ದಿನಕ್ಕೊಂದು ಕಥೆ 905
*🌻ದಿನಕ್ಕೊಂದು ಕಥೆ🌻* *"ಯಾಕಿಂಗಾತು ನನಗೆ ತಿಳೀವಲ್ದು .."*
ಮಲ್ಲಪ್ಪ ಒಂದೇ ಸಮನೆ ಅಳುತ್ತಿದ್ದ.ಮಗ ಆಸ್ಪತ್ರೆಯ ಹಾಸಿಗೆಯ ಮೇಲೆ ಒರಗಿದ್ದ.
ಎಲ್ಲ ರಿಪೋರ್ಟ್ ನಲ್ಲಿ ನಾರ್ಮಲ್ ಅಂತ ಇದೆ *ಹಿಂಗ್ಯಾಕಾತು*
ಡಾಕ್ಟರ್ ಶೇಷಗಿರಿ ತಮ್ಮ ಕೋಣೆಯಲ್ಲಿ ಕುಳಿತು ಆಲೋಚಿಸತೊಡಗಿದರು..
ಮಲ್ಲಪ್ಪ ಮಾಸ್ತರ್ ರ ಹನ್ನೆರಡು ವರ್ಷದ ಮಗನಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತು.ಎರಡು ದಿನ ಜ್ವರ ಬಂದ ನಂತರ ಹುಡುಗ ಕೋಮಾ ಸ್ಥಿತಿ ತಲುಪಿದ್ದ.
ಈಗ ಹದಿನೈದು ದಿನಗಳಾದವು.ಅದೇ ಸಲೈನ್ ಅವನ ಆಹಾರ.
ದಿನಕ್ಕೆ ಆರು ಬಾಟಲ್ ಗಳು ಅವನ ಮೈ ಸೇರುತ್ತಿದ್ದವು
ಇಂಜೆಕ್ಷನ್ ಗಳಿಗೆ ಲೆಕ್ಕವೇ ಇಲ್ಲ
ಕೈ ಯಲ್ಲಿದ್ದ ಹಣ ಖಾಲಿಯಾದಾಗ ಕಂಡವರ ಬಳಿ ಸಾಲ ತಂದಿದ್ದರು ಮಲ್ಲಪ್ಪ
ಹಳ್ಳಿಯ ಜನ ದಿನಾ ಆಸ್ಪತ್ರೆಗೆ ಬಂದು ಬಂದು ನೋಡಿಕೊಂಡು ಮಲ್ಲಪ್ಪ ಮಾಸ್ಟರ್ ಗೆ ಧೈರ್ಯ ಹೇಳಿ ಹೋಗುತ್ತಿದ್ದರು.
ಮಲ್ಲಪ್ಪ ಮಾಸ್ಟರ್ ರು ಎದೆಗುಂದಿದ್ದರು ಊಟ ನೀರು ಬಿಟ್ಟು ಕುಳಿತರು. ರೋಧನೆ ಅವರ ನಿತ್ಯ ಬದುಕಾಯ್ತು.
ಸಾಲ ಸಹ ಹುಟ್ಟದಾಯ್ತು.
ತಲೆ ಮೇಲೆ ಕೈ ಹೊತ್ತು ಕುಳಿತರು..
ದೆವ್ವದ ಕಾಟ ಇರಬಹುದು ಅಂದರು ಯಾರೋ .ಮುಲ್ಲಾ ಕರೀಂ ಸಾಬಿ ಹತ್ತಿರ ಹೋಗಿ ಮಂತ್ರಿಸಿದ ನಿಂಬೆಹಣ್ಣು ತಂದು ಮಗ ನಿತೀಶನ ತಲೆ ಕಾಲ ಬುಡಕ್ಕೆ ಇಟ್ಟರು.
*ಆ ದಿನ ಶಾಲೆಯ ಮೂವತ್ತು ವಿದ್ಯಾರ್ಥಿಗಳು ಮಗನನ್ನು ನೋಡಲು ಬಂದರು*
ಮಲ್ಲಪ್ಪನ ದುಃಖದ ಕಟ್ಟೆ ಒಡೆಯಿತು.ಭೋರ್ಗರೆದು ಅಳತೊಡಗಿದರು.
*"ನೋಡ್ರಪ್ಪಾ ಹಿಂಗಾಗೋಯ್ತು"* ಅಂತ ಮಲ್ಲಪ್ಪ ಮಕ್ಕಳಿಗೆ ಹೇಳಿ ಅಳತೊಡಗಿದರು.
ಮಕ್ಕಳು ಸಹ ಅಳತೊಡಗಿದರು
*"ಸರ್ ಅಳಬ್ಯಾಡ್ರಿ "*
ಅಂತ ಸಮಾಧಾನ ಮಾಡಿ ಹೋದರು.
ತಾನು ಕೆಲಸ ಮಾಡುತ್ತಿದ್ದ ಗ್ರಾಮದ ಹಿರಿಯ , ಅಕ್ಷರಸ್ಥನಲ್ಲದ ವಯೋವೃದ್ಧ ಭೈರಪ್ಪ ಅಂದು ಆಸ್ಪತ್ರೆ ಗೆ ಕೋಲೂರುತ್ತಾ ಬಂದರು
ಸುಮಾರು ಎಂಬತ್ತು ವರ್ಷದ ವಯೋವೃದ್ಧ.ಶಾಲೆಯ ಕಾಂಪೌಂಡ್ ಒಳಗಿದ್ದ ನಾಗರ ಕಟ್ಟೆಯ ಮೇಲೆ ದಿನಾ ಬಂದು ಕುಳಿತುಕೊಳ್ಳುತ್ತಿದ್ದ ಭೈರಪ್ಪ ಯಜಮಾನ.ಹಳೆಯ ಬಿಳಿಯ ಬನಿಯನ್,ಧೋತರ..ಬಿಳಿಗಡ್ಡ.ಸ್ಥೂಲ ದೇಹಿ..
ಯಜಮಾನನನ್ನು ನೋಡಿದ ತಕ್ಷಣ ಮಾಸ್ತರಿಗೆ ದುಃಖ ಉಮ್ಮಳಿಸಿ ಬಂತು.
*ಅಜ್ಜ,ಅಜ್ಜ*
ಅಂತ ಅಳತೊಡಗಿದ..ಅಜ್ಜ ಸಮಾಧಾನ ಮಾಡುತ್ತಾ ನಿಂತ.
*ಅಜ್ಜ ಎಲ್ಲಾ ನಾರ್ಮಲ್ ಅಂತ ಬಂದೈತಿ*
ಇದ್ಯಾಕಿಂಗಾತೋ ಕಣ್ಣೀರಿಟ್ಟ..
ಭೈರಪ್ಪ ಯಜಮಾನ ಮಾಸ್ತರನ ಕಣ್ಣಲ್ಲಿ ಕಣ್ಣಿಟ್ಟು
*"ನಾ ಹೇಳಲಾ ಕಾರಣ"*
ಅಂದ..
ಮಾಸ್ತರರಿಗೆ ಗಾಬರಿ ಆಶ್ಛರ್ಯ.
*ಹೇಳಜ್ಜ,ನೀನು ಹಿರಿಯ* ಕೈಮುಗಿದು ನಿಂತ.
*"ನೀ ಎಂದಾರ ಶಾಲಾ ಮಕ್ಕಳಿಗೆ ಪಾಠ ಮಾಡಿದ್ದ್ಯಾ..ಹಾಂಗ ಬಂದು ಹೀಂಗ ಹೋಕ್ಕಿದ್ದಿ.ಮಕ್ಕಳ ಭವಿಷ್ಯದ ಜೊತಿ ಆಟ ಆಡಿದಿ.ಈಗ ನೋಡು ನಿನ್ನ ಮಗನ ಆಯುಷ್ಯದ ಜೊತೆ ಶಿವ ಆಟ ಆಡಾಕತ್ತ್ಯಾನ ಹೆಂಗದೆ ..ಶಿವನಾಟ..ಎಲ್ಲ ಅವನ ಕೈಯಾಗ ಅದ.. ಇದ್ರಾಗ ನಂದೇನು ನಿಂದೇನು ನಡ್ಯಾಕಿಲ್ಲಪ್ಪೋ ಮಾಸ್ತರಾ"*
ಭೈರಪ್ಪ ಮಾಸ್ತರಿಗೆ ನಮಸ್ಕಾರ ಹೇಳಿ ಹೊರಟುಹೋದ.
ಮಲ್ಲಪ್ಪ ಮಾಸ್ತರರಿಗೆ ಅವರಾಡಿದ ಮಾತು ನಿಜ ಅನಿಸಿತು .ಆತನ ದುಃಖದ ಕಟ್ಟೆ ಒಡೆಯಿತು.
ದಿನಾ ಶಾಲೆಗೆ ಹೋಗಿ ಹಾಜರಾತಿ ವಹಿಯಲ್ಲಿ ಸಹಿಮಾಡಿ ಆ ಕೆಲಸ ಈ ಕೆಲಸ ಅಂತ ಹೆಡ್ ಮಾಸ್ಟರ್ ಗೆ ನೆಪ ಹೇಳಿ ಗಾಡಿ ಹತ್ತಿ ಹೋಗಿಬಿಡುತ್ತಿದ್ದ.
ಗಾಡಿ ಹತ್ತಿ ಹೋಗುವ ಮಾಸ್ತರರನ್ನು ಶಾಲೆಯ ಮಕ್ಕಳು ತದೇಕಚಿತ್ತದಿಂದ ನೋಡುತ್ತಿದ್ದರು
ಟೈಂ ಟೇಬಲ್ ನಲ್ಲಿ ಮಾಸ್ತರರ ಹೆಸರಿದೆ ,ಆದರೆ ಮಾಸ್ತರ ಯಾಕೋ ತರಗತಿಗೆ ಬರುತ್ತಿಲ್ಲ ಅಂತ ಮರುಗುತ್ತಿದ್ದರು.
ಸ್ಟಾಫ್ ಈ ಬಗ್ಗೆ ಕೇಳಿದಾಗ ನೀವ್ ಯಾರು ನನ್ ಕೇಳಾಕ..ಕಣ್ಣು ಕೆಂಪಗೆ ಮಾಡಿ ದೊಡ್ಡ ಅವಾಜ್ ಹಾಕ್ತಿದ್ದರು.
*ಈ ಎಲ್ಲಾ ದೃಶ್ಯಗಳು ಮಲ್ಲಪ್ಪನ ಕಣ್ಣುಗಳ ಮುಂದೆ ಹಾದುಹೋದವು..*
ಆಸ್ಪತ್ರೆಯಲ್ಲಿ *ನೀನು ಮಗನನ್ನು ನೋಡಿಕೋ* ಎಂದು ಹೇಳಿ ಮಲ್ಲಪ್ಪ ಮಾಸ್ತರ್ ಗಾಡಿ ಹತ್ತಿ ಹೊರಟರು.
*ಎಲ್ಲಿ ಹೋಗ್ತೀರಿ?* ಹೆಂಡತಿ ಪ್ರಶ್ನಿಸಿದಳು..
*"ಶಾಲೆಗೆ ಹೋಗ್ತೀನಿ*" ಅಂದರು ಮಲ್ಲಪ್ಪ.
ಆಕೆಯ ಮುಖ ಅರಳಿತು
*"ಮೊದಲು ಹೋಗ್ರೀ ನಾ ಇರ್ತೇನು ಇಲ್ಲಿ"*
ಅಂದಳು.
ದಿನಾ ಹಾಜರಾತಿಯಲ್ಲಿ ಸಹಿ ಮಾಡಿ ಹೊರಗೆ ಹೋಗುತ್ತಿದ್ದ ಮಲ್ಲಪ್ಪ ಇಂದು ಶಾಲೆಯ ಒಳಗೆ ಬರುತ್ತಿದ್ದಾರೆ.
ಎಲ್ಲರಿಗೂ ಆಶ್ಛರ್ಯ..ಎಲ್ಲರಿಗೂ ಸಂತಸ.ಮಕ್ಕಳು ಮಲ್ಲಪ್ಪ ಮಾಸ್ತರರನ್ನು ಸುತ್ತುವರೆದರು
ಸ್ಟಾಫ್ *"ನಮ್ಮ ಮಲ್ಲಪ್ಪ ಮಾಸ್ತರ್ ಈಗ ನಯಾ ಆದ್ಮಿ* ಅಂತ ಹಿಗ್ಗಿದರು.
ಆಸ್ಪತ್ರೆ ಯಲ್ಲಿ ಮಗನ ಬಳಿ ಹೆಂಡತಿ..ಮಾಸ್ತರ್ ಶಾಲೆಯಲ್ಲಿ...••••
ಒಂದೂ ತರಗತಿಯನ್ನು ಬಿಡದೇ ಮಲ್ಲಪ್ಪ ಮಾಸ್ತರ್ ಪಾಠ ಮಾಡತೊಡಗಿದರು.
..ನಾಗರ ಕಟ್ಟೆಯ ಮೇಲೆ ಕುಳಿತ ಭೈರಪ್ಪ ಯಜಮಾನನ ಸಂತೋಷಕ್ಕೆ ಪಾರವೇ ಇಲ್ಲ.
ಮಲ್ಲಪ್ಪ ಮಾಸ್ತರನ್ನು ನೋಡಿ ಮೀಸೆಯಲ್ಲಿಯೇ ಮುಗುಳ್ನಗುತ್ತಿದ್ದ ಭೈರಪ್ಪ..
ಇತ್ತ ಅಸ್ಪತ್ರೆಯಲ್ಲಿದ್ದ
ಮಾಸ್ತರ್ ರ ಮಗ ದಿನೇ ದಿನೇ ಗುಣಮುಖನಾಗತೊಡಗಿದ.
.ಸುಮಾರು ಹದಿನೈದು ದಿನಗಳೊಳಗೆ ಅವರ ಮಗ ಮಾಮೂಲಿನಂತಾಗಿ ಹೋದ..
ಮಲ್ಲಪ್ಪ ಮಾಸ್ತರ್ ರ ದುಃಖದಲ್ಲಿ ಭಾಗಿಯಾದ ಎಲ್ಲರೂ ಅವರ ಸಂತಸದಲ್ಲಿಯೂ ಭಾಗಿಯಾದರು.
*ಡ್ರಾಪ್ ಔಟ್ ಮಾಸ್ತರ್ ಶಾಲೆಗೆ ಮರಳಿದರು...*
*Thank god...*
*Teaching is nothing but a prayer to the god...* ಕೃಪೆ:ಮಹಿಮ. ಸಂಗ್ರಹ: ವೀರೇಶ್ ಅರಸಿಕೆರೆ
Comments
Post a Comment