ದಿನಕ್ಕೊಂದು ಕಥೆ 891

*🌻ದಿನಕ್ಕೊಂದು ಕಥೆ🌻*
*ಬಟ್ಟೆಗಳನ್ನು ಬಂಡೆಯ ಮೇಲೆ ಎತ್ತೆತ್ತಿ ಬಡಿಯುವುದು ಏಕೆ?*

ಕುತೂಹಲಕಾರಿಯಾದ ಪ್ರಸಂಗವೊಂದು ಇಲ್ಲಿದೆ. ಭಗವಾನ್ ರಮಣ ಮಹರ್ಷಿಗಳು ನಡೆದ ಪ್ರಸಂಗ. ಅವರ ಭಕ್ತರೊಬ್ಬರ ಬದುಕಿನಲ್ಲಿ ಮೇಲಿಂದ ಮೇಲೆ ಏನೇನೋ ಸಮಸ್ಯೆಗಳು ಎದುರಾಗುತ್ತಿದ್ದವು. ಸಾಕಪ್ಪಾ ಸಾಕು ಎನಿಸುವಂತೆ ಆಗುತ್ತಿತ್ತು. ಆಗ ಅವರು ಭಗವಾನರ ಬಳಿ ಬಂದು ತಮ್ಮ ಗೋಳನ್ನು ಹೇಳಿಕೊಂಡರು. ದೇವರಿಗೆ ತಮ್ಮ ಮೇಲೇನೋ ಕೋಪ ಬಂದಿರಬೇಕು. ಅವನು ನನಗಾಗಿ ಕಷ್ಟಗಳ ಸೃಷ್ಟಿ ಮಾಡಿ ಕಳುಹಿಸುತ್ತಿದ್ದಾನೆಂದು ಗೋಳಾಡಿದರು. ಕಷ್ಟಗಳ ಪರಿಹಾರಕ್ಕಾಗಿ ಮಾರ್ಗದರ್ಶನ ಮಾಡಬೇಕೆಂದು ಬೇಡಿಕೊಂಡರು.

ಆ ಭಕ್ತರ ಮಾತುಗಳನ್ನೆಲ್ಲಾ ಕೇಳಿಸಿಕೊಂಡ ಭಗವಾನರು ನಸುನಕ್ಕು ಅದಿರಲಿ! ನಿಮ್ಮ ಊರಿನಲ್ಲಿ ಮಡಿವಾಳರು ಹೇಗೆ ಶುಭ್ರಗೊಳಿಸುತ್ತಾರೆ? ಎಂದು ಕೇಳಿದರು. ಭಕ್ತರು ನಮ್ಮೂರಿನಲ್ಲಿ ಮಡಿವಾಳರು ಬಟ್ಟೆಗಳನ್ನು ಬಂಡೆಯ ಮೇಲೆ ಎತ್ತೆತ್ತಿ ಬಡಿಯುತ್ತಾರೆ ಎಂದು ಹೇಳಿದರು. ಆಗ ಭಗವಾನರು ಮಡಿವಾಳರು ಬಟ್ಟೆಗಳನ್ನು ಬಂಡೆಯ ಮೇಲೆ ಎತ್ತೆತ್ತಿ ಬಡಿಯುತ್ತಿರುವುದು ಬಟ್ಟೆಗಳ ಮೇಲಿನ ಸಿಟ್ಟಿನಿಂದಲ್ಲ! ಹಾಗೆ ಎತ್ತೆತ್ತಿ ಬಡಿಯುವುದರಿಂದ ಬಟ್ಟೆಗಳು ಶುಭ್ರವಾಗುತ್ತವೆ. ಹಾಗೆಯೇ ನಿಮಗೆ ಕಷ್ಟಗಳು ಬಂದಿರುವುದು ದೇವರ ಸಿಟ್ಟಿನಿಂದಲ್ಲ. ಅವು ಬಹುಶಃ ನಿಮ್ಮನ್ನು ಗಟ್ಟಿಗೊಳಿಸಲು ಬಂದಿರಬೇಕು ಎಂದು ಸಮಾಧಾನ ಮಾಡಿದರಂತೆ. ಅದಾದ ನಂತರ ಕೆಲವೇ ದಿನಗಳಲ್ಲಿ ಆ ಒಳ್ಳೆಯ ಅವಕಾಶಗಳು ಬಂದೊದಗಿದವಂತೆ.

ನಮ್ಮ ಚಿಂತನೆಯೂ ಅಂತಹ ಸಂದರ್ಭಗಳಲ್ಲಿ ಇದೇ ದಾರಿಯಲ್ಲಿ ಸಾಗುವುದುಂಟು. ಯಾವುದೋ ದೈವ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೆಂಬ, ಬದುಕಿನ ಎಲ್ಲ ಮಾರ್ಗಗಳು ಮುಚ್ಚಿಹೋದುವೆಂಬ ಭಾವನೆ ಬರಬಹುದು. ಆದರೆ ಯಾರಿಗೆ ಗೊತ್ತು? ಸಮಸ್ಯೆಯ ಒಳಗೊಂದು ಸದವಕಾಶ ಹುದುಗಿರಬಹುದು! ಈ ಸಂದೇಶವನ್ನು ಒಳಗೊಂಡ ಒಂದೆರಡು ಘಟನೆಗಳು ಇಲ್ಲಿವೆ. ಒಬ್ಬ ಯುವಕನಿದ್ದ. ಆತನಿಗೆ ಓದುವ ಹುಚ್ಚು ಆದರೆ ಸಣ್ಣ ಅಪಘಾತದಿಂದಾಗಿ ಆತ ತನ್ನೆರಡು ಕಣ್ಣುಗಳನ್ನು ಕಳೆದುಕೊಂಡ. ನಿರಾಶೆಯ ಕಾರ್ಮೋಡ ಆದರೆ ಆತ ಸುಮ್ಮನೆ ಕೂರಲಿಲ್ಲ. ಕುರುಡರೂ ಓದುವುದಕ್ಕೆ ಸಾಧ್ಯವಾಗುವಂತಹದ್ದೇನಾದರೂ ಮಾಡಬೇಕೆಂಬ ಹುಮ್ಮಸ್ಸು ಬಂದಿತು. ಕೆಲವಾರು ವರ್ಷಗಳ ಶ್ರಮದ ನಂತರ ಒಂದು ವಿಶೇಷ ಲಿಪಿ ಕಂಡು ಹಿಡಿದ. ಲಕ್ಷಾಂತರ ಜನರಿಗೆ ಉಪಕಾರಿಯಾದ. ಆ ಲಿಪಿ ಇಂದಿಗೂ ಬಳಕೆಯಲ್ಲಿದೆ. ಅದೇ ಬ್ರೈಲ್ ಲಿಪಿ. ಆ ಯುವಕನ ಹೆಸರು ಲೂಯಿಸ್ ಬ್ರೈಲ್! ಅವನ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಆ ಅಪಘಾತವು ತನ್ನ ಬಾಳನ್ನು ಹಾಳು ಮಾಡಲಿಲ್ಲ. ಅದರಿಂದಾಗಿ ತನ್ನ ಬಾಳೇ ಸಾರ್ಥಕವಾಯಿತೆಂದು ಆತ.

ಮತ್ತೊಂದು ಘಟನೆ. ಭಾರತದ ಒಂದು ಪ್ರದೇಶದಲ್ಲಿ ಕಡಲೇಕಾಯನ್ನು ತಲೆತಲಾಂತರಗಳಿಂದ ಬೆಳೆದುಕೊಂಡು ಬರುತ್ತಿದ್ದರು. ಒಮ್ಮೆ ಸತತವಾಗಿ ಮೂರು ವರ್ಷಗಳ ಕಾಲ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟಕ್ಕೊಳಗಾದರು. (ಅವರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ!) ಕೊನೆಗೆ ಯಾರೋ ಧೈರ್ಯ ಮಾಡಿ ಕಡಲೇಕಾಯಿ ಬೀಜದಿಂದ ಚಿಕ್ಕೀ (ಕಡಲೇಕಾಯಿ ಬೀಜ ಮತ್ತು ಬೆಲ್ಲದ ಮಿಠಾಯಿ!) ಮಾಡಿ ಮಾರಲು ಪ್ರಯತ್ನಿಸಿದರು. ಒಳ್ಳೆಯ ಲಾಭವೂ ಬಂತು. ಆನಂತರ ಆ ಚಿಕ್ಕೀಗಳು ಲೋಣಾವಾಲ ಚಿಕ್ಕೀ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿವೆ. ಮುಂಬೈಗೆ ದಾರಿಯಲ್ಲಿರುವ ಲೋಣಾವಲೆಯಲ್ಲಿ ಎಲ್ಲರೂ ಚಿಕ್ಕಿ ಕೊಂಡುಕೊಂಡೇ ಮುಂದೆ ಹೋಗುತ್ತಾರೆ. ಬೆಲೆ ಕುಸಿತ ಅವರಿಗೆ ಬದುಕಿನ ಹೊಸ ದಾರಿಯನ್ನು ತೋರಿಸಿತು!

ಬದುಕಿನ ದಾರಿಯಲ್ಲಿ ಅಡ್ಡಗಲ್ಲು ಎದುರಾದಾಗ ನಾವು ಅದನ್ನು ಸರಿಸಿ ಹೋಗಬಹುದು! ಅದನ್ನೇರಿ ದಾಟಿ ಹೋಗಬಹುದು! ಅದರ ಅಡಿಯಲ್ಲಿ ನುಸುಳಿ ಹೋಗಬಹುದು! ಅದನ್ನು ಬಳಸಿ ಸುತ್ತು ಹಾಕಿಕೊಂಡು ಹೋಗಬಹುದು! ಅಥವ ಅದನ್ನು ಒಡೆದು ಪುಡಿ ಮಾಡಿ ರಸ್ತೆಗೆ ಜಲ್ಲಿಯಂತೆ ಉಪಯೋಗಿಸಿ ಹೋಗಬಹುದು! ಅಥವಾ ದೇವರನ್ನು ದೂಷಿಸುತ್ತ ಕೂರಬಹುದು! ಈ ಎಲ್ಲಾ ಒಂದರ ಆಯ್ಕೆ ನಮ್ಮದೇ!
ಕೃಪೆ: ಷಡಕ್ಷರಿ.ವಿಶ್ವ ವಾಣಿ.
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059