ದಿನಕ್ಕೊಂದು ಕಥೆ. 690

*🌻ದಿನಕ್ಕೊಂದು ಕಥೆ🌻*                                               

*ಗೂಳಿಗೆ ತಕ್ಕ ಶಾಸ್ತ್ರಿ*

ಒಂದು ಊರಿನಲ್ಲಿ ಗೂಳಿಯೊಂದು ಬೇಕಾಬಿಟ್ಟಿ ಅಡ್ಡಾಡುತ್ತಿತ್ತು. ಅದನ್ನು ಸಾಕಿದ ಒಡೆಯನಿಗೆ ತಿವಿದು ನಾಡಿನಿಂದ ಕಾಡಿಗೆ ಸೇರಿಕೊಂಡಿತ್ತು. ಅದನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಸೊಕ್ಕಿನಿಂದ ಮೆರೆಯುವ ಗೂಳಿ ಹಗಲು ರಾತ್ರಿಯೆನ್ನದೇ ರೈತರ ಹೊಲಗಳಿಗೆ ನುಗ್ಗಿ ಫ‌ಸಲನ್ನು ತಿನ್ನುತ್ತಿತ್ತು. ಜನರಿಗೆ ಗೂಳಿ ದೊಡ್ಡ ತಲೆನೋವಾಗಿತ್ತು.

ಒಂದು ದಿನ ರೈತ ರಾಮಣ್ಣ ಹೊಲದಲ್ಲಿ ಉಳುತ್ತಿರುವಾಗ ಆಕಸ್ಮಿಕವಾಗಿ ಹಸಿವಿನಿಂದ ತತ್ತರಿಸಿದ ಹುಲಿಯೊಂದು ಎತ್ತಿನ ಮೇಲೆ ದಾಳಿ ಮಾಡಿತ್ತು. ಆಗ ಭಯಭೀತನಾದ ರಾಮಣ್ಣ, "ಅಯ್ನಾ ಹುಲಿರಾಯ, ನನ್ನ ಎತ್ತನ್ನು ತಿನ್ನಬೇಡ ಎಂದನು.

"ಹಾಗಾದರೆ ನಿನ್ನನ್ನೇ ತಿನ್ನಲೇ?' ಎಂದು ರಾಮಣ್ಣ ಮೇಲೆರಗಿತು. "ತಡೆ ಹುಲಿರಾಯ. ನಿನ್ನ ಹೊಟ್ಟೆ ತುಂಬುವ ಉಪಾಯ ನನ್ನಲ್ಲಿದೆ' ಎಂದ ರಾಮಣ್ಣ. "ಏನದು ಬೇಗ ಬೊಗಳು' ಎಂದಿತು ಹುಲಿ. "ಇಲ್ಲಿಯೇ ದಾರಿಯಂಚಿಗೆ ದಷ್ಟಪುಷ್ಟವಾದ ಗೂಳಿ ಇದೆ. ಅದನ್ನು ತಿನ್ನು. ಆದರೆ ಅದು ನಿನ್ನನ್ನು ಕಂಡಕೂಡಲೇ ಓಡಿಹೋಗುತ್ತೆ. ಹಾಗಾಗಿ ನೀನು ಒಂದು ಹುಲ್ಲಿನ ಹೊರೆಯನ್ನು ಹೊತ್ತಕೊಂಡು ಹೋಗು. ಆ ಹುಲ್ಲನ್ನು ತಿನ್ನಲು ಗೂಳಿ ಬಂದೇ ಬರುತ್ತೆ. ಆಗ ಗೂಳಿ ಮೇಲೆ ದಾಳಿ ಮಾಡು. ನಿನಗೆ ಹೊಟ್ಟೆತುಂಬ ಆಹಾರ ಸಿಗುತ್ತೆ' ಎಂದನು. ರಾಮಣ್ಣನ ಉಪಾಯ ಹುಲಿಗೆ ಸಮಂಜಸವೆನಿಸಿತು.

ರಾಮಣ್ಣನು ಹುಲ್ಲನ್ನು ಕಡಿದು ಹೊರೆ ಕಟ್ಟಿದ. ಹುಲಿಯು ಆ ಹೊರೆಯನ್ನು ಹೊತ್ತುಕೊಂಡು ನಿಧಾನವಾಗಿ ಊರಕಡೆ ಸಾಗುತ್ತಿತ್ತು. ಇದೇ ಸಮಯಕ್ಕಾಗಿ ಹೊಂಚುಹಾಕಿ ಕುಳಿತಿದ್ದ ಗೂಳಿ ಅರ್ಭಟದಿಂದ ಓಡಿಬಂತು. ಹುಲ್ಲುಹೊರೆ ಹೊತ್ತ ರೈತ ಎಂದು ಅವನನ್ನು ಓಡಿಸಿ ಹುಲ್ಲು ತಿನ್ನಬೇಕೆಂದು ಹತ್ತಿರ ಬಂತು. ಆಗ ಹುಲಿಯು ಹೊರೆ ಕೆಳಗೆ ಕೆಡವಿ ಒಮ್ಮೆಲೆ ಗೂಳಿಯ ಮೇಲೆ ದಾಳಿ ಮಾಡಿ ಅದರ ಕುತ್ತಿಗೆಗೆ ಬಾಯಿ ಹಾಕಿತು. ಅದರ ಮೈ ಕೈಗೆ ಪರಚಿ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತು. ಆದರೆ ಗೂಳಿಯೂ ಬಲಾಡ್ಯವಾಗಿದ್ದದರಿಂದ ಹುಲಿಯ ಬಾಯಿಗೆ ತುತ್ತಾಗಲಿಲ್ಲ. ಹುಲಿಯ ಬಾಯಿಂದ ತಪ್ಪಿಸಿಕೊಂಡು ಜೀವದ ಹಂಗು ತೊರೆದು ಓಡಿತು.

ಮತ್ತೆಂದೂ ಗೂಳಿಯು ಆ ಊರಿನತ್ತ ತಲೆ ಕೂಡ ಹಾಕಿ ಮಲಗಲಿಲ್ಲ. ಕೊಬ್ಬಿದ ಗೂಳಿಯ ಕಿರುಕುಳ ತಪ್ಪಿದ್ದರಿಂದ ರಾಮಣ್ಣನ ಸಹಿತ ಉಳಿದೆಲ್ಲ ರೈತರಿಗೂ ನೆಮ್ಮದಿಯಾಯಿತು.


*ನೀತಿ : ಇನ್ನೊಬ್ಬರಿಗೆ ತೊಂದರೆ ಮಾಡಿದರೆ ನಮಗೂ ಅಪಾಯ ಕಟ್ಟಿಟ್ಟ ಬುತ್ತಿ!*


ಆಧಾರ : ಉದಯವಾಣಿ
ಕೃಪೆ :ಕಿಶೋರ್.                    ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059