, ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ.

ಲೋಗೋಗಳ ಚಕ್ರಸುಳಿ ಚಕ್ರಧರ್​:
ಚಕ್ರಧರ್​ ಮೂಲತಃ ಹೈದರಾಬಾದ್​ನವರು. ಅವರ ತಂದೆ ಸರ್ಕಾರಿ ಅಧಿಕಾರಿ ಮತ್ತು ತಾಯಿ ಶಾಲೆಯ ಪ್ರಿನ್ಸಿಪಾಲ್​ ಆಗಿದ್ದಾರೆ. ಬಾಲ್ಯದಿಂದಲೇ ಲೋಗೊ ವಿನ್ಯಾಸದ ಗೀಳು ಹಚ್ಚಿಕೊಂಡಿದ್ದ ಚಕ್ರಧರ್​ ಅವರನ್ನು ಕುಟುಂಬದವರು ಹಾಗೂ ಗೆಳೆಯರು ಲೋಗೊ ಮ್ಯಾನ್​ ಎಂದೇ ಕರೆಯುತ್ತಿದ್ದರು.

ಚಕ್ರಧರ್​ ಪೋರ್ಟ್​ ಫೋಲಿಯೋ ನೋಡಿಬಿಟ್ಟರೆ ಅದರ ತುಂಬಾ ಬರೀ ಲೋಗೋಗಳ ಚಕ್ರಸುಳಿಯೇ ಕಾಣಿಸಿಕೊಳ್ಳುತ್ತದೆ. ಅದು MyGov.in ಪೋರ್ಟಲ್​ಗಾಗಿ ರಚಿಸಿದ ಲೋಗೊಗಳಿಂದ ತುಂಬಿದೆ. ಇದರ ಬಗ್ಗೆ ಹೆಮ್ಮೆಪಡುವ ಅವರು ಸ್ವಚ್ಛ ಭಾರತ, ಬೇಟಿ ಬಚಾವ್​ ಸೇರಿದಂತೆ ಹಲವಾರು ಯೋಜನೆಗಳಿಗಾಗಿ ಲೋಗೊ ರಚಿಸಿದ್ದೇನೆ. ಬುಲೆಟ್​ ರೈಲಿಗೆ ವಿನ್ಯಾಸಗೊಳಿಸಿದ ಚಿರತೆಯ ಲೋಗೊ ನನ್ನ ಮೊದಲ ಗೆಲುವು. ಅದಕ್ಕೂ ಮುನ್ನಾ ಸ್ಪರ್ಧೆಗಳಲ್ಲಿ ಅಂತಿಮ ಸುತ್ತುಗಳಿಗೆ ಆಯ್ಕೆಯಾಗುತ್ತಿದೆ. ಆದರೆ ನಿರಾಶೆ ಕಟ್ಟಿಟ್ಟಬುತ್ತಿಯಾಗುತ್ತಿತ್ತು. ಇದೀಗ… ಸಂತೋಷಕ್ಕೆ ಪಾರವೇ ಇಲ್ಲ ಎಂಬಂತಾಗಿದೆ ಎನ್ನುತ್ತಾರವರು!

ಯಶಸ್ಸು ಗಳಿಸುವಲ್ಲಿ ಶ್ರದ್ಧೆ, ಪರಿಶ್ರಮ, ಅದೃಷ್ಟದಷ್ಟೇ ಮುಖ್ಯವಾದುದು ತಾಳ್ಮೆ ಕೂಡ ಎಂಬುದನ್ನು ಚಕ್ರಧರ್ ಅವರ ಕತೆ ಸಾರಿ ಸಾರಿ ಹೇಳುತ್ತಿದೆ, ಅಲ್ವಾ!?                                              ಕೃಪೆ: ವಿಜಯ ವಾಣಿ.                          ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097