ದಿನಕ್ಕೊಂದು ಕಥೆ 862
*🌻ದಿನಕ್ಕೊಂದು ಕಥೆ🌻*
*ನಿಮ್ಮ ಅದೃಷ್ಟದ ಸಂಖ್ಯೆಯನ್ನು ಕಂಡುಕೊಳ್ಳಿ!*
ಅದೃಷ್ಟದ ಸಂಖ್ಯೆಗಳನ್ನು ನಂಬುವವರು ನೀವಾದರೆ, ಸಂಖ್ಯೆಗಳ ಬಗ್ಗೆಯೇ ಇರುವ ಕೆಲವು ಕುತೂಹಲಕಾರಿ ಸಂಗತಿಗಳನ್ನು ನೋಡಬಹುದು. ಹತ್ತು ವರ್ಷಗಳ ಹಿಂದೆ ಅಂದರೆ 2008ರಲ್ಲಿ ಒಂದು ದಿನ ರಷ್ಯಾ ದೇಶದಲ್ಲಿ ವಿವಾಹ ದಾಖಲಾತಿ ಕಛೇರಿಗಳಲ್ಲಿ ಇಲ್ಲದಷ್ಟು ಕೆಲಸವಿತ್ತಂತೆ. ಅಂದು ಸಾವಿರಾರು ಜನ ಯುವಕ-ಯುವತಿಯರು ವಿವಾಹವಾದರಂತೆ. ಅಂದಿನ ವಿಶೇಷವೇನು ಗೊತ್ತೇ? ಅಂದು 8ನೆಯ ತಾರೀಖು, ಆಗಸ್ಟ್ ತಿಂಗಳು, 2008ನೆಯ ಇಸವಿ. ಅದನ್ನು ಸಂಖ್ಯಾರೂಪದಲ್ಲಿ ಬರೆಯುವಾಗ ಅದು ‘08-08-08’ ಎಂದಾಗುತ್ತದೆ! ಅಲ್ಲಿನ ಜನಗಳಿಗೆ ‘8’ ಅದೃಷ್ಟವನ್ನು ತರುವ ಸಂಖ್ಯೆಯೆಂಬ ನಂಬಿಕೆ. ಅಂದು ’8’ ಸಂಖ್ಯೆ ಮೂರು ಬಾರಿ ಬರುವುದರಿಂದ, ಅಂದು ಮದುವೆಯಾದವರ ಅದೃಷ್ಟ ಮೂರರಷ್ಟು ಹೆಚ್ಚಾಗುತ್ತದೆಂಬ ನಂಬಿಕೆ! ಹಾಗಾಗಿ ವಿವಾಹ ದಾಖಲಾತಿ ಕಛೇರಿಗಳಲ್ಲಿ ಯುವಕ-ಯುವತಿಯರು ಸರತಿಯ ನಿಂತು, ಗಂಟೆಗಟ್ಟಲೆ ಕಾದು, ತಮ್ಮ ವಿವಾಹವನ್ನು ದಾಖಲು ಮಾಡಿಸಿಕೊಂಡರಂತೆ!
ಇದಕ್ಕಿಂತಲೂ ಹೆಚ್ಚು ಆಶ್ಚರ್ಯದ ವಿಷಯವೆಂದರೆ ಸಂಪ್ರದಾಯಿಕವಾದ ರೀತಿಯಲ್ಲಿ ಹಿಂದೆಂದೋ ಮದುವೆಯಾಗಿ, ಎಷ್ಟೋ ವರ್ಷಗಳಿಂದ ಜೊತೆಜೊತೆಯಲಿ ಸಂಸಾರ ಮಾಡಿ, ಹಲವಾರು ಮಕ್ಕಳ ತಾಯಿ ತಂದೆಯರಾಗಿದ್ದ ಗಂಡಹೆಂಡತಿಯರೂ ಕೂಡ ಅಂದು ತಮ್ಮ ಮದುವೆಯನ್ನು ಮರುದಾಖಲು ಮಾಡಿಸಿಕೊಂಡರಂತೆ. ಅವರಿಗೂ ‘08-08-08’ ಅದೃಷ್ಟವನ್ನು ತರುತ್ತದೆಂಬ ನಂಬಿಕೆ. ಇಷ್ಟು ವರ್ಷ ದೊರೆಯದಿದ್ದ ಸುಖ-ಸಂತೋಷಗಳು ಇನ್ನು ಮುಂದಾದರೂ ಎಂಟರ ಮಹಾತ್ಮೆಯಿಂದ ಸಿಗಬಹುದೇನೋ ಎಂಬ ಆಸೆ.
ಅದೃಷ್ಟದ ಸಂಖ್ಯೆಗಳ ಮಾತನಾಡುವಾಗ ಮತ್ತೊಂದು ಕುತೂಹಲಕಾರೀ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು! ಅದನ್ನು ಕ್ರಿಕೆಟ್ ಆಟವನ್ನು ವೀಕ್ಷಿಸುವ ತಾವೆಲ್ಲರೂ ಗಮನಿಸಿರಬಹುದು! ಭಾರತದ ಅಗ್ರಶ್ರೇಣಿಯ ಕ್ರಿಕೇಟ್ ಆಟಗಾರರಾಗಿದ್ದ ಸಚಿನ್ ತೆಂಡೂಲ್ಕರ್ ಅವರ ಜರ್ಸಿ ಮೇಲಂಗಿಯ ಬೆನ್ನು ಮೇಲಿನ ಸಂಖ್ಯೆ ಯಾವಾಗಲೂ ‘10’ ಇರುತ್ತಿತ್ತು. (ಅವರು ಹುಟ್ಟಿದ್ದು 24-04, 2+4+4=10). ಅವರಿಗೆ ಅದು ಅದೃಷ್ಟದ ಸಂಖ್ಯೆಯೆಂಬ ನಂಬಿಕೆಯಂತೆ! ವೀರೇಂದ್ರ ಸೆಹೆವಾಗ್ ಅವರಿಗೆ ’ಒಂದು’, ಯುವರಾಜ್ ಸಿಂಗ್ ಅವರಿಗೆ ’12’, ರಾಹುಲ್ ಡ್ರಾವಿಡ್ ಅವರಿಗೆ ‘19’, ಇಶಾಂತ್ ಅವರಿಗೆ ‘29’ ಅದೃಷ್ಟದ ಸಂಖ್ಯೆಗಳಂತೆ!
ಹೀಗೆ ಅದೃಷ್ಟದ ಸಂಖ್ಯೆಯನ್ನು ನಂಬುವವರ ಸಂಖ್ಯೆ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚಿಗೆ ಇದೆ. ಅಂತರ್ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ ಮೈಕೇಲ್ ಜೋರ್ಡನ್ ಅವರ ಜರ್ಸಿಯ ಮೇಲೆ ಇರುವ ಸಂಖ್ಯೆ ‘23’. ಮತ್ತು ಅಂತರ್ರಾಷ್ಟ್ರೀಯ ಫುಟ್ಬಾಲ್ ಆಟಗಾರ ಪೀಲೆ ಅವರ ಜರ್ಸಿಯ ಮೇಲಿರುವ ಸಂಖ್ಯೆ 10!
ಇಲ್ಲೊಂದು ವಾಸ್ತವದ ವಿಷಯವನ್ನು ಗಮನಿಸಬಹುದು. ತಂತಮ್ಮ ಅದೃಷ್ಟದ ಸಂಖ್ಯೆಗಳನ್ನು ತಮ್ಮ ಜರ್ಸಿಯ ಮೇಲೆ ಮುದ್ರಿಸಿಕೊಂಡಿರುವ ಮೇಲ್ಕಂಡ ಎಲ್ಲಾ ಆಟಗಾರರು ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದಿಲ್ಲ. ಅನೇಕ ಪಂದ್ಯಗಳಲ್ಲಿ ಹೀನಾಯ ಸೋಲನ್ನೂ ಅನುಭವಿಸಿರಬಹುದು.
ಕೊನೆಯ ಮಾತು. ‘08-08-08’ರಲ್ಲಿ ಸರತಿಯ ಸಾಲಿನಲ್ಲಿ ನಿಂತು ಮದುವೆಯಾದ ಸಾವಿರಾರು ಯುವಕ ಯುವತಿಯರ ಪೈಕಿ ಹಲವಾರು ವಿವಾಹಗಳು ಕೆಲವೇ ತಿಂಗಳುಗಳಲ್ಲಿ ವಿಚ್ಛೇದನದಲ್ಲಿ ಪರ್ಯವಸಾನಗೊಂಡಿತಂತೆ! ಅದು ನಂಬಿಕೆಯಾದರೆ ಇದು ವಾಸ್ತವ!
ನಮ್ಮೆಲ್ಲರ ಮನಸ್ಸೇ ವಿಚಿತ್ರ! ಯಾವುದೋ ಸಂದರ್ಭದಲ್ಲಿ ಸೋಲೋ-ಗೆಲುವೋ ಸಿಕ್ಕಾಗ ಅದಕ್ಕೂ ಅಂದಿಗೆ ಸಂಬಂಧಪಟ್ಟ ಸಂಖ್ಯೆಗೂ ಸಂಬಂಧ ಕಲ್ಪಿಸಿಕೊಂಡು ಅದನ್ನು ಅದೃಷ್ಟದ ಸಂಖ್ಯೆಯೆಂದೋ, ದುರದೃಷ್ಟದ ಸಂಖ್ಯೆಯೆಂದೋ ನಂಬಿಬಿಡುತ್ತದೆ! ಬದುಕಿನಲ್ಲಿ ಬರುವ ಸುಖ-ದುಃಖ, ಸೋಲು-ಗೆಲುವು, ನೋವು-ನಲಿವು ಇವುಗಳಿಗೂ ಒಂದಕ್ಕೊಂದು ಸಂಬಂಧ ಇದೆಯೆಂದು ನಿಮಗನಿಸುತ್ತದೆಯೇ? ನನಗಂತೂ ಅನಿಸುವುದಿಲ್ಲ.
ನಿಮಗೆ ಹಾಗೆ ಅನಿಸುವುದಾದರೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು? ಅದನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ. ಯಶಸ್ಸು ಸಿಕ್ಕೇ ಸಿಗುತ್ತದೆ. ಆದರೆ ಕಷ್ಟಪಟ್ಟು ಕೆಲಸ ಮಾಡುವುದನ್ನು ಮಾತ್ರ ಮರೆಯಬೇಡಿ! ಕೃಪೆ: ಷಡಕ್ಷರಿ (ವಿಶ್ವ ವಾಣಿ). ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment