ದಿನಕ್ಕೊಂದು ಕಥೆ 782

*🌻ದಿನಕ್ಕೊಂದು ಕಥೆ🌻*                                      ಮನೆಯ ಎದುರಿನ ಮರದ ನೆರಳಿನಲ್ಲಿ ಒಂದು ಕುರಿಮರಿ ಕುಳಿತಿತ್ತು . ಒಂದು ತಿಂಗಳೂ ತುಂಬಿರದ ಪುಟಾಣಿ ಮರಿಯು ಬೆಣ್ಣೆ ಮುದ್ದೆಯಂತೆ ಅಲುಗಾಡದೇ ಕುಳಿತಿತ್ತು .

ನಾನು ಎರಡು ಮೂರು ನಿಮಿಷಗಳಿಂದ ಅದನ್ನು ತದೇಕಚಿತ್ತದಿಂದ ಗಮನಿಸುತ್ತಲೇ ಇದ್ದೆ . ಅದು ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತನ್ನದೇ ಲೋಕದಲ್ಲಿ ಧ್ಯಾನಸ್ಥನಾಗಿ ಕುಳಿತಿತ್ತು. ಒಂದೆರಡು ಬಾರಿ ಕೈ ಅಲುಗಾಡಿಸಿದೆ . ಅದರ ಗಮನ ಸೆಳೆಯಲು ಕೈ ಅಲುಗಾಡಿಸಿದೆ .‌ಮೆಲ್ಲಗೆ ಶಿಳ್ಳೆ ಹಾಕಿದೆ. ಅದು ಕ್ಯಾರೇ ಅನ್ನಲಿಲ್ಲ.

ಅದರ ಪ್ರಶಾಂತ ಮುಖವನ್ನು ದಿಟ್ಟಿಸುತ್ತಿದ್ದಂತೆ ಮನದೊಳಗಿನ ಕೊಳದ ಅಲ್ಲೋಲ ಕಲ್ಲೋಲವೆಲ್ಲ ಕ್ಷಣಕಾಲ ತಿಳಿಯಾಗಿ  ಮನಸ್ಸಿಗೆ ಆಹ್ಲಾದವಾಯಿತು.

ಅಷ್ಟರಲ್ಲಿ ನನ್ನ ನೋಟದ ಫ್ರೇಮಿನೊಳಗೆ ಕಂದು ಬಣ್ಣದ ನಾಯಿಯೊಂದು ಪ್ರವೇಶಿಸಿತು. ಶಿಲೆಯಂತೆ ಅಲುಗಾಡದೇ ಕುಳಿತಿದ್ದ ಕುರಿಮರಿ ಆ ನಾಯಿಯನ್ನು ಕಂಡೊಡನೆ 'ಬ್ಯಾ ಬ್ಯಾ ಬ್ಯಾ ' ಎಂದು ಅರಚತೊಡಗಿತು . ನಾನು ನಿನ್ನನ್ನು ನೋಡಿದೆ: ನಿಲ್ಲು - ಎಂಬಂತಿತ್ತು ಅದು ಅರಚಿದ ಧಾಟಿ. 

ಕುರಿಮರಿಯನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದ ನಾಯಿ ಅದರ ಸದ್ದು ಕೇಳಿದೊಡನೆ ಗಕ್ಕನೆ ನಿಂತಿತು . ನಾಯಿ ಹಿಂತಿರುಗಿ ಬಂದು ಕುರಿಮರಿಯ ಸನಿಹದಲ್ಲಿ ನೆರಳಿಗೆ ಮೈಚಾಚಿ ಮಲಗುತ್ತಿದ್ದಂತೆ ಕುರಿಮರಿ ಸದ್ದು ನಿಲ್ಲಿಸಿತು. ಒಂಟಿಯಾಗಿ ಕುಳಿತಿದ್ದ ಕುರಿಮರಿ ಲವಲವಿಕೆಯಿಂದ ಕಿವಿ ಆಡಿಸತೊಡಗಿತು.

ನನ್ನನ್ನು ಕಡೆಗಣಿಸಿದ್ದ ಕುರಿಮರಿಯು ನಾಯಿಯನ್ನು ಕಂಡೊಡನೆ ಅಷ್ಟು ಆಪ್ತವಾಗಿ ವರ್ತಿಸಿದ್ದನ್ನು ನೋಡಿದಾಗ  ಮನುಷ್ಯನಾಗಿ ನನ್ನ ಮಿತಿಯ ಅರಿವಾಯಿತು.

ನಾನು ಅಂದರೆ ಇಲ್ಲಿ ನಾನೇ ಆಗಬೇಕಿಲ್ಲ.. ಯಾರಾದರೂ ಆಗಿರಬಹುದು . ಅವನು ಚಕ್ರವರ್ತಿಯೇ ಆಗಿರಬಹುದು . ಲಕ್ಷಾಂತರ ಜನರನ್ನು ತನ್ನ ಬೆರಳ ಇಶಾರೆಯಲ್ಲೇ ಕುಣಿಸುತ್ತಿರಬಹುದು. ನನ್ನ ಪ್ರಪಂಚ ಬಿಟ್ಟರೆ ಬೇರೆಯ ಪ್ರಪಂಚವಿಲ್ಲ ಎಂಬ ಭ್ರಮೆಯಲ್ಲಿ ಮುಳುಗಿರಬಹುದು.

ಅಂತಹ ಭ್ರಮೆಯಲ್ಲಿ ಮುಳುಗಿದ್ದ ನನಗೆ ಕುರಿಮರಿಯ ಪ್ರಪಂಚದಲ್ಲಿ ಎಳ್ಳಷ್ಟು ಮಹತ್ವ ಇಲ್ಲದಿರುವುದು ಮತ್ತು ಅಲ್ಲಿ ನಾಯಿಗೆ ಸಿಕ್ಕ ಮನ್ನಣೆಯನ್ನು ಕಂಡಾಗ ನಾನೆಷ್ಟು ಕುಬ್ಜ ಅನ್ನಿಸಿತು .                                        ಕೃಪೆ:ಗವಿ ಸ್ವಾಮಿ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097