ದಿನಕ್ಕೊಂದು ಕಥೆ 894

*🌻ದಿನಕ್ಕೊಂದು ಕಥೆ🌻*
*ನರಕಚತುರ್ದಶಿಯ ಕಥೆ ಭಾಗವತದಲ್ಲಿ ಉಲ್ಲೇಖಗೊಂಡಿದೆ. ಈ ಕಥೆಯನ್ನು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ಕೇಳುವುದೇ ಒಂದು ಸೊಗಸು.*

ಶ್ರೀಕೃಷ್ಣಾವತಾರದ ಸಮಯದಲ್ಲಿ ಜರಾಸಂಧ ಮತ್ತು ನರಕಾಸುರರು ಅತ್ಯಧಿಕ ಸೈನ್ಯವನ್ನು ಕೂಡಿಹಾಕಿಕೊಂಡು ದಾಂಧಲೆ ನಡೆಸುತ್ತಿದ್ದ ಇಬ್ಬರು ಪುಂಡ ರಾಜರು. ಜರಾಸಂಧ ಎಲ್ಲಾ ರಾಜರನ್ನೂ ಸೋಲಿಸಿ ಅವರ ಗಂಡು ಮಕ್ಕಳನ್ನೆಲ್ಲಾ ಸೆರೆಯಾಗಿಸುತ್ತಿದ್ದನಂತೆ. ಆತ ಹೆಣ್ಣು ಮಕ್ಕಳ ತಂಟೆಗೆ ಬರುತ್ತಿರಲಿಲ್ಲ. ಆತನಿಗೆ ಹೆಣ್ಣುಮಕ್ಕಳ ತಂಟೆಗೆ ಹೋಗದ ನಿಯಮ ಪಾಲನೆ ಇತ್ತಂತೆ. ಜರಾಸಂಧ ಮಾಡದೆ ಬಿಟ್ಟಿದ್ದ ಕೆಲಸವನ್ನು ನರಕಾಸುರ ಮಾಡುತ್ತಿದ್ದ. ನರಕಾಸುರನಾದರೋ ಆಗಿನ ಕಾಲದ ರಾಜರ ಈಗ ತಾನೇ ಹರಯಕ್ಕೆ ಕಾಲಿಡುತ್ತಿರುವ ಹೆಣ್ಣುಮಕ್ಕಳನ್ನೆಲ್ಲಾ ತಂದು ತನ್ನ ಸೆರೆಯಾಗಿಸಿ ಕೊಂಡಿದ್ದ. ಬ್ರಿಟಿಷರು ಕೂಡಾ ತಮ್ಮ ಆಡಳಿತಾವಧಿಯಲ್ಲಿ ರಾಜರ ಮಕ್ಕಳನ್ನೆಲ್ಲಾ ಸೆರೆಹಿಡಿದು ಆ ರಾಜ್ಯಗಳಿಗೆ ವಾರಸುದಾರರೇ ಇಲ್ಲದಂತೆ ಮಾಡಿ, ಆ ರಾಜ್ಯಗಳನ್ನು ತಮ್ಮ ಆಡಳಿತಕ್ಕೆ ತೆಗೆದುಕೊಳ್ಳುತ್ತಿದ್ದುದನ್ನು, ಪುರಾಣ ಕಾಲದಲ್ಲೇ ಜರಾಸಂಧ ಮತ್ತು ನರಕಾಸುರರು ಯಶಸ್ವಿಯಾಗಿ ಜಾರಿಗೆ ತಂದಿದ್ದರು. ಹೀಗೆ ಜರಾಸಂಧ ಮತ್ತು ನರಕಾಸುರರು ಅಂದಿನ ಎಲ್ಲಾ ರಾಜ್ಯಗಳನ್ನು ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದರು.
ನರಕಾಸುರ ಈಗಿನ ಅಸ್ಸಾಂ ಪ್ರಾಂತ್ಯಕ್ಕೆ ಸೇರಿದ ಪ್ರಾಗ್ ಜ್ಯೋತಿಷಪುರದ ರಾಜನಾಗಿದ್ದ. ಆತ ಕೂಡಿಹಾಕಿದ್ದ ರಾಜಕುಮಾರಿಯರ ಸಂಖ್ಯೆ ಹದಿನಾರು ಸಾವಿರಕ್ಕೂ ಹೆಚ್ಚು. ಮುಂದೊಂದು ದಿನ ಅವನ ಭೋಗಕ್ಕೆ ಕೆಡುವ ಪರಿಸ್ಥಿತಿ ಇತ್ತು. ಇವರೆಲ್ಲರ ಮಾನ ರಕ್ಷಣೆಯಾಗಬೇಕು ಎಂಬುದು ಕೃಷ್ಣನ ಚಿಂತೆಯಾಗಿತ್ತು. ಇಷ್ಟೇ ಅಲ್ಲದೆ ಆ ನರಕಾಸುರ ಭೂಲೋಕವಲ್ಲದೆ ಸ್ವರ್ಗಲೋಕಕ್ಕೂ ಲಗ್ಗೆ ಇಟ್ಟು ಅಲ್ಲಿನ ದೇವತೆಗಳಿಗೂ ಕಿರುಕುಳ ಕೊಟ್ಟು, ವೇದಮಾತೆಯಾದ ಅದಿತಿದೇವಿಯ ಆಭರಣಗಳನ್ನೂ ಲೂಟಿ ಮಾಡಿಕೊಂಡು ಬಂದಿದ್ದ. ಶ್ರೀ ಕೃಷ್ಣ ಸತ್ಯಭಾಮೆಯರು ಪ್ರಾಗ್ ಜ್ಯೋತಿಷಪುರದ ಮೇಲೆ ದಾಳಿ ನಡೆಸಿ ಚಕ್ರದಿಂದ ನರಕಾಸುರನನ್ನು ಕೊಂದುಹಾಕಿದರು. ಸಾಯುವ ಸಮಯದಲ್ಲಿ ತಾನು ಶ್ರೀಮನ್ನಾರಾಯಣ ಅವತಾರಿಯಾದ ಶ್ರೀಕೃಷ್ಣನಿಂದ ಮೋಕ್ಷ ಪಡೆಯುತ್ತಿರುವುದನ್ನು ಅರಿತ ನರಕಾಸುರ,
ತನ್ನ ಪತನವನ್ನು ಲೋಕದ ಜನರು ಬಾಣ ಬಿರುಸುಗಳ ಹರ್ಷದ ಮೂಲಕ ಆಚರಿಸುವ ವರಪ್ರಸಾದವನ್ನು ಪರಮಾತ್ಮನಲ್ಲಿ ಬೇಡಿದ. ಅದರಂತೆ ನರಕಚತುರ್ದಶಿಯನ್ನು ಎಲ್ಲೆಡೆ ಬಾಣ ಬಿರುಸುಗಳ ಉತ್ಸಾಹದಿಂದ ಆಚರಿಸಲಾಗುತ್ತಿದೆ.
ಇದಕ್ಕೆ ಹೊಂದಿಕೊಂಡ ಕಥೆ ಶ್ರೀಕೃಷ್ಣ ಹದಿನಾರು ಸಾವಿರಕ್ಕೂ ಹೆಚ್ಚು ಕನ್ಯೆಯರನ್ನು ವರಿಸಿದ್ದು. ಸಾಮಾನ್ಯವಾಗಿ ಶ್ರೀಕೃಷ್ಣ ಹದಿನಾರು ಸಾವಿರ ನಾರಿಯರನ್ನು ವರಿಸಿದ್ದ ಬಗ್ಗೆ ಲೋಕದಲ್ಲಿ ಅಪಕ್ವ ಕಲ್ಪನೆಯೇ ಹೆಚ್ಚಾಗಿದೆ. ಈ ಕುರಿತು ಬನ್ನಂಜೆ ಅವರ ವರ್ಣನೆ ಅತ್ಯಂತ ಸುಂದರವಾದದ್ದು ಮತ್ತು ಸಮಂಜಸವಾದದ್ದು.
ನರಕಾಸುರನು ಅಂತ್ಯಗೊಂಡಾಗ ಶ್ರೀಕೃಷ್ಣ ರಾಜ್ಯದ ಅಧಿಕಾರವನ್ನು ನರಕಾಸುರನ ಮಗನಾದ ಭಗದತ್ತನಿಗೆ ವಹಿಸಿಕೊಟ್ಟು, ನರಕಾಸುರನ ಸೆರೆಮನೆಯಲ್ಲಿದ್ದ ಸ್ತ್ರೀಯರನ್ನೆಲ್ಲಾ ಬಿಡುಗಡೆ ಮಾಡುವಂತೆ ಆದೇಶಿಸಿದ. ಆ ಸ್ತ್ರೀಯರೆಲ್ಲಾ ಶ್ರೀಕೃಷ್ಣನ ದರ್ಶನಕ್ಕೆ ಬಂದು, ಪರಮಾತ್ಮ ನೀವು ನಮ್ಮನ್ನು ಬಿಡುಗಡೆಗೊಳಿಸಿದ್ದಕ್ಕೆ ವಂದನೆಗಳು. ಆದರೆ,
ನಮ್ಮನ್ನು ಈ ಸೆರೆಮನೆಯಲ್ಲೇ ಇರಲಿಕ್ಕೆ ಬಿಟ್ಟುಬಿಡು ಎಂದು ಬೇಡಿದರು.
ಆಶ್ಚರ್ಯಚಕಿತನಾದ ಶ್ರೀಕೃಷ್ಣ ಕಾರಣ ಕೇಳಿದ: “ಎಲ್ಲರೂ ಸ್ವತಂತ್ರತೆ ಬಯಸುವಾಗ ನೀವೇಕೆ ಸೇರೆಯನ್ನು ಬಯಸುತ್ತಿದ್ದೀರಿ?” ಆ ಸ್ತ್ರೀಯರು ಇಂತು ನುಡಿದರು: “ಪರಮಾತ್ಮ,
ಸೆರೆಯಲ್ಲಿದ್ದು ಬಂದ ನಮ್ಮನ್ನು ಯಾರೂ ಸ್ವೀಕರಿಸುವುದಿಲ್ಲ. ಈ ಸಮಾಜವಿರಲಿ,
ನಮ್ಮ ಒಡಹುಟ್ಟಿದವರು ಮತ್ತು ಹೆತ್ತವರು ಕೂಡಾ ಶಂಕೆಯಿಂದ ನೋಡುತ್ತಾರೆ ಎಂಬುದು ನಿನಗೆ ತಿಳಿಯದ ವಿಚಾರವೇನಲ್ಲ. ಇಂತಹ ಕುಹಕ, ವಕ್ರದೃಷ್ಟಿಯ ಸಮಾಜದಲ್ಲಿ ಬದುಕುವುದಕ್ಕಿಂತ ನಮಗೆ ಸೆರೆಮನೆಯೇ ಲೇಸು ಎಂದು ಇಷ್ಟು ದಿನ ಹೇಗೆ ಬದುಕಿದೆವೋ ಹಾಗೆ ನಿನ್ನ ಧ್ಯಾನದಲ್ಲಿ ಹೇಗೋ ಬದುಕು ಸವೆಸುತ್ತೇವೆ”
ಎಂದು ಕಣ್ಣೀರು ಹಾಕಿದರು.
ದಯಾಳುವಾದ ಶ್ರೀಕೃಷ್ಣ ಪರಮಾತ್ಮ ಆಶ್ವಾಸನೆಯಿತ್ತನು. “ನೀವು ಸೆರೆಯಾಳುಗಳಾಗಿ ಬದುಕುವುದು ಬೇಡ. ಶ್ರೀಕೃಷ್ಣನ ರಾಣಿಯರ ಹಾಗೆ ಬದುಕಿ”
ಎಂದು. ಹೀಗೆ ಶ್ರೀಕೃಷ್ಣ ಪರಮಾತ್ಮ ಈ ಹದಿನಾರು ಸಾವಿರಕ್ಕೂ ಹೆಚ್ಚು ಸ್ತ್ರೀಯರಿಗೆ ಉತ್ತಮ ಬದುಕು ನೀಡಿದ್ದು ಮಾತ್ರವಲ್ಲದೆ ಅವರೆಲ್ಲರೂ ಗೌರವದಿಂದ ಬಾಳು ನಡೆಸುವಂತೆ ನೋಡಿಕೊಂಡ. ಹೀಗಾಗಿ ಶ್ರೀಕೃಷ್ಣನಿಗೆ ಅಷ್ಟಮಹಿಶಿಯರೇ ಅಲ್ಲದೆ ಈ 16,100 ಮಂದಿ ರಾಜಕುಮಾರಿಯರೂ ಮಡದಿಯರಾದರು.
ನರಕಾಸುರನನ್ನು ಕೊಂದು ಆತನಿಗೆ ಪಾಪದ ಬದುಕಿನಿಂದ ಮುಕ್ತಿ ನೀಡಿ ಲೋಕಕ್ಕೂ ಕಲ್ಯಾಣವನ್ನುಂಟುಮಾಡಿದ ಪರಮಾತ್ಮ ನಮ್ಮೆಲ್ಲರನ್ನೂ ಕಾಪಾಡಲಿ. ಈ ದಿನದ ದೀಪ, ಬಾಣ ಬಿರುಸುಗಳು ಪ್ರಪಂಚಕ್ಕೆ, ಪರಿಸರಕ್ಕೆ ಹಾನಿ ತರದ ರೀತಿಯಲ್ಲಿ ಎಲ್ಲರ ಮನಗಳನ್ನೂ ಬಾಳನ್ನೂ ಬೆಳಗಲಿ.
ಕೃಪೆ ಸಿರಿ ಕನ್ನಡ ನುಡಿ ಬಳಗ(ಹೈಕ್ ಗ್ರೂಪ್)
@@@@@@@@@@@@@@@@@@@@@@@@
*🌻ದಿನಕ್ಕೊಂದು ಕಥೆ🌻*

*ಹೆಮ್ಮೆಯ ಕನ್ನಡಿಗ:* *ಜನಸಾಮಾನ್ಯರಿಗೆ* *ಕೈಗೆಟುಕುವಂತಹ ಫಿಲ್ಟರ್* *ಕಂಡು ಹಿಡಿದ ಕನ್ನಡದ ಕುವರ*
ಅತ್ಯಂತ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್​ ತಯಾರಿಸಿ 'ಪ್ಯಾಡ್​ಮ್ಯಾನ್'​ ಎಂದು ಖ್ಯಾತಿ ಪಡೆದ ಅರುಣಾಚಲಂ ಮುರುಗನಾಥನ್ ಅವರ ಕಥೆ ಎಲ್ಲರಿಗೂ ಗೊತ್ತಿದೆ. ಅವರ ಸಾಮಾಜಿಕ ಕಾಳಜಿಗೆ ದೇಶ ವಿದೇಶದಿಂದ ಪ್ರಶಂಸೆಗಳ ಸುರಿಮಳೆಯಾಗಿದೆ. ಆದರೆ ನಮ್ಮೂರಲ್ಲೇ ಇರುವ ಯುವಕ ಸಾಧಕನನ್ನು ನಾವೆಲ್ಲರೂ ಮರೆತಿದ್ದೇವೆ. ಹೌದು, ಅತೀ ಕಡಿಮೆ ಬೆಲೆಗೆ ಫಿಲ್ಟರ್​ ತಯಾರಿಸಿದ ಕನ್ನಡಿಗನೋರ್ವನ ಸಾಧನೆ ಮತ್ತು ಅವರ ಸಾಮಾಜಿಕ ಕಾಳಜಿಯ ಬಗ್ಗೆ ಬಹುತೇಕರಿಗೆ ತಿಳಿದೇ ಇಲ್ಲ. ಒಂದು ಸಣ್ಣ ಸಾಧನದ ಮೂಲಕ ಪ್ರತಿಯೊಬ್ಬರೂ ಶುದ್ಧ ನೀರು ಕುಡಿಯುವಂತೆ ಮಾಡಿದ ಹೆಮ್ಮೆಯ ಕನ್ನಡಿಗನ ಕುರಿತು ನಾವಿಂದು ತಿಳಿಸುತ್ತೇವೆ.

ಹೆಸರು ನಿರಂಜನ್ ಕಾರಗಿ. ಬೆಳಗಾವಿಯ ಎಂಜಿನಿಯರಿಂಗ್ ಪದವೀಧರ. ಬೆರಳಷ್ಟು ಉದ್ದದ ಫಿಲ್ಟರ್‌ ಕಂಡು ಹಿಡಿದು ಶುದ್ಧ ನೀರಿನ ಕ್ರಾಂತಿಯನ್ನೇ ಸೃಷ್ಟಿಸಿದರು. ಅದು ಕೂಡ  ಕೇವಲ 30 ರೂ.ನಲ್ಲಿ ಎಂಬುದು ವಿಶೇಷ.

ನಿರಂಜನ್ ಕೂಡ ಸಾಮಾನ್ಯ ಎಂಜಿನಿಯರಿಂಗ್ ವಿದ್ಯಾರ್ಥಿ. ತಂದೆ ಅಂಗಡಿಯೊಂದನ್ನು ನಡೆಸುತ್ತಿದ್ದರೆ, ತಾಯಿ ಗೃಹಿಣಿ. ಅದೊಂದು ದಿನ ಮನೆಯ ಹತ್ತಿರದಲ್ಲೇ ಇರುವ ಸರಕಾರಿ ಶಾಲೆಯೊಂದರ ಮಕ್ಕಳು ಕಲುಷಿತ ನೀರು ಕುಡಿಯುವುದನ್ನು ನಿರಂಜನ್ ನೋಡಿದ್ದಾರೆ. ಇದರಿಂದ ಮನನೊಂದ ನಿರಂಜನ್ ಮಕ್ಕಳಿಗೆ ಫಿಲ್ಟರ್ ಕೊಡಿಸುವ ಮನಸು ಮಾಡಿದ್ದರು. ಇದಕ್ಕಾಗಿ ಆನ್​ಲೈನ್​ನಲ್ಲಿ ಫಿಲ್ಟರ್​ಗಳನ್ನು ಹುಡುಕಾಡಿದ್ದಾರೆ. ಆದರೆ ಐನೂರು ರೂ.ಗಿಂತ ಕಡಿಮೆ ಬೆಲೆಯ ಫಿಲ್ಟರ್ ಮಾತ್ರ ಕಾಣಿಸಲಿಲ್ಲ. ಕಲುಷಿತ ನೀರು ಕುಡಿಯುತ್ತಿದ್ದ ಶಾಲಾ ಮಕ್ಕಳು ಶುದ್ಧ ನೀರು ಕುಡಿಯುವಂತೆ ಮಾಡಬೇಕೆಂದು ಅದಾಗಲೇ ನಿರಂಜನ್ ನಿರ್ಧರಿಸಿದ್ದರು.

ಇದಕ್ಕಾಗಿ ಹಗಲು ರಾತ್ರಿಯನ್ನೆದೇ ಕಷ್ಟ ಪಟ್ಟಿರುವ ನಿರಂಜನ್ ಕೊನೆಗೂ ಹೊಸದೊಂದು ಫಿಲ್ಟರ್​ನ್ನು ಅಭಿವೃದ್ದಿಪಡಿಸಲು ಯಶಸ್ವಿಯಾದರು. ಅದು ಕೂಡ ಸಾಮಾನ್ಯ ಜನರಿಗೆ ಕಡಿಮೆ ಬೆಲೆಗೆ ಸಿಗುವಂತೆ ಕೇವಲ 20 ರೂ.ನಲ್ಲಿ ಎಂದರೆ ಮೆಚ್ಚಲೇಬೇಕು. ಬಾಟಲಿಗೆ  ಅಳವಡಿಸಿ ಶುದ್ಧ ನೀರು ಕುಡಿಯುವ ಹೊಸ ರೀತಿಯ ಫಿಲ್ಟರ್ ಇದಾಗಿತ್ತು. ಸಾಮಾನ್ಯ ಮಾರುಕಟ್ಟೆಯಲ್ಲಿರುವ ಫಿಲ್ಟರ್​ಗಿಂತ ವಿಭಿನ್ನವಾದ ಸಾಧನವನ್ನು ನಿರಂಜನ್ ಆವಿಷ್ಕರಿಸಿದ್ದರು.

ಇದನ್ನು ಬೆಳಗಾವಿಯ ಆಹಾರ ವಿಭಾಗ ಕಛೇರಿಯಲ್ಲಿ ಪರೀಕ್ಷಿಸಿ ಅಲ್ಲಿಂದ ಮಾನ್ಯತೆ ಕೂಡ ಪಡೆದಿದ್ದಾರೆ. ಜನ ಸಾಮಾನ್ಯರಿಗಾಗಿ ಅಭಿವೃದ್ಧಿ ಪಡಿಸಿದ ಈ ಸಾಧನ ಇಂದು  ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುವ ಫಿಲ್ಟರ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಇದೀಗಾ 'ನಿರ್ನಲ್'(ನೀರು+ನಲ್ಲಿ) ಎಂಬ ಹೆಸರಿನೊಂದಿಗೆ ಎಲ್ಲರಿಗೂ ಈ ಫಿಲ್ಟರ್ ಸಿಗುವಂತೆ ಮಾಡುವಲ್ಲಿ ನಿರಂಜನ್ ಯಶಸ್ವಿಯಾಗಿದ್ದಾರೆ.

*ಯುವ ಸಾಧಕನಿಗೆ ಹಲವು ಪ್ರಶಸ್ತಿ:*

ಕಳೆದ ವರ್ಷ ಕರ್ನಾಟಕ ಸರಕಾರ ಆಯೋಜಿಸಿದ್ದ ಇಲೆವೆಂಟ್ 100 ಸಮಾವೇಶದಲ್ಲಿ ನಿರಂಜನ್ ಅವರ ಫಿಲ್ಟರ್​ಗೆ ಪ್ರಶಸ್ತಿ ಲಭಿಸಿದೆ. ಅಲ್ಲದೆ ಇನ್ಫೋಸಿಸ್​ ಸ್ಥಾಪಕ ನಾರಾಯಣ ಮೂರ್ತಿ, ನೊಬೆಲ್ ಪ್ರಶಸ್ತಿ ವಿಜೇತರಾದ ಕೈಲಾಶ್ ಸತ್ಯಾರ್ಥಿ ಅವರಿಂದ ಯುವ ವಾಣಿಜ್ಯೋದ್ಯಮಿ ಪ್ರಶಸ್ತಿಯನ್ನು ಕೂಡ ನಿರಂಜನ್ ಪಡೆದಿದ್ದಾರೆ.

*ಏನಿದು ನಿರ್ನಲ್ ಫಿಲ್ಟರ್‌?:*
ಈ ಫಿಲ್ಟರ್​ನ್ನು ಸಾಮಾನ್ಯ ನೀರಿನ ಬಾಟಲಿಯ ಬಾಯಿಗೆ ಅಳವಡಿಸಿ ಶುದ್ಧ ನೀರು ಪಡೆಯಬಹುದು. ಒಂದು 'ಫಿಲ್ಟರ್‌'ನಿಂದ ಕಡಿಮೆ ಎಂದರೂ 100 ಲೀ. ಶುದ್ಧ ನೀರು ಪಡೆಯಬಹುದಾಗಿದೆ. ಇದನ್ನು ಒಮ್ಮೆ ಬಳಸಲು ಆರಂಭಿಸಿದರೆ ಗರಿಷ್ಠ ಎರಡು ತಿಂಗಳು ಉಪಯೋಗಿಸಬಹುದು ಎನ್ನುತ್ತಾರೆ ಯುವ ಕನ್ನಡಿಗ.

*ವಿದೇಶದಲ್ಲೂ ಗ್ರಾಹಕರು:*

ಈ ಸಣ್ಣ ಸಾಧನವು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕತಾರ್‌ ದೇಶಗಳಿಗೂ ತಲುಪಿದೆ. ಈ ಹೊಸ ಸಂಶೋಧನೆಯ​ ಬಗ್ಗೆ ತಿಳಿದುಕೊಂಡ ಕತಾರ್​ನ ವ್ಯಕ್ತಿಯೊಬ್ಬರು ಕೊರಿಯರ್ ಮೂಲಕ ನಿರಂಜನ್​ ಅವರ ಈ ಫಿಲ್ಟರ್ ಖರೀದಿಸಿದ್ದರು.

*ಭಾರತೀಯ ಸೇನೆಯಿಂದಲೂ ಖರೀದಿ:*

ಬೆಳಗಾವಿ ಕಮಾಂಡೊ ಟ್ರೈನಿಂಗ್ ಸೆಂಟರ್ ಮತ್ತು ಧಾರವಾಡದ ಆರ್ಮಿ ಕ್ಯಾಂಪ್​ಗಳಲ್ಲೂ ನಿರಂಜನ್ ಅವರ ಫಿಲ್ಟರ್ ಜಾಗ ಪಡೆದಿದೆ. ಹೌದು, ಸೈನಿಕರಿಗಾಗಿ ಭಾರತೀಯ ಸೇನೆ ಸಾವಿರಾರು ಫಿಲ್ಟರ್​ನ್ನು ಖರೀದಿಸಿದೆ.

*ಅಗ್ಗದ ದರ:*

ಕೇವಲ 20 ರೂ.ಗೆ ಆರಂಭಿಸಿದ ಈ ಫಿಲ್ಟರ್‌ ಬೆಲೆ ಈಗ 30 ರೂಪಾಯಿಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಜಿಎಸ್‌ಟಿ ದರ ಮತ್ತು ಉತ್ಪನ್ನ ಬೆಲೆಯೇರಿಕೆ ಎಂದು ಯುವ ಸಂಶೋಧಕ ಸ್ಪಷ್ಟಪಡಿಸಿದ್ದಾರೆ. ಈ ಫಿಲ್ಟರ್‌ನ್ನು ಮತ್ತಷ್ಟು ಸುಧಾರಣೆ ಮಾಡಿ ಅತ್ಯಂತ ಕನಿಷ್ಠ ಬೆಲೆಯಲ್ಲಿ ಜನರಿಗೆ ಕೊಡುವ ಯೋಚನೆಯನ್ನು ಕೂಡ ನಿರಂಜನ್ ಕಾರಗಿ ಹಾಕಿಕೊಂಡಿದ್ದಾರೆ. ಈಗಾಗಲೇ ಹಲವು ಕಂಪನಿಗಳೊಂದಿಗೆ ಪೇಟೆಂಟ್ ಕುರಿತಾದ ಮಾತುಕತೆಯನ್ನು ನಿರಂಜನ್ ನಡೆಸಿದ್ದಾರೆ

*ಹೊಸ ಆವಿಷ್ಕಾರ:*

ನಿರ್ನಲ್ ಫಿಲ್ಟರ್ ಅಲ್ಲದೆ, ಟ್ಯಾಪ್ ಫಿಲ್ಟರ್​ವೊಂದನ್ನು ನಿರಂಜನ್ ಸಂಶೋಧಿಸಿದ್ದಾರೆ. ಸಾಮಾನ್ಯ ಟ್ಯಾಪ್​ನಂತಿರುವ ಈ ಫಿಲ್ಟರ್​ನ್ನು ಮನೆಯ ನಲ್ಲಿಗೆ ಅಳವಡಿಸಿಕೊಳ್ಳಬಹುದು. ಇಲ್ಲಿ ನೀರು ಟ್ಯಾಪ್ ಮೂಲಕ ಶುದ್ಧೀಕರಣಗೊಳ್ಳುವುದಲ್ಲದೆ, 99.9% ಬ್ಯಾಕ್ಟೀರಿಯಾ ನಿರ್ಮಾಲನೆಯಾಗುತ್ತದೆ ಎಂದು ನಿರಂಜನ್ ಭರವಸೆ ನೀಡುತ್ತಾರೆ. ಒಂದು ಸಾವಿರ ರೂ. ಬೆಲೆಗೆ ಈ ಹೊಸ ಸಾಧನ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದ್ದು ಇದನ್ನು ಮೂರು ವರ್ಷಗಳ ಕಾಲ ಬಳಸಿಕೊಳ್ಳಬಹುದಾಗಿದೆ.

*ನೀವು ಕೂಡ ಖರೀದಿಸಬಹುದು:*

ಅತಿ ಕಡಿಮೆ ಬೆಲೆಯ  ಫಿಲ್ಟರ್‌' ನ್ನು ನೀವು ಖರೀದಿಸಬೇಕಿದ್ದರೆ ನಿರಂಜನ್ ಅವರನ್ನು ಸಂಪರ್ಕಿಸಿ. ಮೊ: 7795339714

ಕೃಪೆ:News 18
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059