ದಿನಕ್ಕೊಂದು ಕಥೆ 863
*🌻ದಿನಕ್ಕೊಂದು ಕಥೆ🌻 ಇರುವ ಕೆಲಸವ ಮಾಡು ಕಿರಿದೆನದೆ ಮನಸಿಟ್ಟು!*
ನಮಗೆ ಈಗಿರುವ ಕೆಲಸಕ್ಕಿಂತ ದೊಡ್ಡ ಕೆಲಸವಿದ್ದರೆ, ಇನ್ನೂ ಏನೇನೋ ಸಾಧಿಸಿಬಿಡುತ್ತಿದ್ದೆವು ಅಂತ ಆಗಾಗ ಅನಿಸುತ್ತದಲ್ಲವೇ? ಆದರೆ ಕೈಯಲ್ಲಿದ್ದ ಕಡಲೇಕಾಯಿ ಬೀಜವನ್ನು ಉಪಯೋಗಿಸಿ ಹಿರಿಯ ಸಾಧನೆ ಮಾಡಿದ ಗಣ್ಯರೊಬ್ಬರ ಬದುಕಿನ ಕುತೂಹಲಕಾರಿ ಕತೆ ಇಲ್ಲಿದೆ.
ಮನೆಯಲ್ಲಿ, ಗುಲಾಮಗಿರಿಯಲ್ಲಿ ನರಳುತ್ತಿದ್ದ ಕುಟುಂಬದಲ್ಲಿ, ಹುಟ್ಟಿ ಬೆಳೆದರೂ ಸ್ವಪ್ರಯತ್ನದಿಂದ ಮೇಲಕ್ಕೆ ಬಂದು ವಿಜ್ಞಾನಿ, ಸಂಶೋಧಕ, ಸಸ್ಯಶಾಸ್ತ್ರಜ್ಞ ಎಂಬಿತ್ಯಾದಿಯಾಗಿ ಹೆಸರುವಾಸಿಯಾದರು. ಅವರ ಹೆಸರು ಡಾ.ಜಾರ್ಜ್ ವಾಷಿಂಗ್ಟನ್ ಕಾವರ್ರ. ಅವರು ವಿಶೇಷ ಬಗೆಯ ವಿಜ್ಞಾನಿ ಮತ್ತು ಸಂಶೋಧಕ ಏಕೆಂದರೆ ಅವರು ಕಡಲೇಕಾಯಿ ಬೀಜವನ್ನುಪಯೋಗಿಸಿ ಮುನ್ನೂರಕ್ಕು ಹೆಚ್ಚು ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿದರು. ಅವುಗಳಲ್ಲಿ ನೂರೈದು ತಿನ್ನುವ ಪದಾರ್ಥಗಳು! ಅವರು ಕಡಲೇಕಾಯಿ ಬೀಜದಿಂದ ಇನ್ನೂರಕ್ಕೂ ಹೆಚ್ಚು ಸೌಂದರ್ಯ ಪ್ರಸಾದನ ವಸ್ತುಗಳು, ಪೇಯಿಂಟುಗಳು, ಡೈಗಳು, ವಸ್ತುಗಳು, ನೈಟ್ರೋಗ್ಲಿಸ ಮುಂತಾದವುಗಳನ್ನು ತಯಾರು ಮಾಡುವ ವಿಧಾನಗಳನ್ನು ಕಂಡುಹಿಡಿದರು.
ಸಿಹಿಗೆಣಸನ್ನು ಉಪಯೋಗಿಸಿ ನೂರಾರು ಬಗೆಯ ಉತ್ಪನ್ನಗಳನ್ನು ಕಂಡುಹಿಡಿದರು. ವ್ಯವಸಾಯ ಕ್ಷೇತ್ರದಲ್ಲಿನ ಸಂಶೋಧನೆಯಿಂದ ಅಲ್ಲಿನ ರೈತರಿಗೆ ಲಾಭ ತರುವ ವಿವಿಧ ಬೆಳೆಗಳನ್ನು ಪರಿಚಯಿಸಿದರು. ಇವುಗಳಿಂದಾಗಿ ಅವರು ಎಷ್ಟು ಪ್ರಖ್ಯಾತಿ ಹೊಂದಿದರೆಂದರೆ ಪ್ರತಿ ವರ್ಷ ಜನವರಿ 5ನೇ ತಾರೀಖನ್ನು ಅಮೇರಿಕಾದಲ್ಲಿ ’ಜಾರ್ಜ್ ವಾಷಿಂಗ್ಟನ್ ಕಾವರ್ರ್ ದಿನ’ ಎಂದು ಆಚರಿಸುತ್ತಾರೆ!
ಕಡಲೇಕಾಯಿ ಮತ್ತದರ ಬೀಜದ ಬಗ್ಗೆ ಅವರು ಮುನ್ನೂರಕ್ಕೂ ಹೆಚ್ಚು ಬಗೆಯ ಉತ್ಪನ್ನಗಳನ್ನು ಕಾರಣವೇನೆಂದು ಅವರನ್ನು ಯಾರಾದರೂ ಕೇಳಿದರೆ, ಅವರು ಹೇಳುತ್ತಿದ್ದ ವಿನೋದಮಯ ಕತೆ ಹೀಗಿದೆ.
ನನಗೆ ದೇವರಲ್ಲಿ ಅಪಾರವಾದ ನಂಬಿಕೆ ಮತ್ತು ಭಕ್ತಿ. ಒಮ್ಮೆ ನಾನು ಪ್ರಾರ್ಥನೆ ಮಾಡುವಾಗ ದೇವರನ್ನು ಕುರಿತು ಓ ದೇವರೇ! ಇಷ್ಟೊಂದು ವಿಶಾಲವಾದ ಜಗತ್ತನ್ನು ನೀನೇಕೆ ಸೃಷ್ಟಿಸಿದೆ? ಅದನ್ನು ಹೇಗೆ ನಿರ್ವಹಿಸುತ್ತೀಯೆ? ಎಂದು ಕೇಳಿದೆ. ಆಗ ದೇವರು ಗಟ್ಟಿಯಾಗಿ ನಕ್ಕು ಜಾರ್ಜ್! ಈ ಜಗತ್ತು ಎಷ್ಟು ವಿಶಾಲವಾಗಿದೆಯೆಂದರೆ ಅದನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವನು ನೀನಲ್ಲ. ಅದರ ಯೋಗಕ್ಷೇಮವನ್ನು ಬಿಟ್ಟುಬಿಡು ಎಂದರಂತೆ.
ಈ ಸಂಭಾಷಣೆ ನಡೆಯುವಾಗ ನನ್ನ ಕೈಯ್ಯಲ್ಲೊಂದು ಕಡಲೇಕಾಯಿ ಇತ್ತು. ನಾನು ವಿನಯಪೂರ್ವಕವಾಗಿ ಓ ಭಗವಂತ! ಜಗತ್ತು ನನಗೆ ಅರ್ಥವಾಗದಿರುವಷ್ಟು ದೊಡ್ಡದಿರುವುದಾದರೆ, ಈ ಕಡಲೇಕಾಯಿಯನ್ನಾದರೂ ನಾನು ಅರ್ಥ ಮಾಡಿಕೊಳ್ಳಬಹುದೇ? ಎಂದು ಕೇಳಿದೆ.
ಆಗ ಭಗವಂತ ಮತ್ತೊಮ್ಮೆ ಜೋರಾಗಿ ನಕ್ಕು ಹಾ ಜಾರ್ಜ್! ನಿನ್ನ ಗಾತ್ರಕ್ಕೆ ಹೊಂದುವಂತಹುದು ಈಗ ನಿನ್ನ ಬಳಿ ಇದೆ. ನೀನು ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡು. ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ.
ಅದರಂತೆಯೇ ನಾನು ವಿಶಾಲವಾದ ಜಗತ್ತನ್ನು ಭಗವಂತನ ಕೈಗೊಪ್ಪಿಸಿದೆ. ನನ್ನ ಕೈಯ್ಯಲ್ಲಿದ್ದ ಕಡಲೇಕಾಯಿ ಕಡೆ ಗಮನ ಹರಿಸಿದೆ. ಅದನ್ನು ಬೆಳೆಯುವ, ಅದನ್ನು ಬಳಸುವತ್ತ ಗಮನ ಹರಿಸಿದೆ. ಆತನ ಆಶ್ವಾಸನೆಯಂತೆ ಭಗವಂತನೂ ಸಹಾಯ ಮಾಡಿದ. ಕಡಲೇಕಾಯಿಯ ರಹಸ್ಯವನ್ನೆಲ್ಲ ನನಗೆ ತೋರಿಸಿಕೊಟ್ಟ. ಹಾಗಾಗಿ ನಾನು ಕಡಲೇಕಾಯಿಯಿಂದ 300ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಯಿತು ಎನ್ನುತ್ತಿದ್ದರಂತೆ.
ನಮಗೂ ಯಾವಾಗಲಾದರು ನನ್ನ ಕೈಯಲ್ಲಿರುವ ಕೆಲಸ ಬಹಳ ಚಿಕ್ಕದು, ನನಗೆ ದೊಡ್ಡ ಕೆಲಸವೇನಾದರೂ ಇದ್ದಿದ್ದರೆ ದೊಡ್ಡ ಸಾಧನೆ ಎಂಬ ಭಾವನೆ ಬಂದರೆ ಆಗ ನಾವು ಡಾ.ಜಾರ್ಜ್ ಕಾವರ್ರ್ ಅವರನ್ನೂ, ಅವರ ಕೈಯಲ್ಲಿದ್ದ ಕಡಲೇಕಾಯಿ ಬೀಜವನ್ನು ನೆನಪು ಮಾಡಿಕೊಳ್ಳಬಹುದು. ಅವರನ್ನು ಅನುಸರಿಸಬಹುದು. ಯಶಸ್ಸನ್ನೂ ಪಡೆಯಬಹುದು! ಕೃಪೆ :ಷಡಕ್ಷರಿ ವಿಶ್ವ ವಾಣಿ. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment