ದಿನಕ್ಕೊಂದು ಕಥೆ. 662

*🌻ದಿನಕ್ಕೊಂದು ಕಥೆ🌻*                          ತಿರುಗುಬಾಣ

ಒಬ್ಬರಿಗೆ ಕೇಡು ಬಯಸಿದರೆ ತಮಗೇ ತಿರುಗುಬಾಣವಾಗುತ್ತದೆ ಎನ್ನುವುದಕ್ಕೆ ಒಂದು ಸಣ್ಣ ಕಥೆ.

ಒಂದು ಊರಿನಲ್ಲಿ ಒಬ್ಬ ಪಂಡಿತನಿದ್ದ. ಊರಿನ ಜನಗಳಿಗೆ ಯಾವುದೇ ಖಾಯಿಲೆ ಬಂದರೂ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ಗುಳಿಗೆ ಮಾಡಿ ಮನೆಯಲ್ಲಿಯೇ ಎಲ್ಲರಿಗೂ ಕೊಟ್ಟು ನುಂಗಿಸುತ್ತಿದ್ದ. ಇವನ ಕೈ ಗುಣವೋ ಎಂಬಂತೆ ಇವನು ನೀಡಿದ ಔಷಧಿಗಳಿಂದ ಖಾಯಿಲೆ ಬಹಳ ಬೇಗ ವಾಸಿಯಾಗುತ್ತಿತ್ತು. ಇದರಿಂದ ಊರಿನಲ್ಲಿ ಬಹಳ ಪ್ರಖ್ಯಾತನಾದ ಪಂಡಿತನಾಗಿದ್ದ. ಯಾವುದೇ ಖಾಯಿಲೆ ಬಂದರೂ ಜನಗಳು ಇವನಲ್ಲಿಗೆ ಬಂದು ಔಷದಿ ಪಡೆದು ಹೋಗುತ್ತಿದ್ದುದ್ದರಿಂದ ಪಂಡಿತನ ಆದಾಯ ದಿನೇ ದಿನೇ ಹೆಚ್ಚುತ್ತಾ ಇತ್ತು. ಇದನ್ನು ಕಂಡು ಮನೋಹರ ಮತ್ತು ಅವನ ಗೆಳೆಯರಿಗೆ ಬಹಳ ಹೊಟ್ಟೆ ಉರಿ ಬಂದಿತ್ತು. ಹೇಗಾದರೂ ಮಾಡಿ ಇವನ ಆದಾಯದಲ್ಲಿ ತಮಗೂ ಸ್ವಲ್ಪ ಹಣ ನೀಡಬೇಕೆಂದು ಪೀಡಿಸುತ್ತಿದ್ದರು. ಇದಕ್ಕೆ ಪಂಡಿತ ಸುತರಾಂ ಒಪ್ಪಿರುವುದಿಲ್ಲ. ಇದರಿಂದ ಕೋಪಗೊಂಡು ಇವನ ಆದಾಯಕ್ಕೆ ಕಡಿವಾಣ ಹಾಕಿ ಇವನನ್ನು ಊರಿಂದಲೇ ಓಡಿಸಬೇಕೆಂದು ಮನಸ್ಸು ಮಾಡಿದ್ದರು. ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇದ್ದರು. ಒಂದು ದಿನ ಮನೋಹರನ ಸ್ನೇಹಿತರಲ್ಲಿ ಒಬ್ಬನಿಗೆ ಜ್ವರ ಬಂದಿತ್ತು. ಇವರೂ ಪಂಡಿತನ ಬಳಿಗೆ ಹೋಗಿ ಔಷಧಿ ತೆಗೆದುಕೊಳ್ಳಲು ಹೋದರು. ಅಲ್ಲಿಯೇ ಗುಳಿಗೆ ನುಂಗಿಸಿದಾಗ ಇದ್ದಕ್ಕಿದ್ದಂತೆ ಆ ಹುಡುಗ ಬಿದ್ದು ಬಿಟ್ಟ. ಇದರಿಂದ ಅಲ್ಲಿದ್ದ ಕೆಲವರಲ್ಲಿ ಆತಂಕ ಮೂಡಿತು. ಪಂಡಿತನೇ ಅಂದು ಎಲ್ಲರಿಗೂ ಸಮಾಧಾನ ಮಾಡಿ ಕಳುಹಿಸಿದ್ದ. ಮಾರನೇ ದಿನ ಇದೇರೀತಿ ಬೇರೊಬ್ಬನಿಗೆ ಜ್ವರ ಬಂದು ಅವನೂ ಪಂಡಿತನ ಮನೆಗೆ ಹೋಗಿ ಔಷಧಿ ಪಡೆದು ಅಲ್ಲೇ ಕುಸಿದು ಬಿದ್ದಿದ್ದ. ಇದರಿಂದ ಎಲ್ಲರಿಗೂ ತುಂಬಾ ಗಾಬರಿಯಾಗಿ ಪಂಡಿತನು ನೀಡುವ ಔಷಧಿ ಮೇಲೆ ಅನುಮಾನ ಬಂದು ಕೆಲವರು ಔಷಧಿ ತೆಗೆದುಕೊಳ್ಳಲು ನಿರಾಕರಿಸಿ ಹೊರಟು ಹೋದರು. ಹೀಗೆಯೇ ಮನೋಹರನ ಮೂವರು ಸ್ನೇಹಿತರು ಔಷದಿ ಪಡೆದು ಅಲ್ಲೇ ಕುಸಿದುಬಿದ್ದಿದ್ದರು. ಇದನ್ನು ಕಂಡು ಆ ಊರಿನಲ್ಲಿ ಜನಗಳು ಕ್ರಮೇಣ ಪಂಡಿತನ ಬಳಿ ಔಷಧಿ ಪಡೆಯುವುದನ್ನೇ ನಿಲ್ಲಿಸಿದ್ದರು. ಈ ಊರಿನಲ್ಲಿ ಇದ್ದು ಪ್ರಯೋಜನವಿಲ್ಲವೆಂದು ಬೇರೆ ಊರಿಗೆ ಹೋಗಿ ಅಲ್ಲಿ ಔಷಧಿ ನೀಡಿ ಅಲ್ಲಿಯೂ ಪ್ರಖ್ಯಾತನಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದನು. ಮನೋಹರನ ಊರಿನಲ್ಲಿ ಪಂಡಿತನ ಬಳಿ ಕೆಲಸಕ್ಕಿದ್ದ ಕೆಲವರು ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತು ಕೊಳ್ಳುವಂತಾಯಿತು. ಪಂಡಿತನ ಕೆಲಸಗಾರರಲ್ಲಿ ಮನೋಹರನ ತಂದೆಯ ಒಬ್ಬರಾಗಿದ್ದರು.ಇವರಿಗೂ ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ಕೊಳ್ಳುವಂತಾಯಿತು. ಒಂದು ದಿನ ಮನೋಹರ ತನ್ನ ತಂದೆಯನ್ನು ಕೆಲಸಕ್ಕೆ ಹೋಗುವುದಿಲ್ಲವೇ ಎಂದು ಕೇಳಿದಾಗ ಪಂಡಿತ ಊರುಬಿಟ್ಟು ಹೋಗಿದ್ದು ನಾನು ಅವರ ಹತ್ತಿರ ಕೆಲಸಕ್ಕೆ ಹೋಗುತ್ತಿದ್ದೆ ಈಗ ಯಾವ ಕೆಲಸವೂ ಇಲ್ಲ ಏನು ಮಾಡುವುದು ಎಂದು ಯೋಚನೆ ಯಾಗಿದೆ ಎಂದು ಹೇಳಿದಾಗ ಮನೋಹರ ಗಳ ಗಳನೆ ಅಳುತ್ತಾ ಪಂಡಿತನನ್ನು ಊರು ಬಿಟ್ಟು ಹೋಗುವಂತೆ ಮಾಡಿದ್ದು ನಾವೇ ಕಣಪ್ಪ ನಾನು ನನ್ನ ಸ್ನೇಹಿತರು ಅವನ ಆದಾಯ ನೋಡಿ ಹೊಟ್ಟೆ ಉರಿ ಬಂದು ಏನಾದರೂ ಮಾಡಿ ಪಂಡಿತನ ಆದಾಯಕ್ಕೆ ಕತ್ತರಿ ಹಾಕಿ ಊರಿಂದ ಓಡಿಸಬೇಕೆಂದು ಪಂಡಿತನು ಔಷಧಿ ನೀಡಿದಾಗ ಬೇಕಂತಲೇ ಬಿದ್ದು ಆಡಿದ ನಾಟಕ ಎಂದು ಹೇಳಿ ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಏಕಪ್ಪಾ ನನಗೆ ಪಂಡಿತನ ಬಳಿ ಕೆಲಸಕ್ಕೆ ಹೋಗುವ ವಿಷಯ ತಿಳಿಸಲಿಲ್ಲ ಎಂದಾಗ ನಿಮ್ಮಪ್ಪ ಚಿಕ್ಕ ಕೆಲಸ ಮಾಡುತ್ತಿರುವುದು ನಿನಗೆ ತಿಳಿಯಬಾರದೆಂದು ತಿಳಿಸಲಿಲ್ಲ ಎಂದು ಹೇಳುತ್ತಾನೆ. ಎಂಥಾ ಕೆಲಸ ಮಾಡಿದೆ ಎಂದು ಬಹಳ ದುಃಖಿತನಾಗುತ್ತಾನೆ. ತಾನು ಬೇರೆಯವರಿಗೆ ಕೇಡು ಬಗೆದಿದ್ದು ತನ್ನ ಮನೆಗೆ ತಿರುಗುಬಾಣವಾಯಿತೆಂದು ಊಹಿಸಲಿರಲಿಲ್ಲ.

ಎನ್ ಮುರಳೀಧರ್ ವಕೀಲರು ಹಾಗೂ ಲೇಖಕರು ನೆಲಮಂಗಲ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097