ದಿನಕ್ಕೊಂದು ಕಥೆ. 752
*🌻ದಿನಕ್ಕೊಂದು ಕಥೆ🌻 ಅಂತಃಕರಣ, ಬಾಂಧವ್ಯಕ್ಕಿದೆ ದೊಡ್ಡ ಶಕ್ತಿ.*
ಟಾಲ್ ಸ್ಟಾಯ್ ಅದೊಂದು ದಿನ ರಷ್ಯಾದ ಬೀದಿಯಲ್ಲಿ ಸಂಚರಿಸುತ್ತಿದ್ದಾಗ ಒಬ್ಬ ಭಿಕ್ಷುಕ ಅವರನ್ನು ಸಹಾಯಕ್ಕಾಗಿ ಯಾಚಿಸಿದ. ತಕ್ಷಣ ಟಾಲ್ ಸ್ಟಾಯ್ ಜೇಬುಗಳನ್ನು ತಡಕಾಡಿದರು. ಏನೂ ಸಿಗಲಿಲ್ಲ. ತಮ್ಮ ನಿಸ್ಸಹಾಯಕತೆಗೆ ಚಿಂತಿಸುತ್ತ ಕ್ಷಣಕಾಲ ಸುಮ್ಮನೇ ನಿಂತ ಟಾಲ್ ಸ್ಟಾಯ್ ಮರು ಘಳಿಗೆಯಲ್ಲೇ ಆ ಭಿಕ್ಷುಕನನ್ನು ಪ್ರೀತಿ, ಆತ್ಮೀಯತೆಯಿಂದ ಅಪ್ಪಿಕೊಂಡು- ‘ನಿನ್ನ ಕ್ಷಮೆ ಯಾಚಿಸುತ್ತೇನೆ, ನನ್ನ ಮೇಲೆ ಬೇಸರ, ಕೋಪ ಮಾಡಿಕೊಳ್ಳಬೇಡ ಸಹೋದರ! ನನ್ನ ಬಳಿ ತಕ್ಷಣವೇ ಕೊಡುವುದಕ್ಕೆ ಏನೂ ಇಲ್ಲ’ ಎಂದರು.
ಕಳೆಗುಂದಿದ್ದ ಭಿಕ್ಷುಕನ ಮುಖದಲ್ಲಿ ಸಂತಸ ಅರಳಿತು. ‘ನೀವು ನನಗೆ ಏನೂ ಕೊಡದೇ ಹೋದರೂ ಪರವಾಗಿಲ್ಲ. ಸಹೋದರ… ಅಂತ ಕರೆದಿರಲ್ಲ ಅದಕ್ಕಿಂತ ಇನ್ನೇನು ಬೇಕು’ ಎಂದ ಭಿಕ್ಷುಕನ ಕಣ್ಣಾಲಿಗಳಲ್ಲಿ ನೀರು ಬಂದಿತ್ತು. ಈ ಘಟನೆ ಎಷ್ಟೊಂದು ಸಂದೇಶ ನೀಡುತ್ತದೆ ಅಲ್ಲವೆ?
ಜಗತ್ತನ್ನು ಸೃಷ್ಟಿಸಿದ ಆ ಭಗವಂತನೇ ಸಕಲ ಚರಾಚರಗಳಿಗೆ ಬದುಕಲು ಯೋಗ್ಯವಾದ ಅವಕಾಶವನ್ನು ಕೊಟ್ಟಿರುವಾಗ, ಹುಲು ಮಾನವರಾದ ನಾವು ಯಕಶ್ಚಿತ ಯಾವುದೋ ಕಾರಣಕ್ಕೆ ಮನಸ್ತಾಪ, ಅಸಹನೆಯಿಂದ ಜೀವಿಸುವುದು ಎಷ್ಟು ಸರಿ? ನಮ್ಮ ಜೀವನದ ಅಂತ್ಯ ಎಂಬುದು ಶರೀರಕ್ಕೆ ಹೊರತು ಆತ್ಮಕ್ಕಲ್ಲ. ಆದ್ದರಿಂದ ನಾವು ಎಷ್ಟೇ ದೊಡ್ಡವರಿದ್ದರೂ, ಎಂತಹ ಉನ್ನತ ಸ್ಥಾನದಲ್ಲಿದ್ದರೂ ನಮಗಿಂತಲೂ ಕೆಳಗಿರುವವರ ಜೊತೆ ಹೇಗೆ ನಡೆದು ಕೊಳ್ಳುತ್ತೇವೆ ಅನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧರಿಸಲ್ಪಡುತ್ತದೆ. ಯಾರಲ್ಲಿಯೂ ಭೇದಭಾವ ತೋರದೆ ಎಲ್ಲರನ್ನೂ ಸರಿಸಮಾನತೆಯಿಂದ ಕಾಣುವುದು, ಗೌರವಿಸುವುದು ಉತ್ತಮರ ಲಕ್ಷಣ. ಈ ಲಕ್ಷಣ ಅಂತಹವರನ್ನು ‘ಶ್ರೇಷ್ಠ’ ವ್ಯಕ್ತಿಯನ್ನಾಗಿಸುತ್ತದೆ. ಮೇಲ್ವರ್ಗ, ಅಧಿಕಾರಿ, ಪಂಡಿತ ಎಂಬ ಅಹಂಕಾರವನ್ನು ಬಿಟ್ಟು ಜೀವನದಲ್ಲಿ ಎಲ್ಲರ ಜೊತೆ ಆತ್ಮೀಯತೆಯಿಂದ ಇದ್ದಾಗ ಜೀವನ ಎಷ್ಟು ಮಧುರವಾಗಿರುತ್ತದಲ್ಲವೆ!
ಕೃಪೆ: ವಿಜಯ ವಾಣಿ.
ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment