ದಿನಕ್ಕೊಂದು ಕಥೆ. 693
*🌻ದಿನಕ್ಕೊಂದು ಕಥೆ🌻 ಸ್ನೇಹದ ಬೆಸುಗೆ*
'ಎಂದೆಂದೂ ನಿನ್ನನು ಅಗಲಿ ಬದುಕಿರಲಾರೆ' ಇಂತಹ ವಾಕ್ಯವನ್ನು ಕೇಳಿದವರು ಅಯ್ಯೋ ಇದು ಸಿನಿಮಾ ಕಥೆ. ಅದೇನಿದ್ದರೂ ಎರಡು ಗಂಟೆಗಳ ಮನರಂಜನೆಗೆ ಬಂದು ಹೋಗುವ ಹಾಡು ಅಷ್ಟೇ ಎಂದು ಸುಮ್ಮನಾಗುತ್ತೇವೆ. ನಮ್ಮ ಬದುಕಿನಲ್ಲಿ ಇಂತಹ ಒಂದು ಧ್ಯೇಯಕ್ಕೆ ಬದ್ಧರಾಗೋಣ ಎಂದುಕೊಳ್ಳುವುದಕ್ಕೆ ನಮ್ಮ ಮನಸ್ಸು ಒಪ್ಪುವುದೇ ಇಲ್ಲ. ಪ್ರೀತಿ, ಪ್ರೇಮದ ಸಂಬಂಧಗಳು ಸೃಷ್ಟಿಯಾದಾಗ ಇಂತಹ ಮಾತುಗಳಿಗೆ ಕೊರತೆ ಇರುವುದಿಲ್ಲ. 'ನೀನಿಲ್ಲದೇ ನಾನಿಲ್ಲ. ನೀನಿಲ್ಲದೇ ಬದುಕೇ ಇಲ್ಲ ಎಂಬಂತಹ ಉದ್ಘೋಷಗಳ ಸಾಲೇ ಇರುತ್ತದೆ. ಬದುಕಿನ ಪಯಣ ಆರಂಭವಾಯಿತೆಂದರೆ ಜತೆಗೂಡಿ ಬಾಳುತ್ತೇವೆಂದು ಪ್ರತಿಜ್ಞೆ ಮಾಡಿದವರು ಸಂಬಂಧವೇ ಇಲ್ಲದಂತೆ ಬದುಕುತ್ತಾರೆ. ಸಮಾಜ ಮತ್ತು ಸುತ್ತಲಿನವರು ಏನಂದು ಕೊಳ್ಳುತ್ತಾರೋ? ಎಂಬ ತೊಳಲಾಟದಲ್ಲಿ ಸಂಸಾರ ಸಾಗಿಸುತ್ತಾರೆ. ಮತ್ತೆ ಕೆಲವರು ನಮಗೋಸ್ಕರವಂತೂ ಅಲ್ಲ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಲಾದರೂ ನಾವು ಜತೆಗೆ ಬಾಳಬೇಕು ಎಂದು ಕೊಳ್ಳುತ್ತಾರೆ. ವೇಗದ ಯುಗದಲ್ಲಿ ಇಂತಹ ಕುಟುಂಬಗಳೇ ಹೆಚ್ಚು. ಹೊರ ಜಗತ್ತಿಗೆ ಸುಖಿ ಸಂಸಾರಿಗಳಂತೆ ಕಂಡರೂ ದಾಂಪತ್ಯದಲ್ಲಿ ವಿರಸವೇ ತುಂಬಿರುತ್ತದೆ. ಅದಕ್ಕೆ ಕಾರಣ ಇಂತದ್ದೇ ಆಗಬೇಕಿಲ್ಲ. ಆಸೆಗಳೇ ತುಂಬಿದ ಬದುಕಿನಲ್ಲಿ ಒಂದು ಕೊರತೆ ಎನಿಸಿದರೇ ಜೀವನದಲ್ಲಿ ಬಿರುಕು ಆರಂಭವಾಯಿತೆಂದೇ ಅರ್ಥ. ಹೀಗಿದ್ದೂ ಸಮಾಜಕ್ಕೆ ಆದರ್ಶಪ್ರಾಯರಾಗಿ ಬಾಳಿದವರು ನಮ್ಮ ನಡುವೆಯೇ ಇರುತ್ತಾರೆ. ಅಂತಹವರು ಕಾಣಿಸುವುದು ಅಪರೂಪ. ಅನೇಕ ಸಂದರ್ಭಗಳಲ್ಲಿ ಸತಿ, ಪತಿಗಳು ಒಂದಾಗಿ ಇಹಲೋಕ ತ್ಯಜಿಸಿದ ನಿದರ್ಶನಗಳು ಸಾಕಷ್ಟು ಇವೆ. ಆದರೆ, ಇದೇ ವಾರ ರೈತ ಸ್ನೇಹಿತರಿಬ್ಬರ ಏಕ ಕಾಲದ ಸಾವು ಸ್ನೇಹಕ್ಕೆ , ಸೌಹಾರ್ದಕ್ಕೆ ಮಾದರಿಯಾಗಿವೆ. ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ ಬಾಲ್ಯದಿಂದಲೇ ಸ್ನೇಹಿತರಾಗಿ ಬೆಳೆದು ವೃದ್ಧಾಪ್ಯ ತಲುಪುವ ವೇಳೆಗೆ ಇಬ್ಬರೂ ಒಂದೇ ದಿನ ಮಾತುಕೊಟ್ಟವರಂತೆ ಸಾವನ್ನಪ್ಪಿದ್ದಾರೆ. ಜಾತಿ ವ್ಯವಸ್ಥೆಯ ಕಂದಕ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಬ್ಬರೂ ವಿಭಿನ್ನ ಸಮುದಾಯದವರು. ಒಬ್ಬರು ಹಾಲು ಮತಸ್ಥರು. ಮತ್ತೊಬ್ಬರು ದಲಿತ ವರ್ಗಕ್ಕೆ ಸೇರಿದವರು. ಇವರ ಸ್ನೇಹಕ್ಕೆ, ಪ್ರೀತಿಗೆ , ಬದುಕಿಗೆ ಜಾತಿ ಎಂದೂ ಅಡ್ಡ ಬರಲಿಲ್ಲ. ಇಬ್ಬರೂ ಐದೂವರೆ ದಶಕಗಳ ಕಾಲ ಸಾರ್ಥಕ ಜೀವನ ಪೂರೈಸಿದವರು. ಅಣ್ಣ ತಮ್ಮಂದಿರೇ ಆಸ್ತಿಗಾಗಿ ಕಿತ್ತಾಡುವ ನಿದರ್ಶನಗಳ ಮಧ್ಯೆ ಮೂವತ್ತೈದು ವರ್ಷ ಜತೆಯಾಗಿ ಒಕ್ಕಲು ಮಾಡಿದವರು. ಬರುವ ಲಾಭ ನಷ್ಟದಲ್ಲಿ, ಸುಖ ದುಃಖದಲ್ಲಿ ಸಮಾನ ಹಂಚಿ ಮಾಡಿಕೊಂಡವರು. ಅನಾರೋಗ್ಯದಿಂದ ಮೃತಪಟ್ಟ ಮರಿಯಪ್ಪನ ದೇಹಕ್ಕೆ ಅಂತಿಮ ನಮನ ಸಲ್ಲಿಸಲು ಹೋದ ಬಸಪ್ಪ ಹೂವಿನ ಹಾರ ಹಾಕುತ್ತಲೇ ಕುಸಿದು ಬಿದ್ದ. ಆಸ್ಪತ್ರೆಗೆ ಕೊಂಡೊಯ್ಯವ ವೇಳೆ ಮೃತಪಟ್ಟ. ಸ್ನೇಹಿತರಿಬ್ಬರ ಸಾವಿಗೆ ಇಡೀ ಊರೇ ಕಂಬನಿ ಮಿಡಿದಿದೆ. ಅಸಮಾನತೆಯ ಕಿಚ್ಚು ಹೆಚ್ಚುತ್ತಿರುವ ಹೊತ್ತಿಗೆ ಈ ಇಬ್ಬರ ಸ್ನೇಹ ಮಾದರಿಯಾಗಬೇಕಿದೆ. ಬದುಕಿನ ಮಾರ್ಗಕ್ಕೆ ಧರ್ಮ, ಜಾತಿಗಳು ಮುಖ್ಯವಲ್ಲ. ಸ್ನೇಹ, ಪ್ರೀತಿ, ಹೊಂದಾಣಿಕೆಯ ಅರಿವು ಅಗತ್ಯವಾಗಿದೆ. ವಿಶ್ವಾಸಾರ್ಹ ಬದುಕಿನ ದಾರಿಗೆ ವಿಶ್ವದ ಅನೇಕ ದಾರ್ಶನಿಕರು ತ್ಯಾಗ ಬಲಿದಾನ ಮಾಡಿದ್ದಾರೆ. ಅಂತಹವರು ತಾತ್ವಿಕವಾಗಿ ಸಾವಿರಾರು ವರ್ಷ ಕಳೆದರೂ ಇಂದಿಗೂ ನಮ್ಮೊಂದಿಗೆ ಇದ್ದಾರೆ. ಬುದ್ಧ, ಬಸವಾದಿರಾದಿಯಾಗಿ ಸಂತರು ಮೌಲ್ಯಗಳಿಗೆ ಹೋರಾಡಿದ್ದಾರೆ. ಮೇಲು, ಕೀಳು ಭಾವನೆಗಳನ್ನು ಧಿಕ್ಕರಿಸಿದ್ದಾರೆ. ಎಲ್ಲವೂ ಲೆಕ್ಕಾಚಾರಮಯ ವಾಗಿರುವ ಈ ಸಂದರ್ಭದಲ್ಲಿ ಸ್ನೇಹಪರ ಮನೋಭಾವ, ಧೋರಣೆಯ ವ್ಯಕ್ತಿಗಳನ್ನು ನಾವು ಗೌರವಿಸೋಣ. ಮಾದರಿಯಾಗಿಸಿಕೊಳ್ಳೋಣ.
*ಕೃಪೆ:ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ*. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment