ದಿನಕ್ಕೊಂದು ಕಥೆ. 657

ಬರಗಾಲದಲ್ಲೂ 200 ಹಸು ಸಾಕಿ, ದಿನಕ್ಕೆ 500 ಲೀ. ಹಾಲು ಉತ್ಪಾದಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದುರ್ಗದ ಮಹಿಳೆ

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನ  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಮಹಿಳೆಯೊಬ್ಬರು ನಿರೂಪಿಸಿದ್ದಾರೆ.

ರಾಂಪುರ ಗ್ರಾಮದ ಕೃಷಿಕ ಕುಟುಂಬದ ಮಹಿಳೆ ರೋಜಾ ಬರಗಾಲಕ್ಕೆ ಸೆಡ್ಡು ಹೊಡೆದು ತಂತ್ರಜ್ಞಾನವನ್ನ ಅಳವಡಿಸಿಕೊಂಡು ಹೈನುಗಾರಿಕೆ ಮಾಡ್ತಿದ್ದಾರೆ. ಇದರಿಂದ ನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಮೂಲಕ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬರಗಾಲದಿಂದ ಬೆಳೆಗಳು ಕೈಕೊಟ್ಟಾಗ ಹೈನುಗಾರಿಕೆ ಮೊರೆಹೋದ ರೋಜಾ, ಹಸು ಸಾಕಾಣಿಕೆ ಮೂಲಕ ತಮ್ಮ ತೋಟದ ಮನೆಯ ಪಕ್ಕದ ಶೆಡ್ ಒಂದರಲ್ಲಿ ಸುಮಾರು 200 ಕ್ಕೂ ಹೆಚ್ಚು ಹಸುಗಳನ್ನ ಸಾಕಿದ್ದಾರೆ. ಹಸುಗಳಿಗೆ ಸಮಯಕ್ಕೆ ಸರಿಯಾಗಿ ಒಣ ಹಾಗೂ ಹಸಿರು ಮೇವು, ಬೂಸಾ ಸೇರಿದಂತೆ ಪೌಷ್ಠಿಕ ಆಹಾರವನ್ನ ಕೊಟ್ಟು ತಮ್ಮ ಮಕ್ಕಳಂತೆ ಹಸುಗಳನ್ನ ಆರೋಗ್ಯವಾಗಿ ನೋಡಿಕೊಳ್ಳುತ್ತಿದ್ದಾರೆ.

ರೋಜಾ ಕಾರ್ಯಕ್ಕೆ ಅವರ ಪತಿಯು ಕೂಡ ಬೆಂಬಲವಾಗಿ ನಿಂತಿದ್ದಾರೆ. ನಿತ್ಯ 500 ಲೀಟರ್ ಹಾಲು ಉತ್ಪಾದಿಸಿ ಶಿಮುಲ್ ಡೈರಿಗೆ ಸರಬರಾಜು ಮಾಡುವ ಮೂಲಕ ಅಧಿಕ ಲಾಭ ಗಳಿಸುತ್ತಿದ್ದಾರೆ.

ರೋಜಾ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಹಸುವಿನ ಸಗಣಿಯನ್ನ ಗೊಬ್ಬರವನ್ನಾಗಿ ಬಳಸಿಕೊಂಡು ಹಸಿ ಮೇವನ್ನ ಬೆಳೆದು ಹಸುಗಳಿಗೆ ಬೇಕಾದ ಪೌಷ್ಟಿಕಾಂಶವುಳ್ಳ ಆಹಾರ ನೀಡುತ್ತಿದ್ದಾರೆ. ಹಸುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಅವುಗಳ ಆರೋಗ್ಯದ ದೃಷ್ಟಿಯಿಂದ ವಾರಕ್ಕೊಮ್ಮೆ ಪಶು ವೈದ್ಯರನ್ನ ಕರೆಸಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೋಡಿಸುತ್ತಿದ್ದಾರೆ. ಗೋವುಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

ಹೀಗಾಗಿ ಇವರ ಸಾಧನೆಯನ್ನು ಗಮನಿಸಿದ ಭಾರತೀಯ ಹೈನುಗಾರಿಕೆ ಇಲಾಖೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಭೀಕರ ಬರದಿಂದ ತತ್ತರಿಸಿ ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ನಡುವೆ ನೂತನ ತಂತ್ರಜ್ಞಾನದ ಜೊತೆಗೆ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಹೈನುಗಾರಿಕೆ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಿರುವ ಈ ಮಹಿಳೆ ದೇಶಕ್ಕೆ ಮಾದರಿಯಾಗಿದ್ದಾರೆ.  ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059