ದಿನಕ್ಕೊಂದು ಕಥೆ 815

*🌻ದಿನಕ್ಕೊಂದು ಕಥೆ🌻                         ಬದಲಾವಣೆ ಒಪ್ಪಿಕೊಳ್ಳೋಣ*

ಒಬ್ಬ ಯುವರಾಜ ಕಾಡಿಗೆ ಬೇಟೆಯಾಡಲು ಹೋದ. ಹುಲಿಯೊಂದನ್ನು ಬೆನ್ನಟ್ಟಿ ಬಹುದೂರ ಕಾಡಿನೊಳಗೆ ಸಾಗಿದ. ಹುಲಿ ಅವನ ಕೈಗೆ ಸಿಗದೆ ಮರೆಯಾಗಿ ಹೋಯಿತು. ಬಾಯಾರಿಕೆ, ದಣಿವಿನಿಂದ ಬಳಲಿದ ಅವನು ವಿಶ್ರಾಂತಿ ಬಯಸಿ ಮುಂದುವರಿದು ಹೋದಾಗ ಅಲ್ಲೊಂದು ಋಷಿಯ ಕುಟೀರ ಕಾಣಿಸಿತು. ಕುಟೀರದ ಸಮೀಪಕ್ಕೆ ಹೋದಾಗ ಅಲ್ಲಿದ್ದ ಋಷಿಯ ಪುತ್ರಿ ತನ್ನ ರಾಜ್ಯದ ಯುವರಾಜ ಬಂದಿದ್ದನ್ನು ಕಂಡು ಸಂತಸದಿಂದ ಸ್ವಾಗತಿಸಿದಳು. ರಾಜ ಅವಳ ಅಪ್ರತಿಮ ಸೌಂದರ್ಯ ಕಂಡು ಅವಳನ್ನು ಮದುವೆಯಾಗಲು ಬಯಸಿದ. ಋಷಿಯನ್ನು ಕುರಿತು ‘ಪೂಜ್ಯರೆ, ನೀವು ಸಂತೋಷದಿಂದ ಒಪ್ಪುವುದಾದರೆ ನಿಮ್ಮ ಮಗಳನ್ನು ಮದುವೆಯಾಗಲು ಬಯಸಿರುವೆ’ ಎಂದ. ‘ನನ್ನ ಮಗಳನ್ನು ಒಂದು ಮಾತು ಕೇಳಿ’ ಎಂದರು ಋಷಿಗಳು.

ಯುವರಾಜ ಋಷಿಪುತ್ರಿಯನ್ನು ಉದ್ದೇಶಿಸಿ, ‘ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ, ಜೀವನದ ಕೊನೆಯವರೆಗೂ ಗೌರವ, ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ನನ್ನನ್ನು ಮದುವೆಯಾಗಲು ಒಪ್ಪಿಗೆ ಇದೆಯೇ?’ ಎಂದ. ಅವಳು- ‘ಸರಿ, ನನಗೆ 1 ತಿಂಗಳ ಕಾಲಾವಕಾಶ ಕೊಡಿ, ಬಳಿಕ ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದಳು. ಯುವರಾಜ ಅದಕ್ಕೆ ಒಪ್ಪಿಗೆ ಸೂಚಿಸಿ, ಋಷಿಗಳಿಗೆ ಮತ್ತೊಮ್ಮೆ ವಂದಿಸಿ ರಾಜಧಾನಿಗೆ ಮರಳಿದ.

ಋಷಿಪುತ್ರಿ ಅಂದಿನಿಂದಲೇ ಉಪವಾಸ ಪ್ರಾರಂಭಿಸಿದಳು. ಅವಳ ಆರೋಗ್ಯ ದಿನದಿನಕ್ಕೆ ಕ್ಷೀಣಿಸತೊಡಗಿತು. ತಿಂಗಳು ಸಮೀಪಿಸಿದಂತೆ ದೇಹ ಕೃಶವಾಯಿತು. ಇನ್ನೇನು ಅವಳ ಸಾವು ಸನ್ನಿಹಿತವಾಯಿತು ಎನ್ನುವಂತಾಯಿತು. ಯುವರಾಜ ಋಷಿಪುತ್ರಿಯನ್ನು ಮದುವೆಯಾಗುವ ಸಂಭ್ರಮದಿಂದ ಕುಟೀರಕ್ಕೆ ಆಗಮಿಸಿದ. ಅವಳ ಸ್ಥಿತಿ ಕಂಡು ಗಾಬರಿಯಾದ. ಋಷಿಪುತ್ರಿ ಕ್ಷೀಣಿಸಿದ ದನಿಯಲ್ಲಿ- ‘ನನ್ನ ಆರೋಗ್ಯ ತುಂಬ ಹದಗೆಟ್ಟಿದೆ. ನಾನು ಒಪ್ಪಿದಂತೆ ನಿಮ್ಮನ್ನು ಮದುವೆಯಾಗಲು ಸಿದ್ಧ’, ಎಂದು ಏಳಲು ಪ್ರಯತ್ನಿಸಿ ಹಾಗೆಯೇ ಕುಸಿದಳು. ರಾಜನಿಗೆ ಅವಳ ಕಾಂತಿಹೀನ ಕಣ್ಣು, ಬಾಡಿಹೋದ ಸೌಂದರ್ಯ ನೋಡಿ ಅಸಹ್ಯವೆನಿಸಿತು. ಅವನ ಮುಖಭಾವನೆಗಳನ್ನು ಗಮನಿಸಿದ ಋಷಿಪುತ್ರಿ, ‘ನಿಮಗೆ ನನ್ನನ್ನು ಮದುವೆಯಾಗಲು ಇಷ್ಟವಿಲ್ಲ ಅಲ್ಲವೇ, ಒಂದು ತಿಂಗಳ ಹಿಂದೆ ಮದುವೆಯಾಗಲು ಬಯಸಿ ನೀವು ಮಾತು ಕೊಟ್ಟ ಅದೇ ಋಷಿಪುತ್ರಿ ನಾನೇ. ಆದರೂ ಅಂದಿನ ಪ್ರೀತಿಯನ್ನು ಈಗ ನಿಮಗೆ ತೋರಿಸಲು ಅಸಾಧ್ಯ ಅಲ್ಲವೇ?’ ಎಂದಳು. ‘ಯುವರಾಜ ನೀವು, ಅಂದು ತಾತ್ಕಾಲಿಕವಾದ ನನ್ನ ಬಾಹ್ಯ ಸೌಂದರ್ಯವನ್ನು ಮಾತ್ರ ಪ್ರೀತಿಸಿದಿರಿ. ಬದುಕಿನಲ್ಲಿ ಎಲ್ಲವೂ ಬದಲಾವಣೆಗೆ ಒಳಪಡುತ್ತದೆ. ಅಂತಹ ಬದಲಾವಣೆ ಒಪ್ಪಿಕೊಳ್ಳಲು ನಿಮಗೆ ಸಾಧ್ಯವಾಗುತ್ತಿಲ್ಲ’ ಎಂದಳು. ಯುವರಾಜ ಭಾರವಾದ ಮನಸ್ಸಿನಿಂದ ಹೊರಬಂದ.

ನಾವು ಹಲವಾರು ಬಾರಿ ಇಂತಹ ವ್ಯಾಮೋಹಕ್ಕೆ ಒಳಗಾಗುವುದರಿಂದ ನಮ್ಮ ಮನಸ್ಸು ಅಸಮಾಧಾನಕ್ಕೆ ಒಳಗಾಗುತ್ತದೆ. ತಾತ್ಕಾಲಿಕ ಸಂಗತಿಗಳು ಶಾಶ್ವತವಾಗಿರುತ್ತವೆ ಎಂದು ಭ್ರಮಿಸು ತ್ತೇವೆ. ಇಂತಹ ಭ್ರಮೆ ದುಃಖಕ್ಕೆ ಕಾರಣವಾಗುತ್ತದೆ. ಭಗವದ್ಗೀತೆಯ ‘ಪರಿವರ್ತನೆ ಜಗದ ನಿಯಮ’ ಎಂಬ ಮಾತು ಅತ್ಯಂತ ಅರ್ಥಪೂರ್ಣ. ಬದಲಾವಣೆಯನ್ನು ಅರಿಯುವುದು ಅದರೊಂದಿಗೆ ನಮ್ಮ ಮನಸ್ಸನ್ನು ಸಮೀಕರಿಸುವುದು, ಅದರೊಂದಿಗಿನ ಸೌಂದರ್ಯ ಆನಂದಿಸುವುದು ಮಾತ್ರ ನಮ್ಮ ಮನಸ್ಸಿಗೆ ಮುದ ನೀಡಬಲ್ಲದು. ಬದುಕನ್ನು ಇನ್ನಷ್ಟು ಅರಳಿಸಬಲ್ಲದು

ಕೃಪೆ: ಮಹಾದೇವ ಬಸರಕೋಡ.                                         ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059