ದಿನಕ್ಕೊಂದು ಕಥೆ 783

*🌻ದಿನಕ್ಕೊಂದು ಕಥೆ🌻                                         ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ !*

ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ’ ಎನ್ನುವ ಸತ್ಯ ವಾಕ್ಯದ ಬಗ್ಗೆ ಇರುವ ಈ ಪ್ರಸಂಗ ಮಹಾಭಾರತ ಗ್ರಂಥದಲ್ಲಿ ಬರುತ್ತದೆ.

ಒಮ್ಮೆ ಧರ್ಮರಾಯ ತನ್ನ ಅರಮನೆಯ ಮುಂಭಾಗದಲ್ಲಿ ಕುಳಿತು ರಾಜ ಕಾರ್ಯದಲ್ಲಿ ಮಗ್ನರಾಗಿದ್ದರು. ಆಗ ಅಲ್ಲಿಗೆ ಒಬ್ಬ ಭಿಕ್ಷುಕ ಬಂದು ಏನಾದರೂ ದಾನ ನೀಡಿ ಸಹಾಯ ಮಾಡಿ ಎಂದು ಬೇಡಿಕೊಂಡ. ಧರ್ಮರಾಯನಿಗೆ ಕೈತುಂಬ ಕೆಲಸವಿತ್ತು. ನಾನೀಗ ಕಾರ್ಯಮಗ್ನನಾಗಿದ್ದೇನೆ. ನಾಳೆ ಬೆಳಿಗ್ಗೆ ಬಂದರೆ ಏನಾದರೂ ಕೊಡುತ್ತೇನೆ ಎಂದ. ಭಿಕ್ಷುಕ ಹೊರಟುಹೋದ. ಹತ್ತಿರದಲ್ಲೇ ಇದ್ದ ಭೀಮಸೇನ ತಕ್ಷಣ ಎದ್ದು ಹೋಗಿ ನಗಾರಿಯನ್ನು ಬಾರಿಸತೊಡಗಿದ. ನಗಾರಿಯ ಸದ್ದು ಕೇಳಿ ಧರ್ಮರಾಜ ಕೊಂಚ ಅಸಹನೆಯಿಂದಲೇ ತಮ್ಮಾ! ನಿನಗೇನಾಗಿದೆ? ನಗಾರಿ ಏಕೆ ಬಾರಿಸುತ್ತಿದ್ದೀಯ? ಎಂದು ಪ್ರಶ್ನಿಸಿದರು.

ಭೀಮಸೇನ ಅಣ್ಣಾ! ನನಗಿಂದು ಬಹಳ ಸಂತೋಷವಾಗಿದೆ! ಏಕೆಂದರೆ ನೀನು ಕಾಲವನ್ನು ಗೆದ್ದಿದ್ದೀಯ. ಏಕೆಂದರೆ ನಾಳೆ ಆ ಭಿಕ್ಷುಕನಿಗೆ ದಾನ ನೀಡುವೆನೆಂದು, ಅದನ್ನು ಸ್ವೀಕರಿಸಲು ಬರಬೇಕೆಂದು ಹೇಳಿದ್ದೀಯೆ. ಅಂದರೆ ನಾಳೆ ನೀನು ಬದುಕಿರು ತ್ತೀಯೆಂದು ಭರವಸೆ ನಿನಗಿದೆ. ಹಾಗೆಯೇ ಭಿಕ್ಷುಕನೂ ಬದುಕಿರುತ್ತಾನೆಂಬ ಭರವಸೆಯೂ ನಿನಗಿದೆ. ಅಷ್ಟೇ ಅಲ್ಲ, ಇಂದು ನೀನು ರಾಜ್ಯ ವನ್ನಾಳುತ್ತಿದ್ದೀಯ. ನಿನ್ನ ಕೈಯ್ಯಲ್ಲಿ ಧನಲಕ್ಷ್ಮಿ ಇದ್ದಾಳೆ. ಲಕ್ಷ್ಮಿ ಚಂಚಲೆ ಎನ್ನುತ್ತಾರೆ. ಆದರೆ ನಾಳೆಯೂ ಆ ಲಕ್ಷ್ಮಿ ನಿನ್ನನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆಯೂ ನಿನಗಿದೆ. ಆ ಭಿಕ್ಷುಕ ನಾಳೆಯೂ ಬಡವನಾಗಿದ್ದು ನಿನ್ನ ದಾನದ ನಿರೀಕ್ಷೆಯಲ್ಲೇ ಇರುತ್ತಾನೆಂಬ ನಂಬಿಕೆಯೂ ನಿನಗಿದೆ.

ನಾಳೆ ನಿನ್ನ ಮತ್ತು ಭಿಕ್ಷುಕನ ಭೇಟಿಯಾಗುತ್ತದೆಂಬ ನಿನಗಿದೆ. ಅಣ್ಣಾ! ಈಗ ಹೇಳು ನೀನು ಕಾಲವನ್ನು ಗೆದ್ದಿಲ್ಲವೇ? ನಾಳೆ ಏನಾಗುತ್ತದೆಂಬುದನ್ನು ಯಾರೂ ಹೇಳಲಾಗುವುದಿಲ್ಲ ಎಂಬ ಮಾತಿದೆ. ಆದರೆ ನಾಳೆಯೂ ದಾನ ನೀಡುವ ಶಕ್ತಿ ನಿನಗಿರುತ್ತದೆಂಬ ಭರವಸೆ ನಿನಗಿದೆ! ಇದು ಅದ್ಭುತವಲ್ಲವೇ? ಇದು ಆಶ್ಚರ್ಯಕರವಲ್ಲವೇ? ಅಣ್ಣಾ, ನಾನೀಗ ಅವಸರದಲ್ಲಿದ್ದೇನೆ. ಈ ಅದ್ಭುತ ಸುದ್ದಿಯನ್ನು ಊರಿನವರಿಗೆಲ್ಲ ನಾನು ಈ ಗಳಿಗೆಯಲ್ಲೇ ತಿಳಿಸಬೇಕು. ಈ ಗಳಿಗೆ ಕೈಜಾರಿ ಹೋದರೆ ಮುಂದಿನ ಗಳಿಗೆಯಲ್ಲಿ ಹೇಳುವ ಅವಕಾಶ ನನಗೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ಮತ್ತೆ ನಗಾರಿ ಬಾರಿಸಲು ಉದ್ಯುಕ್ತನಾದ.

ಧರ್ಮರಾಯ ಓಡೋಡಿ ಬಂದು ಭೀಮಸೇನನನ್ನು ತಡೆದು ತಮ್ಮಾ, ನನ್ನಿಂದ ತಪ್ಪಾಗಿದೆ. ನಿನ್ನ ಮಾತು ಸಂಪೂರ್ಣ ಸತ್ಯ. ಈಗಿಂದೀಗಲೇ ಆ ಭಿಕ್ಷುಕನನ್ನು ಕರೆಸು. ನಾನು ಈಗಲೇ ದಾನ ಮಾಡಿ ಬಿಡುತ್ತೇನೆ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂಬ ನಿನ್ನ ಮಾತು ಸತ್ಯ ಎಂದು ಹೇಳಿ ತಮ್ಮನನ್ನು ಆಲಂಗಿಸಿಕೊಂಡು ಮೆಚ್ಚುಗೆ ಸೂಸಿದರಂತೆ. ಭಿಕ್ಷುಕನನ್ನು ಕರೆದು ದಾನವನ್ನು ಕೊಟ್ಟು ಕಳುಹಿಸಿದರಂತೆ.

ಮಹಾಭಾರತದಂತಹ ಬಹು ದೊಡ್ಡ ಗ್ರಂಥದಲ್ಲಿ ಈ ಸಣ್ಣ ಪ್ರಸಂಗ ಬಹಳ ಅರ್ಥಪೂರ್ಣವಾಗಿದೆ. ಅಲ್ಲವೇ? ಕಲಿಯುಗದಲ್ಲಿರುವ ನಮಗೂ ನಾಳೆ ಏನಾಗುತ್ತದೆ ಎಂಬುದರ ಬಗ್ಗೆ ಗೊತ್ತಿಲ್ಲ. ಈಗ ನಾವು ನಾಳೆಯೋ, ನಾಳಿದ್ದೋ ಅಥವಾ ಮುಂದೆಂದೋ ಮಾಡ ಬೇಕೆಂದಿರುವ ಕಾರ್ಯಗಳ ಪಟ್ಟಿಯನ್ನು ಮಾಡಿಕೊಳ್ಳೋಣ. ಸಾಧ್ಯವಿದ್ದರೆ ಅವನ್ನು ಇಂದೇ ಮಾಡಿ ಮುಗಿಸೋಣ. ಏಕೆಂದರೆ ನಾಳೆ ಏನಾಗುತ್ತದೆಂಬುದು ನಮಗೂ ಗೊತ್ತಿಲ್ಲ. ಅಲ್ಲವೇ?

ಕೃಪೆ:ವಿಶ್ವವಾಣಿ.
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059