ದಿನಕ್ಕೊಂದು ಕಥೆ 895

*🌻ದಿನಕ್ಕೊಂದು ಕಥೆ🌻*
*ಮಹಾತಾಯಿ-ಸುಧಾ ಮೂರ್ತಿ.*                                                                  ಜೀವನದಲ್ಲಿ ಒಂದು ಸಣ್ಣ ಕಾರಣಕ್ಕಾಗಿ ಹಾಲು ಕುಡಿಯುವುದನ್ನೇ ಬಿಟ್ಟ ಮಾಹಾತಾಯಿ ಈಕೆ.. ನೋಡಿದರೆ ಕಣ್ಣಂಚಲ್ಲಿ ನೀರು ತುಂಬುತ್ತದೆ.. ಇಲ್ಲಿದೆ ನೋಡಿ..*

ಸುಧಾ ಮೂರ್ತಿ ಅವರ ಹೆಸರು ಕೇಳಿದ ತಕ್ಷಣವೇ ಮೈ ರೋಮಾಂಚನವಾಗುತ್ತದೆ, ಎಷ್ಟೋ ಜನರಿಗೆ ಸ್ಫೂರ್ತಿ ಈ ಮಹಾತಾಯಿ, ಇಂತವರು ಒಂದು ಸಣ್ಣ ಕಾರಣಕ್ಕಾಗಿ ಹಾಲು ಕುಡಿಯುವುದನ್ನೇ ನಿಲ್ಲಿಸಿಬಿಟ್ಟರು..

ಹೌದು ಆ ಘಟನೆ ತಿಳಿದರೆ ಕಣ್ಣಿನಲ್ಲಿ ನೀರು ತುಂಬುತ್ತದೆ.. ಇಲ್ಲಿದೆ ನೋಡಿ…
ಸುಧಾ ಮುರ್ತಿ ಅವರು ಬರೆದಿರುವ ದಿ ಡೇ ಐ ಸ್ಟಾಪಡ್ ಡ್ರಿಂಕಿಂಗ್ ಮಿಲ್ಕ್ ಪುಸ್ತಕದಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ..

ಸಮಾಜ ಸೇವೆಯ ಕಾರ್ಯ ನಿಮಿತ್ತ ಶಾಲೆಯನ್ನು ಕಟ್ಟಿಸಲು ಓಡಿಸ್ಸಾದ ಕಾಡಿನ ಮಧ್ಯ ಇರುವ ಒಂದು ಪುಟ್ಟ ಗ್ರಾಮಕ್ಕೆ ಹೋದ ಸಂಧರ್ಭದಲ್ಲಿ ಜೋರು ಮಳೆಯಿಂದಾಗಿ ಜೊತೆಗಿದ್ದ ಭಾಷೆ ತರ್ಜುಮೆಯವರ ಸಲಹೆಯಂತೆ ಮಳೆ ನಿಲ್ಲುವವರೆಗೂ ಸಮೀಪದಲ್ಲಿದ್ದ ಒಂದು ಗುಡಿಸಲಿಗೆ ಹೋಗುತ್ತಾರೆ. ಅಲ್ಲಿ ಗುಡಿಸಿಲಿನ ಯಜಮಾನ ಇವರನ್ನು ನಮ್ಮ ಹಳ್ಳಿಗೆ ಶಾಲೆ ಕಟ್ಟಿಸಲು ಬಂದಿರುವ ದೊಡ್ಡ ಮನುಷ್ಯರೆಂದು ಆಹ್ವಾನಿಸಿ ಒಳಗಡೆ ಕೂರಿಸುತ್ತಾನೆ, ಈತ ಕಡುಬಡವನಾಗಿದ್ದರು ಕಾರಿನಲ್ಲಿ ಬಂದ ಶ್ರೀಮಂತ ಅತಿಥಿಗಳನ್ನು ಸತ್ಕರಿಸುವ ಸಲುವಾಗಿ ಹರಕು ಮುರುಕು ಹಿಂದಿಯಲ್ಲಿ ಚಹಾ ಕುಡಿಯುವಂತೆ ವಿನಂತಿಸುವನು, ಕಾಫಿ, ಚಹಾ ಕುಡಿಯದ ಇವರು ನಯವಾಗಿಯೇ ಬೇಡವೆನ್ನುತ್ತಾರೆ, ಆತ ಬಿಡದೆ ಹಾಲನ್ನಾದರೂ ಕುಡಿಯಿರೆಂದು ಒತ್ತಾಯಿಸಿ, ತಡಿಕೆಯ ಮರೆಯಲ್ಲಿ ಹೆಂಡತಿಗೆ ಓರಿಯಾ ಭಾಷೆಯಲ್ಲಿ ಹಾಲನ್ನು ಕೊಡಲು ಹೇಳುತ್ತಾನೆ. ಅಳುತ್ತಿರುವ ಮಗುವೊಂದನ್ನು ಕಂಕುಳಲ್ಲಿ ಹಿಡಿದಿದ್ದ ಹೆಂಡತಿ ಇರುವುದೊಂದೇ ಲೋಟ ಆಕಳು ಹಾಲು ಅದು ನನ್ನ ಮಗುವಿಗೆ ಬೇಕು, ನಾನು ಕೊಡುವುದಿಲ್ಲ ಆ ಬಿಳಿತಲೆ ಹೆಂಗಸಿಗೆ ಬುದ್ದಿ ಇಲ್ಲ, ಕಡು ಬಡವರು ನಾವು ಮತ್ತೇ ಒಂದು ಲೋಟ ಹಾಲನ್ನು ತರುವುದು ಹೇಗೆ?, ನನ್ನ ಕಂದನ ಹಸಿವನ್ನು ನೀಗಿಸಬೇಕು, ನಾನು ಕೊಡುವುದಿಲ್ಲ ಎನ್ನುತ್ತಾಳೆ.

ಅವರು ನಮ್ಮ ಅತಿಥಿ ಹಳ್ಳಿಗೆ ಶಾಲೆ ಕಟ್ಟಿಸಲು ಬಂದಿದ್ದಾರೆ ಅರ್ಧ ಲೋಟವನ್ನಾದರೂ ನೀರು ಬೆರಸಿ ಕೊಡೆಂದು ಗೊಗೆರೆಯುತ್ತಾನೆ, ಅದಕ್ಕೆ ಒಪ್ಪಿ ಆಕೆ ನೀರು ಬೆರೆಸಿದ ಹಾಲು ಕೊಡುತ್ತಾಳೆ. ಅವನಿಗೆ ಇವರಿಗೆ ಓರಿಯಾ ಭಾಷೆ ಬರುವುದಿಲ್ಲ ಎಂಬ ಖಾತ್ರಿಯಿಂದ ಹೆಂಡತಿಯೊಡನೆ ಜೋರಾಗಿಯೇ ಮಾತನಾಡಿದ್ದಾನೆ, ಇತ್ತ ಸುಧಾಮೂರ್ತಿಯವರು ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ, ಅವರಿಗೆ ಮಾತನಾಡಲು ಬರದಿದ್ದರೂ ಅನೇಕ ಭಾಷೆಗಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳಬಲ್ಲರು. ಗಂಡ ಹೆಂಡತಿಯರ ಮಾತುಗಳನ್ನು ಆಲಿಸಿದ ಇವರು ನನ್ನಿಂದ ಮಗುವು ಹಸಿವಿನಿಂದ ಇರುವುದು ಬೇಡವೆಂದು ಕೊಟ್ಟ ಹಾಲನ್ನು ತಿರಸ್ಕರಿಸುತ್ತಾರೆ, ಕೊಟ್ಟ ಕಾರಣ ಮಾತ್ರ ಅದ್ಬುತವಾಗಿತ್ತು. ಇವತ್ತು ಬುಧವಾರ ಬುದ್ದನ ದಿನ ಉಪವಾಸವಿದ್ದೇನೆ, ಈ ದಿನ ನೀರನ್ನು ಬಿಟ್ಟು ಬೇರೆ ಏನನ್ನೂ ಸೇವಿಸುವುದಿಲ್ಲವೆಂದು ಹೇಳುತ್ತಾರೆ. ಆದರೆ ಬೆಳಿಗ್ಗೆ ತಿಂಡಿಯನ್ನು ತಿಂದ ಬಳಿಕ ಹಾಲು ಕುಡಿದಿರುತ್ತಾರೆ, ಇದನ್ನು ನೋಡಿದ್ದ ಭಾಷೆ ತರ್ಜುಮೆಯವನು ಇವರ ಮಾತುಗಳನ್ನು ಕೇಳಿ ಆಶ್ಚರ್ಯ ಚಕಿತನಾಗುತ್ತಾನೆ. ಅಂದಿನಿಂದ ಈವರೆಗೆ ಸುಧಾಮೂರ್ತಿಯವರು ಹಾಲು ಕುಡಿಯುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದು ಇವರು ಪಾಲಿಸುವ ಅನಂತ ಸದ್ಗುಣಗಳಲ್ಲಿ ಒಂದು ಸಣ್ಣ ಉದಾಹರಣೆಯಷ್ಟೆ, ಬರೆದರೆ ಬೇಕಾದಷ್ಟಿವೆ.

ಇಂತಹ ಮಹಾತಾಯಿ ನನ್ನ ಬಾಳಿಗೂ ಸ್ಫೂರ್ತಿ ಎಂದು ಹೇಳಿಕೊಳ್ಳಲು ನನಗೆ ಅದೇನೋ ಆನಂದ..
ಕೃಪೆ:ರಮ್ಯ ಜಗತ್
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059