ದಿನಕ್ಕೊಂದು ಕಥೆ 836
*🌻ದಿನಕ್ಕೊಂದು ಕಥೆ🌻 ಜೀವನವನ್ನು ಇಂದೇ ಆನಂದಿಸೋಣ…*
ತೋಟದ ದಂಡೆಗುಂಟ ಹಚ್ಚಿದ ಮಾವಿನ ಮರಗಳಲ್ಲಿ ಆ ವರ್ಷ ಸಾಕಷ್ಟು ಕಾಯಿಗಳಾಗಿದ್ದವು. ಮಾಲಿಕನು ಅವುಗಳನ್ನೆಲ್ಲ ಕೋಣೆಯ ಒಣಹುಲ್ಲು ಹಾಸಿನ ಮೇಲೆ ಹರವಿ ಮೇಲೆ ಒಂದಿಷ್ಟು ಹುಲ್ಲು ಹಾಕಿ ಕಂಬಳಿ, ಗೋಣಿಚೀಲ ಹೊದಿಸಿ ಹಣ್ಣು ಮಾಡಲೆಂದು ಇಟ್ಟನು. ವಾರದ ನಂತರ ಕೋಣೆಯೊಳಗಿಂದ ಮಾವಿನ ಹಣ್ಣಿನ ಪರಿಮಳ ಬರಲಾರಂಭಿಸಿತು. ಅವುಗಳಲ್ಲಿ ಎಂಟ್ಹತ್ತು ಕಾಯಿಗಳು ಒಳ್ಳೆ ಹಣ್ಣುಗಳಾಗಿ ತಿನ್ನಲಿಕ್ಕೆ ತಯಾರಾಗಿದ್ದವು. ಉಳಿದವು ಸ್ವಲ್ಪ ಸ್ವಲ್ಪ ಹಣ್ಣುಗಳಾಗಿ ಕೆಲ ದಿನಗಳಲ್ಲಿ ಮಾಗಲಿದ್ದವು. ಅಷ್ಟರಲ್ಲಿ ಮಾಲಿಕನ ದೃಷ್ಟಿ ಒಂದು ಮೂಲೆಯ ಕಡೆಗೆ ಹೊರಳಿತು. ಅಲ್ಲಿ ನಾಲ್ಕೈದು ಕಾಯಿಗಳು ಸಂಪೂರ್ಣ ಹಣ್ಣುಗಳಾಗಿ ಮೇಲ್ಭಾಗದಲ್ಲಿ ಕೊಳೆಯಲಾರಂಭಿಸಿದ್ದವು. ಅವನು ಆ ಹಣ್ಣುಗಳನ್ನು ಮಾತ್ರ ಅಲ್ಲಿಂದ ಹೊರತೆಗೆದು-‘ಇವಷ್ಟನ್ನು ಇಂದು ತಿಂದರಾಯಿತು. ಹೇಗೂ ನಾಳೆಯಿಂದ ಒಳ್ಳೆಯ ಹಣ್ಣುಗಳು ಸಿಗುತ್ತವೆ’ ಎಂದೆಣಿಸಿ ಮೇಲಿನ ಕೊಳೆತ ಭಾಗವನ್ನು ಚಾಕುವಿನಿಂದ ತೆಗೆದು ಅರ್ಧರ್ಧ ಭಾಗವನ್ನು ತಿಂದನು. ಮರುದಿನ ಮತ್ತೆ ಐದಾರು ಹಣ್ಣುಗಳು ತಯಾರಾಗಿದ್ದವು. ಆದರೆ ನಿನ್ನೆ ತಿನ್ನಲು ತಯಾರಾಗಿದ್ದ ಆ ಎಂಟ್ಹತ್ತು ಹಣ್ಣುಗಳು ಇಂದು ಅರ್ಧ ಕೊಳೆತಿದ್ದವು. ಆಗ ಅವುಗಳನ್ನು ಬಿಸಾಡಲು ಮನಸ್ಸಾಗದೆ ಮತ್ತೆ ಅವುಗಳನ್ನಷ್ಟೇ ಹೊರಗೆ ತೆಗೆದು ಅರ್ಧಭಾಗವನ್ನು ತಿಂದ. ಮೂರನೇ ದಿನವೂ ಇದೇ ಪರಿಯಾಯಿತು. ಅಂತೂ ಅವನು ಆ ಎಲ್ಲ ಹಣ್ಣುಗಳನ್ನು ಅರ್ಧಕೊಳೆತ ಸ್ಥಿತಿಯಲ್ಲೇ ತಿಂದ. ನಿಜ ಹೇಳಬೇಕೆಂದರೆ ಅವುಗಳನ್ನು ಕೊಳೆಯಿಸಿಯೇ ತಿಂದ. ಒಂದು ವೇಳೆ ಮೊದಲನೇ ದಿನವೇ ಧೈರ್ಯಮಾಡಿ, ಯೋಚಿಸಿ ಕೊಳೆತ ಹಣ್ಣುಗಳನ್ನು ಬಿಸಾಡಿ ಒಳ್ಳೆಯ ಹಣ್ಣುಗಳನ್ನು ತಿನ್ನಲಾರಂಭಿಸಿದ್ದರೆ ಪ್ರತಿದಿನವೂ ಒಳ್ಳೆಯ ಹಣ್ಣುಗಳನ್ನೇ ಅವನು ತಿನ್ನಬಹುದಾಗಿತ್ತಲ್ಲವೇ?
ನಮ್ಮಲ್ಲಿಯೂ ಬಹುತೇಕರು ಇದೇ ರೀತಿ ಜೀವನ ವ್ಯಯಿಸುತ್ತೇವೆ. ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ. ಸುಖವೆನ್ನುವುದು ಬರೀ ಮರೀಚಿಕೆಯಾಗುತ್ತದೆ. ಊಟ ಆರಂಭಿಸಿದ ತಕ್ಷಣ ತಂಗುಳ ಏನಾದರೂ ಉಳಿದಿದ್ದರೆ ತೀರಿಸಿ ಆ ಮೇಲೆ ಹಸಿವೆಯುಳಿದಿದ್ದರೆ ಬಿಸಿ ಅನ್ನ ಉಣ್ಣುತ್ತೇವೆ. ಆ ಉಳಿದ ಬಿಸಿ ಅನ್ನವನ್ನು ಮತ್ತೆ ಮರುದಿನ ತಿನ್ನುತ್ತೇವೆ. ಯಾರಾದರೂ ಉಡುಗೊರೆಯಾಗಿ ಕೊಟ್ಟ ಒಳ್ಳೆಯ ಪೆನ್ನುಗಳನ್ನು ಬೀರುವಿನಲ್ಲಿಟ್ಟು ಪ್ಲಾಸ್ಟಿಕ್ ಪೆನ್ನಲ್ಲಿ ಬರೆಯುತ್ತೇವೆ. ಸ್ವಲ್ಪದಿನಗಳ ಬಳಿಕ ನೋಡಿದಾಗ ಆ ಒಳ್ಳೆಯ ಪೆನ್ನುಗಳೂ ಬರೆಯಲಾರದ ಸ್ಥಿತಿಗೆ ಬಂದಿರುತ್ತವೆ. ಹೊಸ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟು ಹಳೆಯ ಚಿಕ್ಕದಾದ ಮನೆಯಲ್ಲಿ ಇರುತ್ತೇವೆ. ಸಮಯವನ್ನೂ ಹೀಗೆ ಕಳೆದು ಸೃಜನಾತ್ಮಕ, ಸಮಾಜಮುಖಿ ಅಥವಾ ಆಧ್ಯಾತ್ಮಿಕ ಕಾರ್ಯದ ಅವಕಾಶ ಬಂದಾಗ ಈಗ ಸಮಯವಿಲ್ಲವೆಂದು ಬಿಡುತ್ತೇವೆ. ಹಾಗಾದರೆ ಜೀವನವನ್ನು ಆನಂದಿಸುವುದು ಯಾವಾಗ?
ಭಗವದ್ಗೀತೆಯ ಕರ್ಮಯೋಗವು ಜೀವನವನ್ನು ಹೇಗೆ ಜೀವಿಸಬೇಕೆಂದು ಸುಂದರವಾಗಿ ಹೇಳಿದೆ. ನಾವೆಲ್ಲರೂ ಕರ್ಮ ಮಾಡುತ್ತೇವೆ ಆದರೆ ಅದು ಲೋಭಮಯವಾಗಿರುವ ತಪ್ಪು ನಿರ್ಧಾರಗಳಿಂದಾಗಿ ‘ದೈವ ಕೊಟ್ಟರೂ ದರಿದ್ರತನ ತಪ್ಪಲಿಲ್ಲ’ ಎಂಬಂತೆ ಆಗಿ ಬಿಡುತ್ತದೆ. ಹಾಗಾಗದಂತೆ ಪ್ರಸನ್ನತೆಯಿಂದ ಜೀವಿಸೋಣ. ಕೃಪೆ :ಚಿದಂಬರ ಮುನವಳ್ಳಿ. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment