ದಿನಕ್ಕೊಂದು ಕಥೆ. 750

*🌻ದಿನಕ್ಕೊಂದು ಕಥೆ🌻                                   ಯಾರೂ ಬಡವರಲ್ಲ…*

ಬಡವರ, ದೀನ ದಲಿತರ ಸೇವೆ ಹಾಗೂ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡವರು ಮದರ್ ತೆರೇಸಾ. ಒಮ್ಮೆ ಅವರನ್ನು ಭೇಟಿಯಾದ ಕೆಲ ಪತ್ರಕರ್ತರು, ‘ನೀವೇ ಬಡತನದಲ್ಲಿ ಹುಟ್ಟಿ ಬೆಳೆದವರು. ಹೀಗಿರುವಾಗ ಈ ಬಡವರಿಗೆ ನೀವೇನು ಕೊಡಬಲ್ಲಿರಿ?’ ಎಂದು ಕೇಳಿದಾಗ ‘ಪ್ರೀತಿಯನ್ನು’ ಎಂದುತ್ತರಿಸಿದರು ತೆರೇಸಾ.

ಈ ಒಂದೇ ಒಂದು ಶಬ್ದದಲ್ಲಿ ಎಷ್ಟೊಂದು ಅರ್ಥ ಅಡಗಿದೆ! ಇತರರಿಗೆ ನೀಡಲು ನಮ್ಮ ಬಳಿ ಏನೂ ಇಲ್ಲವೆಂದು ಹೇಳೋದು ಬರೀ ಒಂದು ನೆವ, ಪೊಳ್ಳುವಾದ ಅಷ್ಟೆ. ಆದರೆ ಪ್ರೀತಿ-ಪ್ರೇಮ-ಸ್ನೇಹಭಾವಗಳ ಭರಪೂರ ಭಂಡಾರವನ್ನೇ ಹೊಂದಿರುವವರು ಇಂಥ ಕುಂಟುನೆಪಗಳನ್ನು ಮುಂದುಮಾಡುವುದಿಲ್ಲ. ಏನೂ ಖರ್ಚಿಲ್ಲದ, ಯಾವತ್ತೂ ದುಬಾರಿಯಲ್ಲದ ವಿಷಯವೆಂದರೆ ಪ್ರೀತಿ. ಇದನ್ನು ಯಾರು ಬೇಕಾದರೂ, ಯಾರಿಗೆ ಬೇಕಾದರೂ, ಎಷ್ಟು ಬೇಕಾದರೂ ನೀಡಬಹುದು. ಪ್ರೀತಿ ಎಂಬುದು ನೀಡುವ ಶಕ್ತಿ ಇಲ್ಲದವರಿಗೆ ‘ನಾಮಪದ’; ಆದರೆ ನೀಡುವ ಶಕ್ತಿ ಇದ್ದವರಿಗೆ ‘ಕ್ರಿಯಾಪದ’.

‘ಪ್ರೀತಿಗೂ ಬಯಕೆಗೂ ಏನು ವ್ಯತ್ಯಾಸ?’ ಎಂದು ಭಗವಾನ್ ಬುದ್ಧನನ್ನು ಶಿಷ್ಯನೊಬ್ಬ ಕೇಳುತ್ತಾನೆ. ಅದಕ್ಕೆ ಬುದ್ಧ, ‘ನೀನು ಒಂದು ಸುಂದರ ಹೂವನ್ನು ಕಂಡು ಅದನ್ನು ಕಿತ್ತರೆ ಅದು ಬಯಕೆ; ಬದಲಾಗಿ ಆ ಹೂವಿನ ಗಿಡಕ್ಕೆ ನೀರೆರೆದರೆ ಅದು ಪ್ರೀತಿ’ ಎಂದು ಉತ್ತರಿಸುತ್ತಾನೆ. ಆದರೆ ಪ್ರೀತಿ ಎಂಬುದು ಬಹಳ ಸೂಕ್ಷ್ಮವಾದುದು; ಅದು ನೀರು ಕಡಿಮೆಯಾದರೆ ಬಾಡಿಹೋಗುವ, ಹೆಚ್ಚಾದರೆ ಕೊಳೆತು ಹೋಗುವ ಹೂವಿನಂತೆ. ಯಾರದ್ದೋ ಒತ್ತಾಯಕ್ಕೆ, ಯಾವುದೋ ಒತ್ತಡಕ್ಕೆ ಹೂವು ಅರಳದು. ಅಂತೆಯೇ ಪ್ರೀತಿ ಕೂಡ. ದೀಪದ ಬೆಳಕು, ಚಂದ್ರನ ಬೆಳಕು, ಮಿಂಚಿನ ಬೆಳಕು, ಮಿಂಚುಹುಳದ ಬೆಳಕು, ವಿದ್ಯುಚ್ಛಕ್ತಿಯ ಬೆಳಕು- ಹೀಗೆ ನಾನಾ ರೀತಿಯ ಬೆಳಕುಗಳಿವೆ. ಆದರೆ ಕಮಲದ ಹೂವು ಅರಳಬೇಕಾದರೆ ಸೂರ್ಯನ ಬೆಳಕೇ ಬೇಕು. ಅಂತೆಯೇ ನಮ್ಮ ಹೃದಯ ಕಮಲ ಅರಳಬೇಕಾದರೆ ಪ್ರೀತಿಯ ಸಿಂಚನ ಬೇಕು. ಭರಪೂರ ಪ್ರೀತಿಯೊಂದಿಗೆ ಎಲ್ಲರೂ ಹೃದಯಶ್ರೀಮಂತಿಕೆಯನ್ನು ಮೆರೆಯೋಣ. ಸುತ್ತಲ ವಾತಾವರಣವನ್ನು ಸಕಾರಾತ್ಮಕವಾಗಿಸೋಣ.

ಕೃಪೆ:ಪುತ್ತುರಾಯರು.ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ.                            ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059