ದಿನಕ್ಕೊಂದು ಕಥೆ. 663

*🌻ದಿನಕ್ಕೊಂದು ಕಥೆ🌻                                ಅಂತರಂಗದ ಅರಿವು ವಿಶೇಷವಾದ ಅರಿವಿನ ಕಣ್ಣನ್ನು*

ವಿಶೇಷವಾದ ಅರಿವಿನ ಕಣ್ಣನ್ನು ಉಳ್ಳವನೇ ಕವಿ. ಅರಿವಿನ ಮಹಾಸಾಗರವೇ ಆಗಿರುವ ಆ ಮಹಾದೇವನಿಗೆ ಕಾಣಲಾರದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅವನು ಹಿಂದು-ಇಂದು-ಮುಂದು ಎಲ್ಲದರ ಅರಿವಿರುವ ತ್ರಿಕಾಲ ಜ್ಞಾನಿ. ಈ ಸತ್ಯಸಂಗತಿಯನ್ನು ಅರಿಯದ ಕೆಲವರು ದೇವರ ಗುಡಿಯ ಹೊರಗೆ ಧೂಮಪಾನ ಮಾಡಿ, ಬೀಡಿ ಆರಿಸಿ ಒಳಗೆ ಹೋಗಿ ದೇವರಿಗೆ ಕೈಮುಗಿದು ಹೊರಗೆ ಬಂದು ಮತ್ತೆ ಬೀಡಿ ಹೊತ್ತಿಸುತ್ತಾರೆ!

ಶಂಕರಾಚಾರ್ಯರು ಪರಮಜ್ಞಾನಿಗಳು. ಒಂದು ದಿನ ಅವರು ದೇಶ ಸಂಚಾರ ಮಾಡುತ್ತ ಹೊರಟಿದ್ದರು. ಅದು ಊರಿಂದೂರಿಗೆ ನಡೆದು ಹೋಗುವ ಕಾಲ. ದಣಿವಾರಿಸಿಕೊಳ್ಳಲೆಂದು ಒಂದು ಮರದಡಿಯಲ್ಲಿ ಕುಳಿತಿದ್ದರು. ಪಕ್ಕದ ಹೊಲದ ರೈತನು ಊಟಕ್ಕೆ ಕೂಡುತ್ತಿದ್ದನು. ಅದೇ ಮರದಡಿಯಲ್ಲಿ ಕುಳಿತಿದ್ದ ಶಂಕರಾಚಾರ್ಯರನ್ನು ನೋಡಿ ಅನಾಯಾಸವಾಗಿ ದೊರೆತ ಅತಿಥಿಗಳಿಗೆ ಊಟೋಪಚಾರ ಮಾಡಿಸಿ ಬಳಿಕ ತಾವು ಯಾರು? ಎಂದು ಕೇಳಿದ. ಹಸಿದವರಿಗೆ, ನೀರಡಿಸಿದವರಿಗೆ 'ನೀವು ಯಾರು?' ಎಂದು ಕೇಳಬಾರದು. ಇದು ಭಾರತೀಯ ಸಂಸ್ಕೃತಿ; ಅತಿಥಿ ಸತ್ಕಾರ ಮಾಡಿದ ಮೇಲೆಯೇ ರೈತನು 'ತಾವು ಯಾರು?' ಎಂದು ಕೇಳಿದ. ಕೂಡಲೇ ಅವರು ಸಂತಸದಿಂದ 'ನಾನು ಶಂಕರಾಚಾರ್ಯ' ಎಂದು ಹೇಳಿದರು. ಇದನ್ನು ಕೇಳಿದ ರೈತ ಅತ್ಯಾನಂದದಿಂದ 'ನಾನು ಬಹಳ ದಿನಗಳಿಂದ ತಮ್ಮ ದರ್ಶನಕ್ಕಾಗಿ ಹಂಬಲಿಸುತ್ತಿದ್ದೆ. ಯೋಗಾಯೋಗ ನನಗೆ ತಮ್ಮ ದರ್ಶನವಾಯಿತು. ದಯವಿಟ್ಟು ನನಗೆ ಬ್ರಹ್ಮೋಪದೇಶ ಮಾಡಿರಿ ನಾನೂ ತಮ್ಮಂತೆಯೇ ಆತ್ಮಜ್ಞಾನಿಯಾಗಬೇಕೆಂಬ ಹಂಬಲ ಇದೆ. ಆದರೆ ನಾನು ಪ್ರಾಪಂಚಿಕ. ನನಗೆ ಸಮಯವಿಲ್ಲ, ಎತ್ತುಗಳು ನನಗಾಗಿ ದಾರಿ ಕಾಯುತ್ತಲಿವೆ ಬೇಗ ಉಪದೇಶ ಮಾಡಿರಿ' ಎಂದ. ಆಗ ಆತ್ಮಜ್ಞಾನ ಮಾಡಿಕೊಳ್ಳುವುದು ಸುಲಭವಲ್ಲ ಅದಕ್ಕೆ ತುಂಬಾ ಸಮಯಾವಕಾಶ ಬೇಕಾಗುತ್ತದೆ ಎಂದು ಶಂಕರಾಚಾರ್ಯರು ಹೇಳಿದರು.

'ಅರಿತವರಿಗೆ ತಿಳಿಸುವುದಕ್ಕೆ ಸಮಯ ಏಕೆ ಬೇಕು? ತಮಗಾದರೂ ಸರಿಯಾಗಿ ತಿಳಿದಿದೆಯೋ ಇಲ್ಲವೋ ನೋಡಿ!' ಎಂದ ರೈತ. ಇಂಥ ಶಿಷ್ಯನನ್ನು ಆಚಾರ್ಯರು ಇದೇ ಮೊದಲ ಬಾರಿ ನೋಡಿದ್ದರು. ಇವನಿಗೆ ಬ್ರಹ್ಮೋಪದೇಶ ಮಾಡಿಯೇ ಬಿಡಬೇಕೆಂದು ರೈತನ ಆಹ್ವಾನ ಸ್ವೀಕರಿಸಿದರು. ಒಂದು ಸುಂದರವಾದ ಚಿಕ್ಕ ದೃಷ್ಟಾಂತದ ಮೂಲಕ ಆಚಾರ್ಯರು ರೈತನಿಗೆ ಆತ್ಮೋಪದೇಶ ಮಾಡಿದರು. ಆಗ ಅವರೀರ್ವರ ಮಧ್ಯದಲ್ಲಿ ನಡೆದ ಸಂಭಾಷಣೆ ತುಂಬಾ ಸುಂದರವಾಗಿದೆ.

ಶಂಕರರು: ನೀನು ಹಗಲು ಹೊತ್ತಿನಲ್ಲಿ ಈ ಜಗತ್ತನ್ನು ಯಾವ ಬೆಳಕಿನಲ್ಲಿ ನೋಡುತ್ತಿ?

ರೈತ: ಹಗಲು ಹೊತ್ತು ನಾನು ಸೂರ್ಯನ ಬೆಳಕಿನಲ್ಲಿ ಈ ಜಗತ್ತನ್ನು ನೋಡುತ್ತೇನೆ.

ಶಂಕರರು: ರಾತ್ರಿ ಹೊತ್ತು ಯಾವ ಬೆಳಕಿನಲ್ಲಿ ನೀನು ಈ ಜಗತ್ತನ್ನು ನೋಡುತ್ತಿ?

ರೈತ: ರಾತ್ರಿ ಹೊತ್ತು ಚಂದಿರ, ನಕ್ಷ ತ್ರ ಹಾಗೂ ದೀಪದ ಬೆಳಕಿನಲ್ಲಿ ನಾನು ಈ ಜಗತ್ತನ್ನು ನೋಡುತ್ತೇನೆ.

ಶಂಕರರು: ಈ ಸೂರ್ಯ ಚಂದ್ರರನ್ನು ಯಾವ ಬೆಳಕಿನಲ್ಲಿ ನೋಡುತ್ತಿ?

ರೈತ: ನನ್ನ ಕಣ್ಣಿನ ಬೆಳಕಿನಲ್ಲಿ ನೋಡುತ್ತೇನೆ.

ಶಂಕರರು: ಕಣ್ಣು ಮುಚ್ಚಿದಾಗ ನಿನ್ನೊಳಗಿರುವುದನ್ನೆಲ್ಲ ಯಾವ ಬೆಳಕಿನಲ್ಲಿ ನೋಡುತ್ತಿ?

ರೈತ :ಬುದ್ಧಿಯ ಬೆಳಕಿನಲ್ಲಿ ನನ್ನೊಳಗಿರುವುದನ್ನು ನಾನರಿಯುತ್ತೇನೆ.

ಶಂಕರರು : ಬುದ್ಧಿಯನ್ನು ಯಾವ ಬೆಳಕಿನಲ್ಲಿ ತಿಳಿಯುತ್ತಿ?

ರೈತ: ಇನ್ನಾವ ಬೆಳಕಿನಲ್ಲಿ? ನನ್ನ ಬೆಳಕಿನಲ್ಲೇ ಎಲ್ಲವನ್ನು ನೋಡುತ್ತೇನೆ.

ಶಂಕರರು: ನಿನ್ನೊಳಗಿರುವ ಆ ಮಹಾಬೆಳಗೇ, ಅರಿವಿನ ಜ್ಯೋತಿಯೇ ನೀನು ! ಅದೇ ನಿನ್ನಾತ್ಮ !!

ಶಂಕರಾಚಾರ್ಯರ ಈ ಪರಮಾನುಭವದ ನುಡಿಗಳನ್ನು ಆಲಿಸಿದ್ದೇ ತಡ ಆ ಮುಗ್ಧ ರೈತನಿಗೆ ತನ್ನ ಅಂತರಂಗದಲ್ಲಿರುವ ಅರಿವಿನ ಬೆಳಕೇ ಆ ಪರಂಜ್ಯೋತಿ ಪರಮಾತ್ಮನೆಂಬ ಅರಿವಾಗಿತ್ತು!!

ಕೃಪೆ: ಸಿದ್ದೇಶ್ವರ ಸ್ವಾಮೀಜಿಯವರು.                                    ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059