ದಿನಕ್ಕೊಂದು ಕಥೆ 781

*🌻ದಿನಕ್ಕೊಂದು ಕಥೆ🌻*                                          ನಮ್ಮ  ನಾಯಿಗೆ ಹುಷಾರಿಲ್ಲ, ಬನ್ನಿ  ಎಂದು ಪಕ್ಕದ ಹಳ್ಳಿಯ ಹುಡುಗ ಕರೆ ಮಾಡಿದ್ದ. ಅಲ್ಲಿಗೆ ಹೋಗುವವರೆಗೂ ಅದು ಅವನದೇ ಸಾಕುನಾಯಿ ಎಂದು ತಿಳಿದುಕೊಂಡಿದ್ದೆ . ಹೋದ ಮೇಲೆ ತಿಳಿಯಿತು ; ಅದು ಯಾರಿಗೂ ಸೇರಿದ್ದಲ್ಲ.‌ ಅದೊಂದು ಬೀದಿನಾಯಿ.  ಅದರ ಸಂಕಟ ನೋಡಲಾಗದೇ ಒಂದಷ್ಟು ಹುಡುಗರು ಅವನಿಂದ ಕರೆ ಮಾಡಿಸಿದ್ದರು . ನಾಯಿ ಬಿದ್ದಿದ್ದ ಸ್ಥಳಕ್ಕೆ ಬರುವಷ್ಟರಲ್ಲಿ ಹತ್ತಾರು ಹುಡುಗರು ಮುತ್ತಿಕೊಂಡರು . ಅವರ ಸ್ಪಂದನೆಯನ್ನು ನೋಡಿದರೆ ಅದು ಅವರೆಲ್ಲರಿಗೂ ಇಷ್ಟದ ನಾಯಿಯೆಂದು ಸುಲಭವಾಗಿ ಗ್ರಹಿಸಬಹುದಿತ್ತು .

ನಾನು ನಾಯಿಗೆ ಚಿಕಿತ್ಸೆ ನೀಡಲು ‌ಶುರು ಮಾಡುತ್ತಿದ್ದಂತೆ ಆ ಹುಡುಗರೆಲ್ಲ‌ ಕನಿಕರದಿಂದ ಸುತ್ತುವರಿದು ಸಹಕರಿಸತೊಡಗಿದರು .
'ಮಾಡಕ್ಕೆ ಕೇಮಿಯಲ್ಲ ಮೂದೇವ್ಗಳ್ಗೆ "
ಸಮೀಪದಲ್ಲಿ ಇದ್ದ ಜಗಲಿಯ ಮೇಲಿನಿಂದ ಹೆಂಗಸಿನ ಅಪಹಾಸ್ಯದ ದನಿ ಕೇಳಿ ಬಂತು .

ಆ ಹುಡುಗರು ಕಿವಿಗೆ ಹಾಕಿಕೊಳ್ಳಲಿಲ್ಲ. ತಮ್ಮ ಪಾಡಿಗೆ ನಾಯಿಯನ್ನು ಒತ್ತಿ ಹಿಡಿದು ಕುಳಿತಿದ್ದರು.

"ಅದು ಅವ್ರಪ್ಪಿಂದ್ರ ಉಳೋ ಎತ್ತು ನೋಡು , ಅದ್ಕೆ ಅಷ್ಟು ಮುತುವರ್ಜಿ ವಯ್ಸಿ ಡಾಕ್ಟ್ರ ಕರ್ಸವ್ರೆ "
ಮತ್ತೊಂದು ‌ಗೇಲಿ ಮಾತು ತೇಲಿ ಬಂತು .
ಹುಡುಗರು ‌ಅದಕ್ಕೂ ವಿಚಲಿತರಾಗಲಿಲ್ಲ.

"ತಕ್ಕಂಡೋಗಿ‌ ಬೀಸಾಡೊದ್ಬಿಟ್ಟು, ಬೀದಿನೆಲ್ಲ ಗಲೀಜ್ ಮಾಡ್ಲಿ ಅಂತ ಅದ್ಕೆ ಇಂಜೆಸನ್ ಹಾಕಸ್ತಾ ಅವೆ ಹಲ್ಕಾ ಮೂದೇವ್ಗಳು"
ಮತ್ತೊಂದು ಹೆಂಗಸಿನ ‌ದನಿ ಈಟಿಯಂತೆ ತೂರಿಬಂತು . ಅವರ ತಾತ್ಸಾರ ಅಸಹನೀಯವಾಗಿತ್ತು. ಅಂತಹ ಸನ್ನಿವೇಶಗಳನ್ನು ಹೊಕ್ಕು ಬಂದಿದ್ದರಿಂದ ನಾನು ಅವರ ಮಾತುಗಳನ್ನು ತಲೆಗೆ ಹಾಕಿಕೊಳ್ಳಲಿಲ್ಲ.

ಒಂದಿಬ್ಬರು ಹುಡುಗರು  , " ಗಲೀಜ ಮಾಡಿದ್ರೆ ಕ್ಲೀನ್ ಮಾಡ್ತಿವಿ ಬಾಯ್ ಮುಚ್ಕಂಡ್ ಕೂತ್ಗಮ್ಮೋ" ಎಂದು ಕ್ಷೀಣ ದನಿಯಲ್ಲಿ ‌ಗೊಣಗಿದರು.

ಸರಿ, ಚಿಕಿತ್ಸೆ ಎಲ್ಲಾ ಮುಗೀತು . ನಾನು‌ ಹೊರಡಲನುವಾದೆ .

"ಹಂಗೆ ಬುಟ್ಟು ಹೋಗ್ಬೇಡಿ  ಅದ್ನ ನಿಮ್ಮಟ್ಟಿಗೆ ತಕ್ಕಂಡೋಗಿ ಆರೈಕೆ ಮಾಡಿ "
ಎಂದು ಮತ್ತೊಬ್ಬ ಹೆಂಗಸು ಗೇಲಿ ಮಾಡಿದಳು.

ಒಬ್ಬ ಹುಡುಗ ಜೋರಾಗಿ ರೇಗುತ್ತಾ , " ಅದಕ್ಕೇನಂತೆ, ಆರೈಕೆ ಮಾಡ್ತೀವಿ ಹೋಗಮ್ಮೋ , ನ್ಯಾಯ ನಿಯತ್ತು   ಇಲ್ದೆ ಇರೋ ಮನ್ಷರಿಗೆ ಮಾಡೋ ಬದ್ಲು ಇಂತವ್ಕೆ ಮಾಡಿದ್ರೆ ಸಾಯಗಂಟ ನೆನಸ್ಕತ್ತವೆ" ಎಂದು ಕಂಕುಳಿಗೆ ಎತ್ತಿಕೊಂಡ  . ಇನ್ನೊಬ್ಬ ಬಿಸ್ಕತ್ತು ತರಲು ಅಂಗಡಿಯತ್ತ  ಓಡಿದ.

ಆ ಕಡೆಯಿಂದ ಗಪ್ ಚುಪ್ . ನೀರವ ಮೌನ.                                    ಕೃಪೆ:ಗವಿ ಸ್ವಾಮಿ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059