ದಿನಕ್ಕೊಂದು ಕಥೆ 901

*🌻ದಿನಕ್ಕೊಂದು ಕಥೆ🌻*
*ಸತ್ಯವೇ ನೈಜ ಸಂಪತ್ತು*

ತನ್ನ ಕೆಟ್ಟಚಾಳಿಯಿಂದ ಬೇಸರಗೊಂಡಿದ್ದ ಕಳ್ಳನೊಬ್ಬ ಸಂತರೊಬ್ಬರ ಬಳಿ ಬಂದು ‘ನಾನು ಬದಲಾಗಬೇಕಿದೆ, ಮಾರ್ಗದರ್ಶನ ಮಾಡಿ’ ಎಂದು ಕೋರಿದ. ‘ಕಳ್ಳತನ ಮತ್ತು ಸುಳ್ಳುಹೇಳುವುದನ್ನು ಈ ಕೂಡಲೇ ಬಿಟ್ಟರೆ ನಿನ್ನಲ್ಲಿ ಪರಿವರ್ತನೆ ಸಾಧ್ಯ’ ಎಂದರು ಸಂತರು. ಆದರೆ ಆ ಕಳ್ಳ ತಕ್ಷಣಕ್ಕೆ ಕಳ್ಳತನ ಬಿಡುವ ಸ್ಥಿತಿಯಲ್ಲಿರಲಿಲ್ಲ, ಏಕೆಂದರೆ ಅದು ಅವನ ಹೊಟ್ಟೆಪಾಡಿನ ಸಾಧನವಾಗಿತ್ತು. ಹೀಗಾಗಿ ಸುಳ್ಳು ಹೇಳುವುದನ್ನು ತಕ್ಷಣದಿಂದ ಬಿಡಲು ನಿರ್ಧರಿಸಿದ. ಮರುದಿನ ರಾತ್ರಿ ಆತ ವಾಡಿಕೆಯಂತೆ ಕಳ್ಳತನಕ್ಕೆ ತೆರಳಬೇಕಿತ್ತು; ಆತ ಲೂಟಿಗೆ ಆಯ್ಕೆ ಮಾಡಿದ ಜಾಗ ಸಾಕ್ಷಾತ್ ಅರಮನೆಯ ಖಜಾನೆಯೇ ಆಗಿತ್ತು. ಅರಮನೆ ಹೊರಗೆ ಹೊಂಚುಹಾಕಿ ಕೂತಿದ್ದ ಅವನಿಗೆ ತನ್ನಂತೆಯೇ ಇರುವ ಮತ್ತೋರ್ವ ಮುಖಾಮುಖಿಯಾದ. ತಾನೂ ಕಳ್ಳನೆಂದು ಆತ ಹೇಳಿದ್ದರಿಂದ ಇಬ್ಬರೂ ಖಜಾನೆ ದೋಚಿ ಸಂಪತ್ತನ್ನು ಹಂಚಿಕೊಳ್ಳಲು ತೀರ್ವನಿಸಿದರು.

ಅಸಲಿಗೆ, ಆ ಮತ್ತೋರ್ವ ಕಳ್ಳ ಮಾರುವೇಷದಲ್ಲಿದ್ದ ಆ ರಾಜ್ಯದ ರಾಜನೇ ಆಗಿದ್ದ! ಇದರ ಅರಿವಿರದ ಕಳ್ಳ, ಕನ್ನಹಾಕಿ ಒಳಹೊಕ್ಕು ಬೊಕ್ಕಸದ ವಜ್ರವನ್ನೆಲ್ಲ ತುಂಬಿಕೊಳ್ಳುವಾಗ ಒಂದು ವಜ್ರಾಭರಣವನ್ನು ಅಲ್ಲೇ ಉಳಿಸಿದ. ಮಾರುವೇಷಧಾರಿ ರಾಜ ಕೇಳಲಾಗಿ, ‘ಪಾಪ, ರಾಜ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ; ಅವನಿಗೆ ಗೌರವ ನೀಡಲೋಸುಗ ಈ ವಜ್ರಾಭರಣವನ್ನು ಇಲ್ಲೇ ಬಿಡೋಣ’ ಎಂದು ಹೇಳಿದ. ನಂತರ ಅವರಿಬ್ಬರೂ ಸಂಪತ್ತನ್ನು ಹಂಚಿಕೊಂಡರು, ಕಸುಬುದಾರ ಕಳ್ಳ ಅಲ್ಲಿಂದ ಪರಾರಿಯಾದ. ಮರುದಿನ ಖಜಾನೆಲೂಟಿಯ ಸುದ್ದಿ ಬಹಿರಂಗವಾದಾಗ, ಎಷ್ಟು ನಷ್ಟವಾಗಿದೆ ಎಂಬುದನ್ನು ನೋಡಿಕೊಂಡು ಬರುವಂತೆ ರಾಜ ಮಂತ್ರಿಯನ್ನು ಕಳಿಸಿದ. ಖಜಾನೆಯ ಪರಿಶೀಲನೆ ವೇಳೆ, ಕಳ್ಳ ಬಿಟ್ಟುಹೋಗಿದ್ದ ವಜ್ರಾಭರಣ ಮಂತ್ರಿಗೆ ಕಾಣಿಸಿತು. ‘ಹೇಗಿದ್ದರೂ ಖಜಾನೆ ಕೊಳ್ಳೆಯಾಗಿದೆ, ರಾಜನಿಗೆ ಏನೂ ಗೊತ್ತಾಗದು’ ಎಂಬ ದುರಾಸೆಯಲ್ಲಿ ಮಂತ್ರಿ ಆ ಆಭರಣವನ್ನು ಜೇಬಿಗಿಳಿಸಿ, ‘ಖಜಾನೆ ಪೂರಾ ಲೂಟಿಯಾಗಿದೆ ಪ್ರಭೂ’ ಎಂದು ರಾಜನಲ್ಲಿ ಹೇಳಿದ. ಮಾರುವೇಷದಲ್ಲಿದ್ದಾಗ ಕಸುಬುದಾರ ಕಳ್ಳನ ನೆಲೆಯನ್ನು ಕೇಳಿತಿಳಿದುಕೊಂಡಿದ್ದ ರಾಜ, ಆ ಕಳ್ಳನನ್ನು ಕರೆಸಿ ವಿಚಾರಣೆ ಮಾಡಿದಾಗ, ತಾನು ಹಾಗೂ ಅಪರಿಚಿತ ವ್ಯಕ್ತಿಯೊಬ್ಬ ಸೇರಿಕೊಂಡು ಖಜಾನೆ ಲೂಟಿಮಾಡಿದ್ದಾಗಿಯೂ, ಆ ವೇಳೆ ಒಂದು ವಜ್ರಾಭರಣವನ್ನು ಅಲ್ಲೇ ಉಳಿಸಿದ್ದಾಗಿಯೂ ಕಳ್ಳ ಸತ್ಯವನ್ನೇ ಹೇಳಿದ. ಆ ಆಭರಣವನ್ನು ಹುಡುಕಲಾಗಿ ಅದು ಮಂತ್ರಿಯ ಜೇಬಿನಲ್ಲೇ ಸಿಕ್ಕಿಬಿಟ್ಟಿತು. ಅನ್ನ-ಆಶ್ರಯ ನೀಡಿದ ರಾಜನಿಗೇ ವಂಚಿಸಿದ್ದಕ್ಕೆ ಶಿಕ್ಷೆಯಾಗಿ ಮಂತ್ರಿಯನ್ನು ಆ ಪದವಿಯಿಂದ ತೆಗೆದುಹಾಕಿದ ರಾಜ, ಕಳ್ಳತನವೇ ವೃತ್ತಿಯಾಗಿದ್ದೂ ಸತ್ಯ ಹೇಳಿದ್ದಕ್ಕೆ ಆ ಕಳ್ಳನಿಗೆ ಆಸ್ಥಾನದಲ್ಲೇ ಸೂಕ್ತ ಉದ್ಯೋಗ ನೀಡಿದ. ರಾಜನ ಕ್ಷಮೆ ಕಳ್ಳನ ಕಣ್ತೆರೆಸಿತು. ಅಂದಿನಿಂದ ಕಳ್ಳ ತನ್ನೆಲ್ಲ ಕೆಟ್ಟಚಾಳಿಗಳನ್ನೂ ಬಿಟ್ಟು ಸಜ್ಜನನಾದ… ಸುಳ್ಳಿಗೆ ತಕ್ಷಣದ ಜಯ ಸಿಕ್ಕರೂ, ಕೊನೆಗೆ ಗೆಲ್ಲುವುದು ಸತ್ಯವೇ; ಅದು ಎಂದಿಗೂ ನಮ್ಮ ಕೈಬಿಡುವುದಿಲ್ಲ ಎಂಬುದು ಈ ಕತೆಯಿಂದ ವಿದಿತ. ಒಂದು ಸುಳ್ಳನ್ನು ಮುಚ್ಚಿಡಲು ನೂರುಸುಳ್ಳು ಹೇಳುತ್ತ, ಸುಳ್ಳಿನ ಸುಳಿಯಲ್ಲೇ ಸಿಲುಕಿ ಇರುವುದನ್ನೆಲ್ಲ ಕಳೆದುಕೊಳ್ಳುವ ಬದಲು, ತಕ್ಷಣಕ್ಕೆ ಕಹಿ ಉಂಟುಮಾಡಿದರೂ ದೀರ್ಘಕಾಲಿಕ ನೆಮ್ಮದಿಯನ್ನೇ ನೀಡುವ ಸತ್ಯವನ್ನೇ ಹೇಳೋಣ.
ಕೃಪೆ: ರಾಗಿಣಿ
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097